Sunday, October 13, 2013

Shrimad BhAgavata in Kannada -Skandha-02-Ch-01(6)

ತತ್ರೈಕಾವಯವಂ ಧ್ಯಾಯೇದವ್ಯುಚ್ಛಿನ್ನೇನ ಚೇತಸಾ  
ಮನೋ ನಿರ್ವಿಷಯಂ ಯುಕ್ತ್ವಾ ತತಃ ಕಿಂಚಿನ್ನ ಸಂಸ್ಮರೇತ್
ಪದಂ ತತ್ಪರಮಂ ವಿಷ್ಣೋರ್ಮನೋ ಯತ್ರ ಪ್ರಸೀದತಿ  ೧೯

ಈ ಹಿಂದೆ “ಮನಃಶುದ್ಧಿಯಿಂದ ಭಗವಂತನನ್ನು ಧ್ಯಾನ ಮಾಡಬೇಕು” ಎಂದು ಹೇಳಿದ ಶುಕಾಚಾರ್ಯರು, ಇಲ್ಲಿ ಧ್ಯಾನದಲ್ಲಿ ಭಗವಂತನನ್ನು ಹೇಗೆ ಕಾಣಬೇಕು ಎನ್ನುವುದನ್ನು ವಿವರಿಸಿದ್ದಾರೆ. ನಮ್ಮಂತೆ ಭಗವಂತನಿಗೂ ಕರ-ಚರಣಗಳಿರುವ ರೂಪವಿದೆ ಎಂದು ಅವನನ್ನು ನಾವು ಪಾದದಿಂದ ಕೇಶದ ತನಕ ಮನಸ್ಸಿನ ಕಣ್ಣಿನಲ್ಲಿ ಕಾಣಬೇಕು. ಆದರೆ ಧ್ಯಾನದಲ್ಲಿ ಆತನ ಪೂರ್ಣ ಶರೀರವನ್ನು ಸೆರೆ ಹಿಡಿದು ಏಕಾಗ್ರ ಸಾಧಿಸುವುದು ಕಷ್ಟ. ಅದಕ್ಕಾಗಿ ಶುಕಾಚಾರ್ಯರು ಹೇಳುತ್ತಾರೆ: “ಭಗವಂತನ ಯಾವುದಾದರೂ ಒಂದು ಅವಯವವನ್ನು ಮನಸ್ಸಿನಲ್ಲಿ ಏಕಾಗ್ರ ಮಾಡು” ಎಂದು. ಭಗವಂತನ ಮುಂಗುರುಳು, ಕೊಳಲನ್ನೂದುವ ಆತನ ಕಿರಿಬೆರಳು, ಮಂದಹಾಸ ಬೀರುವ ಆತನ ತುಟಿ, ಕರುಣಾರಸವನ್ನು ಬೀರುವ ಆತನ ಕಣ್ಣು, ಹೊಂಬೆಳಕನ್ನು ಸೂಸುವ ಆತನ ಉಗುರು, ಹೀಗೆ ನಮಗೆ ಯಾವುದು ಇಷ್ಟವೋ ಆ ಅವಯವವನ್ನು ಮನಸ್ಸಿನಲ್ಲಿ ನೆಲೆಗೊಳಿಸಲು ಪ್ರಯತ್ನಪಡಬೇಕು. ಉದಾಹರಣೆಗೆ: ಭಗವಂತ ತನ್ನ ಅರಳುಗಣ್ಣಿನಿಂದ ನನ್ನನ್ನು ನೋಡುತ್ತಿದ್ದಾನೆ, ಅವನ ಕಾರುಣ್ಯದ ರಸ ನನ್ನ ಮೇಲೆ ಹರಿಯುತ್ತಿದೆ, ಆ ರಸಪೂರದಲ್ಲಿ ನಾನು ಆನಂದವಾಗಿ ಓಲಾಡುತ್ತಿದ್ದೇನೆ ಎಂದು ಯೋಚಿಸುತ್ತಾ, ಭಗವಂತನ ಕಣ್ಣಿನ ಬೆಳಕಲ್ಲಿ ಮನಸ್ಸನ್ನು ನೆಲೆಗೊಳಿಸಿ ಧ್ಯಾನ ಮಾಡಬಹುದು.
