Saturday, October 26, 2013

Shrimad BhAgavata in Kannada -Skandha-02-Ch-01(8)

ಜಿತಾಸನದ ನಂತರ ಶುಕಾಚಾರ್ಯರು ‘ಜಿತಶ್ವಾಸಃ’ ಎಂದಿದ್ದಾರೆ. ಅಂದರೆ ಉಸಿರಿನ(ಪ್ರಾಣಕೋಶದ) ನಿಯಂತ್ರಣ. ಒಬ್ಬ ಮನುಷ್ಯ ಸರಿಯಾಗಿ ಉಸಿರಾಡುತ್ತಿದ್ದಾನೆ ಎಂದರೆ ಆತ ಆರೋಗ್ಯವಾಗಿದ್ದಾನೆ ಎಂದರ್ಥ. ನಮ್ಮ ಉಸಿರು ಹೇಗಿರಬೇಕು, ಅದರಿಂದ ಹೇಗೆ ಆರೋಗ್ಯ ಬರುತ್ತದೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಶ್ವಾಸ ಎಂದರೆ ವಾತಾವರಣದಲ್ಲಿರುವ ಪ್ರಾಣಶಕ್ತಿಯನ್ನು(ಆಮ್ಲಜನಕ) ಒಳಗೆ ತೆಗೆದುಕೊಂಡು ನಂತರ ಒಳಗಿರುವ ಅಪಾನ ಶಕ್ತಿ(ಕಾರ್ಬನ್ ಡೈ ಆಕ್ಸೈಡ್)ಯನ್ನು ಹೊರ ಹಾಕುವುದು. ಉಸಿರಾಡುವಾಗ ಅವಸರ-ಅವಸರವಾಗಿ ಉಸಿರಾಡಬಾರದು. ಒಳಗೆ ತೆಗೆದುಕೊಳ್ಳುವಾಗ ಧೀರ್ಘ ಹಾಗೂ ಪೂರ್ಣವಾಗಿ ಒಳಗೆ ತೆಗೆದುಕೊಳ್ಳಬೇಕು ಹಾಗೂ ಹೊರ ಹಾಕುವಾಗ ಒಳಗೆ ಕೊಳೆ ಉಳಿಯದಂತೆ ಪೂರ್ತಿಯಾಗಿ ಹೊರ ಹಾಕಬೇಕು. ಈ ರೀತಿ ಒಳಗೆ ಯಾವುದೇ ಕೊಳೆ ಇಲ್ಲದಂತೆ ನಿರಂತರ ಶುದ್ಧೀಕರಣ ನಡೆಯಬೇಕು. ಇದೇ ಪ್ರಾಣಶುದ್ಧಿ.
ಪ್ರಾಣಶುದ್ಧಿ ಆದ ಮೇಲೆ ಪ್ರಾಣ ಸ್ಥಿರತೆ. ಅಂದರೆ ಪ್ರಾಣಮಯಕೋಶವನ್ನು ನಿಶ್ಚಲಗೊಳಿಸುವಿಕೆ.  ಇದಕ್ಕೆ ಎರಡು ವಿಧಾನಗಳಿವೆ. ೧. ಬಾಹ್ಯಕುಂಭಕ ೨. ಅಂತಃಕುಂಭಕ.  ಶ್ವಾಸವನ್ನು ಪೂರ್ತಿಯಾಗಿ ಹೊರಬಿಟ್ಟಮೇಲೆ ಒಳಗೆ  ನಿರ್ವಾತ ಸ್ಥಿತಿಯಲ್ಲಿ  ಶ್ವಾಸವನ್ನು  ಒಳಗೆ ತೆಗೆದುಕೊಳ್ಳದೆ ಸ್ಥಿರವಾಗಿ ಕುಳಿತುಕೊಳ್ಳವುದು ಬಾಹ್ಯಕುಂಭಕ;  ಪೂರ್ಣವಾಗಿ ಶ್ವಾಸವನ್ನು ಒಳಕ್ಕೆ ತೆಗೆದುಕೊಂಡ ನಂತರ, ಹೊರಬಿಡದೆ ಸ್ಥಗನಗೊಳಿಸುವುದು ಅಂತಃಕುಂಭಕ.  [ಪ್ರಾಣಾಯಾಮ ಮಾಡುವಾಗ ಎಚ್ಚರಿಕೆ ಅಗತ್ಯ. ಯೋಗ್ಯ ಗುರುವಿನ ಮಾರ್ಗದರ್ಶನ ಅಗತ್ಯ. ಹೃದ್ರೋಗಿಗಳು ಅಂತಃಕುಂಭಕ ಮಾಡಕೂಡದು. ತಲೆನೋವು ಇದ್ದಾಗ ಪ್ರಾಣಾಯಾಮ ಮಾಡಬಾರದು]. ಈ ಎರಡೂ ಸ್ಥಿತಿಯಲ್ಲಿ ಒಳಗೆ ಪ್ರಾಣಾಗ್ನಿ ನಿರ್ಮಾಣವಾಗುತ್ತದೆ. ಈ ಪ್ರಾಣಾಗ್ನಿ ಒಳಗಿರುವ ಎಲ್ಲಾ ದೋಷಗಳನ್ನು ಸುಡುವ ಅಗ್ನಿಯಾಗುತ್ತದೆ. ಇದು ಕೇವಲ ಪಾಪಪುರುಷ ಬಸ್ಮೀಕರಣ ಮಾಡುವ ಪ್ರಕ್ರಿಯೆಯಷ್ಟೇ ಅಲ್ಲ, ನಮ್ಮೊಳಗೆ ಕೂತು ನಮ್ಮಲ್ಲಿ ಕೆಟ್ಟ ಬುದ್ಧಿ ಹುಟ್ಟಿಸುವ ಕ್ಷುದ್ರ ಆಸುರೀ ಶಕ್ತಿಗಳನ್ನು ಇದು ಓದ್ದೋಡಿಸುತ್ತದೆ. ಇದೇ ಪಾಪಪುರುಷ ನಿರಸನ.
ಪ್ರಾಣಾಯಾಮ ಮಾಡುವಾಗ ಮೊದಲು ರೇಚಕ ಮತ್ತು ಪೂರಕವನ್ನು ಮೂಗಿನ ಎರಡೂ ಹೊಳ್ಳೆಗಳಿಂದ ಮಾಡಬಹುದು. ನಂತರ ಒಂದು ಹೊಳ್ಳೆಯಿಂದ ತೆಗೆದುಕೊಂಡು ಅದೇ ಹೊಳ್ಳೆಯಿಂದ ಹೊರಕ್ಕೆ ಬಿಡುವುದು, ಇನ್ನೊಂದು ಹೊಳ್ಳೆಯಿಂದ ತೆಗೆದುಕೊಂಡು ಅದೇ ಹೊಳ್ಳೆಯಿಂದ ಹೊರ ಬಿಡುವುದು ಮತ್ತು ಒಂದು ಹೊಳ್ಳೆಯಿಂದ ತೆಗೆದುಕೊಂಡು ಇನ್ನೊಂದು ಹೊಳ್ಳೆಯಿಂದ ಬಿಡುವುದು, ಹೀಗೆ ನಾನಾ ವಿಧಾನದಿಂದ ನಾಸಾಶುದ್ಧಿ-ನಾಡಿಶುದ್ಧಿ ಸಾಧಿಸಿ, ಆಮೇಲೆ ಪ್ರಾಣಶುದ್ಧಿ ಸಾಧಿಸಬೇಕು.
