ಚೀರಾಣಿ ಕಿಂ
ಪಥಿ ನ ಸಂತಿ ದಿಶಂತಿ ಭಿಕ್ಷಾಂ ನೋ ವಾಂSಘ್ರಿಪಾಃ ಪರಭೃತಃ ಸರಿತೋSಪ್ಯಶುಷ್ಯನ್ ।
ರುದ್ಧಾ ಗುಹಾಃ
ಕಿಮವಧೂತಸುಹೃನ್ನ ಕೃಷ್ಣಃ ಕಸ್ಮಾದ್ ಭಜಂತಿ ಕವಯೋ ಧನದುರ್ಮದಾಂಧಾನ್ ॥೦೫॥
ಸಾಮಾನ್ಯವಾಗಿ ನಾವು
ಯಾವುದೋ ಒಬ್ಬ ಶ್ರೀಮಂತ ವ್ಯಕ್ತಿ ಅಥವಾ ರಾಜಕೀಯ ವ್ಯಕ್ತಿ ಮುಂದೆ ಹೋಗಿ “ನೀವೇ ದೊಡ್ಡವರು,
ನಿಮ್ಮಿಂದ ನನಗೆ ಸಹಾಯವಾಗಬೇಕು” ಎಂದು ಕೇಳಿ ಅವರ ಕಾಲಿಗೆ ಅಡ್ಡ ಬೀಳುತ್ತೇವೆ. ಇದು ಭಾಷೆಯ ಹಾಗೂ
ಆ ಭಾಷೆಯಲ್ಲಿ ಬರುವ ಎಲ್ಲಾ ಶಬ್ದಗಳ ದುರುಪಯೋಗ. ಇಲ್ಲಿ ಶುಕಾಚಾರ್ಯರು “ಜನರು ಏಕೆ ಹೀಗೆ
ಮಾಡುತ್ತಾರೆ” ಎಂದು ಪ್ರಶ್ನಿಸಿದ್ದಾರೆ. “ಭಗವಂತನನ್ನು
ಹೊಗಳಲು ಉಪಯೋಗಿಸುವ ಶಬ್ದಗಳನ್ನು ಏಕೆ ಒಬ್ಬ ಮನುಷ್ಯನನ್ನು ಹೊಗಳಲು ಉಪಯೋಗಿಸಬೇಕು?” ಇದು
ಶುಕಾಚಾರ್ಯರ ಪ್ರಶ್ನೆ. ಸಾಮಾನ್ಯವಾಗಿ ಈ ರೀತಿ ಮಾಡಲು ಕಾರಣ- ಯಾವುದೋ ಒಂದು ಲೌಕಿಕ ಲಾಭದ ಆಸೆ.
ಶುಕಾಚಾರ್ಯರು ಹೇಳುತ್ತಾರೆ: “ನಮಗೆ ಬೇಕಾಗಿರುವುದು ಮೈಮುಚ್ಚಲು ಒಂದಿಷ್ಟು ಬಟ್ಟೆ, ಹಸಿವು
ಪರಿಹಾರಕ್ಕೆ ಒಂದಿಷ್ಟು ಆಹಾರ. ಇದಕ್ಕಾಗಿ ಇನ್ನೊಬ್ಬರ ಮುಂದೇಕೆ ಅಂಗಲಾಚಬೇಕು.” ಹಿಮಾಲಯದಂತಹ ಜನ
ವಸತಿ ಇಲ್ಲದ ಪ್ರದೇಶದಲ್ಲಿ ವಾಸಿಸುವ ಸಾಧು-ಸಂತರ
ಜೀವನ ಹೇಗೆ ಸಾಗುತ್ತದೆ ಎನ್ನುವುದನ್ನು ಶುಕಾಚಾರ್ಯರು ಇಲ್ಲಿ ವಿವರಿಸಿದ್ದಾರೆ. ಕಾಡಿನಲ್ಲಿ
ಮರಗಳಿಂದ ಮಾಡಿದ ನಾರಿನ ಉಡುಪು ಹಾಗೂ ತಿಂದು ಮುಗಿಸಲು ಅಸಾಧ್ಯವಾದಷ್ಟು ಹಣ್ಣು ಹಂಪಲು ಪ್ರಕೃತಿದತ್ತವಾಗಿ
ಅವರಿಗೆ ದೊರೆಯುತ್ತದೆ. ಇಂತಹ ಸ್ಥಳದಲ್ಲಿ ವಾಸಿಸುವವರು ಎಂದೂ ಯಾವ ಕಾರಣಕ್ಕೂ ಯಾರ ಮುಂದೆಯೂ ಕೈಒಡ್ಡುವುದಿಲ್ಲ.
