Saturday, November 23, 2013

Shrimad BhAgavata in Kannada -Skandha-02-Ch-02(3)

ಅತಃ ಕವಿರ್ನಾಮಸು ಯಾವದರ್ಥಃ ಸ್ಯಾದಪ್ರಮತ್ತೋ ವ್ಯವಸಾಯಬುದ್ಧಿಃ
ಸಿದ್ಧೇSನ್ಯಥಾರ್ಥೇ ನ ಯತೇತ ತತ್ತತ್  ಪರಿಶ್ರಮಂ ತತ್ರ ಸಮೀಕ್ಷಮಾಣಃ ೦೩

ಎಲ್ಲಾ ಶಬ್ದಗಳಲ್ಲಿ ಕೇವಲ ಭಗವಂತನ ಚಿಂತನೆ ಮಾಡಿದರೆ ಲೋಕ ವ್ಯವಹಾರ ನಡೆಯುವುದು ಹೇಗೆ? ಈ ಪ್ರಶ್ನೆಗೆ ಉತ್ತರಿಸುತ್ತಾ ಶುಕಾಚಾರ್ಯರು ಹೇಳುತ್ತಾರೆ: “ನಮಗೆ ಲೋಕದಲ್ಲಿ ಲೌಕಿಕವಾಗಿ  ಎಷ್ಟು ಅನಿವಾರ್ಯವಾಗಿ  ಶಬ್ದಗಳನ್ನು ಬಳಸಬೇಕೋ ಅಷ್ಟನ್ನೇ ಬಳಸಬೇಕು” ಎಂದು. ಏಕೆಂದರೆ ಅಮುಖ್ಯ ಅರ್ಥದಲ್ಲಿ ಲೋಕವ್ಯವಹಾರವೂ ನಡೆಯಬೇಕು. ಆದ್ದರಿಂದ ಎಷ್ಟು ಪ್ರಯೋಜನ ಇದೆಯೋ ಅಷ್ಟು ಮಾತ್ರವೇ ಲೌಕಿಕ ಮಾತನ್ನಾಡಬೇಕು. ಉಳಿದ ಎಲ್ಲಾ ಮಾತನ್ನು ಭಗವಂತನ ಪರವಾಗಿ ಚಿಂತನೆ ಮಾಡಬೇಕು. ಪೂರ್ತಿಯಾಗಿ ಭಗವದ್ ಚಿಂತನೆ ಮಾಡಿದರೆ ಲೋಕ ವ್ಯವಹಾರ ನಡೆಯುವುದಿಲ್ಲ. ಉದಾಹರಣೆಗೆ ಹಿಂದೆ ಹೇಳಿದಂತೆ ‘ವಿದ್ಯಾರತ್ನಾಕರ’ ಎನ್ನುವ ಹೆಸರಿನ ಮಗನನ್ನು ಕರೆಯಲು ತಂದೆ ಆ ಶಬ್ದವನ್ನೇ ಬಳಸಬೇಕು. ಆಗ ಮಗ “ನನ್ನ ತಂದೆ ಭಗವದ್ ಸ್ಮರಣೆ ಮಾಡುತ್ತಿದ್ದಾನೆ “ ಎಂದು ಸುಮ್ಮನೆ ಕುಳಿತುಕೊಂಡರೆ ಲೋಕ ವ್ಯವಹಾರ ನಡೆಯುವುದಿಲ್ಲ. ಆತ ತಂದೆ ನನ್ನನ್ನು ಕರೆಯುತ್ತಿದ್ದಾರೆ ಎಂದು ಅದಕ್ಕೆ ಓಗೊಡಲೇಬೇಕು. ಆದರೆ ಇಲ್ಲಿ ‘ವಿದ್ಯಾರತ್ನಾಕರ’ ಎನ್ನುವ ಪದ  ಭಗವಂತನ ಗುಣಗಾನ ಮಾಡುವ  ಭಗವಂತನ ಹೆಸರು, ಅದನ್ನು ನಾವು ವ್ಯವಹಾರಕ್ಕಾಗಿ ಬಳಸುತ್ತಿದ್ದೇವೆ ಎನ್ನುವ ಎಚ್ಚರ ಅಗತ್ಯ.
