Saturday, October 5, 2013

Shrimad BhAgavata in Kannada -Skandha-02-Ch-01(3)

ಅಂತಕಾಲೇ ತು ಪುರುಷ ಆಗತೇ ಗತಸಾಧ್ವಸಃ
ಛಿಂದ್ಯಾದಸಂಗಶಸ್ತ್ರೇಣ ಸ್ಪೃಹಾಂ ದೇಹೇSನು ಯೇ ಚ ತಮ್ ೧೫

“ಮೊತ್ತಮೊದಲು ಸಾವಿನ ಭಯ ಬಿಟ್ಟುಬಿಡಬೇಕು”  ಎಂದಿದ್ದಾರೆ ಶುಕಾಚಾರ್ಯರು.  ಶಾಸ್ತ್ರಕಾರರು ಹೇಳುವಂತೆ: “ಗೃಹಿತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್”- ಯಾವ ಕ್ಷಣಕ್ಕೂ ನಾವು ಮೃತ್ಯು ವಶವಾಗಬಹುದು ಎಂದುಕೊಂಡು ನಾವು ಧರ್ಮಾಚರಣೆ ಮಾಡಬೇಕು. ಅಂತಕಾಲ ಎನ್ನುವುದು ಹೇಳಿಕೊಂಡು ಬರುವುದಿಲ್ಲ. ಅದು ಯಾವ ಕ್ಷಣದಲ್ಲಿ ಕೂಡಾ ಬರಬಹುದು. ಬದುಕು ಎಂದರೆ ಅದು ಸಾವಿನ ಸಿದ್ಧತೆ. ಅನಿವಾರ್ಯವಾಗಿರುವ ಸಾವಿನ ಬಗ್ಗೆ ಎಂದೂ ಭಯಪಡಬಾರದು.
ಸತ್ತ ನಂತರ ಏನು ಎನ್ನುವುದು ತಿಳಿದಿಲ್ಲದೇ ಇರುವುದೇ ಸಾವಿನ ಭಯಕ್ಕೆ ಕಾರಣ. ಅರಿವೇ ಅಭಯ, ಅಜ್ಞಾನವೇ ಭಯ. ಮೊತ್ತಮೊದಲು ನಾವು ತಿಳಿಯಬೇಕಾಗಿರುವುದು ಸಾವು ಭಯಾನಕವಲ್ಲ ಎನ್ನುವ ವಿಚಾರವನ್ನು. ಮರಣಂ ಪ್ರಕೃತಿ ಶರೀರಿಣಾಂ ವಿಕೃತಿ ಜೀವನಂ ಉಚ್ಯತೇ. ಸಾವು  ಅನ್ನುವುದು ಸಹಜ ಸ್ಥಿತಿ, ಬದುಕೇ ವಿಕೃತಿ. ಸ್ಥೂಲ ಶರೀರದೊಳಗಿರುವ ಜೀವ ಪಂಜರದೊಳಗಿರುವ ಗಿಳಿಯಂತೆ. ಆದರೆ ಸೂಕ್ಷ್ಮಶರೀರ ಎಂದರೆ ಪಂಜರವಿಲ್ಲ, ಅದು ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಪಕ್ಷಿ.  ಜೀವ ತನ್ನ ಸಹಜ ಸ್ಥಿತಿಗೆ ಮರಳುವುದು ಸಾವು ಎಂದು ತಿಳಿದಾಗ ಸಾವಿನ ಭಯವಿಲ್ಲ.

