Saturday, November 16, 2013

Shrimad BhAgavata in Kannada -Skandha-02-Ch-02(2)

ಭಗವಂತ ಎಲ್ಲಾ ಶಬ್ದಗಳಿಂದ ವಾಚ್ಯನಾದವನು. ಏಕೆಂದರೆ ಆತ ಸರ್ವಗುಣಪೂರ್ಣ. ಆದರೆ ಇದನ್ನು ಅರಿಯದೇ ನಾವಿಂದು ಪ್ರತಿಯೊಂದು ಶಬ್ದಗಳನ್ನೂ ಅಪೂರ್ಣ ಅರ್ಥದಲ್ಲಿ ಅಥವಾ ಅಪಾರ್ಥದಲ್ಲಿ ಬಳಸಿಕೊಂಡು ಬದುಕುತ್ತಿದ್ದೇವೆ. ಯಾವ ಶಬ್ದನಿಷ್ಪತ್ತಿಯೂ(Etymological meaning) ತಿಳಿಯದೇ, ಕೇವಲ ವ್ಯಾವಹಾರಿಕವಾಗಿ ಶಬ್ದಗಳನ್ನು ಬಳಸುತ್ತಿದ್ದೇವೆ. ಉದಾಹರಣೆಗೆ ಒಂದು ಮಗುವಿಗೆ ‘ವಿದ್ಯಾರತ್ನಾಕರ’  ಎನ್ನುವ ಹೆಸರಿಡುತ್ತೇವೆ. ಆದರೆ ಆತ  ಶುಂಠನಾಗಿ ಬೆಳೆಯುತ್ತಾನೆ. ಅಲ್ಲಿ ವಿದ್ಯೆ ಇಲ್ಲ, ರತ್ನ ಇಲ್ಲ, ಆಕರವೂ ಇಲ್ಲ. ಇಂತಹ ಸಂದರ್ಭದಲ್ಲಿ ಆ ಹೆಸರು ಕೇವಲ ಕರೆದಾಗ ಓಗೊಡಲು ಇರುವ ವ್ಯಾವಹಾರಿಕ ಶಬ್ದವಷ್ಟೇ ಆಗುತ್ತದೆ.  ಹೀಗೆ ಲೋಕದ ವಿಷಯದಲ್ಲಿ ವ್ಯರ್ಥವಾಗಿ ಕೇವಲ ಸಂಕೇತವಾದ  ಪದ ಭಗವಂತನ ನಾಮವಾದಾಗ ಮಾತ್ರ ಸಾರ್ಥಕವಾಗುತ್ತದೆ. ಕೇವಲ ವ್ಯಾವಹಾರಿಕ ಪ್ರಪಂಚದಲ್ಲಷ್ಟೇ ಅಲ್ಲ, ವೈದಿಕ ವಾಙ್ಮಯದಲ್ಲೂ ಅಷ್ಟೇ. ಉದಾಹರಣೆಗೆ ಯಜ್ಞದಲ್ಲಿ ಆಹುತಿ ಕೊಡುವಾಗ “ಅಗ್ನಯೇ ಸ್ವಾಹಾ ಅಗ್ನಯ ಇದಂ ನ ಮಮ; ಇಂದ್ರಾಯ ಸ್ವಾಹಾ ಇಂದ್ರಾಯ ಇದಂ ನ ಮಮ” , ಇತ್ಯಾದಿ ಮಂತ್ರ ಹೇಳಿ ಆಹುತಿ ಕೊಡುತ್ತೇವೆ. ಇಲ್ಲಿ ಹೇಳುವ ‘ಇಂದ್ರ’ ದೇವಲೋಕದ ದೇವೇಂದ್ರ ಎಂದು ತಿಳಿದು ನಾವು ಆಹುತಿ ಕೊಟ್ಟರೆ ಅದು ವ್ಯರ್ಥ! ಏಕೆಂದರೆ ‘ಇಂದ್ರ’ ಶಬ್ದದ ಅರ್ಥ ‘ಸರ್ವಸಮರ್ಥ’. ದೈತ್ಯ-ದಾನವರು ದಾಳಿ ಮಾಡಿದಾಗ ಓಡಿಹೋಗುವ ದೇವೇಂದ್ರ ಸರ್ವಸಮರ್ಥನಲ್ಲ. ಹಾಗಾಗಿ ಈ ಮಂತ್ರದಲ್ಲಿ ‘ಇಂದ್ರ’ ಎಂದರೆ ಇಂದ್ರನೊಳಗೆ ಅಂತರ್ಯಾಮಿಯಾಗಿ ನಿಯಮಿಸುತ್ತಿರುವ ಭಗವಂತ ಎಂದರ್ಥ. ಈ ರೀತಿ ಪ್ರತಿಯೊಂದು ಶಬ್ದದ ಅರ್ಥ ತಿಳಿದು ವೇದಮಂತ್ರವನ್ನು ಹೇಳಿ ಹೋಮ-ಹವನ ಮಾಡಿದಾಗ ಅದು ಸಾರ್ಥಕ. ಪ್ರತಿಯೊಂದು ಶಬ್ದದ ಪೂರ್ಣಾರ್ಥ ಕೇವಲ ಭಗವಂತನಲ್ಲಿ ಕೂಡುತ್ತದೆ ಹೊರತು ಇನ್ನೆಲ್ಲೂ ಅಲ್ಲ. ಇದಕ್ಕಾಗಿ “ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ” ಎಂದಿದ್ದಾರೆ. ನಾವು ಯಾವ ದೇವತೆಗೆ ನಮಸ್ಕಾರ ಮಾಡಿದರೂ ಅದು ಸಲ್ಲುವುದು ಆ ದೇವತೆ ಒಳಗಿರುವ ಭಗವಂತನಿಗೆ. ಇದಕ್ಕೆ ಶಾಸ್ತ್ರಕಾರರು ಕೊಟ್ಟಿರುವ ಉದಾಹರಣೆ ಅದ್ಭುತವಾಗಿದೆ. ಆಕಾಶಾತ್ ಪತಿತಂ ತೋಯಂ | ಯಥಾ ಗಚ್ಛತಿ ಸಾಗರಂ | ಆಕಾಶದಿಂದ ಮಳೆಯಾಗಿ ಸುರಿಯುವ ನೀರು ತೋಡಲ್ಲೇ ಬೀಳಲಿ, ನದಿಯಲ್ಲೇ ಬೀಳಲಿ, ಆದರೆ  ಅದು  ಕೊನೆಗೆ ಹೋಗಿ ಸೇರಬೇಕಾದ ತಾಣ-ಸಮುದ್ರ. ಇದೇ ರೀತಿ ಮಧ್ಯದಲ್ಲಿ ಅವಾಂತರ ದೇವತೆಗಳು ಯಾರೇ ಇದ್ದರೂ, ಎಲ್ಲಾ ಸ್ತೋತ್ರಗಳು, ನಮಸ್ಕಾರಗಳು ಕೊನೆಗೆ ಹೋಗಿ ಸೇರಬೇಕಾಗಿರುವುದು ಭಗವಂತನನ್ನು.  