ನ ಯತ್ರ ಶೋಕೋ
ನ ಜರಾ ನ ಮೃತ್ಯುರ್ನಾಧಿರ್ನ ಚೋದ್ವೇಗ ಋತೇ ಕುತಶ್ಚಿತ್ ।
ಯಶ್ಚಿತ್ತತೋದಃ
ಕ್ರಿಯಯಾSನಿದಂವಿದಾಂ ದುರಂತದುಃಖಪ್ರಭವಾನುದರ್ಶನಾತ್ ॥೩೦॥
ಇಲ್ಲಿ ಶುಕಾಚಾರ್ಯರು ಸತ್ಯಲೋಕದ ವರ್ಣನೆ ಮಾಡಿರುವುದನ್ನು
ಕಾಣುತ್ತೇವೆ. ಸತ್ಯಲೋಕವನ್ನು ‘ದ್ವೈಪರಾರ್ಧ್ಯಂ’
ಎನ್ನುತ್ತಾರೆ. ಅಂದರೆ ಪರಕಾಲದಷ್ಟು ಆಯುಸ್ಸು ಇರುವ ಲೋಕ ಎಂದರ್ಥ. ಈ ಶ್ಲೋಕದಲ್ಲಿ ಸತ್ಯಲೋಕವನ್ನು ‘ಋತಲೋಕ’ ಎಂದು ಕರೆದಿದ್ದಾರೆ. [ಸತ್ಯ
ಮತ್ತು ಋತ ಈ ಎರಡು ಪದಗಳನ್ನು ಒಟ್ಟಿಗೆ ಪ್ರಯೋಗ ಮಾಡಿದಾಗ ಋತ ಅಂದರೆ ಯಥಾರ್ಥದ ಅರಿವು, ಸತ್ಯ
ಎಂದರೆ ಅರಿತ ಯಥಾರ್ಥದ ನಡೆ-ನುಡಿ ಎನ್ನುವ
ಬೇರೆಬೇರೆ ಅರ್ಥವನ್ನು ಕೊಟ್ಟರೂ ಕೂಡಾ, ಇನ್ನೊಂದು ರೀತಿಯಲ್ಲಿ ಋತ ಎನ್ನುವುದು ಸತ್ಯದ ಪರ್ಯಾಯ
ಶಬ್ದ. ಹೀಗಾಗಿ ಇಲ್ಲಿ ಋತಲೋಕ ಎಂದರೆ ಸತ್ಯಲೋಕ].
ಸೃಷ್ಟಿಯಾದ
ಲೋಕಗಳಲ್ಲಿ ಮೋಕ್ಷಕ್ಕೆ ಅತ್ಯಂತ ಸದೃಶವಾದ ಲೋಕವೆಂದರೆ ಅದು ಸತ್ಯಲೋಕ. ಇಂತಹ ಸತ್ಯಲೋಕದಲ್ಲಿ
ಇರತಕ್ಕಂತಹ ಜೀವಗಳಿಗೆ ದುಃಖವಿಲ್ಲ, ಮುಪ್ಪಿಲ್ಲ, ರೋಗ-ರುಜಿನಗಳಿಲ್ಲ. ಅತೃಪ್ತಿಯ ಭಾವನೆ ಇಲ್ಲ,
ಉದ್ವೇಗವಿಲ್ಲ ಮತ್ತು ಸಾವಿಲ್ಲ. [ಇಲ್ಲಿ ಸಾವಿಲ್ಲ ಎನ್ನುವುದು ಸಾಪೇಕ್ಷ. ಏಕೆಂದರೆ ೩೧ ಸಾವಿರದ
೧೦೪ ಸಾವಿರ ಕೋಟಿ ವರ್ಷಗಳ ನಂತರ ಸತ್ಯಲೋಕ ಕೂಡಾ ನಾಶವಾಗುತ್ತದೆ ಮತ್ತು ಸತ್ಯಲೋಕದಿಂದ ಜೀವಗಳು
ತಮ್ಮ ಲಿಂಗ ಶರೀರವನ್ನು ತ್ಯಜಿಸಿ ಮೋಕ್ಷವನ್ನು ಸೇರುತ್ತವೆ]. ಸ್ವರ್ಗದಿಂದಾಚೆಗಿನ ಎಲ್ಲಾ
ಲೋಕಗಳಲ್ಲಿಯೂ ಈ ಸ್ಥಿತಿ ಇದ್ದರೂ ಕೂಡಾ, ಇವೆಲ್ಲವುದರ ಪರಾಕಾಷ್ಠೆ ಸತ್ಯಲೋಕದಲ್ಲಿರುತ್ತದೆ.