ಅಭ್ಯಸೇನ್ಮನಸಾ ಶುದ್ಧಂ ತ್ರಿವೃತ್ ಬ್ರಹ್ಮಾಕ್ಷರಂ ಪರಮ್
ಮನೋ ಯಚ್ಛೇಜ್ಜಿತಶ್ವಾಸೋ ಬ್ರಹ್ಮಬೀಜಮವಿಸ್ಮರನ್ ೧೭

ಸಾಧನೆ ಹೇಗೆ ಮಾಡಬೇಕು ಎನ್ನುವುದನ್ನು ವಿವರಿಸುತ್ತಾ ಶುಕಾಚಾರ್ಯರು ಹೇಳುತ್ತಾರೆ: “ಮನಸ್ಸಿನಲ್ಲಿ ಮೂರು ಮಡಿಕೆಯ(3-fold) ಅಕ್ಷರವನ್ನು ಧ್ಯಾನ ಮಾಡು” ಎಂದು.  ಇಲ್ಲಿ ಮೂರು ಮಡಿಕೆಯ ಅಕ್ಷರ(ತ್ರಿವೃತ್) ಅಂದರೆ ಅ-ಕಾರ, ಉ-ಕಾರ ಮತ್ತು ಮ-ಕಾರದಿಂದ ಕೂಡಿದ ಓಂಕಾರ. ಈ ಓಂಕಾರವನ್ನು ಶುಕಾಚಾರ್ಯರು ‘ಬ್ರಹ್ಮಾಕ್ಷರಂ ಪರಮ್’  ಎಂದಿದ್ದಾರೆ. ಅಂದರೆ ಇದು ಭಗವಂತನನ್ನು ಹೇಳುವ ಅಕ್ಷರಗಳಲ್ಲೇ ಅತ್ಯಂತ ಶ್ರೇಷ್ಠವಾದ ಅಕ್ಷರ ಹಾಗೂ ಭಗವಂತನನ್ನು ಚಿಂತನೆ ಮಾಡಲು ಇರತಕ್ಕಂತಹ ಮಂತ್ರಗಳಲ್ಲೇ ಅತ್ಯಂತ ಶ್ರೇಷ್ಠ ಮಂತ್ರ. ಓಂಕಾರ ಎನ್ನುವುದು ಇಡೀ ಉಪಾಸನೆಯ ಬೆಳವಣಿಗೆಯ ಬೀಜ. ಹಾಗಾಗಿ ಓಂಕಾರದಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿದರೆ  ಎಲ್ಲಾ ಸತ್ಯಗಳೂ ಒಂದೊಂದಾಗಿ ತೆರೆದುಕೊಳ್ಳುತ್ತವೆ.
ಓಂಕಾರದಲ್ಲಿರುವ ಮೂರು ಅಕ್ಷರಗಳಲ್ಲಿ ಮೊದಲನೇ ಅಕ್ಷರ ಅ-ಕಾರ. ‘ಅ’ ಎನ್ನುವುದು ‘ಆಪ್ತಿ’  ಎನ್ನುವ ಪದದ ಸಂಕ್ಷೇಪಾಕ್ಷರ(abbreviation). ಬಾಹ್ಯ ಪ್ರಪಂಚದೊಂದಿಗೆ ನಮ್ಮ ಸಂಪರ್ಕವೇ ಆಪ್ತಿ. ಅಂದರೆ ಇದು ಮೂರು ಅವಸ್ಥೆಗಳಲ್ಲಿ(ಎಚ್ಚರ, ಕನಸು ಮತ್ತು  ನಿದ್ರೆ)  ಮೊದಲನೆಯದಾದ ಎಚ್ಚರವನ್ನು ಹೇಳುತ್ತದೆ. ನಮ್ಮ ಎಚ್ಚರಾವಸ್ಥೆಯನ್ನು ನಿಯಂತ್ರಿಸುವವನು ಭ್ರೂಮಧ್ಯದಲ್ಲಿ ಬಲಗಣ್ಣಿನ ಸಮೀಪದ ಶಕ್ತಿ ಕೇಂದ್ರದಲ್ಲಿ ನೆಲೆಸಿರುವ,       