ಇಲ್ಲಿ ಶುಕಾಚಾರ್ಯರು
ಕಾಡಿನಲ್ಲಿ ಹಣ್ಣು ಕೊಡುವ ಮರಗಳನ್ನು ‘ಅಘ್ರಿಪಾಃ’ ಎಂದು ಕರೆದಿದ್ದಾರೆ. ಅಘ್ರಿಪಾಃ ಎಂದರೆ ‘ಕಾಲಿನಿಂದ
ನೀರನ್ನು ಕುಡಿದು ತಲೆ ತುಂಬಾ ಹಣ್ಣು
ಹೊರುವವುಗಳು’ ಎಂದರ್ಥ. ಇದು ಪ್ರಾಚೀನರು ಮರಗಳಿಗೆ ಕೊಟ್ಟ ವಿಶಿಷ್ಠ ಹೆಸರು. ಇಲ್ಲಿ ಕಾಡಿನ ಮರಗಳನ್ನು ಮತ್ತು ನದಿಗಳನ್ನು
ಶುಕಾಚಾರ್ಯರು ‘ಪರಭೃತಃ’ ಎನ್ನುವ ವಿಶೇಷಣ ಬಳಸಿ ಸಂಬೋಧಿಸಿದ್ದಾರೆ. ಪರಭೃತಃ ಎಂದರೆ
ಇನ್ನೊಬ್ಬರಿಗೋಸ್ಕರವೇ ಇರುವವುಗಳು ಎಂದರ್ಥ. ಮರ ತನಗೋಸ್ಕರ ಹಣ್ಣು ಬಿಡುವುದಿಲ್ಲ. ನದಿಗೆ
ಬಾಯಾರಿಕೆ ಇಲ್ಲ. ಅವು ಯಾವ ಪ್ರತಿಫಲ ಅಪೇಕ್ಷಿಸದೇ ಹಣ್ಣು-ನೀರನ್ನು ಕೊಡುತ್ತವೆ. “ಭಗವಂತ
ನಮಗಾಗಿ ಇಂತಹ ಮರಗಳನ್ನೂ ನದಿಗಳನ್ನೂ ಸೃಷ್ಟಿ ಮಾಡಿಲ್ಲವೇ?” ಎಂದು ಕೇಳುತ್ತಿದ್ದಾರೆ ಶುಕಾಚಾರ್ಯರು.
