Sunday, October 20, 2013

Shrimad BhAgavata in Kannada -Skandha-02-Ch-01(7)

ಯಸ್ಯಾಂ ಸಂಧಾರ್ಯಮಾಣಾಯಾಂ ಯೋಗಿನೋ ಭಕ್ತಿಲಕ್ಷಣಃ
ಆಶು ಸಂಪದ್ಯತೇ ಯೋಗ ಆಶ್ರಯಂ ಭದ್ರಮೀಕ್ಷತಃ  ೨೧

ಸಾಮಾನ್ಯವಾಗಿ ನಮ್ಮಲ್ಲಿರುವುದು ‘ಕೇಳಿ ಬಂದ ಭಕ್ತಿ’. ಅಂದರೆ ಭಗವಂತನಲ್ಲಿ ಭಕ್ತಿ ಮಾಡಬೇಕು ಎಂದು ಹಿರಿಯರು ಹೇಳಿದ್ದನ್ನು ಕೇಳಿ ನಾವು ಭಕ್ತಿ ಮಾಡುವುದು. ಆದರೆ ನಿಜವಾದ ಭಕ್ತಿ ಮೂಡುವುದು ಧ್ಯಾನ ಸ್ಥಿತಿಯಲ್ಲಿ ಭಗವಂತನ ಸ್ವರೂಪವೆಂಬ ಮಹಾ ಸಂಪತ್ತನ್ನು ಕಂಡಾಗ.  ಜಗತ್ತಿನಲ್ಲಿ ನಾವು ಪ್ರೀತಿಸಿದ ಎಲ್ಲಾ ವಸ್ತುಗಳಿಗಿಂತ ಅದ್ಭುತವಾದ ವಸ್ತು ನಮಗೆ ಸಿಕ್ಕಿದಾಗ ನಮ್ಮೆಲ್ಲಾ ಪ್ರೀತಿ ಅದಕ್ಕೆ ಮೀಸಲಾಗುತ್ತದೆ. ಅದಕ್ಕಿಂತ ಬೇರೆ ಯಾವುದೂ ಬೇಡ ಎನಿಸುತ್ತದೆ. ಈ ರೀತಿ ಹುಟ್ಟುವ ಪ್ರೀತಿ ಮಹಾತ್ಮ್ಯಪೂರಕವಾದ ಪ್ರೀತಿ. ಈ ಸ್ಥಿತಿಯಲ್ಲಿ ಇನ್ನೊಬ್ಬರು ನಮಗೆ ಭಕ್ತಿ ಮಾಡು ಎಂದು ಹೇಳಬೇಕಾಗಿಲ್ಲ, ಭಕ್ತಿ ತನ್ನಷ್ಟಕ್ಕೆ ತಾನು ಬಂದುಬಿಡುತ್ತದೆ. ಹೀಗಾಗಲು ಕಾರಣ ಏನೆಂದರೆ: ನಮಗೆ ಬದುಕಿನಲ್ಲಿ ಇರುವ ಮೂಲಭೂತವಾದ ಚಿಂತೆ ಎಂದರೆ ‘ನೆಲೆ ಕಾಣುವುದು ಹೇಗೆ’ ಎನ್ನುವುದು. ಈ ಅಭದ್ರತೆ ಪ್ರತಿಯೊಬ್ಬರನ್ನೂ ಕಾಡುತ್ತಿರುತ್ತದೆ. ಹೀಗಿರುವಾಗ ಅಂತರಂಗದಲ್ಲಿ ಭಗವಂತನನ್ನು ಕಂಡಾಗ ‘ನಾವು ಭಗವಂತನ ರಕ್ಷಣೆಯಲ್ಲಿದ್ದೇವೆ’ ಎನ್ನುವ ಸತ್ಯ ತಿಳಿದುಬಿಡುತ್ತದೆ.   ಈ ಸತ್ಯ ತಿಳಿದ ಪ್ರತಿಯೊಬ್ಬನೂ ಭಯಾತೀತನಾಗುತ್ತಾನೆ. ಪರಮಮಾಂಗಲಿಕವಾದ ಸುಭದ್ರ ನೆಲೆ ಸಿಗುವುದು ಭಗವಂತನಿಂದ. ಧ್ಯಾನದ ಮೂಲಕ ಬಾಹ್ಯ ಸಂಪತ್ತಿನ ಸೀಮೆ ಹಾಗೂ ಭಗವಂತನ ಅನಂತ ರಕ್ಷಣೆಯ ಸತ್ಯವನ್ನು ಅನುಭವಿಸಿದಾಗ ಮನಸ್ಸು ನಿಶ್ಚಲವಾಗಿ ಆನಂದವನ್ನು ಅನುಭವಿಸುತ್ತದೆ.
