Sunday, December 29, 2013

Shrimad BhAgavata in Kannada -Skandha-02-Ch-02(13)

ವೈಶ್ವಾನರಂ ಯಾತಿ ವಿಹಾಯಸಾ ಗತಃ ಸುಷುಮ್ನಯಾ ಬ್ರಹ್ಮಪಥೇನ ಶೋಚಿಷಾ
ವಿಧೂತಕಲ್ಕೋಽಥ ಹರೇರುದಸ್ತಾತ್ಪ್ರಯಾತಿ ಚಕ್ರಂ ನೃಪ ಶೈಂಶುಮಾರಮ್ ೨೫


ಈ ದೇಹದಿಂದ ಮೇಲೆ ನೆಗೆದ ಜೀವ ಯಾವ ಮಾರ್ಗದ ಮುಖೇನ ಪಯಣಿಸುತ್ತಾನೆ ಎನ್ನುವುದನ್ನು ಇಲ್ಲಿ ಶುಕಾಚಾರ್ಯರು ವಿವರಿಸಿರುವುದನ್ನು ಕಾಣುತ್ತೇವೆ. ಶಾಸ್ತ್ರಗಳಲ್ಲಿ ದೇವಯಾನ ಮತ್ತು ಪಿತೃಯಾನ ಎನ್ನುವ ಎರಡು ಮಾರ್ಗಗಳನ್ನು ಹೇಳಿದರೆ, ಇಲ್ಲಿ ಶುಕಾಚಾರ್ಯರು ದೇವಯಾನದಲ್ಲಿನ ಬ್ರಹ್ಮಯಾನದ ಕುರಿತು ಹೇಳುವುದನ್ನು ಕಾಣುತ್ತೇವೆ. ಈ ಯಾವುದೇ ಮಾರ್ಗದ ಮುಖೇನ ಹೋದರು ಕೂಡಾ, ಹೋಗಲೇ ಬೇಕಾದ ನಡುವಿನ ಒಂದು ತಾಣವಿದೆ ಅದೇ 'ವೈಶ್ವಾನರಲೋಕ'.  ಮೋಕ್ಷವನ್ನು ಸೇರಬೇಕಾದ ಜೀವ ದೇಹದಲ್ಲಿರುವ ಸುಷುಮ್ನಾ ನಾಡಿಯ ಮುಖೇನ ಪಯಣಿಸಿ,  ಸಹಸ್ರಾರದ ಬಾಗಿಲನ್ನು ತೆರೆದು ಹೊರಹೋಗುತ್ತದೆ.ನಮ್ಮ ದೇಹದ ಎಡಭಾಗದಲ್ಲಿ ಐವತ್ತು ಮತ್ತು ಬಲಭಾಗದಲ್ಲಿ ಐವತ್ತು ಮುಖ್ಯ ನಾಡಿಗಳಿವೆ. ನಡುವಿನಲ್ಲಿ ಹೃದಯದಿಂದ ಮೇಲೆ ಹೋಗುವ ಸುಷುಮ್ನಾ ಅಥವಾ ಬ್ರಹ್ಮನಾಡಿ ಇದೆ. ಅದರ ತುದಿ ನಮ್ಮ ನೆತ್ತಿಯಲ್ಲಿದೆ. ಅದನ್ನೇ ಸಹಸ್ರಾರ ಎನ್ನುತ್ತಾರೆ. ಈ ನಾಡಿಯ ಮೂಲಕ, ಸಹಸ್ರಾರದಿಂದ ಜೀವ ದೇಹದಿಂದ ಹೊರ ಹೋದರೆ, ಆ ಜೀವ ಮತ್ತೆ ಮರಳಿ ಹುಟ್ಟುವುದಿಲ್ಲ. ಇದು ಜೀವ ಹುಟ್ಟು ಸಾವಿನ ಚಕ್ರದಿಂದ ಕಳಚಿಕೊಂಡು ಮೋಕ್ಷವನ್ನು ಸೇರುವ  ಮಾರ್ಗ. ದೇಹದ ಎಡ ಮತ್ತು ಬಲಭಾಗದಲ್ಲಿರುವ ನಾಡಿಗಳಿಗೆ ಕವಲಾಗಿ ಸೂಕ್ಷ್ಮವಾಗಿರುವ ೭೨ ಸಾವಿರ ನಾಡಿಗಳಿವೆ. ಇಷ್ಟೇ ಅಲ್ಲದೆ ಈ ಕವಲು ನಾಡಿಗಳಿಗೂ ಅವಾಂತರ ನಾಡಿಗಳಿದ್ದು, ಉಪನಿಷತ್ತಿನಲ್ಲಿ ಹೇಳುವಂತೆ ಒಟ್ಟು ೭೨ ಕೋಟಿ, ೭೨ ಲಕ್ಷದ ೭೨ಸಾವಿರ ನಾಡಿಗಳು ನಮ್ಮ ದೇಹದ ಎರಡು ಬದಿಯಲ್ಲಿವೆ. ಇವು ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮ ನಾಡಿಗಳಾಗಿದ್ದು, ಎಲ್ಲವೂ ಕಣ್ಣಿಗೆ ಕಾಣಿಸಲಾರವು. ಈ ಎಲ್ಲಾ ನಾಡಿಗಳಿಗಿಂತ ಸೂಕ್ಷ್ಮವಾದುದು ಜೀವ. ಆದ್ದರಿಂದ ಜೀವ ದೇಹದಿಂದ ಹೊರಹೋಗಲು ಈ ಯಾವುದೇ ನಾಡಿಯನ್ನು ಬಳಸಬಹುದಾದರೂ ಕೂಡಾ, ಭಗವಂತನನ್ನು ಸೇರುವ ಬೆಳಕಿನ ಮಾರ್ಗ ಸುಷುಮ್ನಾ. ಈ ಮಾರ್ಗದಲ್ಲಿ ಸುಷುಮ್ನಾ ಕಿರಣದ ಬೆಳಕು ತುಂಬಿರುತ್ತದೆ. ಈ ಬೆಳಕಿನಿಂದಾಗಿ ಜೀವನಿಗೆ ಸಹಸ್ರಾರದ ಬಾಗಿಲು ಕಾಣುತ್ತದೆ ಮತ್ತು ಜೀವ ಆ ಬಾಗಿಲನ್ನು ತೆರೆದು ಹೊರಹೋಗಲು ಸಾಧ್ಯವಾಗುತ್ತದೆ. [ಈ ಮಾರ್ಗವಲ್ಲದೆ ಇತರ ಎಲ್ಲಾ ಮಾರ್ಗಗಳೂ ಭಯಂಕರವಾದ ಗುಹೆಯಲ್ಲಿನ ಕತ್ತಲೆಯ ಪಯಾಣ(balck tunnel)].  ಸಹಸ್ರಾರದಿಂದ ಹೊರ ಬಂದ ಜೀವ ನಿರಂತರ ಬೆಳಕಿನ ಹಾದಿಯಲ್ಲಿ ಸಾಗುತ್ತಾನೆ. ದೇಹದಿಂದ ಹೊರಬಂದ ತಕ್ಷಣ ವೈಶ್ವಾನರಲೋಕವನ್ನು ಜೀವ ಸೇರುವುದಿಲ್ಲ.  ಅದಕ್ಕೂ ಮೊದಲು ಅನೇಕ ನಿಲುದಾಣಗಳಿವೆ. ಈ ಕುರಿತ ವಿವರಣೆಯನ್ನು ಶುಕಾಚಾರ್ಯರು ಇಲ್ಲಿ ನೀಡಿಲ್ಲವಾದರೂ ಕೂಡಾ, ಇದನ್ನು ಶ್ರೀಕೃಷ್ಣ ಗೀತೆಯಲ್ಲಿ ವಿವರಿಸಿರುವುದನ್ನು ಕಾಣುತ್ತೇವೆ. ಅಗ್ನಿರ್ಜೋತಿರಹಃ ಶುಕ್ಲಃ ಷಣ್ಮಾಸಾ ಉತ್ತರಾಯಣಮ್ ॥೮-೨೪॥  ದೇಹದಿಂದ ಹೊರಬಂದ ಮೋಕ್ಷಯೋಗ್ಯ ಜೀವವನ್ನು ಮೊದಲು ಸ್ವಾಗತಿಸುವವರು ವೈಶ್ವಾನರನ(ಪ್ರಧಾನ ಅಗ್ನಿಯ) ಮಕ್ಕಳಾದ ಅಗ್ನಿ ಮತ್ತು ಜ್ಯೋತಿ(ಅರ್ಚಿರ್ಲೋಕ). ಈ ದೇವತೆಗಳು ಜೀವನನ್ನು ಸತ್ಕರಿಸಿ ಮುಂದಕ್ಕೆ ಕಳುಹಿಸುತ್ತಾರೆ. ಮುಂದೆ ಜೀವನನ್ನು ಬೆಳಕಿನ ಮತ್ತು ಮಧ್ಯಾಹ್ನದ ದೇವತೆಗಳು ಸ್ವಾಗತಿಸುತ್ತಾರೆ. ಈ ನಿಜವಾದ ಬೆಳಕಿನ ಅನುಭವದೊಂದಿಗೆ ಜೀವ ಮುಂದೆ ಸಾಗಿ ಶುಕ್ಲಪಕ್ಷದ ಮತ್ತು ಹುಣ್ಣಿಮೆಯ ದೇವತೆಯನ್ನು ತಲುಪುತ್ತಾನೆ. ಆನಂತರ ಸಂಕ್ರಮಣದ, ಉತ್ತರಾಯಣದ ದೇವತೆ ಜೊತೆಗೆ ಉತ್ತರಾಯಣದ ಆರು ತಿಂಗಳ ದೇವತೆಗಳು ಜೀವನನ್ನು ಮುಂದಕ್ಕೆ ಕಳುಹಿಸುತ್ತಾರೆ.  