Sunday, November 10, 2013

Shrimad BhAgavata in Kannada -Skandha-02-Ch-01(9)

ಬ್ರಹ್ಮಾಂಡದಲ್ಲಿ ಭಗವಂತನ ರೂಪಚಿಂತನೆ

ವಿಶೇಷಸ್ತಸ್ಯ ದೇಹೋSಯಂ ಸ್ಥವಿಷ್ಠಶ್ಚ ಸ್ಥವೀಯಸಾಮ್
ಯತ್ರೇದಂ ದೃಶ್ಯತೇ ವಿಶ್ವಂ ಭೂತಂ ಭವ್ಯಂ ಭವಚ್ಚ ಯತ್  ೨೪

ಭಗವಂತನ ಸ್ಥೂಲ ರೂಪದ ಉಪಾಸನೆಯನ್ನು ವಿವರಿಸುತ್ತಾ ಶುಕಾಚಾರ್ಯರು ಹೇಳುತ್ತಾರೆ: “ಈ ಬ್ರಹ್ಮಾಂಡ ಆತನ ಅತ್ಯಂತ ದೊಡ್ಡ ಸ್ಥೂಲ ಪ್ರತೀಕ” ಎಂದು.  ಇಲ್ಲಿ ‘ವಿಶೇಷ’ ಎನ್ನುವ ಪದವನ್ನು ಬಳಸಲಾಗಿದೆ. ವೈದಿಕ ಸಂಸ್ಕೃತದಲ್ಲಿ  ‘ವಿಶೇಷ’ ಎಂದರೆ ಭೂಮಿ. ಪಂಚಭೂತಗಳಲ್ಲಿ ವಿಶೇಷವಾಗಿ ಎಲ್ಲಾ ಗುಣಗಳು(ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ) ಅಭಿವ್ಯಕ್ತವಾಗುವುದು ಪೃಥ್ವಿಯಲ್ಲಿ.  ಹಾಗಾಗಿ  ಭೂಮಿಯನ್ನು ‘ವಿಶೇಷ’ ಎಂದೂ ಕರೆಯುತ್ತಾರೆ. ಬ್ರಹ್ಮಾಂಡ ಕೂಡಾ ಪಾರ್ಥಿವವಾಗಿರುವುದರಿಂದ ಅದನ್ನೂ ಕೂಡಾ ‘ವಿಶೇಷ’ ಎಂದು ಕರೆಯುತ್ತಾರೆ. ಕೇವಲ ಭೂಮಿಯಷ್ಟೇ ಅಲ್ಲ, ಇಡೀ ಬ್ರಹ್ಮಾಂಡವೇ ಭಗವಂತನ ಪ್ರತೀಕ. ಮೇಲಿನ ಶ್ಲೋಕದಲ್ಲಿ ಬ್ರಹ್ಮಾಂಡವೇ ಭಗವಂತನ ದೇಹ ಎಂದಿದ್ದಾರೆ.  ನಾವು ಸಾಮಾನ್ಯವಾಗಿ ದೇಹ ಮತ್ತು ಶರೀರ ಎನ್ನುವ ಪದವನ್ನು ಒಂದೇ ಅರ್ಥದಲ್ಲಿ ಬಳಸುತ್ತೇವೆ. ಆದರೆ ಈ ಎರಡು ಶಬ್ದಗಳ ನಿರ್ವಚನದಲ್ಲಿ ಸ್ವಲ್ಪ ವ್ಯತ್ಯಾಸವಿದೆ. ದೇಹ ಎಂದರೆ ‘ಬೆಳೆಯುವಂತಹದ್ದು’, ಶರೀರ ಎಂದರೆ ‘ಒಂದು ದಿನ ಬಿದ್ದು ಹೋಗುವಂತಹದ್ದು’. ಭಗವಂತನಿಗೆ ನಮ್ಮಂತೆ ಸುಖ-ದುಃಖವನ್ನು ಅನುಭವಿಸುವ ಹಾಗೂ ಒಂದು ದಿನ ಬಿದ್ದುಹೋಗುವ ಶರೀರವಿಲ್ಲ. ಸ್ವರೂಪಭೂತವಾದ ದೇಹವೇ ಆತನ ನಿಜವಾದ ದೇಹ. ಆದ್ದರಿಂದ ಮೇಲಿನ ಶ್ಲೋಕದಲ್ಲಿ ದೇಹ ಎಂದರೆ ಪ್ರತೀಕ ಅಥವಾ ಅಧಿಷ್ಠಾನ ಎಂದರ್ಥ. ಮನೆಯಲ್ಲಿ ಪೂಜಿಸುವ ಶಾಲಗ್ರಾಮವೂ ಭಗವಂತನ ಪ್ರತೀಕ.  ಅಣುವಿನಲ್ಲಿ ಅಣುವಾಗಿರುವ, ಜೀವದಲ್ಲಿರುವ ಬಿಂಬರೂಪಿ ಭಗವಂತ ಸೂಕ್ಷ್ಮಾತಿ-ಸೂಕ್ಷ್ಮ ಪ್ರತೀಕವಾದರೆ, ಬ್ರಹ್ಮಾಂಡದಲ್ಲಿರುವ ಭಗವಂತ ಸ್ಥೂಲದಲ್ಲಿ ಸ್ಥೂಲ ಪ್ರತೀಕ. ಇಡೀ ಜೀವಜಾತ ಯಾವ ಬ್ರಹ್ಮಾಂಡದೊಳಗೆ ಹಿಂದೆ ಇತ್ತೋ, ಈಗ ಇದೆಯೋ, ಮುಂದೆ ಇರುತ್ತದೋ ಅಂತಹ ಇಡೀ ಜೀವಜಾತಕ್ಕೆ ಆಸರೆಯಾಗಿರುವ ಈ ಬ್ರಹ್ಮಾಂಡ ಭಗವಂತನ ಅತಿ ದೊಡ್ಡ ಪ್ರತೀಕ. ಇಂತಹ ಭಗವಂತನನ್ನು ಬ್ರಹ್ಮಾಂಡದಲ್ಲಿ ಅಂತರ್ಯಾಮಿಯಾಗಿ ಕಂಡು ಧ್ಯಾನದಲ್ಲಿ ಚಿಂತಿಸಬೇಕು.     