ಮೊದಲು ನಾವು ಭಗವಂತನ ಏಕ ಅವಯವವನ್ನು ಮನಸ್ಸಿನಲ್ಲಿ ಧಾರಣೆ ಮಾಡಬೇಕು. ಕೆಲವೊಮ್ಮೆ ಮನಸ್ಸಿನ ಕಣ್ಣಿಗೆ ರೂಪ ಕಾಣುತ್ತದೆ, ಆದರೆ ಸ್ವಲ್ಪ ಹೊತ್ತಿನಲ್ಲಿ ಅದು ಕಣ್ಮರೆಯಾಗುತ್ತದೆ. ಹೀಗಾದಾಗ ಆ ರೂಪವನ್ನು ಕಾಣಲು ಮರಳಿ ಪ್ರಯತ್ನಿಸುವುದೇ ಧಾರಣೆ. ಎಷ್ಟು ಸಲ ರೂಪ ಕಣ್ಮರೆಯಾಗುತ್ತದೋ ಅಷ್ಟು ಸಲ ಕಣ್ಮುಚ್ಚಿ  ಏಕಾಗ್ರತೆಯನ್ನು ಸಾಧಿಸಿ ಆ ರೂಪವನ್ನು ಮರಳಿ ಕಾಣಬೇಕು. ಹೀಗೆ ಮಾಡುತ್ತಾ-ಮಾಡುತ್ತಾ ಕೊನೆಗೆ ಆ ರೂಪ ಮನಸ್ಸಿನಲ್ಲಿ ಸ್ಥಿರಗೊಳ್ಳುತ್ತದೆ. ಇದೇ ಧ್ಯಾನ ಸ್ಥಿತಿ.
ಧ್ಯಾನ ಮಾಡಬೇಕೆಂದು ಬಯಸುವುದು ಮನಸ್ಸು, ಆದರೆ  ಆ ನಂತರ ಅದೇ ಮನಸ್ಸು ಧ್ಯಾನ ಮಾಡಬೇಕೋ ಬೇಡವೋ ಎನ್ನುವ ಗೊಂದಲದಲ್ಲಿ ಬೀಳುತ್ತದೆ. ಹೀಗಾದಾಗ ಬುದ್ಧಿ ಕೆಲಸ ಮಾಡುತ್ತದೆ. ಧ್ಯಾನ ಮಾಡಲೇಬೇಕು ಎಂದು ಅದು ತೀರ್ಮಾನ ತೆಗೆದುಕೊಳ್ಳುತ್ತದೆ. ಈ ರೀತಿ ತೀರ್ಮಾನವಾದ ಮೇಲೆ ಚಿತ್ತ ಧ್ಯಾನದಲ್ಲಿ ತೊಡಗುತ್ತದೆ. ಹೀಗೆ ಧ್ಯಾನದಲ್ಲಿ ತೊಡಗಿದಾಗ ಕೆಲವೊಮ್ಮೆ ಅದು ನಮಗರಿವಿಲ್ಲದೇ  ವಿಚ್ಛೇದಗೊಳ್ಳುತ್ತದೆ(Disconnect/Switch off).   ಅದಕ್ಕಾಗಿ ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ಎಂದೂ ಚಿತ್ತ ವಿಚ್ಛೇದಗೊಳ್ಳದಂತೆ ಅದನ್ನು ಪರಿಣತಿಗೊಳಿಸಬೇಕು” ಎಂದು. ಹೀಗೆ ಮನಸ್ಸು ನಿರ್ವಿಷಯವಾಗಿ ಸ್ವಚ್ಚವಾದಾಗ ಅದರಲ್ಲಿ ಭಗವಂತನನ್ನು ತುಂಬಿಸಿ, ಭಗವಂತನನ್ನಲ್ಲದೆ ಇನ್ನ್ಯಾವುದರ ಬಗ್ಗೆ ಯೋಚನೆ ಮಾಡದೆ ಏಕಾಗ್ರವಾಗಿ ಭಗವಂತನಲ್ಲಿ ನೆಲೆನಿಲ್ಲಬೇಕು.

