Monday, October 7, 2013

Shrimad BhAgavata in Kannada -Skandha-02-Ch-01(4)

ನಿಯಚ್ಛೇದ್ವಿಷಯೇಭ್ಯೋSಕ್ಷಾನ್ ಮನಸಾ ಬುದ್ಧಿಸಾರಥಿಃ
ಮನಃ ಕರ್ಮಭಿರಾಕ್ಷಿಪ್ತಂ ಶುಭಾರ್ಥೇ ಧಾರಯೇದ್ ಧಿಯಾ  ೧೮

ಮನಸ್ಸು ಏಕಾಗ್ರವಾಗಬೇಕಾದರೆ ಅದಕ್ಕೆ ಪೂರ್ವಸಿದ್ಧತೆ ಬೇಕು. ಅಪರಿಚಿತ ಕ್ಷೇತ್ರದಲ್ಲಿ ಮನಸ್ಸಿಗೆ ತರಬೇತಿ ಕೊಡದಿದ್ದರೆ  ಅದು ಅದನ್ನು ಸ್ವೀಕರಿಸುವುದಿಲ್ಲ. ಧ್ಯಾನದ ರುಚಿ ಗೊತ್ತಿಲ್ಲದ ಮನಸ್ಸು ಧ್ಯಾನದಲ್ಲಿ ಕೇಂದ್ರೀಕೃತವಾಗಲಾರದು. ನಮ್ಮ ಮನಸ್ಸು ಸದಾ ವಿಷಯಗಳ(ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ) ಹಿಂದೆ ಸುತ್ತುತ್ತಿರುತ್ತದೆ. ಪ್ರತಿಯೊಂದು ಇಂದ್ರಿಯದ ಧರ್ಮ ವಿಷಯಗಳನ್ನು ಗ್ರಹಿಸುವುದಾದರೂ ಕೂಡಾ,  ವಿಷಯ ಗ್ರಹಣವೇ ಚಟವಾದಾಗ ಅದು ಅಧರ್ಮವಾಗುತ್ತದೆ. ಉದಾಹರಣೆಗೆ ನೋಡುವುದು ಕಣ್ಣಿನ ಧರ್ಮ, ಆದರೆ ನೋಡಬಾರದ್ದನ್ನು ನೋಡುವುದು ಅಧರ್ಮ.  ಇಂದ್ರಿಯಗಳಿಗೆ ಕೇವಲ ವಿಷಯಗಳೇ ಬಹಳ ಪ್ರಿಯವಾದ ಸಂಗತಿಯಾದಾಗ, ಇವುಗಳನ್ನು ಬಿಟ್ಟು ಇವುಗಳಿಂದಾಚೆಗಿನ ಅಪರಿಚಿತ ಸಂಗತಿಯನ್ನು ಮನಸ್ಸು ಯೋಚಿಸುವುದಿಲ್ಲ. ಮೊದಲು ಮನಸ್ಸನ್ನು ಈ ವ್ಯಸನದಿಂದ ಆಚೆ ಕೊಂಡೊಯ್ಯಬೇಕು. ಹೀಗೆ ಮಾಡಬೇಕಾದರೆ ಮೊದಲು ನಾವು ಯಾವುದನ್ನು ಹಚ್ಚಿಕೊಂಡಿದ್ದೇವೆ ಅದು ನಾವು ತಿಳಿದುಕೊಂಡಷ್ಟು ಮಹತ್ವದಲ್ಲ, ಅದರಿಂದ ನನಗೆ ಉಪಯೋಗವಿಲ್ಲ ಎನ್ನುವ ಎಚ್ಚರ ನಮ್ಮಲ್ಲಿ ಬೆಳೆಯಬೇಕು. ಈ ಎಚ್ಚರದಿಂದ ನಾವು ನಮ್ಮ  ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು.