ಆಂಡಕೋಶೇ ಶರೀರೇSಸ್ಮಿನ್ ಸಪ್ತಾವರಣಸಂಯುತೇ
ವೈರಾಜಃ ಪುರುಷೋ ಯೋSಸೌ ಭಗವಾನ್ ಧಾರಣಾಶ್ರಯಃ  ೨೫
                       
ಪಾತಾಲಮೇತಸ್ಯ ಹಿ ಪಾದಮೂಲಂ ಪಠಂತಿ ಪಾರ್ಷ್ಣಿಪ್ರಪದೇ ರಸಾತಲಮ್
ಮಹಾತಲಂ ವಿಶ್ವಸೃಜಃ ಸುಗುಲ್ಫೌ ತಲಾತಲಂ ವೈ ಪುರುಷಸ್ಯ ಜಂಘೇ  ೨೬

ದ್ವೇ ಜಾನುನೀ ಸುತಲಂ ವಿಶ್ವಮೂರ್ತೇ ರೂರುದ್ವಯಂ ವಿತಲಂ ಚಾತಲಂ ಚ
ಮಹೀತಲಂ ತಜ್ಜಘನಂ ಮಹೀಪತೇ ನಭಸ್ತಲಂ ನಾಭಿಸರೋ ಗೃಣಂತಿ  ೨೭

ಉರಃಸ್ಥಲಂ ಜ್ಯೋತಿರನೀಕಮಸ್ಯ ಗ್ರೀವಾ ಮಹರ್ವದನಂ ವೈ ಜನೋಽಸ್ಯ
ತಪೋ ರರಾಟಿಂ ವಿದುರಾದಿಪುಂಸಃ ಸತ್ಯಂ ತು ಶೀರ್ಷಾಣಿ ಸಹಸ್ರಶೀರ್ಷ್ಣಃ  ೨೮