ಅ-ಕಾರವಾಚ್ಯನಾದ, ‘ವಿಶ್ವ’ ನಾಮಕ ಭಗವಂತ. ಇದು ಭಗವಂತನ ಅನಿರುದ್ಧ ರೂಪ. ಈ ಸ್ಥಿತಿಯಲ್ಲಿ ಪ್ರಪಂಚದ ಅರಿವಿಗೆ ಯಾವುದೇ ನಿರೋಧವಿಲ್ಲ  ಇದು ಎಲ್ಲಾ ಇಂದ್ರಿಯಗಳು ತೆರೆದುಕೊಂಡಿರುವ ಸ್ಥಿತಿಯಾಗಿರುವುದರಿಂದ ನಾವು ನಮ್ಮ ಇಂದ್ರಿಯಗಳಿಂದ ಅನುಭವವನ್ನು ಪಡೆಯುತ್ತೇವೆ. ಆದರೆ ಈ ಇಂದ್ರಿಯಗಳ ಒಡೆತನ ನಮಗಿಲ್ಲ. ಉದಾಹರಣೆಗೆ ಕಣ್ಣಿನಿಂದ ಒಂದು ವಸ್ತುವನ್ನು ನಾವು ನೋಡುತ್ತೇವೆ. ಈ ರೀತಿ ನೋಡಬೇಕಾದರೆ ಅಲ್ಲಿ ಕನಿಷ್ಠ ಮೂರು ಸಂಗತಿಗಳು ಬೇಕಾಗುತ್ತದೆ. ೧. ನಮಗೆ ಕಾಣುವ ಕಣ್ಣಿರಬೇಕು. ೨. ಕಾಣುವಂತಹ ರೂಪ ನಮ್ಮ ಮುಂದಿರಬೇಕು. ೩. ರೂಪಕ್ಕೂ ಕಣ್ಣಿಗೂ ಸಂಪರ್ಕವಾಗುವ ಬೆಳಕಿರಬೇಕು.  ಈ ಮೂರರಲ್ಲಿ ಯಾವುದರ ಒಡೆತನವೂ ನಮಗಿಲ್ಲ. ನಾವು ಹುಟ್ಟುವಾಗಲೇ ಆ ಭಗವಂತ ನಮಗೆ ಕಣ್ಣನ್ನು ಕಾಣಿಕೆಯಾಗಿ ಕೊಟ್ಟಿರುವುದರಿಂದ ಅದು ನಮ್ಮಲ್ಲಿದೆ(ಯಾವುದೇ ಕ್ಷಣದಲ್ಲಿ ಆತ ಅದನ್ನು ಹಿಂದೆ ಪಡೆಯಬಹುದು ಎನ್ನುವ ಎಚ್ಚರ ನಮ್ಮಲ್ಲಿರಬೇಕು). ನಮ್ಮ ಸುತ್ತ ರೂಪಾತ್ಮಕ ಪ್ರಪಂಚವನ್ನು ಭಗವಂತ  ಸೃಷ್ಟಿಸಿರುವುದರಿಂದ ನಾವು ಅದನ್ನು ನೋಡುಬಹುದು. ನಮ್ಮ ಕಣ್ಣು ರೂಪವನ್ನು ಗ್ರಹಿಸುವುದಕ್ಕೋಸ್ಕರ ಮುಗಿಲ ಕಣ್ಣಾದ ಸೂರ್ಯನನ್ನು ಭಗವಂತ ಇಟ್ಟಿರುವುದರಿಂದ ರೂಪ ಕಣ್ಣಿಗೆ ಕಾಣಿಸುತ್ತದೆ. ಇದೆಲ್ಲವನ್ನೂ ತಿಳಿದಾಗ, ಎಚ್ಚರದ ಸ್ಥಿತಿಯಲ್ಲಿನ ಇಂದ್ರಿಯಾನುಭವದ ಹಿಂದಿನ ಆ ಭಗವದ್  ಶಕ್ತಿಯ ಮಹತ್ವ ತಿಳಿಯುತ್ತದೆ. ಇಂತಹ ವಿಶ್ವ ನಾಮಕ ಭಗವಂತನನ್ನು ಓಂಕಾರದಲ್ಲಿ ಧ್ಯಾನಿಸುವುದೇ ಅ-ಕಾರೋಪಾಸನೆ.
