Sunday, January 5, 2014

Shrimad BhAgavata in Kannada -Skandha-02-Ch-02(14)

ಯೋSoತಃ ಪಚತಿ ಭೂತಾನಾಂ ಯಸ್ತಪತ್ಯಂಡಮಧ್ಯಗಃ
ಸೋSಗ್ನಿ ರ್ವೈಶ್ವಾನರೋ ಮಾರ್ಗೋ ದೇವಾನಾಂ ಪಿತೃಣಾಂ ಮುನೇಃ ೨೬

ಮೇಲೆ ವಿವರಿಸಿರುವ ವೈಶ್ವಾನರ ಲೋಕದ ಕುರಿತು ಈ ಶ್ಲೋಕದಲ್ಲಿ ವಿವರಿಸಲಾಗಿದೆ. ಪ್ರತಿಯೊಬ್ಬ ಜೀವನೊಳಗಿದ್ದು ಆತ ಸೇವಿಸಿದ ಆಹಾರವನ್ನು ಪಚನ ಮಾಡಿ, ಅವನ ಜೀವನ ನಿರ್ವಹಣೆಗೆ ಸಹಾಯವಾಗಿರುವ ವೈಶ್ವಾನರನೇ ಈ ಬ್ರಹ್ಮಾಂಡ ಮಧ್ಯದಲ್ಲಿ ಬೆಳಕಾಗಿ ನಿಂತಿದ್ದಾನೆ. ದೇವಯಾನದಲ್ಲಿ ಹೋಗುವವರು, ಪಿತೃಯಾನದಲ್ಲಿ ಹೋಗುವವರು,  ಬ್ರಹ್ಮಯಾನದಲ್ಲಿ ಹೋಗುವವರು, ಎಲ್ಲರೂ ಈ ವೈಶ್ವಾನರ ಲೋಕಕ್ಕೆ ಹೋಗಿಯೇ ಮೋಕ್ಷವನ್ನು ಸೇರಬೇಕು. ಆದ್ದರಿಂದ ಮೋಕ್ಷ ಮಾರ್ಗದಲ್ಲಿ ವೈಶ್ವಾನರಲೋಕ ಬಹಳ ಮುಖ್ಯವಾದ ತಾಣ(Station). 
  
ದೇವಯಾನಂ ಪಿಂಗಲಾಭಿರಹಾ ನ್ಯೇತಿ ಶತಾಯುಷಾ
ರಾತ್ರೀರಿಡಾಭಿಃ ಪಿತೃಣಾಂ ವಿಷುವತ್ತಾಂ ಸುಷುಮ್ನಯಾ ೨೭
  
ಈ ಶ್ಲೋಕ ಇಂದಿನ ಹೆಚ್ಚಿನ ಪುಸ್ತಕಗಳಲ್ಲಿ ಬಿಟ್ಟು ಹೋಗಿದೆ. ಮೇಲ್ನೋಟಕ್ಕೆ ಯಾವ ಅರ್ಥವನ್ನೂ ಸರಿಯಾಗಿ ಈ ಶ್ಲೋಕ  ಹೇಳದೇ ಇರುವುದೇ ಇದಕ್ಕೆ ಕಾರಣವಾಗಿರಬಹುದು.  ಸಂಸ್ಕೃತದ ಮೇಲ್ನೋಟದ ಸಹಜ ಅರ್ಥವನ್ನು ತೆಗೆದುಕೊಂಡು ನೋಡಿದರೆ, ಈ ಶ್ಲೋಕ ಅಸಂಗತವಾದ ಅರ್ಥವನ್ನು ಹೇಳುತ್ತದೆ. ಅದೇನೆಂದರೆ: “ನೂರು ವರ್ಷ ಬದುಕಿದವನು ದೇವಯಾನದಲ್ಲಿ ಹೋಗುತ್ತಾನೆ; ಪಿಂಗಲಾ ನಾಡಿಗಳಿಂದ ಹೋದವನು ಹಗಲುಗಳನ್ನು ಸೇರುತ್ತಾನೆ; ಇಡಾ ನಾಡಿಗಳಿಂದ ಹೋದವನು ರಾತ್ರಿಗಳನ್ನು ಸೇರುತ್ತಾನೆ; ಸುಷುಮ್ನಾದಿಂದ ಹೋದವನು ವಿಷುವತ್ತೆ(ಸಂಕ್ರಮಣದ ಸ್ಥಿತಿ)ಯನ್ನು ಸೇರುತ್ತಾನೆ”. ಈ ಮೇಲ್ನೋಟದ ಅರ್ಥ ಯಾವ ಸಂದೇಶವನ್ನೂ ತಿಳಿಸಿ ಹೇಳುವುದಿಲ್ಲ. ಇಲ್ಲಿ ಹಗಲುಗಳು, ರಾತ್ರಿಗಳು, ಪಿಂಗಲಾ ನಾಡಿಗಳು, ಇಡಾ ನಾಡಿಗಳು, ವಿಷುವತ್ತೆ, ಇತ್ಯಾದಿ ಶಬ್ದಗಳು ಏನನ್ನು ಹೇಳುತ್ತವೆ ಎನ್ನುವುದು ನಿಗೂಢ. ಆದರೆ ಈ ಎಲ್ಲಾ ಸಮಸ್ಯೆಗಳನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ, ಪ್ರಾಚೀನ ಗ್ರಂಥಗಳ ಪ್ರಮಾಣದ ಸಂವಾದವನ್ನು ಕೊಟ್ಟು, ಅತ್ಯದ್ಭುತವಾಗಿ ಈ ಕೆಳಗಿನಂತೆ ಬಿಡಿಸಿ ಹೇಳಿರುವುದನ್ನು ಕಾಣುತ್ತೇವೆ:

