Saturday, December 7, 2013

Shrimad BhAgavata in Kannada -Skandha-02-Ch-02(8)

ಯಾವನ್ನ ಜಾಯೇತ ಪರಾವರೇSಸ್ಮಿನ್ವಿಶ್ವೇಶ್ವರೇ ದ್ರಷ್ಟರಿ ಭಕ್ತಿಯೋಗಃ
ತಾವತ್ಸ್ಥವೀಯಃ ಪುರುಷಸ್ಯ ರೂಪಂ ಕ್ರಿಯಾವಸಾನೇ ಪ್ರಯತಃ ಸ್ಮರೇತ ೧೫

ಭಗವಂತನನ್ನು ಧ್ಯಾನ ಮಾಡಬೇಕಾದರೆ ಕೇವಲ ಪಾಂಡಿತ್ಯ ಸಾಲದು. ಧ್ಯಾನಕ್ಕೆ ಬಹಳ ಮುಖ್ಯವಾದುದು ಜ್ಞಾನದ ಜೊತೆಗೆ ಶರಣಾಗತಿ(Submission). ಭಕ್ತಿ ಇಲ್ಲದ ಪಾಂಡಿತ್ಯದಿಂದ ಧ್ಯಾನ ಅಸಾಧ್ಯ. ಎಲ್ಲವನ್ನೂ ಕಾಣಬಲ್ಲ ಭಗವಂತ ನಮ್ಮೊಳಗಿನ ಅಹಂಕಾರವನ್ನೂ ಕಾಣಬಲ್ಲ. ಹಾಗಾಗಿ ಎಲ್ಲಿಯ ತನಕ ನಾವು ಅಹಂಕಾರದಿಂದ ಈಚೆ ಬರುವುದಿಲ್ಲವೋ, ಅಲ್ಲಿಯ ತನಕ ಭಗವಂತನ ದರ್ಶನ ಸಾಧ್ಯವಿಲ್ಲ. ವೇದದಲ್ಲಿ ಹೇಳುವಂತೆ:  “ತಮೇವಂ ವಿದ್ವಾನ್ ಅಮೃತ ಇಹಭವತಿ”. ಅಂದರೆ- ಭಗವಂತನಲ್ಲಿ ಭಕ್ತಿ ಮಾಡಬೇಕಾದರೆ ಜ್ಞಾನ  ಬೇಕು, ಆತ ಜ್ಞಾನಿಗಳಿಗೆ ಮಾತ್ರ ಕಾಣಿಸಿಕೊಳ್ಳುತ್ತಾನೆ. ಇದೇ ಮಾತನ್ನು ಶ್ರೀಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ: ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ ಕುರುತೇ ತಥಾ ಭಗವದ್ಗೀತಾ-೪-೩೭॥ ಅಂದರೆ: ಅರಿವಿನ ಬೆಂಕಿ ಎಲ್ಲಾ ಕರ್ಮಗಳನ್ನೂ ಸುಟ್ಟುಬಿಡುತ್ತದೆ. ಆದರೆ ಭಕ್ತ್ಯಾ ತು ಅನನ್ಯಯಾ ಶಕ್ಯಃ ಭಗವದ್ಗೀತಾ-೧೧-೫೪॥ ಅಂದರೆ: ಭಕ್ತಿಗೆ ಪೂರಕವಾದ ಜ್ಞಾನ ಮಾತ್ರ ಭಗವಂತನ ಅರಿವಿಗೆ ಕಾರಣವಾಗುತ್ತದೆ.
ಮೇಲಿನ ಶ್ಲೋಕದಲ್ಲಿ ಶುಕಾಚಾರ್ಯರು “ಪರಾವರನಾದ ಭಗವಂತನಲ್ಲಿ ಭಕ್ತಿ ಬರಲಿಲ್ಲ ಎಂದರೆ ನಮ್ಮ ಜ್ಞಾನದಲ್ಲಿ ದೋಷವಿದೆ ಎಂದು ತಿಳಿಯಬೇಕು” ಎಂದಿದ್ದಾರೆ. ಇಲ್ಲಿ ‘ಪರಾವರ’ ಎಂದರೆ ಎಲ್ಲಾ ತತ್ತ್ವಗಳಿಗೂ ಹಿರಿಯ ತತ್ತ್ವ ಎಂದರ್ಥ. ನಾವು ಜಗತ್ತಿನ ಯಾವುದೋ ಮೂಲೆಯಲ್ಲಿರುವ ಒಂದು  ಅಣುಕಣ.  