Wednesday, October 2, 2013

Shrimad BhAgavata in Kannada -Skandha-02-Ch-01(2)

ಶುಕಾಚಾರ್ಯರು “ನಾನು ಈಗ ಹೇಳುತ್ತಿರುವ ಗ್ರಂಥ ಭಾಗವತ ಪುರಾಣ ಎನ್ನುವ ಬ್ರಹ್ಮಸಮ್ಮಿತ” ಎಂದಿದ್ದಾರೆ. ಇಲ್ಲಿ ‘ಭಾಗವತ’ ಎನ್ನುವ ಶಬ್ದ ಮೂರು ಅರ್ಥಗಳಲ್ಲಿ ಈ ಪುರಾಣಕ್ಕೆ ಅನ್ವರ್ಥವಾಗಿದೆ. ಭಗವಂತನನ್ನು ಪ್ರತಿಪಾದಿಸುವ ಗ್ರಂಥವಾಗಿರುವುದರಿಂದ ಇದು ಭಾಗವತ; ಭಗವಂತನ ಅವತಾರವಾದ ವೇದವ್ಯಾಸರು ರಚಿಸಿರುವ ಗ್ರಂಥವಾಗಿರುವುದರಿಂದ ಇದು ಭಾಗವತ ಮತ್ತು ಭಗವದ್ ಭಕ್ತರಿಗೆ(ಭಾಗವತರಿಗೆ) ಪ್ರಿಯವಾದ ಗ್ರಂಥವಾದುದರಿಂದ ಇದು ಭಾಗವತ. ಇನ್ನು ಪುರಾಣ ಎಂದರೆ ಪ್ರಾಚೀನ ಗ್ರಂಥ. ಇದು ಎಂದೂ ಹೊಸತನವನ್ನು ಕಳೆದುಕೊಳ್ಳದ ಹಳೇ ಗ್ರಂಥ.
ಇಲ್ಲಿ ಬಳಸಿರುವ ‘ಬ್ರಹ್ಮಸಮ್ಮಿತ’ ಎನ್ನುವ ವಿಶೇಷಣ ಎರಡು ವಿಧದಲ್ಲಿ ತೆರೆದುಕೊಳ್ಳುತ್ತದೆ. ‘ಸಮ್ಮಿತ’ ಎಂದರೆ ‘ತಿಳಿಯಲ್ಪಟ್ಟದ್ದು’.  ಬ್ರಹ್ಮ ಎಂದರೆ ಶಬ್ದಗಳಲ್ಲೇ ಅತಿ ದೊಡ್ಡದಾದದ್ದು--ಅಂದರೆ  ವೇದ.  ಅದೇ ರೀತಿ ಬ್ರಹ್ಮ ಎಂದರೆ ಸಮಸ್ತ ಪ್ರಪಂಚದಲ್ಲಿ ಅತಿ ದೊಡ್ಡ ವಸ್ತುವಾಗಿರುವ ಭಗವಂತ. ಹೀಗಾಗಿ ವೇದತುಲ್ಯವಾದುದು ಹಾಗೂ  ಯಾವುದರಿಂದ ಭಗವಂತ ಚೆನ್ನಾಗಿ ತಿಳಿಯಲ್ಪಡುತ್ತಾನೋ ಅದು ಬ್ರಹ್ಮಸಮ್ಮಿತ. ಅಂದರೆ ಭಗವಂತನ ಬಗೆಗೆ ನಮಗೆ ಯಥಾರ್ಥವಾದ ಅರಿವನ್ನು ಕೊಡತಕ್ಕಂತಹ ಗ್ರಂಥ ಭಾಗವತ. ಒಟ್ಟಿನಲ್ಲಿ ಹೇಳಬೇಕೆಂದರೆ: “ಭಗವಂತನನ್ನು ಚೆನ್ನಾಗಿ ತಿಳಿಸುವ, ವೇದತುಲ್ಯವಾದ ಭಾಗವತವೆಂಬ ಪುರಾಣವನ್ನು ನಾನು ನಿನಗೆ ಹೇಳುತ್ತೇನೆ” ಎಂದಿದ್ದಾರೆ ಶುಕಾಚಾರ್ಯರು. [ಭಾಗವತವನ್ನು ಪಂಚಮವೇದ ಎಂದು ಕರೆಯುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.]
ಇಲ್ಲಿ ಶುಕಾಚಾರ್ಯರು “ನಾನು ನನ್ನ ತಂದೆಯಾದ ದ್ವೈಪಾಯನರಿಂದ ‘ದ್ವಾಪರಾದೌ’ದಲ್ಲಿ ಅಧ್ಯಯನ ಮಾಡಿರುವ  ಭಾಗವತವನ್ನು ನಿನಗೆ ಹೇಳುತ್ತೇನೆ” ಎಂದಿದ್ದಾರೆ. ಮೇಲ್ನೋಟದಲ್ಲಿ ನೋಡಿದರೆ  ‘ದ್ವಾಪರಾದೌ’  ಎಂದರೆ ದ್ವಾಪರದ ಆದಿ. ಆದರೆ ನಮಗೆ ತಿಳಿದಂತೆ ದ್ವಾಪರದ ಅಂತ್ಯದಲ್ಲಿ ವೇದವ್ಯಾಸರ ಅವತಾರವಾಗಿರುವುದು. ಹೀಗಿರುವಾಗ ದ್ವಾಪರದ ಆದಿಯಲ್ಲಿ ಹೇಗೆ ಈ ಉಪದೇಶ ನಡೆಯಿತು? ಈ ಎಲ್ಲಾ ಸಮಸ್ಯೆಗೆ ಉತ್ತರ ಸ್ಕಾಂದಪುರಾಣದಲ್ಲಿದೆ. ಅಲ್ಲಿ ಹೇಳುತ್ತಾರೆ: ದ್ವಾಪರೇ, ಆದೌ ಚ ಕೃಷ್ಣಾವತಾರಾಪೇಕ್ಷಯಾ ವ್ಯಾಸಃ ಷಟ್ ಶತ ವರ್ಷೀಯೋ ಧೃತರಾಷ್ಟ್ರ ಮಜೀಜನತ್ ಇತಿ ಸ್ಕಾಂದೇ    ಇಲ್ಲಿ  ಹೇಳುವಂತೆ ‘ದ್ವಾಪರಾದೌ’ ಎಂದರೆ ದ್ವಾಪರದ ಆದಿ ಅಲ್ಲ. ದ್ವಾಪರದಲ್ಲಿ, ಅದರಲ್ಲಿಯೂ ಕೃಷ್ಣಾವತಾರಕ್ಕಿಂತ ಮೊದಲು ವೇದವ್ಯಾಸರ ಅವತಾರವಾಯಿತು; ವೇದವ್ಯಾಸರು ಆರುನೂರು ವರ್ಷ ವಯಸ್ಸಿನವರಿದ್ದಾಗ ಅವರಿಂದ ಧೃತರಾಷ್ಟ್ರನ  ಜನನವಾಯಿತು.  ಈ ಹಿನ್ನೆಲೆಯಲ್ಲಿ ಶುಕಾಚಾರ್ಯರ ಮಾತನ್ನು ಗಮನಿಸಿದರೆ ಅವರು ಹೇಳಿರುವುದು “ಕೃಷ್ಣಾವತಾರಕ್ಕಿಂತ ಮೊದಲು, ದ್ವಾಪರದಲ್ಲಿ ವ್ಯಾಸರು ನನಗೆ ಭಾಗವತವನ್ನು ಹೇಳಿದರು” ಎಂದು.  ಈ ಮಾತಿನಿಂದ ನಮಗೆ ತಿಳಿಯುವುದೇನೆಂದರೆ: ಮಹಾಭಾರತವನ್ನು ಹೇಗೆ ವೇದವ್ಯಾಸರು ಮಹಾಭಾರತ ನಡೆಯುವ ಮೊದಲೇ ರಚಿಸಿದ್ದರೋ ಹಾಗೇ, ಕೃಷ್ಣನ ಕಥೆಯಾಗಿರುವ ಭಾಗವತವನ್ನು ರಚಿರುವುದು  ಕೃಷ್ಣಾವತಾರಕ್ಕಿಂತಲೂ ಮೊದಲು! ಏಕೆಂದರೆ ಈ ಎಲ್ಲಾ ಘಟನೆಗಳೂ ಕೂಡಾ ಕಾಲಚಕ್ರದಲ್ಲಿ ಕಾಲಾತೀತವಾಗಿ ನಡೆಯುವಂತಹದ್ದು. ಈ ಘಟನೆ ಹಿಂದಿನ ಕಲ್ಪದಲ್ಲಿಯೂ ಆಗಿದೆ, ಈ ಕಲ್ಪದಲ್ಲಿಯೂ ನಡೆದಿದೆ, ಮುಂದಿನ ಕಲ್ಪದಲ್ಲೂ ನಡೆಯುತ್ತದೆ. ವೈದಿಕವಾದ, ಶಾಸ್ತ್ರೀಯವಾದ ಇತಿಹಾಸಕ್ಕೆ ಭೂತಕಾಲವಿದೆ, ವರ್ತಮಾನ ಕಾಲವಿದೆ ಹಾಗೂ ಭವಿಷ್ಯತ್ಕಾಲವೂ ಇದೆ.
ಇಲ್ಲಿ ವೇದವ್ಯಾಸರನ್ನು ‘ದ್ವೈಪಾಯನ’ ಎಂದು ಸಂಬೋಧಿಸಿದ್ದಾರೆ. ವ್ಯಾಸರ ಮೂಲನಾಮ ಕೃಷ್ಣ. ಅವರು ಯಮುನಾದ್ವೀಪದಲ್ಲಿ ಹುಟ್ಟಿರುವುದರಿಂದ ಅವರಿಗೆ ಬಂದ ಹೆಸರು ದ್ವೈಪಾಯನ. ನಂತರ ವೇದವನ್ನು ವಿಂಗಡಣೆ ಮಾಡಿ ಕೊಟ್ಟಿರುವುದರಿಂದ ಅವರಿಗೆ ವೇದವ್ಯಾಸ ಎನ್ನುವ ಶಿರೋನಾಮೆ ಬಂತು. ಭಾಗವತವನ್ನು ಭಗವಂತನ ಅವತಾರವಾದ ವೇದವ್ಯಾಸರು(ಹರಿ) ತನ್ನ ಮಗ, ಶಿವನ ಅವತಾರವಾದ ಶುಕಾಚಾರ್ಯರಿಗೆ(ಹರ)  ಹೇಳಿದರು. ಹೀಗೆ ಹರಿ-ಹರರಿಂದ ಹರಿದುಬಂದ ಗ್ರಂಥ ಭಾಗವತ.

