Sunday, December 1, 2013

Shrimad BhAgavata in Kannada -Skandha-02-Ch-02(5)

ಏವಂ ಸ್ವಚಿತ್ತೇ ಸ್ವತ ಏವ ಸಿದ್ಧ ಆತ್ಮಾ ಪ್ರಿಯೋSರ್ಥೋ ಭಗವಾನನಂತಃ
ತಂ ನಿರ್ವೃತೋ ನಿಯತಾರ್ಥೋ ಭಜೇತ ಸಂಸಾರಹೇತೂಪರಮಶ್ಚ ಯತ್ರ ೦೬

ಈ ಹಿಂದೆ ಹೇಳಿದಂತೆ ಇಂದು ನಾವು ಮನೆ-ಸಂಸಾರ ಎಲ್ಲವನ್ನೂ ಸಂಪೂರ್ಣ ತ್ಯಜಿಸಿ ಕಾಡಿಗೆ ಹೋಗಿ ಬದುಕಲು ಸಾಧ್ಯವಿಲ್ಲ. ಆದರೆ ನಾವು ಎಲ್ಲವುದರ ಜೊತೆಗೆ ಇದ್ದೂ ಅದನ್ನು ಅಂಟಿಸಿಕೊಳ್ಳದೇ ಬದುಕುವುದನ್ನು ಕಲಿಯಬೇಕು. ಶ್ರೀಕೃಷ್ಣ ಗೀತೆಯಲ್ಲಿ ಹೇಳಿದಂತೆ: “ಪದ್ಮಪತ್ರಮಿವಾಂಭಸಾ”- ತಾವರೆ ಎಲೆ ನೀರಿನಲ್ಲಿರುವಂತೆ- ಜೊತೆಗಿದ್ದರೂ ಅಂಟಿಸಿಕೊಳ್ಳದೇ ಇರುವುದನ್ನು (Detached attachment) ನಾವು ಅಭ್ಯಾಸ ಮಾಡಿಕೊಳ್ಳಬೇಕು. ಇದೇ ನಿಜವಾದ ವೈರಾಗ್ಯ. ಈ ರೀತಿ ಮನಸ್ಸಿಗೆ ತರಬೇತಿ ಕೊಟ್ಟಾಗ ಜೀವನದಲ್ಲಿ ಯಶಸ್ವಿಯಾಗಿ ಬದುಕಬಹುದು.  ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ಈ ಸ್ಥಿತಿಯಲ್ಲಿ ನಾವು ನಿಂತಾಗ ನಮ್ಮ ಚಿತ್ತದಲ್ಲಿ ಭಗವಂತನ ಇರವಿನ ಅರಿವು ಜಾಗೃತಿಗೊಳ್ಳುತ್ತದೆ” ಎಂದು. ಭಗವಂತ ನಮ್ಮೆಲ್ಲರ ಒಳಗೂ-ಹೊರಗೂ ಇದ್ದಾನೆ ನಿಜ, ಆದರೆ ಆ ಅರಿವು ನಮಗಿಲ್ಲ.  ಕೇವಲ ಇರವು ಮುಖ್ಯವಲ್ಲ, ಇರವಿನ ಅರಿವೂ ಮುಖ್ಯ. ಅರಿವು ಇಲ್ಲದ ಇರವು ನಮ್ಮಪಾಲಿಗೆ ವ್ಯರ್ಥ.