ಮೊಟ್ಟೆಯ ಆಕಾರದಂತೆ ಹಾಗೂ ಕಮಲದ ಮೊಗ್ಗಿನಂತಿರುವ ಬ್ರಹ್ಮಾಂಡವನ್ನು ಆಂಡಕೋಶ ಎಂದು ಕರೆಯುತ್ತಾರೆ.(ಇತ್ತೀಚೆಗಿನ ಕೊಶಗಳಲ್ಲಿ ಅಂಡಕೋಶ ಎಂದಿದೆ, ಆದರೆ ‘ಆಂಡ’ ಎನ್ನುವುದು ಪ್ರಾಚೀನ ಶಬ್ದ) ಭಗವಂತನ ನಾಭಿಯಿಂದ ಚಿಮ್ಮಿದ ನಾಭೀಕಮಲವೇ ಈ ಬ್ರಹ್ಮಾಂಡ. ಪಂಚಭೂತಗಳು, ಅಹಂಕಾರತತ್ತ್ವ ಮತ್ತು ಮಹತತ್ತ್ವಗಳೆಂಬ ಏಳು ಆವರಣಗಳು ಈ ಬ್ರಹ್ಮಾಂಡವನ್ನಾವರಿಸಿದೆ. ಅದರಲ್ಲಿ ತುಂಬಿರುವ ಭಗವಂತ ವೈರಾಜ ಪುರುಷ. ಇದೇ ಕಾರಣಕ್ಕೆ ಬ್ರಹ್ಮಾಂಡವನ್ನು ವಿರಾಠ್ ಎಂದೂ ಕರೆಯುತ್ತಾರೆ. ಈ ಬ್ರಹ್ಮಾಂಡದಲ್ಲಿ ತುಂಬಿರುವ ಭಗವಂತನನ್ನು ಹೇಗೆ ಮನಸ್ಸಿನಲ್ಲಿ ನೆಲೆಗೊಳಿಸಬೇಕು ಎನ್ನುವುದನ್ನು ಇಲ್ಲಿ ಶುಕಾಚಾರ್ಯರು ವರ್ಣಿಸಿದ್ದಾರೆ.  ಪುರುಷಸೂಕ್ತದಲ್ಲಿ ಬಂದಿರುವ ಭಗವಂತನ ರೂಪಚಿಂತನೆಯನ್ನೇ ಇಲ್ಲಿ ಭಾಗವಂತ ವರ್ಣಿಸುವುದನ್ನು ಕಾಣುತ್ತೇವೆ. ಪ್ರಾಚೀನರು ಬ್ರಹ್ಮಾಂಡವನ್ನು ಹದಿನಾಲ್ಕು ವಿಭಾಗವಾಗಿ ವಿಂಗಡಿಸಿದರು. ಅವುಗಳೆಂದರೆ: ಅತಳ, ವಿತಳ, ಸುತಳ, ತಳಾತಳ, ಮಹಾತಳ, ರಸಾತಳ, ಪಾತಾಳ, ಭೂಲೋಕ, ಭುವರ್ಲೋಕ, ಸುವರ್ಲೋಕ, ತಪೋಲೋಕ, ಮಹಾಲೋಕ, ಜನರ್ಲೋಕ ಮತ್ತು ಸತ್ಯಲೋಕ. ಮಧ್ಯದಲ್ಲಿ ಭೂಮಿ ಹಾಗೂ ಅದರ ಕೆಳಗೆ ಏಳು ಹಾಗೂ ಭೂಮಿ ಸಹಿತವಾಗಿ ಅದರಿಂದ ಮೇಲೆ ಏಳು ಲೋಕಗಳಿರುವ ಈ ಬ್ರಹ್ಮಾಂಡವನ್ನು ಚತುರ್ದಶ ಭುವನ ಎಂದು ಕರೆಯುತ್ತಾರೆ.  ಈ ಹದಿನಾಲ್ಕು ಲೋಕಗಳಲ್ಲಿ ಭಗವಂತನ ಅವಯವ ಚಿಂತನೆ ಹೇಗೆ ಮಾಡಬೇಕು ಎನ್ನುವುದನ್ನು ಮೇಲಿನ ಶ್ಲೋಕದಲ್ಲಿ ವರ್ಣಿಸಲಾಗಿದೆ.
ಪಾತಾಳಲೋಕ ಭಗವಂತನ ಪಾದದ ತಳಭಾಗ, ರಸಾತಳ ಲೋಕ ಆತನ ಪಾದದ ಹಿಮ್ಮಡಿ ಮತ್ತು ಮುಂಗಾಲು(ಬೆರಳಿನ ಭಾಗ). ಮಹಾತಳ ಆತನ ಪಾದದ ಮೇಲಿನ ಎರಡು ಗಂಟುಗಳು(ಮಣಿಗಂಟು), ಜಂಘೇ(ಮೀನಖಂಡ, shanks)ತಳಾತಳ. ಮೊಣಕಾಲು(Knees) ಸುತಳ ಹಾಗೂ ಎರಡು ತೊಡೆಗಳು ವಿತಳ ಮತ್ತು ಅತಳ. ಈ ರೀತಿ ಭಗವಂತನ ಪಾದದಿಂದ ಸೊಂಟದ ತನಕ ಇರತಕ್ಕಂತಹ ಭಾಗ ಕೆಳಗಿನ ಏಳು ಲೋಕಗಳಲ್ಲಿ ತುಂಬಿದೆ ಮತ್ತು ಈ ಲೋಕಗಳು ಭಗವಂತನ ಈ ಅವಯವಗಳಲ್ಲಿ ಆಶ್ರಿತವಾಗಿವೆ ಎಂದು ಚಿಂತನೆ ಮಾಡಬೇಕು.
