ಯದಿ
ಪ್ರಯಾಸ್ಯತ್ಯಥ ಪಾರಮೇಷ್ಠ್ಯಂ ವೈಹಾಯಸಾನಾಮುತ ಯದ್ ವಿಹಾರಮ್ ।
ಅಷ್ಟಾಧಿಪತ್ಯಂ
ಗುಣಸನ್ನಿವಾಯೇ ಸಹೈವ ಗಚ್ಛೇನ್ಮನಸೇಂದ್ರಿಯೈಶ್ಚ ॥೨೩॥
ದೇಹತ್ಯಾಗ ಮಾಡಿದ ಅಪರೋಕ್ಷ ಜ್ಞಾನಿ ನೇರವಾಗಿ ಮೋಕ್ಷಕ್ಕೆ
ಹೋಗುವುದಿಲ್ಲ. ಮೋಕ್ಷಕ್ಕೆ ಹೋಗಲು ಒಂದು ಅವಧಿ ಇದೆ.
ದೇಹತ್ಯಾಗ ಮಾಡಿದ ಮೇಲೆ ಮೋಕ್ಷಕ್ಕೆ
ಹೋಗುವ ತನಕ ಜೀವ ಬೇರೆ-ಬೇರೆ ಸ್ಥಾನದಲ್ಲಿರುತ್ತಾನೆ. ಆ ಸ್ಥಾನಗಳೆಂದರೆ ಸ್ವರ್ಗಲೋಕದ ಆನಂತರ
ಇರುವ, ದೇವತೆಗಳ
ವಿಹಾರತಾಣವಾಗಿರುವ- ಮಹರ್ಲೋಕ, ಜನರ್ಲೋಕ, ತಪರ್ಲೋಕ ಮತ್ತು ಸತ್ಯಲೋಕ. ತಮ್ಮ
ಯೋಗ್ಯತೆಗನುಗುಣವಾಗಿ ಬೇರೆಬೇರೆ ಲೋಕಗಳಲ್ಲಿ
ಬ್ರಹ್ಮಕಲ್ಪದ ಅವಸಾನದ ತನಕ ಇದ್ದು, ಕೊನೆಗೆ ಚತುರ್ಮುಖ ಬ್ರಹ್ಮನೊಂದಿಗೆ ಜೀವ ಮೋಕ್ಷವನ್ನು ಸೇರುತ್ತಾನೆ. ಈ ಲೋಕವನ್ನು ಸೇರಿದ
ಜೀವನಿಗೆ ಮತ್ತೆ ಮರುಹುಟ್ಟಿಲ್ಲ. ಈ ಲೋಕಗಳಲ್ಲದೆ
ಪುಣ್ಯಫಲದಿಂದ ಸ್ವರ್ಗಲೋಕವನ್ನು ಸೇರಿದ ಜೀವನಿಗೆ ಪುನರ್ಜನ್ಮವಿರುತ್ತದೆ. ಆತ ಮತ್ತೆ ಮೋಕ್ಷ
ಸಾಧನೆ ಮಾಡಬೇಕಾಗುತ್ತದೆ.