ದಕ್ಷಿಣಾಃ ಪಿಂಗಲಾಃ ಸರ್ವಾ ಇಡಾ ವಾಮಾಃ ಪ್ರಕೀರ್ತಿತಾಃ
ನಾಡ್ಯೋSಥ ಮಧ್ಯಮಾ ಪ್ರೋಕ್ತಾ ಸುಷುಮ್ನಾ ವೇದಪಾರಗೈಃ   ಇತಿ ಭಾಗವತ ತಂತ್ರೇ

ದೇವಯಾನಸ್ಯ ಮಾರ್ಗಸ್ಥಾ ಅಹಃಶಬ್ದಾಭಿಸಂಜ್ಞಿತಾಃ
ಪಿತೃಯಾನಸ್ಯ ಮಾರ್ಗಸ್ಥಾ ರಾತ್ರಿಶಬ್ದಾಹ್ವಯಾ ಮತಾಃ ಇತಿ ಬೃಹತ್ತಂತ್ರೇ
ಶತಾಯುರ್ಮರಣಂ ಚೈವ ಕಾಲಿಕಂ ಪರಮಾವೃತ್ತಿಃ
ಇತ್ಯಭಿಧಾನೇ ಪಿಂಗಲಾಭಿಃ ಶತಾಯುಷಾ ಅಹಃಸಂಜ್ಞಂ ಪಿತೃಯಾನಂ
ವಿಷುವತ್ತಾ ಬ್ರಹ್ಮಯಾನೋ ವಿಶೇಷೇಣ ಸುಖಂ ಯತಃ
ಪಿಂಗಲಾ ದೇವಯಾನಂ ಸ್ಯಾತ್ ಪಿಂಗಾಖ್ಯಸುಖದಂ ಯತಃ
ಇಡಾSನ್ನದಾನಾತ್ ಪಿತೃಣಾಮೇವಂ ಮಾರ್ಗಾಃ ಪ್ರಕೀರ್ತಿತಾಃ ಇತಿ ಬ್ರಹ್ಮತರ್ಕೇ