ಸಾಮಾನ್ಯವಾಗಿ ಪ್ರಾಣಾಯಾಮ ಎಂದರೆ ಬಲದಿಂದ ರೇಚಕ, ಎಡದಿಂದ ಪೂರಕ, ಆಮೇಲೆ  ಕುಂಭಕ. ಹಿಂದೆ ಹೇಳಿದಂತೆ ಶ್ವಾಸವನ್ನು ಒಳಕ್ಕೆ ತೆಗೆದುಕೊಳ್ಳುವಾಗ ಮೈ ಬೆಲೂನಿನಂತೆ ಉಬ್ಬಿಕೊಳ್ಳಬೇಕು. ರೇಚಕ ಮಾಡುವಾಗ ಹೊಟ್ಟೆ ಒಳಕ್ಕೆ ಎಳೆದುಕೊಂಡು ಒಳಗಿರುವ ಎಲ್ಲಾ ಗಾಳಿಯನ್ನು  ಖಾಲಿ ಮಾಡಬೇಕು. ಕುಂಭಕ ಸ್ಥಿತಿಯಲ್ಲಿ ಎಲ್ಲಿಯೂ ಸೋರದಂತೆ ಹೃದಯದಲ್ಲಿ ಶ್ವಾಸವನ್ನು ಸ್ಥಗನಗೊಳಿಸಬೇಕು. ಹೃದಯದಲ್ಲಿ ಶ್ವಾಸವನ್ನು ಸ್ಥಗನಗೊಳಿಸುವಾಗ ಮಲ-ಮೂತ್ರದ್ವಾರವನ್ನು ಒಳಕ್ಕೆಳೆದುಕೊಳ್ಳಲು ಮರೆಯಬಾರದು. ಇದನ್ನು ಮೂಲಬಂಧ ಎನ್ನುತ್ತಾರೆ. ಈ ರೀತಿ ಮಾಡದೇ ಕುಂಭಕ ಮಾಡಿದರೆ ಮೂಲವ್ಯಾಧಿ ಬರುವ ಸಾಧ್ಯತೆ ಹೆಚ್ಚು.   ಹೀಗೆ ಪ್ರಾಣಾಯಾಮದಿಂದ ಪ್ರಾಣಮಯಕೋಶದ ಸ್ಥಿರತೆ ಸಾಧಿಸುವುದನ್ನು ಶುಕಾಚಾರ್ಯರು ಇಲ್ಲಿ ಜಿತಶ್ವಾಸಃ ಎಂದಿದ್ದಾರೆ.
ಶ್ವಾಸವನ್ನು ಗೆದ್ದಮೇಲೆ ಮನಸ್ಸನ್ನು ಸ್ಥಿರಗೊಳಿಸಬೇಕು. ಅದಕ್ಕಾಗಿ ನಾವು ಸಂಗವನ್ನು ಗೆಲ್ಲಬೇಕು(ಜಿತಸಂಗಃ) ಎಂದಿದ್ದಾರೆ ಶುಕಾಚಾರ್ಯರು. ಶ್ರೀಕೃಷ್ಣ ಗೀತೆಯಲ್ಲಿ ಹೇಳುವಂತೆ: ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋSಭಿಜಾಯತೇ ॥೨-೬೨॥. ಮನಸ್ಸಿನ ಕೊಳೆ ಎಂದರೆ ಅದು ಕಾಮ-ಕ್ರೋಧ ಹಾಗೂ ಅದು ಬರುವುದು ಸಂಗದಿಂದ. ಒಂದು ವಸ್ತುವನ್ನು ನೋಡದೇ ಇದ್ದರೆ, ಅದರ ಬಗ್ಗೆ ಕೇಳದೇ ಇದ್ದರೆ ಅದು ಬೇಕು ಎನಿಸುವುದಿಲ್ಲ. ನೋಡಿದ ಮೇಲೆ ಕಾಮ ಹುಟ್ಟುತ್ತದೆ. ನಂತರ ಅದು ಸಿಗದಿದ್ದರೆ ಕ್ರೋಧ. ಆದ್ದರಿಂದ ಮನಸ್ಸನ್ನು ಸ್ವಚ್ಛವಾಗಿಡಲು ನಾವು ನಮ್ಮಿಂದ ಸಾಧ್ಯವಾದಷ್ಟು ವಿಷಯ ಸಂಪರ್ಕದ ಕಡೆಗೆ ಮನಸ್ಸಿನ ಸಂಪರ್ಕವನ್ನು ಕಡಿಮೆ ಮಾಡಬೇಕು. ಆಗ ಕಾಮ-ಕ್ರೋಧಗಳು ಕಡಿಮೆಯಾಗಿ ಮನಸ್ಸು ಶುದ್ಧವಾಗಲು ಸಹಾಯವಾಗುತ್ತದೆ. ಗೀತೆಯಲ್ಲಿ ಶ್ರೀಕೃಷ್ಣ ಸಂಗವನ್ನು ಹೇಗೆ ಗೆಲ್ಲಬೇಕು ಎನ್ನುವುದನ್ನು ವಿವರಿಸುತ್ತಾ ಹೇಳುತ್ತಾನೆ: “ವಿವಿಕ್ತದೇಶಸೇವಿತ್ವಮರತಿರ್ಜನಸಂಸದಿ” ಎಂದು. ॥೧೩-೧೦॥. ಅಂದರೆ- ಎಲ್ಲಿ ಬೇಡವಾದ ವಿಚಾರಕ್ಕಾಗಿ ಜನಜಂಗುಳಿ ಸೇರುತ್ತದೋ, ಅಂತಹ ಜನಜಂಗುಳಿಯಿಂದ ದೂರವಿರು ಎಂದರ್ಥ. ಮೌನ ಮತ್ತು ಏಕಾಂತ ಇದು ಮನಸ್ಸಿನ ಏಕಾಗ್ರತೆಗೆ ಬಹಳ ಮುಖ್ಯ ಸಾಧನ.  ಇಷ್ಟೇ ಅಲ್ಲದೇ ಮನಸ್ಸನ್ನು ಕೆಡಿಸುವ ಬಿಟ್ಟಿ ಭೋಜನಕ್ಕೆ ಹಾತೊರೆಯುವುದನ್ನೂ ನಾವು ಬಿಡಬೇಕು. ಊಟದ ಸಮಯದಲ್ಲಿ ಹಾಳು ಹರಟೆ ನಿಷಿದ್ಧ. ಭೋಜನ ಎನ್ನುವುದು ಮೌನದಲ್ಲಿ, ಭಗವಂತನ ಸ್ಮರಣೆಯಲ್ಲಿ ನಡೆಯಬೇಕು. ಹೀಗೆ ಯಾವ ಸಂಪರ್ಕದಿಂದ ಮನಸ್ಸು ಕಲುಷಿತವಾಗುತ್ತದೋ ಅಂತಹ ಸಾಮಾಜಿಕ ಸಂಪರ್ಕದಿಂದ ದೂರವಿರಲು ಪ್ರಯತ್ನಿಸಬೇಕು.
ಕೇವಲ ಬಾಹ್ಯಸಂಗ ತೊರೆದರೆ ಸಾಲದು, ನಾವು ನಮ್ಮೊಳಗೇ ಇರುವ ಅಂತಃಶತ್ರುಗಳಾದ ಇಂದ್ರಿಯಗಳನ್ನು ನಿಯಂತ್ರಿಸಬೇಕು. ಅದಕ್ಕಾಗಿ ಶುಕಾಚಾರ್ಯರು ಇಲ್ಲಿ ‘ಜಿತೇಂದ್ರಿಯಃ’ ಎಂದಿದ್ದಾರೆ. ನಾವು ಬೇಡವಾದುದನ್ನು ಬಯಸುವ ಇಂದ್ರಿಯ ಚಾಪಲ್ಯಕ್ಕೆ ನಿಧಾನವಾಗಿ ಕಡಿವಾಣ ಹಾಕಬೇಕು. ಹೀಗೆ ಆಸನ ಸ್ವಚ್ಛಗೊಳಿಸಿ ಆಸನ ಸ್ಥಿರಗೊಳಿಸಬೇಕು,  ಪ್ರಾಣ ಸ್ವಚ್ಛಗೊಳಿಸಿ ಪ್ರಾಣ ಸ್ಥಿರಗೊಳಿಸಬೇಕು ಮತ್ತು ಮನಸ್ಸನ್ನು ಸ್ವಚ್ಛಗೊಳಿಸಿ ಮನಸ್ಸನ್ನು ಸ್ಥಿರಗೊಳಿಸಬೇಕು. ನಂತರ ಸ್ವಚ್ಛವಾದ ಮನಸ್ಸಿನಲ್ಲಿ ಭಗವಂತನನ್ನು ತುಂಬಿಸಬೇಕು.
