Saturday, October 12, 2013

Shrimad BhAgavata in Kannada -Skandha-02-Ch-01(5)

ಈ ಹಿಂದೆ ಹೇಳಿದಂತೆ-ಮನಸ್ಸನ್ನು ಬುದ್ಧಿಶಕ್ತಿಯಿಂದ ನಿಯಂತ್ರಣ ಮಾಡುವುದು ಅಷ್ಟು ಸುಲಭದ ವಿಷಯವಲ್ಲ. ಅನೇಕ ಮಂದಿಗೆ ಭೌದ್ಧಿಕ ಚಿಂತನೆಯೇ ಸಾಧ್ಯವಾಗುವುದಿಲ್ಲ. ಭೌದ್ಧಿಕ ಚಿಂತನೆ ಮಾಡಿದರೂ ಸಹ, ಅಲ್ಲಿ ಕಂಡ ಸತ್ಯವನ್ನು ಆಚರಣೆಗೆ ತರುವುದು ಕಷ್ಟವಾಗುತ್ತದೆ. ಇಂದ್ರಿಯ ಸೆಳೆತ ಅದೆಷ್ಟು ಬಲವಾಗಿದೆ ಎಂದರೆ, ಕೆಲವೊಮ್ಮೆ  ಅದಕ್ಕೆ ಕಡಿವಾಣ ಹಾಕಿ ನಿಯಂತ್ರಿಸುವುದು ಸಾಧ್ಯವಾಗುವುದಿಲ್ಲ. ಇದಕ್ಕಾಗಿಯೇ ಸಮಾಜದಲ್ಲಿ ಶಾಸನಗಳನ್ನು ತರಲಾಯಿತು. ಇಂದು ನಾವು ಹೆಚ್ಚು ಪಾಪಗಳನ್ನು ಮಾಡದೇ ಇರುವುದು ಕಾನೂನಿಗೆ ಹೆದರಿ ಹೊರತು, ಭೌದ್ಧಿಕ ಚಿಂತನೆಯಿಂದಲ್ಲ. ಆದರೆ ನಿಜವಾಗಿ ಇರಬೇಕಾಗಿರುವುದು ವಿವೇಕ, ಭಯವಲ್ಲ. ಏಕೆಂದರೆ ಭಯದಿಂದ ಮಾಡುವುದು ಶಾಶ್ವತವಲ್ಲ. ವಿವೇಕದ ಸಾರಥ್ಯ ಸಿಗುವ ತನಕ  ಮನಸ್ಸೆಂಬ ಕಡಿವಾಣವನ್ನು ಗಟ್ಟಿಯಾಗಿ ಹಿಡಿದು, ಇಂದ್ರಿಯವೆಂಬ ಕುದುರೆಗಳನ್ನು ನಿಯಂತ್ರಿಸುವುದು ಕಷ್ಟ.  ಆದ್ದರಿಂದ ಸಾಧನಾಮಾರ್ಗದಲ್ಲಿ ನಮಗಿರುವುದು ಒಂದೇ ಒಂದು ದಾರಿ. ನಾವು ಜೀವನದ ಸತ್ಯದ ಬಗ್ಗೆ ಗಂಭೀರ ಚಿಂತನೆ ಮಾಡಬೇಕು. ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ಚಿಂತಿಸಿ, “ಸರಿಯಾದುದ್ದನ್ನೇ ಮಾಡಬೇಕು” ಎನ್ನುವ ನಿರ್ಧಾರ ಮಾಡಬೇಕು. ಅದೇ ವಿವೇಕ. ಈ ವಿವೇಕದ ಕೈಯಲ್ಲಿ  ನಾವು ನಮ್ಮ ಬದುಕಿನ ಸಾರಥ್ಯವನ್ನು ಕೊಟ್ಟಾಗ, ಇಂದ್ರಿಯಗಳು ದಾರಿ ತಪ್ಪುವುದು ಕಡಿಮೆಯಾಗುತ್ತದೆ. ಇದನ್ನೇ ಇಲ್ಲಿ ಶುಕಾಚಾರ್ಯರು ‘ಬುದ್ಧಿಸಾರಥಿ’ ಎಂದಿದ್ದಾರೆ. ಈ ರೀತಿ ಮನಸ್ಸಿನ ನಿಯಂತ್ರಣ ಸಾಧಿಸಲು ನಮಗೆ ಅನೇಕ ಜನ್ಮಗಳೇ ಬೇಕಾಗಬಹುದು. ಆದರೆ ಈ ದಿಕ್ಕಿನಲ್ಲಿ ಮಾಡುವ ಸಾಧನೆ ವ್ಯರ್ಥವಲ್ಲ. ಅದು ಜನ್ಮ-ಜನ್ಮಾಂತರವಾಗಿ ಮುಂದುವರಿಯುವ ಸಾಧನೆ.