ರಾಜೋವಾಚ--
ಯಥಾ ಸಂಧಾರ್ಯತೇ ಬ್ರಹ್ಮನ್ ಧಾರಣಾ ಯತ್ರ ಸಮ್ಮತಾ
ಯಾದೃಶೀ ವಾ ಹರೇದಾಶು ಪುರುಷಸ್ಯ ಮನೋಮಲಮ್  ೨೨

ಶುಕಾಚಾರ್ಯರು ಒಂದು ಘಟ್ಟದಲ್ಲಿ ಧ್ಯಾನದ ಕುರಿತು ಹೇಳಿ ಮುಗಿಸಿದಾಗ  ಪರೀಕ್ಷಿತ “ನನಗೆ ಧ್ಯಾನದ ಕುರಿತು ಇನ್ನೂ ವಿವರವಾಗಿ ಹೇಳಿ” ಎಂದು ಕೇಳಿಕೊಳ್ಳುತ್ತಾನೆ. ಇದು ನಮ್ಮ ನಿಮ್ಮೆಲ್ಲರ ಪರ ಪರೀಕ್ಷಿತ ಹಾಕಿದ ಪ್ರಶ್ನೆ. ಆತ ಇಲ್ಲಿ ಶುಕಾಚಾರ್ಯರಲ್ಲಿ ಮೂರು ಪ್ರಶ್ನೆಗಳನ್ನು ಕೇಳುತ್ತಾನೆ. ಮನಸ್ಸನ್ನು ಎಲ್ಲಿ ಧಾರಣೆ ಮಾಡಬೇಕು? ಹೇಗೆ ಧಾರಣೆ ಮಾಡಬೇಕು ಮತ್ತು ಮನಸ್ಸನ್ನು ಸ್ವಚ್ಛಗೊಳಿಸುವುದು ಹೇಗೆ? ಇವೇ ಆ ಮೂರು ಪ್ರಶ್ನೆಗಳು. ನಮ್ಮಲ್ಲಿ ಇಂದು ಹೆಚ್ಚಿನವರು ಬಾಹ್ಯ ಮಡಿ ಕುರಿತು ಅನೇಕ ರೀತಿ ಹೇಳುತ್ತಾರೆ. ಆದರೆ ಮನಸ್ಸಿನ ಕೊಳೆಯನ್ನು ತೊಳೆದು ಮಡಿಯಾಗುವುದು ಹೇಗೆ ಎನ್ನುವುದು ನಮಗೆ ತಿಳಿದಿಲ್ಲ.  ಇದೇ ಪ್ರಶ್ನೆಯನ್ನು ಇಲ್ಲಿ ಪರೀಕ್ಷಿತ ಶುಕಾಚಾರ್ಯರಲ್ಲಿ ಕೇಳುತ್ತಿದ್ದಾನೆ.
 ಶ್ರೀಶುಕ ಉವಾಚ--
ಜಿತಾಸನೋ ಜಿತಶ್ವಾಸೋ ಜಿತಸಂಗೋ ಜಿತೇಂದ್ರಿಯಃ
ಸ್ಥೂಲೇ ಭಗವತೋ ರೂಪೇ ಮನಃ ಸಂಧಾರಯೇದ್ ಧಿಯಾ  ೨೩

ಧ್ಯಾನಕ್ಕೆ ಪೂರ್ವ ಸಿದ್ಧತೆ ಅಗತ್ಯ. ಕೇವಲ ಕಣ್ಮುಚ್ಚಿ ಕುಳಿತಾಗ ಮನಸ್ಸು ಏಕಾಗ್ರವಾಗುವುದಿಲ್ಲ. ಈ ಹಿಂದೆ ಹೇಳಿದಂತೆ ಧ್ಯಾನ ನಡೆಯುವುದು ಚಿತ್ತದಲ್ಲಿ. ಚಿತ್ತ ಸ್ಥಿರವಾಗಬೇಕಾದರೆ ಮನಸ್ಸು ಸ್ಥಿರವಾಗಬೇಕು. ಮನಸ್ಸು ಸ್ಥಿರವಾಗಬೇಕಾದರೆ ಪ್ರಾಣಮಯಕೋಶ ಸ್ಥಿರವಾಗಬೇಕು. ಅದಕ್ಕಾಗಿ ಉಸಿರಾಟದ ಸ್ಥಿರತೆ ಸಾಧಿಸಬೇಕು. ಪ್ರಾಣಮಯಕೋಶ ಸ್ಥಿರವಾಗುವ ಮೊದಲು ಅನ್ನಮಯಕೋಶ ಸ್ಥಿರವಾಗಬೇಕು. ಅಂದರೆ ನಿಶ್ಚಲವಾಗಿ ಕುಳಿತುಕೊಳ್ಳುವ ಅಭ್ಯಾಸ ಮಾಡಬೇಕು. ಅದನ್ನೇ ಇಲ್ಲಿ ಶುಕಾಚಾರ್ಯರು ‘ಜಿತಾಸನಃ’ ಎಂದಿದ್ದಾರೆ. ನಾವು ಎಲ್ಲಿ ಧ್ಯಾನಕ್ಕೆ ಕುಳಿತುಕೊಳ್ಳುತ್ತೇವೆ ಆ ಪರಿಸರ ಶುದ್ಧವಾಗಿರಬೇಕು, ಕುಳಿತುಕೊಳ್ಳುವ ಆಸನ ಶುದ್ಧವಾಗಿರಬೇಕು ಮತ್ತು ನಮ್ಮ ದೇಹ ಶುದ್ಧವಾಗಿರಬೇಕು. ಇದಲ್ಲದೇ ತೀರಾ ಅವಶ್ಯವಾದ ನಾಲ್ಕನೇ ಶುದ್ಧಿ-ಮನಃಶುದ್ಧಿ. ಈ ನಾಲ್ಕು ವಿಧದ ಶೌಚದ ನಂತರ ಮುಂದಿನ ಪ್ರಕ್ರಿಯೆ.
ಮೊದಲನೆಯದಾಗಿ ಧ್ಯಾನಕ್ಕೆ ಕುಳಿತುಕೊಳ್ಳುವ ಪರಿಸರದ ಶುದ್ಧಿ. ಕುಳಿತುಕೊಳ್ಳುವ ಧ್ಯಾನಕೋಣೆ ಏಕಾಂತವಾಗಿರಬೇಕು. ಅಲ್ಲಿ ಶಬ್ದ ಮಾಲಿನ್ಯ ಇರಕೂಡದು. [ಹಕ್ಕಿಗಳ ಚಿಲಿಪಿಲಿ, ವೇದಮಂತ್ರಪಠಣ ಧ್ಯಾನಕ್ಕೆ ಪೂರಕ. ವೇದವನ್ನು ಶ್ರುತಿಬದ್ಧವಾಗಿ ಹಾಡಬೇಕು. ಹೇಗೆ ಸಂಗೀತಕಾರರು ತಂಬೂರ ಶ್ರುತಿಮಾಡಿ ಹಾಡುತ್ತಾರೆ ಹಾಗೆ ಶ್ರುತಿಯೊಂದಿಗೆ ವೇದಮಂತ್ರ ಪಠಣ ಮಾಡಬೇಕು. ಅಪಶ್ರುತಿಯಲ್ಲಿ ಪಠಿಸಿದರೆ  ಅದು ಶುದ್ಧವಾದ ವೇದ ನಾದವಾಗುವುದಿಲ್ಲ ಮತ್ತು ಅದು ಧ್ಯಾನಕ್ಕೆ ಪೂರಕವಲ್ಲ. ಇನ್ನು ಹಕ್ಕಿಗಳು ಎಂದೂ ಅಪಶ್ರುತಿಯಲ್ಲಿ ಹಾಡುವುದಿಲ್ಲ. ಅದು ಭಗವದ್ ದತ್ತವಾಗಿ ಬಂದಿರುವ ಸಹಜ ನಾದವಾಗಿರುವುದರಿಂದ ಅದರಿಂದ ಧ್ಯಾನಕ್ಕೆ ತೊಂದರೆಯಾಗುವುದಿಲ್ಲ]
ಎರಡನೇ ಶುದ್ಧಿ-ದೇಹಶುದ್ಧಿ : ಮುಂಜಾನೆ ಎದ್ದ ನಂತರ ಮೊದಲ ಶೌಚ ಎಂದರೆ ಮಲ-ಮೂತ್ರ ವಿಸರ್ಜನೆ, ದಂತ ಮಾರ್ಜನ. ನಂತರ  ಮುಖ-ಮಾರ್ಜನಮಾಡಿ, ಮಂತ್ರಾಚಮನದಿಂದ ವೇದಪ್ರತಿಪಾದ್ಯನಾದ ಭಗವಂತನನ್ನು ನೆನೆದು, ಸಮಗ್ರ ಸ್ನಾನದಿಂದ ದೇಹಶುದ್ಧಿ ಮಾಡಬೇಕು. ದೇಹಶುದ್ದಿಗೆ ಪ್ರಕೃತಿದತ್ತವಾದ ಸಾಧನ ಮೃತ್ತಿಕೆ. ಶುದ್ಧವಾದ ಸ್ಥಳದಲ್ಲಿರುವ ಕೆಂಪು ಮಣ್ಣನ್ನು ಚೆನ್ನಾಗಿ ಗಾಳಿಸಿದರೆ ಹಿಟ್ಟಿನಂತಹ ಭಾಗ ಕೆಳಕ್ಕೆ ಬೀಳುತ್ತದೆ. ಅದಕ್ಕೆ ನೀರನ್ನು ಸೇರಿಸಿದಾಗ ಅದು ಕೆನೆ(Cream)ಯಂತಾಗುತ್ತದೆ. ಅದನ್ನು ಪಾತ್ರೆಯಲ್ಲಿ ಸಂಗ್ರಹಮಾಡಿಟ್ಟುಕೊಂಡು ಮೈಗೆ ಹಚ್ಚಿಕೊಳ್ಳಬೇಕು. ಸಾಬೂನನ್ನು ಬಳಸದೇ ಶುದ್ಧ ಮೃತ್ತಿಕಾ ಸ್ನಾನ ಮಾಡುವುದರಿಂದ ಯಾವುದೇ ಚರ್ಮರೋಗ ಬರುವುದಿಲ್ಲ, ಚರ್ಮರೋಗ ಇದ್ದರೆ ವಾಸಿಯಾಗುತ್ತದೆ, ಚರ್ಮಕ್ಕೆ ಹೊಳಪು ಬರುತ್ತದೆ ಮತ್ತು ಮನಸ್ಸಿಗೆ ಸ್ಫೂರ್ತಿ ಸಿಗುತ್ತದೆ.
