Wednesday, December 4, 2013

Shrimad BhAgavata in Kannada -Skandha-02-Ch-02(7)

ಅದೀನಲೀಲಾಹಸಿತೇಕ್ಷಣೋಲ್ಲಸದ್ ಭ್ರೂ ಭಂಗಸಂಸೂಚಿತಭೂರ್ಯನುಗ್ರಹಮ್
ಈಕ್ಷೇತ ಚಿಂತಾಮಯಮೇನಮೀಶ್ವರಂ ಯಾವನ್ಮನೋ ಧಾರಣಯಾSವತಿಷ್ಠತೇ ೧೩
  
ಈ ಶ್ಲೋಕದಲ್ಲಿ ಶುಕಾಚಾರ್ಯರು ಹಿಂದೆ ವಿವರಿಸಿದ ಧ್ಯಾನ ಪ್ರಕ್ರಿಯೆಯನ್ನು  ಮತ್ತೆ ಇನ್ನೊಂದು ರೀತಿಯಲ್ಲಿ ವಿವರಿಸುತ್ತಾ ಹೇಳುತ್ತಾರೆ: “ಭಗವಂತನ ಮುಖದಲ್ಲಿ ಉತ್ಕೃಷ್ಟವಾದ ಮಂದಹಾಸವನ್ನು ಧ್ಯಾನಮಾಡು” ಎಂದು.  ಮುಖಕ್ಕೆ ಕಳೆಯೇ ಮಂದಹಾಸ. ಇಂತಹ ಮಂದಹಾಸದಲ್ಲಿ ಅತ್ಯಂತ ಶ್ರೇಷ್ಠ ಮಂದಹಾಸ ಆ ಭಗವಂತನ ಮಂದಹಾಸ. “ಅಂತಹ ಮಂದಹಾಸಬೀರುವ ಭಗವಂತನನ್ನು ಧ್ಯಾನದಲ್ಲಿ ಕಾಣು” ಎಂದಿದ್ದಾರೆ ಶುಕಾಚಾರ್ಯರು. “ಭಗವಂತ ಮುಗುಳ್ನಗುತ್ತಿದ್ದಾನೆ, ಆತ ತನ್ನ ಕರುಣಾಪೂರ್ಣ ಅರಳುಗಣ್ಣಿನಿಂದ ನನ್ನನ್ನು  ನೋಡುತ್ತಿದ್ದಾನೆ, ಆತನ ಅನುಗ್ರಹದ ವೃಷ್ಟಿ ನನ್ನ  ಮೇಲಾಗುತ್ತಿದೆ” ಎಂದು ಅಂತರಂಗದಲ್ಲಿ ಭಗವಂತನನ್ನು ಧ್ಯಾನ ಮಾಡಬೇಕು.

ಇಲ್ಲಿ ಭಗವಂತನನ್ನು ‘ಚಿಂತಾಮಯ’ ಎಂದು ಸಂಬೋಧಿಸಿದ್ದಾರೆ. ಇದು ಇಂದು ಲೋಕದಲ್ಲಿ ಬಳಕೆಯಲ್ಲಿಲ್ಲದ ಪದ. ಶಾಸ್ತ್ರೀಯವಾಗಿ ಚಿಂತಾಮಯ ಎಂದರೆ ಬೇಡಿದ್ದನ್ನು ಕೊಡುವ ಕರುಣಾಳು ಎಂದರ್ಥ. “ನಾನಿರುವಾಗ ನಿನಗೇಕೆ ಚಿಂತೆ” ಎಂದು ಮಂದಹಾಸ ಬೀರುತ್ತಾ, ಅರಳುಗಣ್ಣಿನಿಂದ ಭಗವಂತ ನನ್ನನ್ನು ನೋಡುತ್ತಿದ್ದಾನೆ ಎಂದು ಆ ಕರುಣಾಮೂರ್ತಿ ಭಗವಂತನನ್ನು ಧ್ಯಾನದಲ್ಲಿ ಕಾಣಬೇಕು. “ಈ ರೀತಿ ಆನಂದದ ಅಭಿವ್ಯಕ್ತಿ ಮಾಡುವಂತಹ ಅರಳುಗಣ್ಣು, ಆ ಮಂದಹಾಸ ಎಷ್ಟು ಹೊತ್ತು ಕಾಣುತ್ತದೋ ಅಷ್ಟುಹೊತ್ತು ನೋಡಿ ಆನಂದಪಡು” ಎಂದಿದ್ದಾರೆ ಶುಕಾಚಾರ್ಯರು. ಧ್ಯಾನದಲ್ಲಿ ನಿರಂತರ ಪ್ರಯತ್ನ ಮಾಡಿದರೆ ಈ ರೀತಿಯ ಅಪೂರ್ವ ಅನುಭವವನ್ನು ಪಡೆಯುವುದು ಸಾಧ್ಯ. 
ಒಮ್ಮೆ ಧ್ಯಾನದಲ್ಲಿ ಭಗವಂತನ ಸುಂದರಮೂರ್ತಿಯನ್ನು ಕಂಡರೆ ಆನಂತರ ಜಗತ್ತಿನಲ್ಲಿ ಯಾವುದೂ ಅದಕ್ಕಿಂತ ಸುಂದರ ಅನಿಸುವುದೇ ಇಲ್ಲ. ಇದರಿಂದ ಪ್ರಾಪಂಚಿಕ ಸೆಳೆತ ಕಡಿಮೆಯಾಗುತ್ತದೆ. ಕಣ್ಮುಚ್ಚಿ ಕುಳಿತ ತಕ್ಷಣ ಭಗವಂತನ ರೂಪ ಕಾಣುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಕಾಣಿಸಿದರೂ ಅದು ಸಮಗ್ರವಾಗಿ ಇಡೀ ದಿನ ಕಾಣಲು ಸಾಧ್ಯವಿಲ್ಲ. ಆತ್ಮಸ್ವರೂಪದಿಂದ ಭಗವಂತನನ್ನು ಕಾಣುವಾಗಲೂ ಸಹ, ಎಲ್ಲೋ ಒಮ್ಮೆ ಮಿಂಚಿನಂತೆ ಕಾಣಿಸಿ ಕಣ್ಮರೆಯಾಗುತ್ತಾನೆ ಆ ಭಗವಂತ. ಆದರೆ ಒಮ್ಮೆ ಕಂಡ ನೆನಪು ಇಡೀ ಜನ್ಮಕ್ಕೆ ಸಾಕಾಗುತ್ತದೆ.
  

No comments:

Post a Comment