ಭಗವಂತನ ಪರಿಚಯವೇ ಇಲ್ಲದಿರುವಾಗ ಭಗವಂತನನ್ನು ಮನಸ್ಸಿನಲ್ಲಿ ತುಂಬುವುದು ಹೇಗೆ? ಈ ಪ್ರಶ್ನೆಗೆ ಶುಕಾಚಾರ್ಯರು ಇದೇ ಶ್ಲೋಕದಲ್ಲಿ ಉತ್ತರಿಸಿರುವುದನ್ನು ಕಾಣುತ್ತೇವೆ. ಶುಕಾಚಾರ್ಯರು ಹೇಳುತ್ತಾರೆ: “ತಿಳಿದಿರುವ ಭಗವಂತನ ಸ್ಥೂಲ ರೂಪವನ್ನು ಮೊದಲು ಧ್ಯಾನದಲ್ಲಿ ಕಾಣಬೇಕು” ಎಂದು.  ತಿಳಿದಿರುವ ರೂಪ ಎಂದರೆ ಅದು ಜ್ಞಾನಾನಂದಮಯವಾದ ರೂಪವಲ್ಲ. ಅದು ನಾವು ಮನೆಯಲ್ಲಿ ಪೂಜಿಸುವ ಭಗವಂತನ ಸ್ಥೂಲ ಪ್ರತೀಕ. ಅಷ್ಟೇ ಅಲ್ಲದೆ ಇಡೀ ಬ್ರಹ್ಮಾಂಡವೇ ಆತನ ಪ್ರತೀಕ. ಪುರುಷಸೂಕ್ತದಲ್ಲಿ ಹೇಳುವಂತೆ: ಸ ಭೂಮಿಂ ವಿಶ್ವತೋ ವೃತ್ವಾsತ್ಯತಿಷ್ಠದ್ದಶಾಂಗುಲಂ ॥೧॥ ಭಗವಂತ ಇಡೀ ವಿಶ್ವದಲ್ಲಿ ತುಂಬಿದ್ದಾನೆ. ಹೀಗಾಗಿ ಕಣ್ಣಿಗೆ ಕಾಣುವ ವಿಶ್ವದಲ್ಲಿ ಕಾಣದ ಭಗವಂತನನ್ನು ಕಾಣುವ ಪ್ರಯತ್ನ ಮಾಡಬೇಕು. ಕಣ್ಮುಚ್ಚಿ ಧ್ಯಾನದಲ್ಲಿ ಕುಳಿತಾಗ ಅಲ್ಲಿ ಏನೇ ಕಾಣಲಿ, ಅದರಲ್ಲಿ ಭಗವಂತನ ಅನುಸಂಧಾನ ಮಾಡಬೇಕು. ಅಲ್ಲಿ ನಗರ ಕಾಣಬಹುದು, ಪರಿಚಿತ ವ್ಯಕ್ತಿ ಕಾಣಬಹುದು, ಯುವಕನಿಗೆ ಯುವತಿ ಕಾಣಬಹುದು ಹಾಗೂ ಯುವತಿಗೆ ಯುವಕ. ಆದರೆ ಇವೆಲ್ಲವುದರ ಹಿಂದೆ ಒಂದು ಜ್ಞಾನಾನಂದಮಯವಾದ ಶಕ್ತಿ ಇದೆ ಎಂದು ತಿಳಿದು ಧ್ಯಾನ ಮುಂದುವರಿಸಬೇಕು. ಧ್ಯಾನ ಪ್ರಕ್ರಿಯೆಯಲ್ಲಿ ಇದೊಂದು ಭವ್ಯ ಕಲ್ಪನೆ. ಜ್ಞಾನಾನಂದನಾದ ಭಗವಂತ ನನ್ನೊಳಗೆ, ಪ್ರಪಂಚದ ಪ್ರತಿಯೊಂದು ಅಣು-ಕಣದೊಳಗೆ ತುಂಬಿದ್ದಾನೆ ಎನ್ನುವ ವಿವೇಕಪ್ರಜ್ಞೆ ಬೆಳೆಸಿಕೊಂಡು, ಮನಸ್ಸನ್ನು ತರಬೇತಿಗೊಳಿಸಿದಾಗ, ಧ್ಯಾನದಲ್ಲಿ ಭಗವಂತನ ದರ್ಶನವಾಗುತ್ತದೆ. ಇದು ಈ ಶ್ಲೋಕದಲ್ಲಿ ನಾವು ಕಾಣಬಹುದಾದ  ಧ್ಯಾನದ ಸಮಗ್ರ ಪ್ರಕ್ರಿಯೆಯ ಸಂಕ್ಷಿಪ್ತ ವಿವರಣೆ.
