ಸಾರಥ್ಯಪಾರ್ಷದಸೇವನಸಖ್ಯದೌತ್ಯ
ವೀರಾಸನಾನುಗಮನಸ್ತವನಪ್ರಣಾಮೈಃ ।
ಸ್ನಿಗ್ಧೇಷು ಪಾಂಡುಷು
ಜಗತ್ಪ್ರಣತಸ್ಯ ವಿಷ್ಣೋಃ ಭಕ್ತಿಂ ಕರೋತಿ ನೃಪತಿಶ್ಚರಣಾರವಿಂದೇ ॥೧೭॥
ಜನರೆಲ್ಲರೂ
ಶ್ರೀಕೃಷ್ಣನನ್ನು, ಪಾಂಡವರನ್ನು ಕೊಂಡಾಡುತ್ತಿದ್ದರು. ಲೋಕನಾಯಕ, ಜಗತ್ತೆಲ್ಲಾ ಯಾರಿಗೆ
ನಮಸ್ಕರಿಸಬೇಕೋ ಅಂತಹ ವಿಶ್ವವಂದ್ಯ ಭಗವಂತ, ಅರ್ಜುನನ ಸಾರಥಿಯಾಗಿ ನಿಂತಿದ್ದನ್ನು ಕಂಡಿರುವ ಜನರು
ಪರೀಕ್ಷಿತನಲ್ಲಿ ಹೇಳುತ್ತಾರೆ: “ನಿಮ್ಮ ಅಜ್ಜಂದಿರರು ಪುಣ್ಯವಂತರು”ಎಂದು. ಎಲ್ಲಿ ಪಾಂಡವರು ಸಭೆ
ನಡೆಸುತ್ತಿದ್ದರೋ ಅಲ್ಲಿ ಕೃಷ್ಣನಿರುತ್ತಿದ್ದ. ಕೃಷ್ಣನಿಲ್ಲದ ಪಾಂಡವರ ಸಭೆ ಇಲ್ಲ. ಪಾಂಡವರಿಗೆ
ಏನಾದರೂ ಆಪತ್ತು ಬಂದರೆ ಅವರ ಚಾಕರಿಗೆ ಕೂರುತ್ತಿದ್ದ ಕೃಷ್ಣ. ಎಲ್ಲಾ ಮಂತ್ರಾಲೋಚನೆಗೂ ಕೃಷ್ಣ
ಸಹಕಾರ ಕೊಡುತ್ತಿದ್ದ. ಒಬ್ಬ ಸೇವಕನಂತೆ, ಒಬ್ಬ ಆತ್ಮೀಯ ಗೆಳೆಯನಂತೆ, ಸಂಧಾನಕಾರನಾಗಿ, ಧೂತನಾಗಿ,
ಸಾರಥಿಯಾಗಿ, ಶ್ರೀಕೃಷ್ಣ ಪಾಂಡವರ ಜೊತೆಗೆ ನಿಂತ. ಸಿಂಹಾಸನವನ್ನು ಅನುಗಮನ ಮಾಡಿ, ಅದರ ರಕ್ಷಣೆಯ
ಹೊಣೆಹೊತ್ತು, ರಾಜಪೀಠವನ್ನು ಹಗಲು-ರಾತ್ರಿ ಎನ್ನದೆ ರಕ್ಷೆ ಮಾಡಿದ. ಇಡೀ ಜಗತ್ತು ಯಾರಿಗೆ
ನಮಸ್ಕರಿಸುತ್ತದೋ, ಅಂತಹ ಶಕ್ತಿ ಶ್ರೀಕೃಷ್ಣ, ಧರ್ಮರಾಯನಿಗೆ, ಕುಂತಿಗೆ, ಭೀಷ್ಮಾಚಾರ್ಯರಿಗೆ,
ಹೀಗೆ ಎಲ್ಲಾ ಗುರು-ಹಿರಿಯರೆಲ್ಲರಿಗೆ ನಮಸ್ಕರಿಸುತ್ತಿದ್ದ. ಹೇಗೆ ಗುರು-ಹಿರಿಯರೊಂದಿಗೆ
ನಡೆದುಕೊಳ್ಳಬೇಕು ಎನ್ನುವುದನ್ನು ತಾನು ಸ್ವಯಂ ಮಾಡಿ ತೋರಿಸಿದ ಶ್ರೀಕೃಷ್ಣ. “ಪಾಂಡವರು ಮಹಾ ಭಾಗ್ಯಶಾಲಿಗಳು, ಈ ಜಗತ್ತು ಯಾರ
ಪಾದಕ್ಕೆರಗುತ್ತದೋ, ಅಂತಹ ನಾರಾಯಣ ಪಾಂಡವರಲ್ಲಿ ತನ್ನ ಸ್ನೇಹದ ಪೂರವನ್ನೇ ಹರಿಸಿ, ಅನುಚರನಂತೆ
ನಡೆದುಕೊಂಡನಲ್ಲಾ” ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಜನರ ಈ ಮಾತನ್ನು ಕೇಳಿದ ಪರೀಕ್ಷಿತ
ಪುಳಕಿತನಾದ. ಅವನಿಗೆ ಮೊದಲೇ ಶ್ರೀಕೃಷ್ಣನಲ್ಲಿ ಅಧಮ್ಯ ಭಕ್ತಿ ಇತ್ತು. ಆದರೆ ಜನರ ಮಾತನ್ನು ಕೇಳಿ
ಆ ಭಕ್ತಿ ಮತ್ತಷ್ಟು ಹೆಚ್ಚಿತು.