ಓಂಕಾರದಲ್ಲಿನ ಎರಡನೇ ಅಕ್ಷರವಾದ ‘ಉ’ ಉತ್ಕರ್ಷ ಎನ್ನುವುದರ  ಸಂಕ್ಷೇಪಾಕ್ಷರ. ಉತ್ಕರ್ಷ ಎಂದರೆ ಒಳಕ್ಕೆ ಸೆಳೆದುಕೊಳ್ಳುವುದು. ಎಲ್ಲಾ ಇಂದ್ರಿಯಗಳನ್ನು ಒಳಕ್ಕೆ ಸೆಳೆದುಕೊಂಡು ಒಳಗಿನ ಪ್ರಪಂಚದಲ್ಲಿ ಕನಸು ಕಾಣುವುದೇ ಎಚ್ಚರದ ನಂತರದ ಎರಡನೇ ಅವಸ್ಥೆ. ಯ ಏಷ ಸುಪ್ತೇಷು ಜಾಗರ್ತಿ ಕಾಮಂ ಕಾಮಂ ಪುರುಷೋ ನಿರ್ಮಿಮಾಣಃ (ಕಠ-೨-೨-೮)    ನಾವು ಮಲಗಿರುವಾಗ ಎಚ್ಚರದಿಂದಿದ್ದು, ನಮ್ಮ ಗಂಟಲಿನಲ್ಲಿ ವಿಶುದ್ಧಿಚಕ್ರದ ಒಂದು ಸೂಜಿ ಮೊನೆಯಷ್ಟು ಸೂಕ್ಷ್ಮ ಪರದೆಯಲ್ಲಿ    ನಮಗೆ ಕನಸಿನ ಪ್ರಪಂಚವನ್ನು ತೋರುವವನು ಉ-ಕಾರ ವಾಚ್ಯ ತೈಜಸ ನಾಮಕ ಭಗವಂತ. ಇದು ಭಗವಂತನ ಪ್ರದ್ಯುಮ್ನ ರೂಪ. ಒಳಗೆ ಬೆಳಕು(ದ್ಯುಮ್ನ) ಹಾಯಿಸಿ ಕನಸು ಕಾಣಿಸುವ ರೂಪವಿದು. ಕನಸು ಕಾಲದ ಬೇಲಿಯನ್ನು ಮೀರಿ ಕೆಲಸ ಮಾಡಬಲ್ಲುದು. ಅಂದರೆ ಮುಂದೆ ನಡೆಯುವ ವಿಷಯ ಇಂದು ಕನಸಿನಲ್ಲಿ ಬಂದರೆ ಆಶ್ಚರ್ಯವಿಲ್ಲ. ಕನಸಿನ ಅದ್ಭುತ  ಪ್ರಪಂಚವನ್ನು ನಮ್ಮ ಮುಂದೆ ತೆರೆದಿಡುವ ಭಗವಂತನ ಲೀಲೆಯನ್ನು  ಬೃಹದಾರಣ್ಯಕ ಉಪನಿಷತ್ತು  ಸುಂದರವಾಗಿ ಚಿತ್ರಿಸುತ್ತದೆ. ಅಲ್ಲಿ ಹೇಳುತ್ತಾರೆ:  “ನ ತತ್ರ ರಥಾಃ ನ ರಥಯೋಗಾ ನ ಪಂಥಾನೋ ಭವಂತಿ ಅಥ ರಥಾನ್ ರಥಯೋಗಾನ್  ಪಥಃ ಸೃಜತೇ; ನ ತತ್ರಾನಂದಾ ಮುದಃ ಪ್ರಮುದೋ ಭವಂತಿ, ಅಥಾನಂದಾನ್  ಮುದಃ ಪ್ರಮುದಃ ಸೃಜತೇ; ನ ತತ್ರ ವೇಶಾಂತಾಃ ಪುಷ್ಕರಿಣ್ಯಃ ಸ್ರವಂತ್ಯೋ ಭವಂತಿ, ಅಥ ವೇಶಾಂತಾನ್ ಪುಷ್ಕರಿಣೀಃ ಸ್ರವಂತೀಃ ಸೃಜತೇ; ಸ ಹಿ ಕರ್ತಾ” (೪-೩-೧೦).  ಅಂದರೆ- ಅಲ್ಲಿ ರಥವಿಲ್ಲ-ಕುದುರೆಗಳಿಲ್ಲ-ರಸ್ತೆಗಳಿಲ್ಲ, ಆನಂದ-ಹರ್ಷ-ಪ್ರಮೋದಗಳಿಲ್ಲ, ಕೆರೆ-ಸರೋವರ-ನದಿಗಳಿಲ್ಲ. ಆದರೆ ಎಲ್ಲವನ್ನೂ ಸೃಷ್ಟಿಮಾಡಿ ನಮ್ಮ ಅನುಭವಕ್ಕೆ ಬರುವಂತೆ ಮಾಡುತ್ತಾನೆ ಕನಸಿನ ನಿಯಾಮಕನಾದ ತೈಜಸ ನಾಮಕ ಭಗವಂತ. ಇಂತಹ ಉ-ಕಾರ ವಾಚ್ಯ ಭಗವಂತನನ್ನು ಓಂಕಾರದಲ್ಲಿ ಧ್ಯಾನಿಸುವುದೇ  ಉ-ಕಾರೋಪಾಸನೆ.
ಓಂಕಾರದಲ್ಲಿನ ಮೂರನೇ ಅಕ್ಷರ ಮ-ಕಾರ. ಇದು ಮಾನ(ಅಂತರ್ಗತ) ಎನ್ನುವುದರ ಸಂಕ್ಷೇಪಾಕ್ಷರ. ಮಾನ ಎಂದರೆ ಹುದುಗಿಕೊಳ್ಳುವುದು. ಹೃದಯದಲ್ಲಿರುವ ಜೀವವನ್ನು  ಹೃದಯದಲ್ಲೇ ನೆಲೆಸಿರುವ ಮ-ಕಾರವಾಚ್ಯ ಭಗವಂತ  ತನ್ನ ಮಡಿಲಿನಲ್ಲಿ ಹುದುಗಿಸಿಕೊಳ್ಳುವ ಸ್ಥಿತಿ- ನಮ್ಮ ನಿದ್ರಾಸ್ಥಿತಿ.  ಈ ಸ್ಥಿತಿಯಲ್ಲಿ ನಮ್ಮ ಯಾವ ಬಾಹ್ಯೇಂದ್ರಿಯಗಳೂ ಕೆಲಸ ಮಾಡುವುದಿಲ್ಲ. ಜೀವನನ್ನು ತನ್ನೊಳಗೆ ಕರ್ಷಣೆಮಾಡಿ ನಿದ್ರೆ ಬರಿಸುವ ಸಂಕರ್ಷಣ ಈ ಸ್ಥಿತಿಯ ನಿಯಾಮಕ. ಹೇಗೆ ತಾಯಿಯ ಮಡಿಲಲ್ಲಿರುವ ಮಗು