ಭಗವಂತನ ಸೊಂಟದ ಭಾಗ ಭೂಮಿ, ಭಗವಂತನ ನಾಭಿ ಅಂತರಿಕ್ಷ, ನಾಭಿಯಿಂದ ಮೇಲಿನ ಹೃದಯದ ಭಾಗ ದೇವತೆಗಳ ಲೋಕ(ಸ್ವರ್ಗಲೋಕ), ಎದೆಯಿಂದ ಮೇಲೆ ಕುತ್ತಿಗೆ ತನಕ ಮಹರ್ಲೋಕ, ಕುತ್ತಿಗೆಯಿಂದ ಕಣ್ಣಿನ ತನಕ ಜನರ್ಲೋಕ, ರರಾಟ(ನೆತ್ತಿ/ಹುಬ್ಬು) ಸ್ಥಾನದಲ್ಲಿ ತಪೋಲೋಕ ಮತ್ತು ಸಹಸ್ರಶೀರ್ಷನಾದ ಪುರುಷನ  ಶಿರಸ್ಸು ಸತ್ಯಲೋಕದಲ್ಲಿ ತುಂಬಿದೆ. ಈ ರೀತಿ ಇಡೀ ವಿಶ್ವದಲ್ಲಿ ಭಗವಂತನ ಪಾದದಿಂದ ಶಿರಸ್ಸಿನ ತನಕ ತುಂಬಿರುವ ವಿಶ್ವರೂಪದ ಚಿಂತನೆ ಮಾಡಬೇಕು. ಆಯಾ ಲೋಕಗಳು ಭಗವಂತನ ಸ್ವರೂಪದೇಹದ ಆಯಾ ಭಾಗಗಳಿಂದ  ಉತ್ಪನ್ನವಾಗಿವೆ ಮತ್ತು ಅದರಲ್ಲಿ ಆಶ್ರಯಿಸಿಕೊಂಡಿವೆ ಎಂದು ಚಿಂತನೆ ಮಾಡಬೇಕು.
ಬ್ರಹ್ಮಾಂಡದಲ್ಲಷ್ಟೇ ಅಲ್ಲದೆ ಪಿಂಡಾಂಡದಲ್ಲಿ ಕೂಡಾ ಭಗವಂತನ ಹದಿನಾಲ್ಕು ಲೋಕಗಳ ಚಿಂತನೆ ಮಾಡಬಹುದು. ಮೂಲಭೂತವಾಗಿ ಹದಿನಾಲ್ಕು ಲೋಕಗಳನ್ನು ಮೂರು ಲೋಕವಾಗಿ ಮತ್ತು  ಏಳು ಲೋಕವಾಗಿ ಶಾಸ್ತ್ರಕಾರರು  ವಿಭಾಗಮಾಡಿ ಹೇಳುತ್ತಾರೆ. ಭೂಮಿ ಮತ್ತು ಭೂಮಿಯಿಂದ ಕೆಳಗಿನ ಲೋಕಗಳನ್ನು ಒಟ್ಟಿಗೆ ಒಂದು ಲೋಕವಾಗಿ ಕಂಡು ಅದನ್ನು ಭೂಃ ಎಂದು, ನಂತರ ಅಂತರಿಕ್ಷವನ್ನು ಭುವಃ ಎಂದೂ ಮತ್ತು ಅಲ್ಲಿಂದ ಮೇಲಕ್ಕಿರುವ ಐದು ಲೋಕಗಳನ್ನು ಸುವಃ ಎಂದು ಒಟ್ಟಿಗೆ ಮೂರು ವಿಭಾಗ ಮಾಡುತ್ತಾರೆ. ಅದೇ ರೀತಿ    ಭೂಮಿ ಹಾಗೂ ಭೂಮಿಯಿಂದ ಕೆಳಗಿನ ಲೋಕಗಳನ್ನು ಒಂದು ಲೋಕವಾಗಿ ಹಾಗೂ ಅದರ ಜೊತೆಗೆ ಮೇಲಿನ ಆರು ಲೋಕಗಳನ್ನು ಸೇರಿಸಿ ಒಟ್ಟಿಗೆ ಏಳು ಲೋಕಗಳಾಗಿ ವಿಭಾಗ ಮಾಡುತ್ತಾರೆ.  ಬ್ರಹ್ಮಾಂಡವನ್ನು ಮೂರು ಲೋಕಗಳಾಗಿ ಕಂಡಾಗ ಭಗವಂತನ ಕಾಲಿನಲ್ಲಿ ಭೂಮಿ, ನಾಭಿಯಲ್ಲಿ ಅಂತರಿಕ್ಷ ಹಾಗೂ ಶಿರಸ್ಸಿನಲ್ಲಿ ಸ್ವರ್ಗದ ಚಿಂತನೆ ಮಾಡುತ್ತಾರೆ.