ಪರೀಕ್ಷಿತ ಬಹಳ ವಿನಮ್ರನಾಗಿ, ಭಗವಂತನ ಮೇಲೆ ಭಕ್ತಿ ನೆಟ್ಟು ರಾಜ್ಯಭಾರ
ಮಾಡುತ್ತಿದ್ದ ಕಾಲದಲ್ಲಿ ಒಮ್ಮೆ ಒಂದು ಘಟನೆ ನಡೆಯಿತು. ಗಂಗಾತೀರ, ಸರಸ್ವತಿ ನದಿ
ಪೂರ್ವಾಭಿಮುಖವಾಗಿ ಹರಿಯುವ ಸ್ಥಳದಲ್ಲಿ ಪರೀಕ್ಷಿತನಿಗೆ ಒಂದು ದೃಶ್ಯ ಕಾಣಿಸುತ್ತದೆ(Vision).
ಅಲ್ಲಿ ಒಂದು ಎತ್ತು(ವೃಷಭ), ಒಂದೇ ಕಾಲಿನಲ್ಲಿ ನಿಂತಿದೆ. ಅದರ ಮುಂದೆ ಹಸುವೊಂದು(ಧೇನು) ನಿಂತು
ದುಃಖಿಸುತ್ತಿದೆ. ವೃಷಭ ಸ್ವಯಂ ದುಃಖಿಯಾಗಿದ್ದರೂ ಕೂಡಾ ಹಸುವನ್ನು ಕುರಿತು ಕೇಳುತ್ತಿದೆ:
“ತಾಯೀ, ಏಕೆ ದುಃಖಿಸುತ್ತಿರುವೆ” ಎಂದು. [ಈ ಹಿಂದೆ ಹೇಳಿದಂತೆ ಇಲ್ಲಿ ವೃಷಭ ಧರ್ಮದ ಪ್ರತೀಕ
ಮತ್ತು ಹಸು ಭೂಮಾತೆಯ ಪ್ರತೀಕ].
ಸತ್ಯಂ ಶೌಚಂ ದಯಾ
ದಾನಂ ತ್ಯಾಗಃ ಸಂತೋಷ ಆರ್ಜವಮ್ ।
ಶಮೋ ದಮಸ್ತಪಃ ಸಾಮ್ಯಂ
ತಿತಿಕ್ಷೋಪರತಿಃ ಶ್ರುತಮ್ ॥೨೭॥
ಜ್ಞಾನಂ ವಿರಕ್ತಿರೈಶ್ವರ್ಯಂ
ಶೌರ್ಯಂ ತೇಜೋ ಧೃತಿಃ ಸ್ಮೃತಿಃ ।
ಸ್ವಾತಂತ್ರ್ಯಂ
ಕೌಶಲಂ ಕಾಂತಿಃ ಸೌಭಗಂ ಮಾರ್ದವಂ ಕ್ಷಮಾ ॥೨೮॥
ಪ್ರಾಗಲ್ಭ್ಯಂ ಪ್ರಶ್ರಯಃ
ಶೀಲಂ ಸಹ ಓಜೋ ಬಲಂ ಭಗಃ ।
ಗಾಂಭೀರ್ಯಂ ಸ್ಥೈರ್ಯಮಾಸ್ತಿಕ್ಯಂ
ಕೀರ್ತಿರ್ಮಾನೋSನಹಂಕೃತಿಃ ॥೨೯॥
ಇಮೇ ಚಾನ್ಯೇ ಚ
ಭಗವನ್ ನಿತ್ಯಾ ಯತ್ರ ಮಹಾಗುಣಾಃ ।
ಪ್ರಾರ್ಥ್ಯಾ ಮಹತ್ತ್ವಮಿಚ್ಛದ್ಭಿಃ
ನ ಚ ಯಾಂತಿ ಸ್ಮ ಕರ್ಹಿಚಿತ್ ॥೩೦॥
ತೇನಾಹಂ ಗುಣಪಾತ್ರೇಣ
ಶ್ರೀನಿವಾಸೇನ ಸಾಂಪ್ರತಮ್ ।