ಈ ಜಗತ್ತಿನಲ್ಲಿ ನಮಗಿಂತ ದೊಡ್ಡ ತತ್ತ್ವಗಳು ಬಹಳಷ್ಟಿವೆ. ಆದರೆ ಭಗವಂತನ ಮುಂದೆ ಇತರ ಎಲ್ಲಾ ತತ್ತ್ವಗಳೂ ಸಣ್ಣವು. ಹಾಗಾಗಿ ಅಂತಹ  ಭಗವಂತನ ಮೇಲೆ ನಮಗೆ ಭಕ್ತಿ ಬರಲಿಲ್ಲ ಎಂದರೆ ನಮಗೆ ಸರಿಯಾಗಿ ಭಗವಂತನ ಅರಿವೇ ಬರಲಿಲ್ಲ ಎಂದರ್ಥ.
ಭಗವಂತ ಇಡೀ ವಿಶ್ವಕ್ಕೆ ಸ್ವಾಮಿ. ಅಷ್ಟೇ ಅಲ್ಲ, ಪ್ರತಿಯೊಂದು ಜೀವರೊಳಗೆ ಅಂತರ್ಯಾಮಿಯಾಗಿ  ಇರತಕ್ಕವನು ಆತ. ಇಂತಹ  ಬ್ರಹ್ಮ-ವಾಯುವಿಗೂ ನಿಯಾಮಕನಾಗಿರುವ ಭಗವಂತನಲ್ಲಿ ಪೂರ್ಣಪ್ರಮಾಣದಲ್ಲಿ ಭಕ್ತಿ ಬರಲಿಲ್ಲ ಎಂದರೆ ಕಣ್ಮುಚ್ಚಿ ಆತನನ್ನು ಧ್ಯಾನದಲ್ಲಿ ಕಾಣಲು ಸಾಧ್ಯವಿಲ್ಲ.
ಮಾನಸ ಪೂಜೆ ಸಾಧ್ಯವಾಗುವ ತನಕ  ಬಾಹ್ಯಕ್ರಿಯೆಗಳಿಂದ ಭಗವಂತನನ್ನು ಅರ್ಚಿಸಬೇಕು. ಹೀಗೆ ಮಾಡುತ್ತಾ ಮುಂದುವರಿದಾಗ ಅದು ಮನಸ್ಸಿನ ಮೇಲೆ ಪ್ರಭಾವಬೀರುತ್ತದೆ. ಇದರಿಂದ ಅಹಂಕಾರ ಕಡಿಮೆಯಾಗಿ  ಧ್ಯಾನದ ಮಾರ್ಗ ಸುಗಮವಾಗುತ್ತದೆ. ಬಾಹ್ಯ ಪೂಜೆಯನ್ನು ನಿರಂತರ ಮಾಡಿ “ನನ್ನ ಅಂತರಂಗದಲ್ಲಿ ಕಾಣಿಸಿಕೋ” ಎಂದು ಭಗವಂತನಲ್ಲಿ ಪ್ರಾರ್ಥಿಸಬೇಕು. ಪ್ರತಿಯೊಂದು ಆಚರಣೆಯ ಕೊನೆಯಲ್ಲಿ ಎಲ್ಲವುದರಲ್ಲೂ ಭಗವಂತನಿದ್ದಾನೆ ಎನ್ನುವುದನ್ನು ನೆನಪಿಸಿಕೊಳ್ಳಬೇಕು. ನಾನು ಪೂಜಿಸುತ್ತಿರುವುದು ಕೇವಲ ಪ್ರತಿಮೆಯನ್ನಲ್ಲ, ಬದಲಿಗೆ ಆ ಪ್ರತಿಮೆಯ ಅಂತರ್ಯಾಮಿಯಾಗಿರುವ ಭಗವಂತನನ್ನು ಎನ್ನುವ ಅನುಸಂಧಾನ ನಮ್ಮ ಕ್ರಿಯೆಯಲ್ಲಿರಬೇಕು. ನಾವು ಮಾಡುವ ಪೂಜೆಯ ಪ್ರತಿಯೊಂದು ಹಂತದಲ್ಲಿ ಭಗವಂತನನ್ನು ಅನುಸಂಧಾನ ಮಾಡುವುದು ಕಷ್ಟವಾದಾಗ, ಪೂಜೆಯ ಕೊನೆಗೆ “ಇದು ಎಲ್ಲವುದರ ಒಳಗೂ-ಹೊರಗೂ ತುಂಬಿರುವ ಆತನಿಗೆ ಅರ್ಪಿತವಾಗಿ ಆತ ಪ್ರಸನ್ನನಾಗಲಿ” ಎಂದು ಭಗವಂತನಿಗೆ ಅರ್ಪಿಸಬೇಕು. [ಇದಕ್ಕಾಗಿಯೇ ಪ್ರತಿಯೊಂದು ಪೂಜೆಯ ಕೊನೆಗೆ ಕೃಷ್ಣಾರ್ಪಣಮಸ್ತು ಹೇಳಲಾಗುತ್ತದೆ].

No comments:

Post a Comment