ಇಲ್ಲಿ ಭಗವಂತನನ್ನು ಆತ್ಮಾ ಎಂದು ಸಂಬೋಧಿಸಿದ್ದಾರೆ. ‘ಆತ್ಮಾ’  ಎಂದರೆ ಅಂತರ್ಯಾಮಿ ಹಾಗೂ ಅತ್ಯಂತ ಆತ್ಮೀಯ ಎಂದರ್ಥ. ಭಗವಂತ ನಮ್ಮ ಅತ್ಯಂತ ಆತ್ಮೀಯ ಮತ್ತು ಆತ ಎಲ್ಲಾ ಕಾಲದಲ್ಲೂ ನಮ್ಮನ್ನು ಸ್ವೀಕರಿಸಲು ಸಿದ್ಧನಾಗಿರುತ್ತಾನೆ. ಹೀಗಿರುವಾಗ ನಾವು ಯಾರಲ್ಲೋ ಅಂಗಲಾಚುವುದನ್ನು ಬಿಟ್ಟು ಭಗವಂತನ ಅರಿವನ್ನು ಪಡೆದು, “ನನ್ನನ್ನು ಸ್ವೀಕರಿಸು” ಎಂದು ಅವನಲ್ಲಿ ಬೇಡಿಕೊಳ್ಳಬೇಕು.  ಭಗವಂತ ನಮಗೆ ಅತ್ಯಂತ ಪ್ರಿಯವಾದ ವಸ್ತು. ಆದರೆ ಆತನ ಪರಿಚಯ ನಮಗಿಲ್ಲದ ಕಾರಣ ನಮಗೆ ಯಾವುದು ಪ್ರಿಯ, ಯಾವುದು ಅಪ್ರಿಯ ಎನ್ನುವುದು ತಿಳಿಯದೇ, ಪ್ರಿಯವಾದುದರ ಅನ್ವೇಷಣೆ ಮಾಡುತ್ತಾ, ದಾರಿ ತಪ್ಪಿ ಯಾರದ್ದೋ ಬೆನ್ನು ಹತ್ತುತ್ತೇವೆ. ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ಎಲ್ಲವುದಕ್ಕಿಂತ ಪ್ರಿಯವಾದ ವಸ್ತು ಹಾಗೂ ಜೀವನದ ಕೊನೇಯ ಪುರುಷಾರ್ಥ ಆ ಭಗವಂತ” ಎಂದು. ಭಗವಂತನಿಂದಾಗಿ ಈ ಭೂಮಿಯಲ್ಲಿ ಹುಟ್ಟಿದ ನಮಗೆ ಭಗವಂತನನ್ನು ಸೇರುವುದೇ ಪರಮ ಪುರುಷಾರ್ಥ. ಭಗವಂತ ನಿತ್ಯ-ಸತ್ಯ ಮತ್ತು ಶಾಶ್ವತವಾಗಿ ಎಲ್ಲಾ ಕಡೆ ಇರುವ ಅನಂತ ಸತ್ಯ. ಈ ಸತ್ಯದ ಹಿಂದೆ ನಾವು ಹೋಗಬೇಕು ಎನ್ನುವ ಅರಿವು ನಮಗೆ ಸಹಜವಾಗಿ ಧ್ಯಾನದಲ್ಲಿ ಬರುತ್ತದೆ. ಭಗವಂತನನ್ನು ಸೇರುವ ಉದ್ಧೇಶ ನಿಶ್ಚಿತವಾಗಿದ್ದಾಗ ಒಳಗೆ ಆನಂದ ಮತ್ತು ಧೈರ್ಯ ತುಂಬುತ್ತದೆ. ಸಂಸಾರಕ್ಕೆ ಕಾರಣವಾಗಿರುವ ಅಜ್ಞಾನ-ದುಃಖ-ದಾರಿದ್ರ್ಯ ಮುಂತಾದ ಎಲ್ಲಾ ಸಮಸ್ಯೆಗಳಿಗೆ ಕೊನೇ ಉತ್ತರ ಆ ಭಗವಂತ. ಅಂತಹ ಭಗವಂತನಲ್ಲಿ ಮನಸ್ಸನ್ನು ಗಟ್ಟಿಯಾಗಿ ನಿಲ್ಲಿಸಿದಾಗ ಯಾವುದೇ ಉದ್ವೇಗವಿಲ್ಲದೇ ಆನಂದವಾಗಿರಬಹುದು.

No comments:

Post a Comment