ಮೂರನೆಯದಾಗಿ ಮನಃಶುದ್ಧಿ. ಇದಕ್ಕಾಗಿ ಮುಖ್ಯವಾಗಿ ಯಮ-ನಿಯಮನ ಪಾಲನೆ ಮಾಡಬೇಕು. ಯೋಗಶಾಸ್ತ್ರದಲ್ಲಿ ಯಮ ಎನ್ನುವ ಪದವನ್ನು ವಿಶಿಷ್ಟ ಅರ್ಥದಲ್ಲಿ ಬಳಸಿದ್ದಾರೆ. ಅದು ನಾವು ಮಾಡಬಾರದ ಐದು ನಿಯಮಗಳನ್ನು ಮತ್ತು ಸಾಮಾಜಿಕವಾಗಿ ನಮ್ಮ ನಡೆ ಹೇಗಿರಬೇಕು ಎನ್ನುವುದನ್ನು ವಿವರಿಸುತ್ತದೆ. (೧) ಹಿಂಸೆ, (೨) ಸುಳ್ಳು ಹೇಳುವುದು,(೩) ಕದಿಯುವುದು,(೪) ಅತಿಯಾದ ಕಾಮ ಮತ್ತು (೫) ಇನ್ನೊಬ್ಬರ ಮುಂದೆ ಕೈಚಾಚುವುದು. ಇವು ಭಗವಂತನ ಉಪಾಸನೆಯ ಮಾರ್ಗದಲ್ಲಿ ಬಿಡಬೇಕಾದ ಐದು ನಿಯಮಗಳು. ಈ ಐದರಿಂದ ಸಮಾಜದ ಸ್ವಾಸ್ಥ್ಯ ಕೆಡುವುದಷ್ಟೇ ಅಲ್ಲದೆ, ನಮ್ಮ ಮನಸ್ಸೂ ಕೂಡಾ ಕೆಡುತ್ತದೆ.
ಮುಖ್ಯವಾಗಿ ಮನಃಶುದ್ಧಿಗಾಗಿ ನಾವು ಬಿಡಬೇಕಾಗಿರುವುದು ಕಾಮ-ಕ್ರೋಧ-ಲೋಭಗಳನ್ನು. ಇದನ್ನು ಶ್ರೀಕೃಷ್ಣ ಗೀತೆಯಲ್ಲಿ ಸುಂದರವಾಗಿ ವರ್ಣಿಸಿರುವುದನ್ನು ಕಾಣುತ್ತೇವೆ.  ತ್ರಿವಿಧಂ ನರಕಸ್ಯೇದಂ ದ್ವಾರಂ ನಾಶನಮಾತ್ಮನಃ । ಕಾಮಃ ಕ್ರೋಧಸ್ತಥಾ ಲೋಭಸ್ತಸ್ಮಾದೇತತ್ ತ್ರಯಂ ತ್ಯಜೇತ್ ॥೧೬-೨೧॥ ಇಲ್ಲಿ ಶ್ರೀಕೃಷ್ಣ ಹೇಳುತ್ತಾನೆ: “ಕಾಮ, ಕ್ರೋಧ, ಮತ್ತು ಲೋಭ ಇವು ಆತ್ಮನಾಶದ ಮೂರು ದಾರಿ” ಎಂದು. ಕ್ರೋಧ ಎನ್ನುವುದು ಕಾಮದ ಮರಿ. ನಮಗೆ ಕ್ರೋಧ ಬರುತ್ತಿದೆ ಎಂದರೆ ನಮ್ಮ ಒಳಗೆ ಬಹಳ ಆಸೆಗಳು ಹುದುಗಿವೆ ಎಂದರ್ಥ. ಅದು ನೆರವೇರದೇ ಇದ್ದಾಗ ನಮಗೆ ಕೋಪ ಬರುತ್ತದೆ.  “ಕಾಮ-ಕ್ರೋಧ-ಲೋಭ ಎನ್ನುವುದು ನಮ್ಮನ್ನು ಅಧಃಪಾತಕ್ಕೆ ತಳ್ಳುವ ಮೂರು ನರಕದ ಬಾಗಿಲುಗಳಾಗಿರುವುದರಿಂದ ಅವುಗಳಿಂದ ದೂರವಿರುಎಂದು ಶ್ರೀಕೃಷ್ಣ ನಮ್ಮನ್ನು ಎಚ್ಚರಿಸಿದ್ದಾನೆ. ಇವು ನಮ್ಮ ವ್ಯಕ್ತಿತ್ವವನ್ನು ಹಾಳುಮಾಡುವ ಮೂಲ ಶತ್ರುಗಳು. ಇತರ ಎಲ್ಲಾ ದುರ್ಗುಣಗಳೂ ಇವುಗಳ ಮರಿಗಳು. ಮನುಷ್ಯ ಈ ಮೂರು ದುರ್ಗುಣಗಳಿಂದ ತನ್ನ ನರಕವನ್ನು ತಾನೇ ಸೃಷ್ಟಿಸಿಕೊಳ್ಳುತ್ತಾನೆ. ಈ ಮೂರನ್ನು ಬಿಟ್ಟರೆ ಮನಸ್ಸು ಸ್ವಚ್ಛವಾಗುತ್ತದೆ.