ಇಲ್ಲಿ ಪಿಂಗಲಾ ನಾಡಿಗಳು ಎಂದರೆ ದೇಹದ ಬಲಭಾಗದಲ್ಲಿರುವ ನಾಡಿಗಳು ಎಂದರ್ಥ. ಅದೇ ರೀತಿ ಇಡಾ ನಾಡಿಗಳು ಎಂದರೆ ಎಡಬದಿಯ ನಾಡಿಗಳು. ದೇಹದ ಬಲಬದಿಯ ನಾಡಿಗಳಿಂದ ಜೀವ ಉತ್ಕ್ರಮಣವಾಗುವುದು ದೇವಯಾನ ಮತ್ತು ಎಡಬದಿಯ ನಾಡಿಗಳಿಂದ ಉತ್ಕ್ರಮಣವಾಗುವುದು ಪಿತೃಯಾನ. ಇದಲ್ಲದೆ ಈ ಹಿಂದೆ ಹೇಳಿದಂತೆ ನಡುವಿನ ಸುಷುಮ್ನಾದ ಮೂಲಕ ಸಹಸ್ರಾರದಿಂದ ದೇಹ ಉತ್ಕ್ರಮಣವಾಗುವುದು ಬ್ರಹ್ಮಯಾನ. ದೇವಯಾನದಲ್ಲಿ ಹೋದವರು ಹಗಲುಗಳನ್ನು ಸೇರುತ್ತಾರೆ ಎಂದರೆ-ಬೆಳಕಿನ ದಾರಿಯಲ್ಲಿರುವ ಎಲ್ಲಾ ದೇವತೆಗಳನ್ನು ಹೋಗಿ ಸೇರುತ್ತಾರೆ ಎಂದರ್ಥ. ಈ ಹಿಂದೆ ಹೇಳಿದಂತೆ: ಅಗ್ನಿ, ಜ್ಯೋತಿ,  ಆತಿವಾಹಿಕ ವಾಯು, ಹಗಲಿನ ದೇವತೆ, ಶುಕ್ಲಪಕ್ಷದ ದೇವತೆ, ಪೂರ್ಣಿಮೆಯ ದೇವತೆ, ಉತ್ತರಾಯಣದ ದೇವತೆ, ಸಂವತ್ಸರದ ದೇವತೆ, ಮಿಂಚಿನ ದೇವತೆ, ವರುಣ, ದಕ್ಷಪ್ರಜಾಪತಿ, ಸೂರ್ಯ, ಚಂದ್ರ, ವೈಶ್ವಾನರ, ಇಂದ್ರ, ಧ್ರುವ, ಭಾರತಿ ಮತ್ತು ಮುಖ್ಯಪ್ರಾಣ-ಇವರೆಲ್ಲರೂ ಬೆಳಕಿನ ದಾರಿಯ ದೇವತೆಗಳು. ಇದೇ ರೀತಿ ರಾತ್ರಿಗಳನ್ನು ಹೋಗಿ ಸೇರುತ್ತಾರೆ ಎಂದರೆ ಕತ್ತಲಿನ ಮಾರ್ಗದ ದೇವತೆಗಳನ್ನು ಹೋಗಿ ಸೇರುತ್ತಾರೆ ಎಂದರ್ಥ.