ಸಂಧ್ಯಾವಂದನೆಯಲ್ಲಿ ಬಳಸುವ ಮಂತ್ರಗಳು ಇದನ್ನೇ ಪ್ರತಿಪಾದಿಸುತ್ತವೆ. ಭಾಗವತದಲ್ಲೇ ಹೇಳುವಂತೆ ಗುಹಾಶಯಾಯೈವ ನ ದೇಹಮಾನಿನೇ(೪-೪-೨೨). ನಾವು ನಮಸ್ಕರಿಸುವುದು ಯಾವುದೇ ದೇಹಾಭಿಮಾನಿಗಲ್ಲ(ಜೀವನಿಗಲ್ಲ), ಬದಲಿಗೆ ಆತನ ಹೃದಯ ಗುಹೆಯಲ್ಲಿರುವ ಭಗವಂತನಿಗೆ.  ಹೀಗೆ ನಾವು ಮಾಡುವ ಸ್ತೋತ್ರ, ಆಹುತಿ, ನಮಸ್ಕಾರ ಎಲ್ಲವೂ ಪೂರ್ಣಪ್ರಮಾಣದಲ್ಲಿ ಸಲ್ಲಬೇಕಾಗಿರುವುದು ಆ ನಾರಾಯಣನಿಗೆ. ಇದನ್ನೇ ಬೃಹದಾರಣ್ಯಕ ಉಪನಿಷತ್ತಿನ ಅಂತರ್ಯಾಮಿ ಬ್ರಾಹ್ಮಣ ವಿವರಿಸುತ್ತಾ, ಪ್ರತಿಯೊಂದು ಮಂತ್ರವನ್ನೂ   “ಏಷ ತೇ ಆತ್ಮಾ ಅಂತರ್ಯಾಮಿ ಅಮೃತಃ ಎಂದು ಉಪಸಂಹಾರ ಮಾಡುವುದನ್ನು ಕಾಣುತ್ತೇವೆ. “ಆದರೆ ಅಜ್ಞಾನದ ಬೇಲಿಯಲ್ಲಿ ಸಿಲುಕಿರುವ ಮನುಷ್ಯ ಎಲ್ಲದರೊಳಗೂ ಅಂತರ್ಯಾಮಿಯಾಗಿ ಭಗವಂತನಿದ್ದಾನೆ ಎನ್ನುವ ಅರಿವಿಲ್ಲದೇ ಯಾವುದ್ಯಾವುದೋ ಕ್ಷುದ್ರ ದೇವತೆಗಳ ಬೆನ್ನು ಹತ್ತುತ್ತಿದ್ದಾನೆ” ಎಂದಿದ್ದಾರೆ ಶುಕಾಚಾರ್ಯರು.
ಶುಕಾಚಾರ್ಯರು ಹೇಳುತ್ತಾರೆ: “ಪ್ರಕೃತಿಯ ಮೋಹಕ್ಕೊಳಗಾದ ಮನುಷ್ಯ ಕೇವಲ ಪ್ರಾಪಂಚಿಕ ಸಂಸ್ಕಾರದಲ್ಲೇ ಮುಳುಗಿ, ಶಬ್ದಗಳನ್ನು ಅಪಾರ್ಥವಾಗಿಯೋ ಅಥವಾ ಅಪೂರ್ಣ ಅರ್ಥದಲ್ಲೋ ಉಪಯೋಗಿಸುತ್ತಿದ್ದಾನೆ” ಎಂದು. ಹೀಗಾಗಿ ಇಂದು ನಿಜವಾದ ಶಬ್ದಾರ್ಥವನ್ನು ಹೇಳಿದರೆ ಅದನ್ನು ನಂಬುವವರೂ ಇಲ್ಲ! ಇಷ್ಟೇ ಅಲ್ಲದೆ, ಅನೇಕ ಶಬ್ದಗಳ ಅರ್ಥ ಪ್ರಾಪಂಚಿಕವಾಗಿ ಸಂಕುಚಿತವಾಗುತ್ತಿದೆ. ಉದಾಹರಣೆಗೆ ‘ಪುರುಷ’ ಎನ್ನುವ ಪದ. ಇದರ ಸೂಕ್ಷ ಅರ್ಥ ‘ಭಗವಂತ’ ಎಂದಾದರೂ, ಪ್ರಾಪಂಚಿಕ ಅರ್ಥ ಮಾನವ ಶರೀರದೊಳಗಿರುವ ಜೀವ ಎನ್ನುವುದು. ಆದರೆ ಇಂದು ಪ್ರಾಪಂಚಿಕ ಅರ್ಥವೂ ಸಂಕುಚಿತಗೊಂಡು ಕೇವಲ ‘ಗಂಡಸು’ ಎನ್ನುವ ಅರ್ಥದಲ್ಲಿ ಇದು ಸಾಮಾಜದಲ್ಲಿ ಬಳಕೆಯಲ್ಲಿದೆ. ಹೀಗೆ ಸಾಮಾಜಿಕ ಪ್ರಭಾವದಿಂದ ಶಬ್ದಗಳು ತಮ್ಮ ಅರ್ಥವ್ಯಾಪ್ತಿಯನ್ನು ಕಳೆದುಕೊಳ್ಳುತ್ತಿವೆ. ಹೀಗೆ ಶಬ್ದದ ಅಪೂರ್ಣ-ಅರ್ಥ ಮತ್ತು ಸಂಕುಚಿತ-ಅರ್ಥದೊಂದಿಗೆ ವೇದಾರ್ಥ ಚಿಂತನೆ ಮಾಡಿದಾಗ ಎಲ್ಲವೂ ಅಪಾರ್ಥವಾಗುತ್ತದೆ.