ಕೆಲವರಿಗೆ ಮೇಲೆ ವಿವರಿಸಿದ ಧ್ಯಾನ ಪ್ರಕ್ರಿಯೆಯಲ್ಲಿ ಒಂದು ಸಂಶಯ ಬರುತ್ತದೆ. ಅದೇನೆಂದರೆ: “ಸರ್ವಗತನಾದ ಭಗವಂತನನ್ನು ಒಂದು ಚಿಕ್ಕ ರೂಪದಲ್ಲಿ ಧ್ಯಾನಿಸುವುದು ಸರಿಯೆ” ಎಂದು. ಅದಕ್ಕಾಗಿ ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ಈ ರೀತಿ ಧ್ಯಾನದಲ್ಲಿ ನೀನು ಕಾಣುವುದು ವಿಷ್ಣುವಿನ ಸ್ವರೂಪವನ್ನು” ಎಂದು. ಇಲ್ಲಿ ಬಳಸಿರುವ ‘ವಿಷ್ಣು’ ಎನ್ನುವ ಪದ ನಮ್ಮ ಮೇಲಿನ ಸಂಶಯವನ್ನು ಪರಿಹರಿಸುತ್ತದೆ. ಏಕೆಂದರೆ ವಿಷ್ಣು ಎಂದರೆ ‘ವೇವೇಷ್ಟತಿ ವಿಷ್ಣುಃ’. ಅಂದರೆ ಯಾರು ಸರ್ವಗತನೋ ಆತ ವಿಷ್ಣು. ವಿಷತೀತಿ ವಿಷ್ಣುಃ. ಅಂದರೆ ದೊಡ್ದದಕ್ಕಿಂತ ದೊಡ್ಡವನಾಗಿ ಎಲ್ಲೆಡೆ ತುಂಬಿರುವ ಭಗವಂತ ಸಣ್ಣದಕ್ಕಿಂತ ಸಣ್ಣವನಾಗಿ ನಮ್ಮೊಳಗೆ ತುಂಬಿದ್ದಾನೆ ಎಂದರ್ಥ. ಭಗವಂತ ಸಾಕಾರನೂ ಹೌದು ನಿರಾಕಾರನೂ ಹೌದು. ಸರ್ವಸಮರ್ಥನಾದ ಭಗವಂತ ತನ್ನ ಭಕ್ತನಿಗೆ ಯಾವ ರೂಪದಲ್ಲಿ ಬೇಕಾದರೂ ದರ್ಶನ ಕೊಡಬಲ್ಲ.  ಹೀಗಾಗಿ ಸರ್ವಗತನಾದ ಭಗವಂತನ ಆಕಾರವನ್ನು ನಾವು ಧ್ಯಾನ ಮಾಡಬಹುದು ಎನ್ನುವ ಸೂಚನೆಯನ್ನು ಇಲ್ಲಿ ಶುಕಾಚಾರ್ಯರು ‘ವಿಷ್ಣು’ ಎನ್ನುವ ಪದದ ಮೂಲಕ ನೀಡಿದ್ದಾರೆ.
ಧ್ಯಾನದಲ್ಲಿ ಭಗವಂತನನ್ನು ಕಂಡಾಗ ಮನಸ್ಸು ಹುಚ್ಚೆದ್ದು ಕುಣಿಯುತ್ತದೆ. ಆ ನಂತರ ಅದು ಆ ಸ್ಥಿತಿಯಿಂದೀಚೆಗೆ ಬರಲು ಒಪ್ಪುವುದಿಲ್ಲ. ಈ ಸ್ಥಿತಿಯನ್ನು ಕೆಲವರು ಪೂರ್ವಜನ್ಮದ ಸಾಧನೆಯ ಫಲದಿಂದಾಗಿ ತಕ್ಷಣ ಗಳಿಸಬಲ್ಲವರಾದರೆ, ಇನ್ನು ಕೆಲವರು ಅದಕ್ಕಾಗಿ ನಿರಂತರ ಸಾಧನೆ ಮಾಡಬೇಕಾಗುತ್ತದೆ. 

No comments:

Post a Comment