ಶುಕಾಚಾರ್ಯರ ಈ
ಮೇಲಿನ ಮಾತು ಕೇಳವಾಗ ಆನಂದವೆನಿಸಿದರೂ, ಇಂದು ಈ
ರೀತಿ ಬದುಕುವುದು ಕಷ್ಟ. ಆದರೆ ಶುಕಾಚಾರ್ಯರ ಈ ಮಾತನ್ನು ನಾವು ವಿಶ್ಲೇಷಿಸಿ ನೋಡಬೇಕು. ಈ
ಪ್ರಪಂಚದಲ್ಲಿ ೮೪ ಲಕ್ಷ ಜೀವಿಗಳಿವೆ. ಇವುಗಳಲ್ಲಿ ಮನುಷ್ಯನನ್ನು ಬಿಟ್ಟು ಇತರ ಎಲ್ಲಾ ಜೀವಿಗಳು
ಆಹಾರಕ್ಕಾಗಿ ಇನ್ನೊಬ್ಬರ ಮುಂದೆ ಕೈಯೊಡ್ಡುವ ಪ್ರವೃತ್ತಿ ತೋರುವುದಿಲ್ಲ. ಅವು ಭಗವಂತ
ನೈಸರ್ಗಿಕವಾಗಿ ನೀಡಿರುವ ನೀರು-ಆಹಾರವನ್ನು ಸೇವಿಸಿ ಆರೋಗ್ಯವಾಗಿರುತ್ತವೆ. ಇಲ್ಲಿ ನಮಗೆ
ಸ್ಪಷ್ಟವಾಗಿ ತಿಳಿಯುವುದೇನೆಂದರೆ, ಇನ್ನೊಬ್ಬರ ಮುಂದೆ ಕೈಯೊಡ್ಡುವಂತೆ ಭಗವಂತ ಜೀವಜಾತದ ಸೃಷ್ಟಿ
ಮಾಡಿಲ್ಲ. ಇದು ಮನುಷ್ಯನ ನಾಗರೀಕತೆಯ ಆವಿಷ್ಕಾರ. ನೀರು-ಆಹಾರ ನೈಸರ್ಗಿಕವಾಗಿ ಸಿಗಬಹುದು ಆದರೆ ಇರುವುದಕ್ಕೊಂದು
ಮನೆ ಬೇಡವೇ ಎಂದು ಕೇಳಿದರೆ, ಶುಕಾಚಾರ್ಯರು ಹೇಳುತ್ತಾರೆ: “ಪರ್ವತದಲ್ಲಿರುವ ಗುಹೆಗಳೆಲ್ಲಾ
ಮುಚ್ಚಿ ಹೋದವೇನು?” ಎಂದು. ಇದು ನಾಗರೀಕತೆ ಬೆಳೆಯುವ ಮೊದಲು ಮನುಷ್ಯ ಬದುಕುತ್ತಿದ್ದ ರೀತಿ.
ಇಂದು ನಾವು ಸಹಜ ಜೀವನವನ್ನು ಮರೆತು ಅಸಹಜವನ್ನೇ ಸಹಜವೆಂದು ತಿಳಿದು ಬದುಕುತ್ತಿದ್ದೇವೆ.
ಲೌಕಿಕ ಸ್ಪರ್ಶ ಬೇಡ
ಎಂದು ತನ್ನತ್ತ ಬರುವವರನ್ನು ಕೈಯೆತ್ತಿ ಸಲಹುತ್ತಾನೆ ಆ ಭಗವಂತ. ಆದರೆ ಇಂದು ಎಲ್ಲರನ್ನೂ ಸಲಹುವ ಭಗವಂತನೊಬ್ಬನಿದ್ದಾನೆ
ಎನ್ನುವುದನ್ನು ಜನ ಮರೆತು ಬದುಕುತ್ತಿದ್ದಾರೆ. ಭಗವಂತ ಎಲ್ಲವನ್ನೂ ಕೊಟ್ಟಿದ್ದರೂ ಕೂಡಾ ನಾವು ಇನ್ನೊಬ್ಬರ
ಮುಂದೆ ಕೈಯೊಡ್ಡುತ್ತಿದ್ದೇವೆ. ಇನ್ನೊಬ್ಬರ ಬಳಿ ಇರುವ ಸಂಪತ್ತು ಅವರ ಸಂಪಾದನೆ ಮತ್ತು ಅದು ಅವರ ಮನೆವಾಳ್ತೆಗೆ
ಬೇಕಾಗುತ್ತದೆ. ನಾವು ನಮಗೆ ಭಗವಂತ ಏನು ಕೊಟ್ಟಿದ್ದಾನೆ ಅದರಲ್ಲಿ ಬದುಕಲು ಕಲಿಯಬೇಕು. ಹಿಂದೆ ಬಾಲ್ಯದಲ್ಲಿ ಕಾಡಿನಲ್ಲಿರುವ
ಗುರುಕುಲದಲ್ಲಿ ವಿದ್ಯಾಭ್ಯಾಸ ನಂತರ ಮುಪ್ಪಿನಲ್ಲಿ ವಾನಪ್ರಸ್ಥ ಎನ್ನುವ ಕ್ರಮವಿತ್ತು. ಇದರಿಂದಾಗಿ ಎಲ್ಲವನ್ನೂ ಕಳೆದುಕೊಂಡು ಬದುಕುವ ನಿಸ್ಪೃಹತೆಯ
ಪಾಠ ಸಿಗುತ್ತಿತ್ತು. ಆದರೆ ಇಂದು ಮಕ್ಕಳು, ಯುವಕ-ಯುವತಿಯರು, ಮುದುಕರು ಎಲ್ಲರೂ ಪೇಟೆಗೆ ಮರುಳಾಗಿದ್ದಾರೆ.
