ಮಹರ್ಲೋಕದಿಂದ
ಸತ್ಯಲೋಕದ ತನಕ ಇರುವ ಜೀವನ್ಮುಕ್ತರು ಯಾವಯಾವ
ಸ್ಥಿತಿಯಲ್ಲಿ ಹೋಗಿ ಭಗವಂತನನ್ನು ನೋಡುತ್ತಾರೆ ಎನ್ನುವುದನ್ನು ಶುಕಾಚಾರ್ಯರು ಮುಂದೆ
ವಿವರಿಸುವುದನ್ನು ಕಾಣುತ್ತೇವೆ.
ತತೋ ವಿಶೇಷಂ
ಪ್ರತಿಪದ್ಯ ನಿರ್ಭಯಸ್ತೇನಾತ್ಮನಾSಪೋSನಲಮೂರ್ಧ್ನಿಚ ತ್ವರನ್ ।
ಜ್ಯೋತಿರ್ಮಯೋ
ವಾಯುಮುಪೇತ್ಯ ಕಾಲೇ ವಾಯ್ವಾತ್ಮನಾ ಖಂ ಬೃಹದಾತ್ಮಲಿಂಗಮ್ ॥೩೧॥
“ಮೋಕ್ಷ
ಮಾರ್ಗದಲ್ಲಿ ಜೀವ ಮೊದಲು ‘ವಿಶೇಷ’ವನ್ನು ಹೋಗಿ ಸೇರುತ್ತಾನೆ” ಎಂದಿದ್ದಾರೆ ಶುಕಾಚಾರ್ಯರು. ಈ ಹಿಂದೆ ಹೇಳಿದಂತೆ(ಎರಡನೇ ಸ್ಕಂಧದ ಮೊದಲ ಅಧ್ಯಾಯದ
೨೪ನೇ ಶ್ಲೋಕದಲ್ಲಿ): ಪಂಚಭೂತಗಳಲ್ಲಿ ಶಬ್ದ-ಸ್ಪರ್ಶ-ರೂಪ-ರಸ-ಗಂಧ ಈ ಎಲ್ಲಾ ಗುಣಗಳು ಎಲ್ಲಿ
ಸಮಾವೇಶಗೋಳ್ಳುತ್ತವೋ ಅದು ‘ವಿಶೇಷ’. ಅಂದರೆ: ಪಂಚಭೂತಗಳಲ್ಲಿ ಅತ್ಯಂತ ಸ್ಥೂಲವಾದ
ಮಣ್ಣಿನಲ್ಲಿ ಸನ್ನಿಹಿತನಾದ ಭಗವಂತನ ಅನಿರುದ್ಧ
ರೂಪ ‘ವಿಶೇಷ’. ಅನಿರುದ್ಧನಿಗೆ ಎರಡು ರೂಪಗಳು. ಒಂದು ಪ್ರಥ್ವಿಗತವಾದ ರೂಪ ಹಾಗೂ ಇನ್ನೊಂದು
ನೀರಿನಲ್ಲಿರುವ ರೂಪ. ಈ ಹಿಂದೆ ಒಂದನೇ ಸ್ಕಂಧದಲ್ಲಿ ವಿವರಿಸಿದಂತೆ(ಲಯ ಚಿಂತನೆ ೧-೫-೧೦) ಎಲ್ಲಾ
ದೇವತೆಗಳು ಬ್ರಹ್ಮ ದೇವರಲ್ಲಿ ಹೋಗಿ ಸೇರುತ್ತಾರೆ. ಇಂತಹ ಬ್ರಹ್ಮದೇವರ ಜೊತೆಗೆ ಜೀವರು ಮೋಕ್ಷ ಮಾರ್ಗದಲ್ಲಿ ಮುಂದೆ
ಸಾಗುತ್ತಿರುತ್ತಾರೆ. ಹೀಗೆ ಸಾಗುವಾಗ ಮೊದಲು ಸಿಗುವಂತಹದ್ದು ಅನ್ನಮಯರೂಪನಾದ ಭಗವಂತನ ಅನಿರುದ್ಧ ರೂಪ.
ಈ ಅನ್ನಮಯರೂಪನಾದ ಭಗವಂತನೊಂದಿಗೆ ಕೂಡಿಕೊಂಡು ಜೀವ ಮುಂದೆ ನೀರಿನಲ್ಲಿರುವ ಭಗವಂತನ ರೂಪವನ್ನು
ಸೇರುತ್ತಾನೆ. ಪ್ರಥಿವಿಯಲ್ಲಿರುವ ಭಗವಂತನ ರೂಪ ಜಲದಲ್ಲಿರುವ ಭಗವಂತನ ರೂಪದಲ್ಲಿ ಐಕ್ಯವಾಗುತ್ತದೆ. ಜಲದಲ್ಲಿರುವ ಭಗವಂತನ ರೂಪದಿಂದ ಮುಂದೆ ಹೋದಾಗ
ಅಗ್ನಿಯಲ್ಲಿರುವ ಪ್ರಾಣಮಯ ರೂಪ ಕಾಣುತ್ತದೆ. ಇದು ಭಗವಂತನ ಪ್ರದ್ಯುಮ್ನರೂಪ. ಈ ಪ್ರದ್ಯುಮ್ನನಿಗೆ
ಮೂರು ರೂಪಗಳು. ಅಗ್ನಿಯಲ್ಲಿರುವ ಪ್ರಾಣಮಯರೂಪ, ಗಾಳಿಯಲ್ಲಿರುವ ಪ್ರಾಣಮಯರೂಪ ಮತ್ತು
ಆಕಾಶದಲ್ಲಿರುವ ಪ್ರಾಣಮಯ ರೂಪ. ಅಗ್ನಿಯಲ್ಲಿರುವ
ಭಗವಂತನ ಪ್ರಾಣಮಯ ರೂಪದೊಂದಿಗೆ ಮುನ್ನೆಡೆಯುವ ಜೀವ, ಕ್ರಮವಾಗಿ ಗಾಳಿಯಲ್ಲಿರುವ ಪ್ರಾಣಮಯ ರೂಪ
ಮತ್ತು ಆಕಾಶದಲ್ಲಿರುವ ಪ್ರಾಣಮಯ-ಪ್ರದ್ಯುಮ್ನರೂಪದಲ್ಲಿ ಲಯಹೊಂದಿ ಮುಂದೆ ಸಾಗುತ್ತಾನೆ.
ಘ್ರಾಣೇನ ಗಂಧಂ
ರಸನೇನ ವೈ ರಸಂ ರೂಪಂ ತು ಚ ದೃಷ್ಟ್ಯಾ ಸ್ಪರ್ಶಂ ತ್ವಚೈವ ।
ಶ್ರೋತ್ರೇಣ
ಚೋಪೇತ್ಯ ನಭೋಗುಣಂ ತತ್ ಪ್ರಾಯೇಣ
ನಾವೃತ್ತಿಮುಪೈತಿ ಯೋಗೀ ॥೩೨॥
ಹೀಗೆ ಪಂಚಭೂತಗಳಲ್ಲಿ
ನಿಯಾಮಕನಾದ ಭಗವಂತನ ಒಂದು ರೂಪ ಇನ್ನೊಂದು ರೂಪದಲ್ಲಿ ಐಕ್ಯಹೊಂದಿ ಮುಂದೆ ಸಾಗುವಾಗ, ಸಮನಾಂತರವಾಗಿ
ಏನಾಗುತ್ತದೆ ಎನ್ನುವುದನ್ನು ಶುಕಾಚಾರ್ಯರು ಈ ಶ್ಲೋಕದಲ್ಲಿ ವಿವರಿಸಿದ್ದಾರೆ. ಜೀವ ಪ್ರಥಿವೀಯಲ್ಲಿರುವ
ಭಗವಂತನನ್ನು ಸೇರಿದಾಗ ಅಲ್ಲಿ ಗಂಧ ನಿಯಾಮಕ ಭಗವಂತ ‘ವಿಶೇಷ’ನೊಂದಿಗೆ ಸೇರುತ್ತಾನೆ. ನಂತರ ನೀರಿನಲ್ಲಿರುವ ಭಗವಂತನನ್ನು ಸೇರಿದಾಗ ಅಲ್ಲಿ ನೀರಿನ
ಗುಣವಾದ ರಸನಿಯಾಮಕ ಭಗವಂತ ಐಕ್ಯನಾಗುತ್ತಾನೆ. ಮುಂದೆ
ಅಗ್ನಿಯಲ್ಲಿರುವ ಭಗವಂತನ ಪ್ರಾಣಮಯ ರೂಪವನ್ನು ಸೇರಿದಾಗ ಅಲ್ಲಿ ರೂಪ ನಿಯಾಮಕನಾದ ಭಗವಂತ ಐಕ್ಯನಾಗುತ್ತಾನೆ,
ನಂತರ ಗಾಳಿಯಲ್ಲಿರುವ ಭಗವಂತನ ಪ್ರಾಣಮಯ ರೂಪವನ್ನು ಸೇರಿದಾಗ ಅಲ್ಲಿ ಸ್ಪರ್ಶ ನಿಯಾಮಕನಾದ ಭಗವಂತ ಐಕ್ಯನಾಗುತ್ತಾನೆ.