ಮೇಲಿನ ಶ್ಲೋಕದಲ್ಲಿ ‘ಅಷ್ಟಾಧಿಪತ್ಯಂ’ ಎಂದರೆ ಅಷ್ಟದಿಕ್ಪಾಲಕರ
ಆಡಳಿತಕ್ಕೊಳಪಟ್ಟ ಸ್ವರ್ಗಲೋಕ ಎನ್ನುವುದು ಒಂದು ಅರ್ಥವಾದರೆ, ಅಷ್ಟಸಿದ್ಧಿ ಪಡೆದವರ ಸ್ಥಾನವಾದ
ಮೋಕ್ಷ ಎನ್ನುವುದು ಇನ್ನೊಂದು ಅರ್ಥ. [ಅಷ್ಟಸಿದ್ಧಿಯ ಬಗ್ಗೆ ಮುಂದೆ ಭಾಗವತದಲ್ಲೇ ವಿವರಣೆ
ಬರುತ್ತದೆ. ಸಂಕ್ಷಿಪ್ತವಾಗಿ ಅಷ್ಟಸಿದ್ಧಿಯ ಬಗ್ಗೆ ಹೇಳಬೇಕೆಂದರೆ: ಅಣಿಮಾ - ದೇಹವನ್ನು ಅತಿ ಚಿಕ್ಕ (ಅಣುವಿಗಿಂತ
ಅಣು) ಗಾತ್ರಕ್ಕೆ ಇಳಿಸುವದು; ಲಘಿಮಾ - ಹತ್ತಿಯಂತೆ ಹಗುರಾಗುವದು; ಮಹಿಮಾ - ದೇಹವನ್ನು ಅತಿ
ದೊಡ್ಡ ಗಾತ್ರಕ್ಕೆ ಹೆಚ್ಚಿಸುವದು; ಗರಿಮಾ - ಬೆಟ್ಟದಷ್ಟು ಭಾರವಾಗಿರುವದು; ಪ್ರಾಪ್ತಿ – ಎಲ್ಲಿಗೆ
ಹೋಗಬೇಕೆಂದು ಇಚ್ಛೆಯಾಯಿತೋ ಆ ಕ್ಷಣ ಅಲ್ಲಿಗೆ ಹೋಗುವುದು; ಪ್ರಾಕಾಮ್ಯ – ನಾವು ಇಷ್ಟಪಟ್ಟ ವಸ್ತು
ನಾವಿದ್ದಲ್ಲಿಗೆ ಬರುವುದು; ಈಶಿತ್ವ – ಏನನ್ನೂ ಮಾಡುವ ತಾಕತ್ತು; ವಶಿತ್ವ – ಯಾರನ್ನು ಬೇಕಾದರೂ ತನ್ನ ಅಧೀನಕ್ಕೆ
ತೆಗೆದುಕೊಳ್ಳುವುದು].
ಸಾವಿನ ಆನಂತರ ಮತ್ತು ಮೋಕ್ಷ ಸಿದ್ಧಿಯ ಮೊದಲು ಜೀವ ಯಾವ
ಇಂದ್ರಿಯವನ್ನು ಹೊಂದಿರುತ್ತಾನೆ ? ಸ್ವರೂಪಭೂತವಾದ ಇಂದ್ರಿಯವೋ ಅಥವಾ ಪಾಂಚಭೌತಿಕ ಇಂದ್ರಿಯವೋ? ಈ
ಪ್ರಶ್ನೆಗೆ ಉತ್ತರಿಸುತ್ತಾ ಶುಕಾಚಾರ್ಯರು ಹೇಳುತ್ತಾರೆ: ಜೀವ ತನ್ನ ಇಂದ್ರಿಯ ಮತ್ತು
ಮನಸ್ಸಿನೊಂದಿಗೇ ದೇಹದಿಂದ ಹೊರ ಹೋಗುತ್ತದೆ ಹೊರತು ಇಂದ್ರಿಯವನ್ನು ಬಿಟ್ಟು ಹೋಗುವುದಿಲ್ಲ.
ಮೋಕ್ಷಕ್ಕೆ ಹೋಗುವ ತನಕವೂ ಈ ಇಂದ್ರಿಯಗಳು ಆತನ ಜೊತೆಗಿರುತ್ತವೆ. ಮೋಕ್ಷಸ್ಥಿತಿಯಲ್ಲಿ ಹೋಗಿ ನಿಂತಾಗಲೇ
ಸ್ವರೂಪಭೂತವಾದ ಇಂದ್ರಿಯ ಮತ್ತು ಮನಸ್ಸು. ಅಲ್ಲಿಯ ತನಕ ಚರಮಶರೀರ ನಾಶವಾದರೂ ಕೂಡಾ ಆತನ ಲಿಂಗಶರೀರ
ಮತ್ತು ಇಂದ್ರಿಯ ಆತನ ಜೊತೆಗೇ ಇರುತ್ತವೆ.
No comments:
Post a Comment