ನಾಲ್ಕನೆಯದಾಗಿ ಆಸನಶುದ್ಧಿ: ಧ್ಯಾನಕ್ಕೆ ಕುಳಿತುಕೊಳ್ಳುವ ಆಸನ ಶುದ್ಧವಾಗಿಲ್ಲದಿದ್ದರೆ ಧ್ಯಾನ ಸಾಧ್ಯವಿಲ್ಲ. ಆಸನ ಸಿದ್ಧಪಡಿಸುವ ಮೊದಲು ಏಕಾಂತ ಸ್ಥಳದಲ್ಲಿ ನೆಲ ಶುದ್ಧವಾಗಿದೆಯೋ ಇಲ್ಲವೋ ಎಂದು ನೋಡಬೇಕು. ನಮಗೆ ತಿಳಿದಂತೆ ಭೂಮಿಯಲ್ಲಿ ಕೆಲವು ಸ್ಥಳಗಳಲ್ಲಿ ಮನಸ್ಸಿಗೆ ಪೋಷಕವಾದ ಕಂಪನವಿದ್ದರೆ ಇನ್ನು ಕೆಲವು ಸ್ಥಳಗಳಲ್ಲಿ ಇರುವುದಿಲ್ಲ. ಎಲ್ಲಿ ಕುಳಿತಾಗ ನಮಗೆ ಹೆಚ್ಚು ಏಕಾಗ್ರತೆ ಸಿಗುತ್ತದೋ ಮತ್ತು ಮನಸ್ಸು ಪ್ರಸನ್ನವಾಗಿ ವಿಷಯಗಳನ್ನು ಯೋಚಿಸುವುದರ ಕಡೆಗೆ ಹರಿಯುತ್ತದೋ, ಅಲ್ಲಿ ಮನಸ್ಸಿಗೆ ಪೂರಕವಾದ ತರಂಗವಿರುತ್ತದೆ ಹಾಗೂ ಅದು ಧ್ಯಾನಕ್ಕೆ ಪೂರಕವಾದ ಸ್ಥಳವಾಗಿರುತ್ತದೆ. ಪುಣ್ಯ ಕ್ಷೇತ್ರಗಳು ಸಾತ್ತ್ವಿಕ ಕಂಪನ ಇರುವ ಕಡೆಯೇ ಇರುವುದರಿಂದ ಅಲ್ಲಿ ಸದಾ ಸಾತ್ತ್ವಿಕ ಕಂಪನವಿರುತ್ತದೆ.
ಸ್ಥಳ ನಿಗದಿಯಾದ ನಂತರ ನೆಲದಲ್ಲಿರುವ, ನಮ್ಮ ಧ್ಯಾನಕ್ಕೆ ಭಾದಕವಾಗುವ ತರಂಗಗಳು ನಮ್ಮ ದೇಹ ಪ್ರವೇಶಿಸದಂತೆ ತಡೆಯಲು ಅಲ್ಲಿ ಆಸನವನ್ನು ಸಿದ್ಧಪಡಿಸಬೇಕಾಗುತ್ತದೆ. ಆಸನದಲ್ಲಿ ಎರಡು ವಿಧ. ಒಂದು ಕುಳಿತುಕೊಳ್ಳುವ ಭಂಗಿ(Posture) ಮತ್ತು ಇನ್ನೊಂದು ಕುಳಿತುಕೊಳ್ಳುವ ಸಾಧನ. ಕುಳಿತುಕೊಳ್ಳುವ ಸಾಧನವಾಗಿ ಪಟ್ಟೆ, ದಾವಳಿ, ದರ್ಭೆಯ ಚಾಪೆ ಬಳಸಬೇಕು ಮತ್ತು ಅದರ ಮೇಲೆ ಕೃಷ್ಣಾಜಿನ(ಸಂಸಾರಿಗಳಿಗೆ) ಅಥವಾ ವ್ಯಾಘ್ರಾಜಿನ(ಸನ್ಯಾಸಿಗಳಿಗೆ) ಬಳಸಬೇಕು. ಒಂದು ವೇಳೆ ಇದ್ಯಾವುದೂ ಸಿಗದಿದ್ದರೆ ಮಣೆಯನ್ನು ಬಳಸಬಹುದು.  