ಭಯಾತೀತವಾಗಿರುತ್ತದೋ ಹಾಗೇ, ಭಗವಂತನ ಮಡಿಲಲ್ಲಿ ನಿದ್ರಿಸುವ ಜೀವಕ್ಕೆ ಭಯ ಮತ್ತು ದುಃಖದ ಸ್ಪರ್ಶವಿಲ್ಲ. ನಿದ್ರೆಯಲ್ಲಿ ನಮಗೆ ‘ನನ್ನದು’ ಎನ್ನುವುದರ ಅರಿವಿಲ್ಲದಿರುವುದರಿಂದ ಭಯವಿಲ್ಲ. ನಾವು ಜೀವನದಲ್ಲಿ ದುಃಖಾತೀತರಾಗಬೇಕೆಂದರೆ ಎಚ್ಚರದಲ್ಲೂ ಕೂಡಾ ಈ ‘ನನ್ನ’ ಎನ್ನುವ ಕುಕ್ಕುಲತೆ(attachment-ಮೋಹ-ವಾಂಛಲ್ಯ)ಯನ್ನು ಕಡಿಮೆ ಮಾಡಿಕೊಳ್ಳಬೇಕು. ಇದು ಭಾರತೀಯ ತತ್ತ್ವಶಾಸ್ತ್ರ ಹೇಳುವ ಅಪೂರ್ವ ಮನಃಶಾಸ್ತ್ರ. ನಿದ್ರೆಯ ನಿಯಾಮಕ, ಮ-ಕಾರವಾಚ್ಯ, ಪ್ರಾಜ್ಞ ನಾಮಕ ಭಗವಂತನನ್ನು ಓಂಕಾರದಲ್ಲಿ ಉಪಾಸನೆ ಮಾಡುವುದೇ ಮ-ಕಾರೋಪಾಸನೆ.
ಒಟ್ಟಿನಲ್ಲಿ ಹೇಳಬೇಕೆಂದರೆ:  ಬ್ರಹ್ಮನನ್ನು ಹೇಳುವ ಅಕ್ಷರದಿಂದ (ಓಂಕಾರದಿಂದ) ಅಕ್ಷರನಾದ ಬ್ರಹ್ಮನನ್ನು ಧ್ಯಾನದಲ್ಲಿ ತಿಳಿಯಬೇಕು.  ಮೂರು ಕಾಲದಲ್ಲಿ ಹಾಗೂ ಮೂರು ಲೋಕದಲ್ಲಿ ತುಂಬಿರುವ, ಮೂರು ಅವಸ್ಥೆಗಳನ್ನು ನಿಯಂತ್ರಿಸುವ,  ಸೃಷ್ಟಿ-ಸ್ಥಿತಿ-ಸಂಹಾರಕರ್ತನಾದ, ಮೂರು ವೇದಗಳಿಂದ ಪ್ರತಿಪಾದ್ಯನಾದ ಭಗವಂತನನ್ನು ಧ್ಯಾನದಲ್ಲಿ ಕಾಣುವ ಪ್ರಯತ್ನವನ್ನು ನಾವು ಮಾಡಬೇಕು. ಓಂಕಾರ ವಾಚ್ಯನಾದ ಭಗವಂತನ ಗುಣವನ್ನು ಓಂಕಾರದ ಒಂದೊಂದು ಅಕ್ಷರದಲ್ಲಿ ಹಾಗೂ ಸಮಷ್ಟಿಯಾಗಿ ಅನುಸಂಧಾನ ಮಾಡಬೇಕು.