ಎಷ್ಟೋ ಜನ್ಮಗಳ ಪ್ರಾಪಂಚಿಕ ಸಂಸ್ಕಾರದಿಂದಾಗಿ ಬಂದಿರುವ  ಅಜ್ಞಾನವೆಂಬ ಮಂಚದಲ್ಲಿ ಮಲಗಿದವನಿಗೆ ಜ್ಞಾನ ಬೇಡವಾಗುತ್ತದೆ. ಇದರಿಂದಾಗಿ ‘ಎಲ್ಲಾ ಶಬ್ದವೂ ಭಗವಂತನನ್ನು ಹೇಳುತ್ತದೆ’ ಎನ್ನುವ ಸತ್ಯ ತಿಳಿದಾಗ ಆಗುವ ಆನಂದ ಆತನಿಗೆ ಬೇಡವಾಗುತ್ತದೆ. ಆತ ತನ್ನ  ಅಜ್ಞಾನದಲ್ಲೇ ಆನಂದ ಪಡುತ್ತಿರುತ್ತಾನೆ. ಇದನ್ನೇ ಪಾಶ್ಚಾತ್ಯರು ‘Ignorance is bliss” ಎಂದು ಕರೆದರು.  ಆದರೆ ನಿಜವಾದ ಜ್ಞಾನಿಗೆ  ಸರ್ವಶಬ್ದಗಳೂ ಭಗವಂತನನ್ನು ಹೇಳುತ್ತವೆ ಎನ್ನುವ ಸತ್ಯದ ಅರಿವು ಅಮೃತಪಾನದಂತೆ.   

No comments:

Post a Comment