ಭಾಗವತದ ಮುಂದಿನ ಶ್ಲೋಕಕ್ಕೆ ಹೋಗುವ ಮುನ್ನ ಧ್ಯಾನದ ವಿಷಯದಲ್ಲಿ ಸರ್ವೇಸಾಮಾನ್ಯವಾಗಿ ಬರುವ ಎರಡು ಮುಖ್ಯವಾದ ವಿಷಯವನ್ನು ಇಲ್ಲಿ  ನೋಡೋಣ. ಮೊದಲನೆಯದಾಗಿ ಹೆಂಗಸರು ಧ್ಯಾನ ಮಾಡಬಹುದೇ ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ನೇರವಾಗಿ ಉತ್ತರಿಸಬೇಕು ಎಂದರೆ ಹೆಂಗಸರಷ್ಟೇ ಅಲ್ಲ, ಎಲ್ಲರೂ ಧ್ಯಾನ ಮಾಡಬಹುದು. ಧ್ಯಾನಕ್ಕೆ ಲಿಂಗ ನಿಶಿದ್ಧವಿಲ್ಲ. ಆದರೆ ಇಲ್ಲಿ ನಾವು ನೋಡಬೇಕಾಗಿರುವುದು ಸಾಮಾಜಿಕವಾಗಿ ಹೆಂಗಸರು ಧ್ಯಾನ ಮಾಡುವುದು ಏಕೆ ಅಷ್ಟೊಂದು ಬಳಕೆಗೆ ಬಂದಿಲ್ಲ ಎನ್ನುವ ವಿಚಾರವನ್ನು. ಸಾಮಾನ್ಯವಾಗಿ ಹೆಣ್ಣಿಗೆ ಸಾಂಸಾರಿಕ ಜೀವನದಲ್ಲಿ ಹೆಚ್ಚಿನ ಜವಾಬ್ಧಾರಿ ಇರುತ್ತದೆ. ಹೀಗಿರುವಾಗ ಕುಟುಂಬದ ಲಾಲನೆ-ಪಾಲನೆಯ ಜೊತೆಗೆ ಧ್ಯಾನಾಸಕ್ತಿ ಒಂದಕ್ಕೊಂದು ಹೊಂದಾಣಿಕೆ ಆಗದಿದ್ದರೆ ಅಲ್ಲಿ ವೈರಸ್ಯ ಬರುವ ಸಾಧ್ಯತೆ ಹೆಚ್ಚು. ಅದಕ್ಕೋಸ್ಕರ ಹಿಂದಿನವರು ಧ್ಯಾನದಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಳ್ಳಲಿಲ್ಲ.