ಇಲ್ಲಿ ಕೃಷ್ಣಾಜಿನ ಮತ್ತು ವ್ಯಾಘ್ರಾಜಿನ ಪ್ರಾಣಿಯ ಚರ್ಮವಾಗಿದ್ದರೂ ಕೂಡಾ, ಅದರಲ್ಲಿ ಮನಸ್ಸನ್ನು ಶುದ್ಧಗೊಳಿಸುವ ವಿಶೇಷ ಶಕ್ತಿ ಇರುವುದರಿಂದ ಅದು ಮಡಿ. ಹಾಗಾಗಿ ಅದನ್ನು ಬಳಸುವಾಗ ಅದಕ್ಕೆ ಗೋಮಯವನ್ನು ಸಿಂಪಡಿಸುವ ಅಗತ್ಯವಿಲ್ಲ. ವ್ಯಾಘ್ರಾಜಿನ ನಮ್ಮ ಮನಸ್ಸನ್ನು ಸಂಸಾರದಿಂದ ವಿರಕ್ತಿಯತ್ತ ಕೊಂಡೊಯ್ಯಲು ಪೂರಕವಾಗಿರುವುದರಿಂದ ಗೃಹಸ್ಥನಾದವನು ವ್ಯಾಘ್ರಾಜಿನವನ್ನು ಬಳಸಬಾರದು. ಸಂಸಾರವನ್ನು ತೊರೆದ ನೈಷ್ಠಿಕ ಬ್ರಹ್ಮಚಾರಿಗಳಷ್ಟೇ ವ್ಯಾಘ್ರಾಜಿನ ಬಳಸುವುದು.
ಈ ರೀತಿಯ ಆಸನವನ್ನು ತಯಾರಿಸಿಕೊಂಡ ನಂತರ ಸ್ವಚ್ಛವಾದ ಧ್ಯಾನಕ್ಕೆ ಅನುಕೂಲವಾದ  ಭಂಗಿ(Posture)ಯಲ್ಲಿ ನೆಟ್ಟಗೆ ಕುಳಿತುಕೊಳ್ಳಬೇಕು. ನಮಗೆ ಸಾಧ್ಯವಾಗದ ಆಸನದಲ್ಲಿ ಬಲವಂತವಾಗಿ ಕೂರುವುದು ಧ್ಯಾನಕ್ಕೆ ಪೂರಕವಲ್ಲ. ಸಾಮಾನ್ಯವಾಗಿ ನಾಲ್ಕು ಆಸನಗಳನ್ನು ವಿಶೇಷವಾಗಿ ಧ್ಯಾನಕ್ಕೆ ಬಳಸುತ್ತಾರೆ. ೧. ಪದ್ಮಾಸನ, ೨. ವೀರಾಸನ, ೩.  ಸ್ವಸ್ತಿಕಾಸನ ಮತ್ತು ೪. ವಜ್ರಾಸನ. ಹೀಗೆ ಒಳ್ಳೆಯ ಪರಿಸರದಲ್ಲಿ, ಸ್ವಚ್ಛವಾದ ಮೈ-ಮನಗಳ ಜೊತೆಗೆ , ಸ್ವಚ್ಛವಾದ ಕೋಣೆಯಲ್ಲಿ, ಶುದ್ಧವಾದ ಆಸನದಮೇಲೆ, ಚಲನೆ ಇಲ್ಲದೆ ನಿಶ್ಚಲವಾಗಿ ಧ್ಯಾನಕ್ಕೆ ಕುಳಿತುಕೊಳ್ಳಬೇಕು.    

No comments:

Post a Comment