ಪರಿನಿಷ್ಠಿತೋSಪಿ ನೈರ್ಗುಣ್ಯ ಉತ್ತಮಶ್ಲೋಕಲೀಲಯಾ
ಗೃಹೀತಚೇತಾ ರಾಜರ್ಷ ಆಖ್ಯಾನಂ ಯದಧೀತವಾನ್ ೦೯
      
ತಾನೇಕೆ ಭಾಗವತವನ್ನು ಕೇಳಿದೆ ಎನ್ನುವುದನ್ನು ವಿವರಿಸುತ್ತಾ ಶುಕಾಚಾರ್ಯರು ಹೇಳುತ್ತಾರೆ: “ಜೀವನ್ಮುಕ್ತನಾದ ನಾನು ಏನನ್ನೋ  ಗಳಿಸುವುದಕ್ಕೊಸ್ಕರ ಭಾಗವತ ಶ್ರವಣ ಮಾಡಿದ್ದಲ್ಲ, ಬದಲಿಗೆ ಭಗವಂತನ ಲೀಲೆಗಳನ್ನು ಕೇಳಬೇಕು ಎನ್ನುವ ತುಡಿತದಿಂದಾಗಿ ತಂದೆಯಿಂದ ಭಾಗವತ ಕೇಳಿದೆ” ಎಂದು.  ಇಲ್ಲಿ ಶುಕಾಚಾರ್ಯರು ಭಗವಂತನನ್ನು ‘ಉತ್ತಮಶ್ಲೋಕ’ ಎಂದು ಸಂಬೋಧಿಸಿದ್ದಾರೆ.   ಸಂಸಾರ ಬಂಧವನ್ನು ದಾಟಿನಿಂತ   ಅಪರೋಕ್ಷ ಜ್ಞಾನಿಗಳೂ ಕೂಡಾ ಯಾರ ಗುಣಗಾನ ಮಾಡಲು ಇಷ್ಟಪಡುತ್ತಾರೋ ಅಂತಹ ಭಗವಂತ ಉತ್ತಮಶ್ಲೋಕ.       

No comments:

Post a Comment