ಎರಡನೇಯದಾಗಿ ಸ್ನಾನ ಮಾಡಲು ಆಗದೇ ಇದ್ದಾಗ, ರಾತ್ರಿ ಮಲಗುವಾಗ ಧ್ಯಾನ ಮಾಡಬಹುದೇ ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ನಾವು ಈ ಹಿಂದೆಯೇ ಉತ್ತರ ಕಂಡುಕೊಂಡಿದ್ದೇವೆ. ಧ್ಯಾನಕ್ಕೆ ಮುಖ್ಯವಾಗಿ ಬೇಕಾಗಿರುವುದು ಮನಃಶುದ್ಧಿ. ಮನಸ್ಸು ಧ್ಯಾನಕ್ಕೆ ಬಯಸುತ್ತಿದೆ ಎಂದರೆ ಅದು ಶುದ್ಧವಾಗಿದೆ ಎಂದರ್ಥ. ಆದ್ದರಿಂದ ಯಾವ ಕಾಲದಲ್ಲಿ ಮನಸ್ಸು ಶ್ರುತಿಗೂಡುತ್ತದೋ ಆಗ ಧ್ಯಾನ ಮಾಡಬಹುದು. ಸ್ನಾನ ಮಾಡಲು ಆಗದಿದ್ದಾಗ ಅಲ್ಲಿ ಮಂತ್ರಸ್ನಾನ ಮಾಡಬಹುದು. ಮಂತ್ರಸ್ನಾನಕ್ಕಾಗಿ ಶಾಸ್ತ್ರಕಾರರು ಈ ಕೆಳಗಿನ ಎರಡು ಮಂತ್ರಗಳನ್ನು ನೀಡಿದ್ದಾರೆ:

ಅಪವಿತ್ರಃ ಪವಿತ್ರೋವ ಸರ್ವಾವಸ್ಥಾಂ ಗತೋಪಿವಾ |
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||
ಅತಿನೀಲಘನಶ್ಯಾಮಂ ನಲಿನಾಯತಲೋಚನಂ |
ಸ್ಮರಾಮಿ ಪುಂಡರೀಕಾಕ್ಷಂ ತೇನ ಸ್ನಾತೋ ಭಾವಾಮ್ಯಹಂ||


ಇಲ್ಲಿ ಪುಂಡರೀಕಾಕ್ಷನನ್ನು ಸ್ಮರಣೆ ಮಾಡಬೇಕು ಎಂದು ಹೇಳಿದ್ದಾರೆ. ಇದೊಂದು ಭಗವಂತನ ವಿಶೇಷ ನಾಮ. ಪುಂಡರೀಕಾಕ್ಷ ಎಂದರೆ ಕೆಂದಾವರೆಯಂತಹ ಕಣ್ಣುಳ್ಳವನು ಎಂದರ್ಥ. ಭಗವಂತನ ಕಣ್ಣು ಯಾವಾಗಲೂ ಕೆಂದಾವರೆ ಎಸಳಿನಂತೆ ಅರಳಿ ನಳನಳಿಸುತ್ತಿರುತ್ತದೆ. ಸಾಮಾನ್ಯವಾಗಿ ನಮಗೆ ಅತ್ಯಂತ ಸಂತೋಷವಾದಾಗ ನಮ್ಮ ಕಣ್ಣು ಅರಳುತ್ತದೆ. ಆದರೆ ಭಗವಂತ ಸದಾ ಸಂತೋಷದ ಬುಗ್ಗೆ. ಭಗವಂತ ಪ್ರೀತಿಯಿಂದ ಕಣ್ಣರಳಿಸಿ ನನ್ನನ್ನು ನೋಡುತ್ತಿದ್ದಾನೆ, ಅವನ ಕಣ್ಣಿನಿಂದ ಹರಿದುಬರುತ್ತಿರುವ ಅನುಗ್ರಹದ ರಸಧಾರೆಯಲ್ಲಿ ನಾನು ಮೀಯುತ್ತಿದ್ದೇನೆ, ಅವನ ಅನುಗ್ರಹದ ಕೃಪಾದೃಷ್ಟಿ ನನ್ನ ಮೇಲೆ ಹರಿದಿದೆ, ನಾನು ಅದರಲ್ಲಿ ಮಿಂದೆ ಎನ್ನುವ ಅನುಸಂಧಾನ ಶುಚಿ. ಹೀಗೆ ನಾವು ಭಗವಂತನ ಅನುಗ್ರಹದಿಂದ ಒಳಗೂ ಹೊರಗೂ ಮಡಿಯಾಗಿ ಧ್ಯಾನದಲ್ಲಿ ತೊಡಗಬಹುದು. 

No comments:

Post a Comment