ಭಗವಂತನ ಮುಖಾರವಿಂದ

ಛಂದಾಂಸ್ಯನಂತಸ್ಯ ಗಿರೋ ಗೃಣಂತಿ ದಂಷ್ಟ್ರಾರ್ಯಮೇಂದೂಡುಗಣಾ ದ್ವಿಜಾನಿ
ಹಾಸೋ ಜನೋನ್ಮಾದಕರೀ ಚ ಮಾಯಾ ದುರಂತಸರ್ಗೋ ಯದಪಾಂಗಮೋಕ್ಷಃ  ೩೧

 ಭಗವಂತನ ಮುಖದಲ್ಲೇ ಮೂರು ಲೋಕಗಳ ಚಿಂತನೆಯ ಒಂದು ಕ್ರಮವಿದೆ. ನಮಗೆ ತಿಳಿದಂತೆ ಭೂಸ್ಥಾನ ಅಗ್ನಿಯ ಸ್ಥಾನ, ಅಂತರಿಕ್ಷ ವಾಯುವಿನ ಸ್ಥಾನ  ಹಾಗೂ ಸ್ವರ್ಗ ಆದಿತ್ಯನ ಸ್ಥಾನ. ಆದ್ದರಿಂದ ವೇದದಲ್ಲಿ ‘ಭೂರ್ಭುವ ಸ್ವಃ’ ಎಂದರೆ ಅಗ್ನಿ-ವಾಯು-ಆದಿತ್ಯ ಎನ್ನುವ ಮೂರು ಪ್ರತೀಕಗಳಿಂದ ಭಗವಂತನ ಉಪಾಸನೆ. ಮುಖದಲ್ಲಿ ಅಗ್ನಿಯ ಸ್ಥಾನ-ಬಾಯಿ, ವಾಯುವಿನ ಸ್ಥಾನ-ಉಸಿರು ಮತ್ತು ಆದಿತ್ಯನ ಸ್ಥಾನ-ಕಣ್ಣು. ಹೀಗೆ ಮುಖದಲ್ಲಿ ಮೂರು ಲೋಕಗಳ ಮತ್ತು ಆ ಮೂರು ಲೋಕಗಳಲ್ಲಿ ತುಂಬಿರುವ ಭಗವಂತನ ಸ್ಥೂಲ ಚಿಂತನೆ ಮಾಡಬಹುದು.    
 ಈ ಮೇಲಿನ ಶ್ಲೋಕದಲ್ಲಿ ಶುಕಾಚಾರ್ಯರು ಭಗವಂತನ ಮುಖದ ಚಿತ್ರಣ ಕೊಡುತ್ತಾ ಹೇಳುತ್ತಾರೆ: ಸಮಸ್ತ  ವೈದಿಕ ವಾಙ್ಮಯಗಳೇ ಆತನ ನುಡಿಮುತ್ತುಗಳು; ಸೂರ್ಯ-ಚಂದ್ರರೇ ಆತನ  ಕೋರೆ ದಾಡೆಗಳು; ಅಂತರಿಕ್ಷದಲ್ಲಿರುವ ನಕ್ಷತ್ರಗಳೇ ಆತನ ಹಲ್ಲುಗಳು;  ಈ ವಿಶ್ವವನ್ನು ಮರಳುಗೊಳಿಸುವ ಮಾಯೆಯೇ ಆತನ ಮುಗುಳ್ನಗೆ; ಕೊನೆಗಾಣದ ಈ ಸೃಷ್ಟಿಯೇ ಆತನ ಕಣ್ಣನೋಟ” ಎಂದು. ಈ ರೀತಿ ಭಗವಂತನ ವಿಶ್ವರೂಪದ ಚಿತ್ರಣ ಇನ್ನೂ ವಿಸ್ತಾರವಾಗಿದೆ ಆದರೆ ನಮಗೆ ಸ್ಥೂಲವಾಗಿ ಇಷ್ಟು ತಿಳಿದಿದ್ದರೂ ಸಾಕು, ಅದನ್ನೇ ನಾವು ಧ್ಯಾನದಲ್ಲಿ ಕಾಣುವ ಪ್ರಯತ್ನ ಮಾಡಬಹುದು.  