ಈ ಶ್ಲೋಕದಲ್ಲಿ  ಬಳಸಿರುವ  ‘ಶತಾಯುಷಾ’ ಪದದ ಅರ್ಥ ‘ನೂರುವರ್ಷ ಆಯುಸ್ಸು’ ಎಂದಲ್ಲ. ಒಬ್ಬ ವ್ಯಕ್ತಿ ಎಷ್ಟು ಕಾಲ ಬದುಕಬೇಕೋ ಅಷ್ಟುಕಾಲ ಬದುಕಿ ಸಾಯುವುದನ್ನು ಇಲ್ಲಿ ‘ಶತಾಯುಷಾ’ ಎಂದಿದ್ದಾರೆ. ಮಧ್ಯದಲ್ಲಿ ಯಾವುದೋ ದುರಂತದಿಂದ ಸಾಯದೇ, ಬದುಕಬೇಕಾದಷ್ಟು ದಿನಗಳನ್ನು ಪೂರ್ಣ ಅನುಭವಿಸಿ ಸಾಯುವುದು ಕಾಲಿಕ ಮರಣ.
ಇಲ್ಲಿ ‘ವಿಷುವತ್ತಾ’ ಎಂದರೆ  ‘ಬ್ರಹ್ಮಯಾನ’ ಎಂದರ್ಥ. ವಿಶಿಷ್ಟವಾದ ಸುಖವನ್ನು ಕೊಡುವ ನೇರ ಮೋಕ್ಷದ ದಾರಿ ‘ವಿಷುವತ್ತಾ’ .  ಇದೇ ರೀತಿ ಪಿಂಗಲಾ ಎಂದರೆ ‘ಪಿಂಗಾಖ್ಯಸುಖದಂ ಯತಃ’-ನಮ್ಮಲ್ಲಿ ಆನಂದದ ಬಲವನ್ನು ತುಂಬಿಸುವ ನಾಡಿ-ಪಿಂಗಲಾ. ಹಾಗೇ ಇಡಾ ಎಂದರೆ ಭೋಗಪ್ರದವಾದ ನಾಡಿ ಎಂದರ್ಥ. ಒಟ್ಟಿನಲ್ಲಿ ಹೇಳಬೇಕೆಂದರೆ ಈ ಶ್ಲೋಕ ಮೂರು ವಿಧದ ಯಾನವನ್ನು ವಿವರಿಸುವ ಅದ್ಭುತ ಶ್ಲೋಕ. ಇಲ್ಲಿ ನಮಗೆ ಒಂದು ಹೊಸ ವಿಷಯ ತಿಳಿಯುತ್ತದೆ. ಅದೇನೆಂದರೆ: ಸಾಮಾನ್ಯವಾಗಿ ಜ್ಞಾನಿಗಳು ದೇವಯಾನದಲ್ಲೂ ಹಾಗೂ ಅಜ್ಞಾನಿಗಳು ಪಿತೃಯಾನದಲ್ಲೂ ಹೋಗುತ್ತಾರೆ ಎನ್ನುವುದು ನಂಬಿಕೆ. ಆದರೆ ಇಲ್ಲಿ ಕೆಲವೊಮ್ಮೆ ಪಿತೃಯಾನದಲ್ಲಿ ಕೂಡಾ  ಜ್ಞಾನಿಗಳು ಹೋಗುತ್ತಾರೆ ಎನ್ನುವ ವಿಷಯ ತಿಳಿಯುತ್ತದೆ.