ಓಂಕಾರಕ್ಕಿರುವುದು ಒಂದೇ ಮುಖವಲ್ಲ. ಅದಕ್ಕೆ ಅನೇಕ ಮುಖಗಳಿವೆ. ಮಾಂಡೂಕ್ಯ ಉಪನಿಷತ್ತಿನಲ್ಲಿ ಹೇಳುವಂತೆ: ಅಮಾತ್ರೋSನಂತಮಾತ್ರಶ್ಚ ದ್ವೈತಸ್ಸ್ಯೋಪಶಮಃ ಶಿವಃ   ಓಂಕಾರೋ ವಿದಿತೋ ಏನ ಸ ಮುನಿರ್ನೇತಾರೋ ಜನಃ  ಇಲ್ಲಿ ಹೇಳುವಂತೆ-ಓಂಕಾರ ‘ಅನಂತಮಾತ್ರ’.  ಮಾತ್ರೆಗಳು ಎಂದರೆ ರೂಪಗಳು. ಅನಂತ ರೂಪನಾದ ಭಗವಂತನ ಅನಂತ ರೂಪಗಳನ್ನೂ  ಓಂಕಾರ ಹೇಳುತ್ತದೆ. ಹಾಗಾಗಿ ಓಂಕಾರದ ಅರ್ಥವೂ ಅನಂತ. ಓಂಕಾರದ ಒಂದು ಅಧಿಷ್ಠಾನದಲ್ಲಿ ಭಗವಂತನ ಅನಂತ ರೂಪಗಳ ಚಿಂತನೆ ಸಾಧ್ಯ. ಎಚ್ಚರ-ಕನಸು-ನಿದ್ರೆಯನ್ನು ನಿಯಂತ್ರಿಸುವ ಭಗವಂತನನ್ನು ನಾವು ಈ ಮೂರು ಅವಸ್ಥೆಗಳಿನ್ದಾಚೆಗೆ ಹೋಗಿ ಧ್ಯಾನ ಮಾಡಬೇಕು. ಓಂಕಾರದ ನಾದದಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿ, ನಾದವಾಚ್ಯನಾದ ಭಗವಂತನಲ್ಲಿ ಮನಸ್ಸನ್ನು ನೆಲೆಗೊಳಿಸಬೇಕು.  ಎಚ್ಚರ-ಕನಸು-ನಿದ್ರೆಯಿಂದಾಚೆಗಿನ ನಾಲ್ಕನೇ ಸ್ಥಿತಿ ‘ತುರಿಯಾವಸ್ಥೆ’. ಈ ಸ್ಥಿತಿಯಲ್ಲಿ ಕಾಣುವ ಭಗವಂತನ ಹೆಸರು ‘ತುರಿಯ’(ನಾಲ್ಕನೇ ರೂಪ). ಇದು ವಾಸ್ತವವಾಗಿ ವಾಸುದೇವ ರೂಪ.  ಮೋಕ್ಷಗಮ್ಯನಾದ ಭಗವಂತನ ಮೋಕ್ಷಪ್ರದ ರೂಪವಿದು. ಇದಲ್ಲದೆ ನಾದ ಪ್ರತಿಪಾದ್ಯವಾದ ಭಗವಂತನ ಇನ್ನೊಂದು ರೂಪ ವರಾಹರೂಪ.
ನಾದೋಪಾಸನೆ ಬಹಳ ಕ್ಲಿಷ್ಟವಾದ ಉಪಾಸನೆ. ಸಾಧನೆಯಲ್ಲಿ ಅಪರೋಕ್ಷ ಜ್ಞಾನಿಗಳಿಗೂ ಕೂಡಾ ಭಗವಂತನ ಸಾಕ್ಷಾತ್ಕಾರ ಪಡೆಯುವ ಸ್ಥಿತಿಯಲ್ಲಿ ವಾಸುದೇವ ರೂಪ ಸದಾ ಕಾಣಿಸುವುದಿಲ್ಲ. ಅವರು ಎಲ್ಲೋ ಆಗೊಮ್ಮೆ-ಈಗೊಮ್ಮೆ ಮಿಂಚಿನಂತೆ ಈ ರೂಪವನ್ನು ಕಾಣುತ್ತಾರೆ. ಇಂತಹ ದುರ್ಲಭವಾದ ವಾಸುದೇವ ರೂಪದ ಸಾಕ್ಷಾತ್ಕಾರಕ್ಕಾಗಿ ಯಾವ ಸಿದ್ಧತೆ ಬೇಕು ಎನ್ನುವುದನ್ನು ಶುಕಾಚಾರ್ಯರು ಮುಂದೆ ವಿವರಿಸುತ್ತಾರೆ.

No comments:

Post a Comment