ಸಾಮಾಜಿಕವಾಗಿ ಮಾತ್ರವಲ್ಲ, ವೇದ ಭಾಷೆಯಲ್ಲಿ ಕೂಡಾ ಈ ರೀತಿಯ ಬಳಕೆ ಅನಿವಾರ್ಯ. ಉದಾಹರಣೆಗೆ ವೇದದಲ್ಲಿ  ವಸಂತೇ ವಸಂತೇ ಜ್ಯೋತಿಷಾ ಯಜೇತಾ ಎನ್ನುವ ಮಾತಿದೆ. ಅಂದರೆ “ಪ್ರತಿಯೊಂದು ವಸಂತ ಋತುವಿನಲ್ಲಿ ಜ್ಯೋತಿಷ್ಠೋಮ ಯಾಗದಿಂದ ಭಗವಂತನನ್ನು ಆರಾಧಿಸಬೇಕು” ಎಂದರ್ಥ. ಇದು ಲೌಕಿಕವಾದ ವೇದಾರ್ಥ. ಆದರೆ ಈ ವಾಕ್ಯ ಮುಖ್ಯವಾಗಿ ಭಗವಂತನ ಗುಣಗಾನ ಮಾಡುತ್ತದೆ.  ಅದು ಹೇಗೆಂದು ಇಲ್ಲಿ ಬರುವ ಪ್ರತಿಯೊಂದು ಪದವನ್ನೂ ಭಗವಂತನ ಪರ ಮಾಡಿ ಅರ್ಥ ಮಾಡಿ ತಿಳಿದುಕೊಳ್ಳಬಹುದು. ಹಾಗೆ ಮಾಡಿದಾಗ: ವಸನ್+ತೇ=ವಸಂತೇ ಅಂದರೆ: ಎಲ್ಲವುದರ ಒಳಗೂ ವಾಸ ಮಾಡುವವನು, ಎಲ್ಲೆಡೆ ತುಂಬಿರುವವನು ಎಂದರ್ಥ. ಅದೇ ರೀತಿ  ‘ಜ್ಯೋತಿಷಾ’. ಇಲ್ಲಿ  ಜ್ಯೋತಿ ಎಂದರೆ ಬೆಳಕು, ಷ-ಕಾರೋ ಪ್ರಾಣೋ ಆತ್ಮಾ. ಅಂದರೆ ಬೆಳಕಿನ ಪುಂಜವಾಗಿ ಎಲ್ಲೆಡೆ ತುಂಬಿರುವವ ಮತ್ತು ಎಲ್ಲರ ಅಂತರ್ಯಾಮಿಯಾಗಿದ್ದು ಪ್ರೇರೇಪಿಸುವವ. ಆದ್ದರಿಂದ ಸ್ವಯಂ ಪ್ರಕಾಶಸ್ವರೂಪನೂ, ಸರ್ವಚೇಷ್ಠಕನೂ ಆದವ ಜ್ಯೋತಿಷಾ. ಇನ್ನು ‘ಆಯಜೇತಾ’. ಇಲ್ಲಿ ‘ಇತ’ ಎಂದರೆ ಪೂಜಿತನಾದವನು. ಆದ್ದರಿಂದ ಆಯಜೇತಾ ಎಂದರೆ: ಎಲ್ಲಾ ಯಜ್ಞಗಳಿಂದ ಪೂಜಿತನಾದವನು ಎಂದರ್ಥ. ಹೀಗೆ ನೋಡಿದಾಗ ಇಡೀ ವಾಕ್ಯ ಭಗವದ್ ಪರವಾಗುತ್ತದೆ. ಆದರೆ ಕೇವಲ ಭಗವದ್ ಪರವಾಗಿ ನೋಡಿದರೆ ವ್ಯವಹಾರ ನಡೆಯುವುದಿಲ್ಲ. ಹಾಗಾಗಿ ವೇದ ಮಂತ್ರದಲ್ಲಿ ವ್ಯವಹಾರ ನಿರ್ವಹಣೆಗೆ ಎಷ್ಟು ಲೌಕಿಕ ಅರ್ಥಬೇಕೋ ಅಷ್ಟು ಲೌಕಿಕ ಅರ್ಥವನ್ನು ಕಾಣಬೇಕು. ಆದರೆ ಮಂತ್ರದ ನಿಜವಾದ ಅರ್ಥ ಭಗವಂತ ಎನ್ನುವುದನ್ನು ಮಾತ್ರ ಮರೆಯಬಾರದು. ಇದು ಭಾಷೆಯ ಮೇಲೆ ಅಧ್ಯಾತ್ಮದ ಅನುಸಂಧಾನ.