ಗಾಯತ್ತ್ರಿ ಧ್ಯಾನ ಮಾಡುವವರಿಗೆ ಗಾಯತ್ತ್ರೀ ಪ್ರತಿಪಾದ್ಯ ನಾರಾಯಣನನ್ನು ಚಿಂತಿಸುವ ರೂಪದ ವಿವರಣೆ ಹೀಗಿದೆ: “ಉದಯಿಸಿರುತ್ತಿರುವ ಸೂರ್ಯಮಂಡಲದ ಮಧ್ಯದಲ್ಲಿ ಕಮಲದ ಮೇಲೆ ಪದ್ಮಾಸನ ಹಾಕಿ ಕುಳಿತುಕೊಂಡಿರುವವನು, ತೋಳುಗಳಲ್ಲಿ ತೋಳುಬಳೆ, ಕಿವಿಗಳಲ್ಲಿ ಮೊಸಳೆಯಾಕರದ ಕುಂಡಲಗಳು (ಮಕರ ಕುಂಡಲ), ತಲೆಯ ಮೇಲೆ ಕಿರೀಟ, ಕೊರಳಿನಲ್ಲಿ ಹಾರ ವಿರಾಜಿಸುತ್ತಿದೆ. ಎರಡು ಕೈಗಳಲ್ಲಿ ಶಂಖ-ಚಕ್ರ, ಇನ್ನೆರಡು ಕೈಗಳನ್ನು ತೊಡೆಯಮೇಲಿಟ್ಟಿರುವವನು, ಇಂತಹ ಚಿನ್ನದ ಮೈಬಣ್ಣದ ನಾರಾಯಣನನ್ನು ಧ್ಯಾನಿಸಬೇಕು” ಎನ್ನುತ್ತಾರೆ. ಆದರೆ ಒಮ್ಮೆಗೇ ಇಂತಹ ರೂಪವನ್ನು ಧ್ಯಾನದಲ್ಲಿ ಕಾಣಲು ಸಾಧ್ಯವಾಗದು. ಅದಕ್ಕಾಗಿ ಶುಕಾಚಾರ್ಯರು ಸ್ಥೂಲೇ ಭಗವತೋ ರೂಪೇ” ಎಂದಿದ್ದಾರೆ. ಮೊದಲು ಸೂರ್ಯಮಂಡಲವನ್ನು ಕಣ್ಮುಚ್ಚಿ ನೋಡಿ, ಅದರಲ್ಲಿ ಸೂರ್ಯನಾರಾಯಣನಿದ್ದಾನೆ ಎಂದು ಸ್ಥೂಲ ಪ್ರತೀಕದಲ್ಲಿ ಮನಸ್ಸನ್ನು ಏಕಾಗ್ರಗೊಳಿಸಬೇಕು. ನಂತರ ನಿಧಾನವಾಗಿ ಭಗವಂತನ ರೂಪ ಕಾಣಿಸುತ್ತದೆ. ಈ ಹಿಂದೆ ಹೇಳಿದಂತೆ ಭಗವಂತನ ರೂಪವನ್ನು ಧ್ಯಾನ ಮಾಡುವಾಗ ಪೂರ್ಣ ರೂಪವನ್ನು ಧ್ಯಾನಿಸದೇ ಯಾವುದೋ ಒಂದು ಅಂಗದಲ್ಲಿ ಮನಸ್ಸನ್ನು ಏಕಾಗ್ರಗೊಳಿಸಬೇಕು.

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ದ್ವಿತೀಯಸ್ಕಂಧೇ ಪ್ರಥಮೋSಧ್ಯಾಯಃ
ಭಾಗವತ ಮಹಾಪುರಾಣದ ಎರಡನೇ  ಸ್ಕಂಧದ ಒಂದನೇ ಅಧ್ಯಾಯ ಮುಗಿಯಿತು
*********


No comments:

Post a Comment