ಶುಕಾಚಾರ್ಯರು ಹೇಳುತ್ತಾರೆ: “ಸಂಕಲ್ಪ ಮತ್ತು ವಿಕಲ್ಪ ಎನ್ನುವುದು ಮನಸ್ಸಿನ ಕರ್ಮಗಳು” ಎಂದು.  ಮನುಷ್ಯನ ಬದುಕೆಲ್ಲಾ ಆಸೆಗಳ ಸರಮಾಲೆ(ಸಂಕಲ್ಪ-Desire). ಏನೇನನ್ನೋ ಬಯಸುವುದು, ನಂತರ ಯಾವುದು ಬೇಕು, ಯಾವುದು ಬೇಡ ಎಂದು ತಿಳಿಯದೆ ಗೊಂದಲಕ್ಕೊಳಗಾಗುವುದು(ವಿಕಲ್ಪ-Confusion). ಖಚಿತವಾದ ತಿಳುವಳಿಕೆ ಇಲ್ಲದೇ ಇರುವುದರಿಂದ ಎಲ್ಲವೂ ಗೊಂದಲ. ನಮ್ಮ ಇಂದಿನ ಅನುಷ್ಠಾನಗಳೂ ಕೂಡಾ ಹೀಗೆ. ಅವು ಬುದ್ಧಿಯಿಂದ ಬಂದವುಗಳಲ್ಲ. ಅವು ಕೇವಲ ಮನಸ್ಸಿನ ಗೊಂದಲಗಳು.  ಕೆಲವು ಕಡೆ ಕೆಲವು ಆಚರಣೆಗಳಿರುತ್ತವೆ. ಅವುಗಳಿಗೆ ಶಾಸ್ತ್ರದ ಆಧಾರ ಇರುವುದಿಲ್ಲ. ಆದರೆ ಒಬ್ಬರು ಮಾಡುವುದನ್ನು ನೋಡಿ ಇನ್ನೊಬ್ಬರು ಮಾಡುತ್ತಾರೆ. ಮಾಡದಿದ್ದರೆ ಏನಾಗುತ್ತದೋ ಎನ್ನುವ ಭಯದಿಂದ ಮತ್ತೊಬ್ಬರು ಅದನ್ನು ಅನುಸರಿಸುತ್ತಾರೆ! ಈ ರೀತಿ ನಾವು ಮಾಡುವ ಧಾರ್ಮಿಕ ಕ್ರಿಯೆಗಳೂ ಕೂಡಾ ಬರೀ ಗೊಂದಲದ ಗೂಡಾಗುತ್ತಿದೆ.  ಅಲ್ಲಿ ಖಚಿತವಾದ ತೀರ್ಮಾನವಿರುವುದಿಲ್ಲ. ಇದರಿಂದಾಗಿ ಯಾವುದು ನಿಜವಾದ ಧರ್ಮ ಎನ್ನುವ ತಿಳುವಳಿಕೆ ಇಲ್ಲದೆ, ಸ್ವಚ್ಛವಾದ ಅನುಷ್ಠಾನವಿಲ್ಲದೆ, ಧರ್ಮಪ್ರಜ್ಞೆಯೇ ಇಲ್ಲದೆ, ಗೊಂದಲದಲ್ಲಿ ನಾವು ಬದುಕುತ್ತಿರುತ್ತೇವೆ. ಇನ್ನು ಕೆಲವೊಮ್ಮೆ ಯಾವುದು ಸರಿ, ಯಾವುದು ತಪ್ಪು ಎನ್ನುವುದು ತಿಳಿದಿದ್ದರೂ ಕೂಡಾ, ನಮ್ಮ ಮನಸ್ಸು ನಮ್ಮನ್ನು ಬೇಡವಾದ ಕಡೆಗೇ ಎಳೆದೊಯ್ಯುತ್ತದೆ. ಇದಕ್ಕೆ ಕಾರಣ ನಾವು ನಮ್ಮ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳು. ಆ ಕರ್ಮಫಲಕ್ಕನುಗುಣವಾಗಿ ನಾವು ದಾರಿ ತಪ್ಪುತ್ತೇವೆ.
ಶುಕಾಚಾರ್ಯರು ಹೇಳುತ್ತಾರೆ: “ಅಶುಭದ ಕಡೆಗೆ ಹೊಗುವ ಮನಸ್ಸನ್ನು ಶುಭದತ್ತ ತಿರುಗಿಸು” ಎಂದು. ಎಲ್ಲಕ್ಕಿಂತ ಪವಿತ್ರವಾದುದು, ಎಲ್ಲಕ್ಕಿಂತ ಮಂಗಳವಾದುದು ಎಂದರೆ ಭಗವಂತ. ಅದೇ ಶುಭ. ನಾವು  ನಮ್ಮ ಮನಸ್ಸಿನಲ್ಲಿ ತುಂಬಿರುವ ಕೊಳೆಯನ್ನು ತೊಳೆದು, ಅಲ್ಲಿ  ಶುಭ್ರವಾದ ಭಗವಂತನನ್ನು ತುಂಬಿಸುವ ಪ್ರಯತ್ನ ಮಾಡಬೇಕು. ಒಳಗಿರುವ ಕೊಳೆಯನ್ನು ತೊಳೆಯದೇ ಒಳ್ಳೆಯದನ್ನು ತುಂಬಿಸುವ ಪ್ರಯತ್ನ ಕೆಸರಿನ ಪಾತ್ರೆಗೆ ಹಾಲನ್ನು ತುಂಬಿಸಿದಂತೆ ವ್ಯರ್ಥವಾಗುತ್ತದೆ. ಹಾಗಾಗಿ ಮೊದಲು ವಿವೇಕದಿಂದ ಮನಸ್ಸನ್ನು ಸ್ವಚ್ಛಗೊಳಿಸಿ, ಸ್ವಚ್ಛವಾದ ಮನಸ್ಸಿನಿಂದ ಮಾಂಗಲಿಕವಾದ ಭಗವಂತನ ಚಿಂತನೆ ಮಾಡಬೇಕು. 

No comments:

Post a Comment