ಮುಂದೆ ಆಕಾಶದಲ್ಲಿರುವ ಭಗವಂತನ ಪ್ರಾಣಮಯ
ರೂಪವನ್ನು ಸೇರಿದಾಗ ಅಲ್ಲಿ ಶಬ್ದನಿಯಾಮಕ ಭಗವಂತನ ರೂಪ ಐಕ್ಯವಾಗುತ್ತದೆ. ಹೀಗೆ ಪಂಚಭೂತಗಳನ್ನು ದಾಟಿ,
ಪಂಚಭೂತಗಳಲ್ಲಿ ಇರತಕ್ಕಂತಹ ಪಂಚತನ್ಮಾತ್ರೆಗಳಲ್ಲಿರುವ ಭಗವಂತ ಹಾಗೂ ಪಂಚಜ್ಞಾನೇಂದ್ರಿಯಗಳಲ್ಲಿ ಇರತಕ್ಕಂತಹ ಭಗವಂತ ಎಕೀಭೂತನಾಗಿ,
ಅವನೊಂದಿಗೆ ಆಕಾಶಗತನಾದ ಭಗವಂತನ ತನಕ ಹೋದ ಜೀವ ಪ್ರಾಯಃ
ಮರಳಿ ಬರುವುದಿಲ್ಲ.
ಇಲ್ಲಿ “ಪ್ರಾಯಃ
ಮರಳಿ ಬರುವುದಿಲ್ಲ” ಎಂದಿದ್ದಾರೆ ಶುಕಾಚಾರ್ಯರು. ಏಕೆ ಹೀಗೆ ಹೇಳಿದ್ದಾರೆ ಎಂದರೆ: ನಮಗೆ ತಿಳಿದಂತೆ
ಜೀವದ ಜೊತೆಗೆ ಪ್ರಾಣ-ಭಾರತಿಯರು, ಶಿವ-ಪಾರ್ವತಿಯರು ಎಲ್ಲರೂ ಇರುತ್ತಾರೆ. ಇವರೆಲ್ಲರೂ ಮರಳಿ ಬರುತ್ತಾರೆ.
ಏಕೆಂದರೆ ಮುಂದಿನ ಕಲ್ಪದಲ್ಲಿ ಪ್ರಾಣ ದೇವರು ಬ್ರಹ್ಮಪದವಿಯನ್ನೂ, ಶಿವ ಶೇಷ ಪದವಿಯನ್ನು ಅಲಂಕರಿಸಿ
ಭಗವಂತನ ಸೃಷ್ಟಿ ಕಾರ್ಯದಲ್ಲಿ ಭಾಗಿಯಾಗುತ್ತಾರೆ.
ಇಂಥಹ ಹೊಣೆಗಾರಿಕೆ ಉಳ್ಳವರನ್ನು ಬಿಟ್ಟರೆ ಉಳಿದವರು ಯಾರೂ ಇಲ್ಲಿಯ ತನಕ ಹೋಗಿ ಮರಳಿ ಬರುವ ಪ್ರಶ್ನೆ
ಇಲ್ಲ.
ಈ ಶ್ಲೋಕದಲ್ಲಿನ ಇನ್ನೊಂದು
ಮುಖವನ್ನು ನೋಡಿದರೆ: ಈ ಸ್ಥಿತಿಯಲ್ಲಿ ಜೀವ ಅನ್ನಮಯಕೋಶ ಮತ್ತು ಪ್ರಾಣಮಯಕೋಶವನ್ನು ಕಳಚಿಕೊಳ್ಳುತ್ತಾನೆ.
ಹಾಗಾಗಿ ಆತ ತನ್ನೆಲ್ಲಾ ಇಂದ್ರಿಯಗಳಿಂದ ಕಳಚಿಕೊಂಡು ನೇರವಾಗಿ ಸ್ವರೂಪಭೂತವಾದ ಇಂದ್ರಿಯಗಳಿಂದ ಎಲ್ಲವನ್ನೂ
ಗ್ರಹಿಸುವಂತಾಗುತ್ತದೆ. ಹಾಗಾಗಿ ಈ ಹಂತದಲ್ಲಿ ಜೀವನಿಗೆ ಸ್ವರೂಪದಿಂದಲೇ ಎಲ್ಲಾ ವಿಷಯಾನುಭವಗಳಾಗುತ್ತವೆ.
No comments:
Post a Comment