ಬ್ರಹ್ಮಾಂಡ ಪುರಾಣದಲ್ಲಿ ಹೇಳುವಂತೆ: “ಶಾಸ್ತ್ರೇಷು ಭಾರತಂ ಸಾರಸ್ತತ್ರ ನಾಮಸಹಸ್ರಕಮ್”  ಅಂದರೆ “ಶಾಸ್ತ್ರಗಳ ಸಾರ ಮಹಾಭಾರತವಾದರೆ, ಭಾರತದ  ಸಾರ ವಿಷ್ಣುಸಹಸ್ರನಾಮ”. ಈ ವಿಷಯವನ್ನು ಮೇಲ್ನೋಟದಲ್ಲಿ ನೋಡಿದಾಗ ನಮಗೆ ಗೊಂದಲವಾಗುತ್ತದೆ. ಏಕೆಂದರೆ ಮಹಾಭಾರತದಲ್ಲಿರುವುದು ಕೌರವ ಪಾಂಡವರ ಜಗಳದ ಕಥೆ. ಆದರೆ ವಿಷ್ಟು ಸಹಸ್ರನಾಮದಲ್ಲಿ ಅಂತಹ ಯಾವ ಕಥೆಯೂ ಇಲ್ಲ. ಅಲ್ಲಿರುವುದು ಭಗವಂತನ ಸಹಸ್ರ ಗುಣವಾಚಕ ನಾಮಗಳು. ಹೀಗಿರುವಾಗ ಅದು ಭಾರತದ ಸಂಗ್ರಹ(synopsis) ಆಗುವುದು ಹೇಗೆ ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಈ ಪ್ರಶ್ನೆಗೆ ಉತ್ತರ ರೂಪವಾಗಿಯೇ ಶುಕಾಚಾರ್ಯರು “ಎಲ್ಲಾ ಶಬ್ದಗಳೂ ಭಗವಂತನನ್ನು ಹೇಳುತ್ತವೆ” ಎಂದು ಹೇಳಿರುವುದು. ಈ ಹಿನ್ನೆಲೆಯಲ್ಲಿ ಭಾರತದ ಪ್ರತಿಯೊಂದು ಶ್ಲೋಕಗಳಲ್ಲಿ, ಪ್ರತಿಯೊಂದು ಶಬ್ದಗಳಲ್ಲಿ ಭಗವಂತನನ್ನು ಕಂಡಾಗ ನಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ. ಭಾರತದಲ್ಲಿ ಒಂದು ಲಕ್ಷ ಶ್ಲೋಕಗಳಿವೆ. ಅಂದರೆ ಮೂವತ್ತೆರಡು ಲಕ್ಷ ಅಕ್ಷರಗಳು. ಈ ಮೂವತ್ತೆರಡು ಲಕ್ಷ ಅಕ್ಷರಗಳೂ ಭಗವಂತನ ನಾಮವನ್ನು ಹೇಳುತ್ತವೆ ಮತ್ತು ಅದರ ಸಾರವನ್ನು ವೇದವ್ಯಾಸರು ನಮಗೆ  ವಿಷ್ಣುಸಹಸ್ರನಾಮವಾಗಿ ಕೊಟ್ಟಿದ್ದಾರೆ.   ವರಾಹ ಪುರಾಣದಲ್ಲಿ ವೇದವ್ಯಾಸರು ಹೇಳುತ್ತಾರೆ:  "ಯಾವಂತಿ ಪಟಿಥಾನಿ ತಾವಂತಿ ಹರಿನಾಮಂತಿ ಪಟಿಥಾನಿ ನಾಸಂಶಯಃ- ಒಮ್ಮೆ ವೇದವನ್ನು ಓದಿದರೆ ಅದರಲ್ಲಿ ಎಷ್ಟು ಅಕ್ಷರಗಳಿವೆಯೋ ಅಷ್ಟು ಹರಿನಾಮವನ್ನು ನಾವು ಪಠಿಸಿದಂತಾಗುತ್ತದೆ” ಎಂದು. ಆದ್ದರಿಂದ ಪ್ರಾಚೀನರ ಪ್ರಕಾರ ಒಮ್ಮೆ ಋಗ್ವೇದ ಓದಿದರೆ 4 ಲಕ್ಷದ 32 ಸಾವಿರ ಭಗವಂತನ ನಾಮ ಸ್ಮರಣೆ ಮಾಡಿದಂತಾಗುತ್ತದೆ.  