ತದ್ವಿಶ್ವನಾಭಿಂ ತ್ವಭಿಪದ್ಯ ವಿಷ್ಣೋರಣೀಯಸಾ ವಿರಜೇನಾತ್ಮನೈಕಮ್ 
ನಮಸ್ಕೃತಂ ಬ್ರಹ್ಮವಿದಾಮುಪೈತಿ ಕಲ್ಪಾಯುಷೋ ವಿಬುಧಾ ಯದ್ ರಮಂತೇ ೨೮

ಈ ಶ್ಲೋಕ ವೈಶ್ವಾನರ ಲೋಕದ ನಂತರದ ಸ್ಥಿತಿಯನ್ನು ವಿವರಿಸುತ್ತದೆ.  ವೈಶ್ವಾನರಲೋಕದ ನಂತರ, ಸಮಸ್ತ ಜಗತ್ತಿಗೂ ಕೇಂದ್ರಬಿಂದು ಮತ್ತು ಆಧಾರವಾಗಿರುವ ಭಗವಂತನ ಶಿಂಶುಮಾರರೂಪವನ್ನು ಕಂಡು, ಇಷ್ಟು ಕಾಲ ತನ್ನನ್ನು ಧಾರಣೆ ಮಾಡಿದ ಆ ವಿಶ್ವಶಕ್ತಿಗೆ ಕೃತಜ್ಞತೆ ಸಲ್ಲಿಸಿ, ಆತನ ಅನುಮತಿ-ಮಾರ್ಗದರ್ಶನದಂತೆ ಮುಂದೆ ಸಾಗುತ್ತಾನೆ ಜೀವ. ಈ ಹಂತದಲ್ಲಿ ಸೃಷ್ಟವಾದ ಪ್ರಪಂಚದಲ್ಲೇ ಅತ್ಯಂತ ಸೂಕ್ಷ್ಮಲೋಕವಾದ ಸತ್ಯಲೋಕವನ್ನು ಸೇರಲು  ಬೇಕಾದ ಅತ್ಯಂತ ಸೂಕ್ಷ್ಮಸ್ಥಿತಿಯನ್ನು ಜೀವ ಹೊಂದಿರುತ್ತಾನೆ. ಇಲ್ಲಿ ಶುಕಾಚಾರ್ಯರು “ಕಲ್ಪ ಜೀವಿಗಳಾಗಿರುವ  ಜ್ಞಾನಿಗಳು ಇರತಕ್ಕಂತಹ ಲೋಕದತ್ತ ಜೀವ ಪಯಣಿಸುತ್ತಾನೆ” ಎಂದಿದ್ದಾರೆ. ಇದರರ್ಥ ಸ್ವರ್ಗದಿಂದ ಮೇಲಿರುವ ಲೋಕಗಳು. ಅಂದರೆ ಮಹಾರ್ಲೋಕ, ಜನರ್ಲೋಕ, ತಪರ್ಲೋಕ, ಸತ್ಯಲೋಕ. ಈ ಗುಂಪಿಗೆ ಸ್ವರ್ಗಲೋಕ ಸೇರಿಲ್ಲ. ಏಕೆಂದರೆ ಅಲ್ಲಿ ಕಲ್ಪಜೀವಿಗಳು ಇರಲು ಸಾಧ್ಯವಿಲ್ಲ.  ಕಾರಣವೇನೆಂದರೆ ಸ್ವರ್ಗದ ಆಯುಸ್ಸು ಕೇವಲ ಒಂದು ಮನ್ವಂತರಕಾಲ. ಒಂದು ಮನ್ವಂತರದ ಇಂದ್ರ ಇನ್ನೊಂದು ಮನ್ವಂತರದಲ್ಲಿರುವುದಿಲ್ಲ. ಹೀಗಾಗಿ ಸ್ವರ್ಗದಲ್ಲಿರುವವರ ಅವಧಿ ಹೆಚ್ಚೆಂದರೆ ಒಂದು ಮನ್ವಂತರ ಕಾಲ ಮಾತ್ರ. ಅಂದರೆ ೩೦ ಕೋಟಿ ೮೫ ಲಕ್ಷದ ೭೦ ಸಾವಿರ ವರ್ಷಗಳು. ಸ್ವರ್ಗವನ್ನು ದಾಟಿ ಧ್ರುವಲೋಕದಲ್ಲಿ ಶಿಂಶುಮಾರನನ್ನು ಕಂಡು, ಮಹಾರ್ಲೋಕದತ್ತ ಪಯಣಿಸುವ ಜೀವ,  ಮಹಾರ್ಲೋಕದಲ್ಲಿ ಹೆಚ್ಚೆಂದರೆ ಒಂದು ದಿನಕಲ್ಪದಷ್ಟು ಕಾಲ ಇರಬಹುದು. ಅಂದರೆ ೧೪ ಮನ್ವಂತರಗಳ ಕಾಲ ಅಥವಾ ೪೩೨ ಕೋಟಿ ವರ್ಷಗಳಷ್ಟು ಕಾಲ .  ಆದರೆ ಸತ್ಯಲೋಕದ ಆಯಸ್ಸು ಬ್ರಹ್ಮದೇವರ ಒಂದು ಕಲ್ಪ. ಅಂದರೆ ೩೧ ಸಾವಿರದ ೧೦೪ ಸಾವಿರ ಕೋಟಿ ವರ್ಷ. ಇದನ್ನು ‘ಪರಕಾಲ’ ಎನ್ನುತ್ತಾರೆ. ಇದು ಬ್ರಹ್ಮದೇವರ ನೂರು ವರ್ಷ. ಇಷ್ಟು ಕಾಲದ ನಂತರ ಈ ಸೃಷ್ಟಿ ನಾಶವಾಗುತ್ತದೆ. ಮತ್ತೆ ಮರಳಿ ಸೃಷ್ಟಿ ನಿರ್ಮಾಣವಾಗಲು ಇನ್ನೊಂದು ಪರಕಾಲ ಬೇಕು. ನಮಗೆ ಈ ಕಾಲದ ಅಳತೆಯನ್ನು ಗ್ರಹಿಸಲು ಸಾಧ್ಯವಾಗದಿದ್ದರೂ ಕೂಡಾ, ಬ್ರಹ್ಮದೇವರಿಗೆ ಇದು ನೂರು ವರ್ಷವಿದ್ದಂತೆ ಮತ್ತು ಭಗವಂತನಿಗೆ ಇದೊಂದು ಕ್ಷಣವಿದ್ದಂತೆ. 

No comments:

Post a Comment