ಇದರಿಂದಾಗಿ ಒಬ್ಬರು ಇನ್ನೊಬ್ಬರಿಗೆ ಭಾರವಾಗಿ ಬದುಕುತ್ತಿದ್ದಾರೆ. ಪೇಟೆಯಲ್ಲಿ ಜನಸಂಖ್ಯಾ ಸ್ಪೋಟವಾಗಿ
ಜೀವನದ ಸಮತೋಲನ, ಅಧ್ಯಾತ್ಮ ನಿಸ್ಪೃಹತೆ, ಎಲ್ಲವೂ ಕಾಣೆಯಾಗುತ್ತಿದೆ. ನಾಗರಿಕತೆಯ ಹೆಸರಿನಲ್ಲಿ ಎಲ್ಲಾ
ಜೀವನ್ಮೌಲ್ಯಗಳೂ ನಾಶವಾಗಿ ಕೇವಲ ಸ್ವಾರ್ಥ ಬೆಳೆಯುತ್ತಿದೆ. ಇದೆಲ್ಲವೂ ಮನುಷ್ಯ ತಾನೇ ನಿರ್ಮಿಸಿಕೊಂಡ
ಸಮಸ್ಯೆ. ಹೀಗಾಗಿ ಇಂದು ನಾವು ನಾವೇ ನಿರ್ಮಿಸಿರುವ ಬಲೆಯಲ್ಲಿ ಸಿಕ್ಕಿ ಓದ್ದಾಡುವ ಪರಿಸ್ಥಿತಿ ಬಂದಿದೆ.
ಇದಕ್ಕಾಗಿ ಶುಕಾಚಾರ್ಯರು ಹೇಳುತ್ತಾರೆ: “ನಿನ್ನ ಸಾಮಾಜಿಕ ಮತ್ತು ಲೌಕಿಕವಾದ ವ್ಯವಹಾರಗಳನ್ನು ಎಷ್ಟು
ಸಾಧ್ಯವೋ ಅಷ್ಟು ಕಮ್ಮಿ ಮಾಡು” ಎಂದು. ಇಲ್ಲಿ ಎಲ್ಲವನ್ನೂ
ಬಿಟ್ಟು ಬಿಡು ಎಂದು ಅವರು ಹೇಳುತ್ತಿಲ್ಲ. ಏಕೆಂದರೆ ನಾವು ಅದನ್ನು ಬಿಡಲಾರದಷ್ಟು ಅಂಟಿಸಿಸಿಕೊಂಡಾಗಿದೆ.
ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಕಮ್ಮಿ ಮಾಡಬೇಕು, ಅದನ್ನೇ ಸರ್ವಸ್ವ ಎಂದು ಕುಳಿತರೆ ನಮ್ಮ ಬದುಕಿನ
ಸಮಸ್ಯೆಗೆ ಪರಿಹಾರವೇ ಇಲ್ಲವಾಗುತ್ತದೆ. ಮಿತಭಾಷಿಯಾಗಿ, ವ್ಯವಹಾರದಲ್ಲಿ ಎಷ್ಟು ಬೇಕೋ ಅಷ್ಟೇ ತೊಡಗಿಸಿಕೊಂಡು,
ಭಗವಂತನನ್ನು ಮರೆಯದೇ ಬದುಕಿದಾಗ ಜೀವನ ದುರ್ಬರವಾಗದೆ ಸಹಜ ಸ್ಥಿತಿಯಲ್ಲಿ ನಾವು ಬದುಕಲು ಸಾಧ್ಯವಾಗುತ್ತದೆ.
No comments:
Post a Comment