ಶೋಚಾಮಿ ರಹಿತಂ
ಲೋಕಂ ಪಾಪ್ಮನಾ ಕಲಿನೇಕ್ಷಿತಮ್ ॥೩೧॥
ವೃಷಭದ ಪ್ರಶ್ನೆಗೆ
ಉತ್ತರಿಸುತ್ತಾ ಹಸು ಹೇಳುತ್ತದೆ: “ ಶ್ರೀಕೃಷ್ಣ ಹೊರಟುಹೋದ. ಆತನಿಲ್ಲದೇ ನನ್ನ ಅಸ್ತಿತ್ವಕ್ಕೇನು
ಅರ್ಥವಿದೆ? ಕೃಷ್ಣನನ್ನು ಅಗಲಿ ಇರಬೇಕಲ್ಲಾ ಎಂದು ದುಃಖಿಸುತ್ತಿದ್ದೇನೆ” ಎಂದು. ಶ್ರೀಕೃಷ್ಣ
ಎಲ್ಲಾ ಗುಣಗಳಿಗೆ ಪಾತ್ರನಾಗಿರತಕ್ಕಂತಹ ಶ್ರೀನಿವಾಸ. ಅವನಿಲ್ಲದೇ ಇರುವ ಈ ಲೋಕವನ್ನು ನೋಡಿ ನನಗೆ
ದುಃಖವಾಗುತ್ತಿದೆ. ಇಷ್ಟೇ ಅಲ್ಲ, ಶ್ರೀಕೃಷ್ಣನ ನೋಟವನ್ನು ಕಳೆದುಕೊಂಡು, ಪಾಪಿಯಾದ ಈ ಕಲಿಯ
ನೋಟಕ್ಕೆ ಬಲಿಯಾಗುತ್ತಿರುವ ಜನರನ್ನು ಕಂಡು ನನಗೆ ದುಃಖ ಬರುತ್ತಿದೆ ಎನ್ನುತ್ತದೆ ಧೇನು. ಹೀಗೆ
ಒಂದು ಕಾಲಿನಲ್ಲಿ ನಿಂತಿರುವ ವೃಷಭವನ್ನು ಕಂಡು, ಕಲಿಯ ಕಾಟವನ್ನು ಕಂಡು, ಶ್ರೀಕೃಷ್ಣ
ಹೊರಟುಹೋದನಲ್ಲಾ ಎಂದು ತಾನು ದುಃಖಿಸುತ್ತಿರುವುದಾಗಿ ಹಸು ಹೇಳುತ್ತದೆ.
ಶ್ರೀಕೃಷ್ಣ
ಭೂಮಿಯಲ್ಲಿದ್ದಾಗ ಜನರು ಯಾವಯಾವ ಗುಣವನ್ನು ಹೊಂದಿರಬೇಕು ಮತ್ತು ಹೇಗೆ ನಡೆದುಕೊಳ್ಳಬೇಕು
ಎನ್ನುವುದನ್ನು ಸ್ವಯಂ ನಡೆದು ತೋರಿದ್ದ. ಶ್ರೀಕೃಷ್ಣ ನಡೆದು ತೋರಿದ ನಲವತ್ತು ಗುಣಗಳನ್ನು ಇಲ್ಲಿ
ಧೇನು ನೆನಪಿಸಿಕೊಳ್ಳುತ್ತಿರುವುದನ್ನು ಕಾಣುತ್ತೇವೆ. ಬನ್ನಿ, ನಾವು ಇಲ್ಲಿ ವಿವರಿಸಿದ
ಗುಣಗಳನ್ನು ಸಂಕ್ಷಿಪ್ತವಾಗಿ ವಿಶ್ಲೇಷಿಸೋಣ:
No comments:
Post a Comment