ಮುಂದೆ ಸಂವತ್ಸರಾಭಿಮಾನಿ ದೇವತೆ, ಮಿಂಚಿನ ದೇವತೆ, ವರುಣ, ದಕ್ಷಪ್ರಜಾಪತಿ, ಹೀಗೆ ಈ ಎಲ್ಲಾ ದೇವತೆಗಳ ಲೋಕದ  ಮುಖೇನ ಸೂರ್ಯಲೋಕವನ್ನು ಜೀವ ಸೇರುತ್ತಾನೆ. ಆನಂತರ ಸೂರ್ಯಲೋಕದಿಂದ ಚಂದ್ರಲೋಕವನ್ನು ತಲುಪಿ, ಅಲ್ಲಿಂದ ವೈಶ್ವಾನರಲೋಕಕ್ಕೆ ಜೀವ ಪ್ರವೇಶಿಸುತ್ತಾನೆ. ವೈಶ್ವಾನರಲೋಕದಲ್ಲಿ ಜೀವ ತನ್ನೆಲ್ಲಾ ಕೊಳೆಗಳನ್ನು ತೊಳೆದುಕೊಂಡು ಪುಟಕ್ಕಿಟ್ಟ ಚಿನ್ನದಂತೆ  ಸ್ವಚ್ಛಗೊಳ್ಳುತ್ತಾನೆ. [ಕೆಲವು ಜೀವರಿಗೆ ಈ ಸ್ವಚ್ಛತೆ ಸೂರ್ಯಲೋಕದಲ್ಲಾದರೆ ಇನ್ನು ಕೆಲವರಿಗೆ ವೈಶ್ವಾನರಲೋಕದಲ್ಲಾಗುತ್ತದೆ]. ಈ ರೀತಿ ಸ್ವಚ್ಛಗೊಂಡ ಜೀವ ವೈಶ್ವಾನರಲೋಕದಿಂದ ಶಿಂಶುಮಾರ ಲೋಕವನ್ನು ಸೇರುತ್ತಾನೆ. ಶಿಂಶುಮಾರ ಎನ್ನುವುದು ಭಗವಂತನ ಒಂದು ರೂಪ. ಇದು ಧ್ರುವಲೋಕದಲ್ಲಿರುವ ಇಡೀ ಪ್ರಪಂಚದ ಕೇಂದ್ರಬಿಂದು(ನಾಭಿಸ್ಥಾನ). ಈ ಕೇಂದ್ರದಿಂದ ಪ್ರಪಂಚವನ್ನು ನಿಯಂತ್ರಿಸುವ ಭಗವಂತನ ಇನ್ನೊಂದು ಹೆಸರು ‘ಕಿಮ್ಸ್ತುಗ್ನ’.  ಶಿಂಶುಮಾರ  ಅಥವಾ ಕಿಮ್ಸ್ತುಗ್ನ ಎನ್ನುವ ಭಗವಂತನ ನಾಮಗಳಿಗೆ ಎಲ್ಲೂ ನಿರ್ವಚನ ಕಾಣಸಿಗುವುದಿಲ್ಲ. ಇದೊಂದು ರಹಸ್ಯವಾದ ಹೆಸರು. ‘ಶಿಂಶು’ ಎಂದರೆ ಲೋಕ ಕಂಟಕರು. ಅಂತಹ ಲೋಕಕಂಟಕರನ್ನು ಸಂಹಾರ ಮಾಡುವ ಭಗವಂತ ಶಿಂಶುಮಾರ ಅಥವಾ ಕಿಮ್ಸ್ತುಗ್ನ. [ಭಗವಂತನ ಈ ನಾಮವನ್ನು ಇತ್ತೀಚೆಗಿನ ಪುಸ್ತಕಗಳಲ್ಲಿ ಶಿಶುಮಾರ ಎಂದಿದ್ದಾರೆ. ಆದರೆ ಪ್ರಾಚೀನ ಗ್ರಂಥಗಳಲ್ಲಿ ಶಿಂಶುಮಾರ ಎಂದಿರುವುದನ್ನು ಕಾಣುತ್ತೇವೆ].    

No comments:

Post a Comment