ಇಂತಹ ಸತ್ಯಲೋಕದಲ್ಲಿ ಜೀವನ್ಮುಕ್ತರು ಪರಕಾಲದ ಕೊನೆಯ ತನಕ ಇದ್ದು, ನಂತರ ಮಹಾಪ್ರಳಯದ ಕಾಲದಲ್ಲಿ ಚತುರ್ಮುಖನೊಂದಿಗೆ ಮೋಕ್ಷದಲ್ಲಿ
ಭಗವಂತನನ್ನು ಹೋಗಿ ಸೇರುತ್ತಾರೆ.
ಸತ್ಯಲೋಕದಲ್ಲಿಲ್ಲದ
ಮಾನಸಿಕ ಉದ್ವೇಗವನ್ನು ನಾವು ಲೌಕಿಕವಾಗಿ ದಿನನಿತ್ಯ ಅನುಭವಿಸುತ್ತೇವೆ. ನಮ್ಮ ಮನಸ್ಸಿನಲ್ಲಿ
ಅತೃಪ್ತಿ ಮನೆ ಮಾಡಿರುತ್ತದೆ. ಇದಕ್ಕೆ ಮುಖ್ಯ
ಕಾರಣ ಭಗವಂತನ ಅರಿವಿಲ್ಲದೇ ಇರುವ ಅಜ್ಞಾನ. ಏನನ್ನೋ ಗಳಿಸಬೇಕು ಎಂದು ಏನೇನನ್ನೋ ಮಾಡಿ, ಸುಖವನ್ನರಸುತ್ತಾ, ದುಃಖದತ್ತ
ಪಯಣಿಸುತ್ತಿರುತ್ತೇವೆ ನಾವು! ಸುಖದ ಮೂಲ ಭಗವಂತ
ಎನ್ನುವ ಸತ್ಯವನ್ನು ಅರಿಯದೇ ಇರುವುದೇ ನಮ್ಮೆಲ್ಲಾ ದುಃಖಗಳಿಗೆ ಮೂಲಕಾರಣ. ಆದರೆ ಸತ್ಯಲೋಕವನ್ನು
ಸೇರುವ ಜೀವನ್ಮುಕ್ತ- ‘ಭಗವಂತನೊಬ್ಬನೇ ನಿತ್ಯಸತ್ಯ’ ಎನ್ನುವುದನ್ನು ಅರಿತು, ಪ್ರತಿಯೊಂದು
ಕ್ಷಣವೂ ಆನಂದದ ಕಡಲಲ್ಲಿ ತೇಲಾಡುತ್ತಿರುತ್ತಾನೆ. ಅವನಿಗೆ ಯಾವ ಮಾನಸಿಕ ಗೊಂದಲ-ಉದ್ವೇಗಳೂ
ಇರುವುದಿಲ್ಲ.
ಮಹರ್ಲೋಕದಿಂದ
ಸತ್ಯಲೋಕದ ತನಕ ಇರುವ ಜೀವನ್ಮುಕ್ತರು ಯಾವಯಾವ
ಸ್ಥಿತಿಯಲ್ಲಿ ಹೋಗಿ ಭಗವಂತನನ್ನು ನೋಡುತ್ತಾರೆ ಎನ್ನುವುದನ್ನು ಶುಕಾಚಾರ್ಯರು ಮುಂದೆ
ವಿವರಿಸುವುದನ್ನು ಕಾಣುತ್ತೇವೆ.
bahala bahala dhanyavadagalu........devaru nimage sanmangalavannu untumadali.......pusthakagalige vandanegalu
ReplyDeleteನಿಮಗೂ ನಮ್ಮ ಧನ್ಯವಾದಗಳು.
Deleteದೇವರು ನಿಮ್ಮನ್ನು ಹರಸಲಿ.