ಇದು ಎಲ್ಲಾ ಅಕ್ಷರಗಳೂ, ಎಲ್ಲಾ ನಾದಗಳೂ ಭಗವಂತನ ನಾಮ ಎನ್ನುವ ಎಚ್ಚರ. ಉನ್ನತವಾದ ಧ್ಯಾನ ಸ್ಥಿತಿಗೆ ಏರಿದವರಿಗೆ ಇದು ಸಹಜವಾದ ಪ್ರವೃತ್ತಿ. ಏಕೆಂದರೆ ಧ್ಯಾನದಲ್ಲಿ ಯಾವ ಯಜ್ಞ-ಯಾಗ-ಆಹುತಿಗಳೂ ಇಲ್ಲ. ಅಲ್ಲಿ ಕೇವಲ ಭಗವಂತ ಮಾತ್ರ. ಆದರೆ ಧ್ಯಾನದಿಂದ ವ್ಯವಹಾರಕ್ಕಿಳಿದಾಗ ಅಲ್ಲಿ ವ್ಯಾವಹಾರಿಕ ಅರ್ಥವೂ ಬೇಕಾಗುತ್ತದೆ. ಇದು ಭಾಷೆಯ ಬಗ್ಗೆ ನಮಗಿರಬೇಕಾದ ಎಚ್ಚರ. ಹೀಗಾಗಿ ಮಾತನಾಡುವಾಗ ಶಾಸ್ತ್ರೀಯ ಸಂಗತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಮಾತನಾಡಬೇಕು.  ಉದಾಹರಣೆಗೆ ನಾವು ಒಬ್ಬ ವ್ಯಕ್ತಿಯನ್ನು ಬಯ್ಯುತ್ತೇವೆ. ಅಲ್ಲಿ ವ್ಯಾವಹಾರಿಕವಾಗಿ ಆತನನ್ನು ಬೈದರೂ, ಅಂತತಃ ನಾವು ಬಯ್ಯುವುದು ಆ ವ್ಯಕ್ತಿಯನ್ನಲ್ಲ, ಬದಲಿಗೆ ಆ ವ್ಯಕ್ತಿಯೊಳಗಿನ ಭಗವದ್ ತತ್ತ್ವವನ್ನು. ಈ ಎಚ್ಚರದಿಂದ  ವ್ಯವಹರಿಸಿದಾಗ ಜೀವನ ಸಾರ್ಥಕ.

ಸಾಮಾನ್ಯವಾಗಿ ಲೌಕಿಕವಾದ ಯಾವುದೋ ಒಂದು ಕೆಲಸಕ್ಕಾಗಿ ನಾವು ಭಾಷೆಯನ್ನು ಬಳಸುತ್ತೇವೆ. ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ಒಂದು ವೇಳೆ ಬೇರೆ ವಿಧದಿಂದ ಮಾತು ಬಳಸದೆಯೇ ಆ ಕೆಲಸ ಆಗುವುದಿದ್ದರೆ  ಅಂತಹ ಸಂದರ್ಭದಲ್ಲಿ ಲೌಕಿಕ ಅರ್ಥದಲ್ಲಿ ಮಾತನ್ನು ಬಳಸಲೇಬೇಡ” ಎಂದು.   “ಭಗವಂತನನ್ನು ಪ್ರತಿ ಶಬ್ದದಿಂದ ಅನುಸಂಧಾನ ಮಾಡಿದಾಗ ಎಲ್ಲಾ ಕೆಲಸವೂ ಆಗುತ್ತದೆ. ಹಾಗಿರುವಾಗ ಲೌಕಿಕ ಅರ್ಥದಲ್ಲಿ ಏಕೆ ಭಾಷೆಯನ್ನು ಬಳಸಬೇಕು” ಎನ್ನುವುದು ಇಲ್ಲಿ ಶುಕಾಚಾರ್ಯರ ಪ್ರಶ್ನೆ. ಇದು ಶುಕಾಚಾರ್ಯರ ನಿಲುವು. ಸಾಮಾನ್ಯರಾದ ನಮಗೆ ಈ ರೀತಿ ಬದುಕುವುದು ಸಾಧ್ಯವಿಲ್ಲ. ಲೌಕಿಕವಾಗಿ ಶಬ್ದ ಬಳಕೆಯಿಂದ ಯಾವುದೇ ಆನಂದವಿಲ್ಲ ಎನ್ನುವುದು ಧ್ಯಾನದ ಸ್ಥಿತಿಯಲ್ಲಿ ನಮಗೆ ಗೋಚರವಾಗುತ್ತದೆ.

No comments:

Post a Comment