ಇಂದ್ರಿಯಗಳನ್ನು ಹಿಡಿತದಲ್ಲಿಟ್ಟು ಸಾಧನೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಕಠೋಪನಿಷತ್ತಿನಲ್ಲಿ ಯಮ ಹೇಳುವಂತೆ: ಕ್ಷುರಸ್ಯ ಧಾರಾ ನಿಶಿತಾ ದುರತ್ಯಯಾ ದುರ್ಗಂ ಪಥಸ್ತತ್ ಕವಯೋ ವದಂತಿ ॥ಕಠ ೧-೩-೧೪॥  “ಭಗವಂತನ ಕಡೆಗೆ ಸಾಗುವ ಮಾರ್ಗ ಬಹಳ ದುರ್ಗಮ. ಅದು ಕತ್ತಿಯ ಅಲುಗಿನ ಮೇಲಿನ ನಡೆಯಂತೆ. ಇಂತಹ ಮಾರ್ಗದಲ್ಲಿನ ಕಷ್ಟಗಳನ್ನು ಸಹಿಸಿಕೊಂಡು ಮುನ್ನೆಡೆಯಬಲ್ಲವರು ಭಗವಂತನನ್ನು ಸೇರಬಲ್ಲರು”. ಕಷ್ಟ ಪಡದೇ ಯಾವುದನ್ನೂ ಸಾಧಿಸಲು ಸಾಧ್ಯವಿಲ್ಲ. ಆದರೆ ಇಂದ್ರಿಯ ನಿಗ್ರಹ ಅಷ್ಟು ಸುಲಭದ ಕೆಲಸವಲ್ಲ. ಇಂದ್ರಿಯ ನಿಗ್ರಹ ಯತತೋ ಹ್ಯಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ ।  ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಂ ಮನಃ ॥೨-೬೦॥ -- “ಸಾಧಕ ಸಾಕಷ್ಟು ತಿಳಿದುಕೊಂಡರೂ, ಸಾಕಷ್ಟು ಪ್ರಯತ್ನಿಸಿದರೂ ಕೂಡಾ, ಇಂದ್ರಿಯಗಳು ಬಲವಂತವಾಗಿ ಮನಸ್ಸನ್ನು ಕಲುಕಿ ಸೆಳೆದುಬಿಡುತ್ತವೆ” ಎಂದು ಶ್ರೀಕೃಷ್ಣ ಗೀತೆಯಲ್ಲೇ ಹೇಳಿದ್ದಾನೆ. ಇಂತಹ ಸಂಧರ್ಭದಲ್ಲಿ ನಮ್ಮ ಸಾಧನೆ ಹೇಗಿರಬೇಕು ಎನ್ನುವುದನ್ನು ಕಠೋಪನಿಷತ್ತಿನಲ್ಲಿ ಯಮ ನಚಿಕೇತನಿಗೆ ವಿವರಿಸುವುದನ್ನು ಕಾಣುತ್ತೇವೆ. ಆತ್ಮಾನಂ ರಥಿನಂ ವಿದ್ಧಿ ಶರೀರಂ ರಥಮೇವ ಚ । ಬುದ್ಧಿಂ ತು ಸಾರಥಿಂ ವಿದ್ಧಿ ಮನಃ ಪ್ರಗ್ರಹಮೇವ ಚ ॥೧-೩-೩॥ ಇಂದ್ರಿಯಾಣಿ ಹಯಾನಾಹುರ್ವಿಷಯಾಂಸ್ತೇಷು ಗೋಚರಾನ್ । ಆತ್ಮೇಂದ್ರಿಯಮನೋಯುಕ್ತಂ ಭೋಕ್ತೇತ್ಯಾಹುರ್ಮನೀಷಿಣಃ ॥೧-೩-೪॥ ಇಲ್ಲಿ ಹೇಳುವಂತೆ: “ ಜೀವ ಭಗವಂತನ ಕಡೆಗೆ ಸಾಗುವ ಪಯಣಿಗ. ಸಾಧನಾ ಶರೀರವೇ ಅವನ  ರಥ”. ಇಲ್ಲಿ ಸಾಧನಾ ಶರೀರ ಎಂದರೆ ಮನುಷ್ಯ ಶರೀರ. ಮಾನವ ಜನ್ಮ ಬಾರದೇ, ಮರವೋ, ಪ್ರಾಣಿಯೋ ಆಗಿ ಹುಟ್ಟಿದರೆ ಆ ಶರೀರ ಭಗವಂತನೆಡೆಗೆ ಸಾಗುವ ರಥವಾಗುವುದಿಲ್ಲ. ಆ ಶರೀರದ ಮೂಲಕ ಜೀವಕ್ಕೆ ಸಾಧನೆ ಸಾಧ್ಯವಿಲ್ಲ. ಹಾಗಾಗಿ ಮನುಷ್ಯ ಜನ್ಮ ಬಹಳ ಶ್ರೇಷ್ಠ ಜನ್ಮ. ಈ ಅರಿವು ಇಲ್ಲದ ನಾವು ಇಂದು ನಮಗೆ ಭಗವಂತ ನೀಡಿದ ಶ್ರೇಷ್ಠ ಜನ್ಮವನ್ನು ಯಾವುದೋ ಲೌಕಿಕ ವಿನೋದದಲ್ಲಿ ಕಳೆಯುತ್ತಾ ವ್ಯರ್ಥ ಮಾಡಿಕೊಳ್ಳುತ್ತಿದ್ದೇವೆ. ಇದರಿಂದಾಗಿ ನಮಗೆ ಭಗವಂತ ನೀಡಿದ ರಥವನ್ನು ನಾವು ಸರಿಯಾದ ದಿಕ್ಕಿನಲ್ಲಿ ಬಳಸುತ್ತಿಲ್ಲ. ಬೇಜವಾಬ್ಧಾರಿಯುತವಾಗಿ ಸಾಗುವ ಮನುಷ್ಯನ ಜೀವನ ಪ್ರಾಣಿ ಜೀವನಕ್ಕಿಂತ ಕಡೆ. ಭಗವಂತ ‘ನನ್ನೆಡೆಗೆ ಬಾ’ ಎಂದು ಕಳುಹಿಸಿಕೊಟ್ಟ ಈ ಶರೀರವೆಂಬ ರಥದಲ್ಲಿ ಕುಳಿತು, ಭಗವಂತನೆಡೆಗೆ ಸಾಗಬೇಕು ಎನ್ನುವ ಸಂದೇಶವನ್ನು ಯಮ ನಚಿಕೇತನ ಮೂಲಕ ನಮಗೆ ನೀಡಿದ್ದಾನೆ. ನಮ್ಮ ರಥ ದಾರಿ ತಪ್ಪದೇ ಸೇರಬೇಕಾದ ಗುರಿಯನ್ನು ತಲುಪಲು ಕುದುರೆ-ಕಡಿವಾಣದ ಜೊತೆಗೆ ನಮಗೊಬ್ಬ ಸಾರಥಿ ಬೇಕು. ನಮಗೆ ಆ ಸಾರಥಿಯನ್ನೂ ಕೂಡಾ ಭಗವಂತ ಕೊಟ್ಟಿದ್ದಾನೆ. ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಣಯಿಸುವ ವಿವೇಕ ಪ್ರಜ್ಞೆ(ಬುದ್ಧಿ)ಯೇ ಸಾರಥಿ ಹಾಗೂ ಮನಸ್ಸೇ ಕಡಿವಾಣ. ಭಗವಂತನೆಡೆಗೆ 'ಜೀವ' ಸಾಗಲು ಭಗವಂತ ಕೊಟ್ಟ ರಥಕ್ಕೆ ಐದು ಕುದುರೆಗಳು. ಅವುಗಳೆಂದರೆ: ಎರಡು ಕಿವಿ, ಎರಡು ಕಣ್ಣು ಹಾಗೂ ಒಂದು ಬಾಯಿ. ಶಬ್ದ, ರೂಪ ಮತ್ತು ಮಾತು ಈ ಕುದುರೆಗಳು ಮೇಯುವ ಹುಲ್ಲುಗಾವಲು. ಹಾಗಾಗಿ ನಾವು ನಮ್ಮ ಕಣ್ಣನ್ನು ಭಗವಂತನ ಕ್ಷೇತ್ರವನ್ನು ನೋಡುವುದಕ್ಕೆ ಉಪಯೋಗಿಸಬೇಕು, ಕಿವಿಯನ್ನು ಭಗವಂತನ ಮಹಿಮೆಯನ್ನು ಕೇಳಿ ತಿಳಿದುಕೊಳ್ಳುವುದಕ್ಕಾಗಿ ಹಾಗೂ ಮಾತು ಭಗವಂತನ ಮಹಿಮೆಯನ್ನು ಇನ್ನೊಬ್ಬರಿಗೆ ಹೇಳುವುದಕ್ಕಾಗಿ ಉಪಯೋಗಿಸಬೇಕು. ಭಗವಂತ ನಮಗೆ ನೀಡಿರುವ ಬುದ್ಧಿಶಕ್ತಿಯನ್ನು ಉಪಯೋಗಿಸಿಕೊಂಡು ಯಾವುದು ಸರಿ, ಯಾವುದು ತಪ್ಪು ಎನ್ನುವ ವಿಶ್ಲೇಷಣೆ ಮಾಡಬೇಕು. ಬುದ್ಧಿಶಕ್ತಿಯನ್ನು ಉಪಯೋಗಿಸಿ ನಾವು ನಮ್ಮನ್ನು ನಿಯಂತ್ರಿಸಿಕೊಳ್ಳದೇ ಸಮಯವನ್ನು ವ್ಯರ್ಥ ಮಾಡಿದರೆ, ಇಂದು ಕಳೆದುಕೊಂಡ ಕ್ಷಣ ಇನ್ನೆಂದೂ ಮರಳಿ ಬರಲಾರದು. ಬದುಕಿನ ಪ್ರತಿಯೊಂದು ಕ್ಷಣವನ್ನೂ ಸದುಪಯೋಗ ಮಾಡಿಕೊಳ್ಳಬೇಕು ಎನ್ನುವ ಎಚ್ಚರ ಬೆಳೆದಾಗ, ಸರಿದಾರಿಯಲ್ಲೇ ನಡೆಯಬೇಕು ಎನ್ನುವ ಹಠ ಬರುತ್ತದೆ. ಈ ಸ್ಥಿತಿಯಲ್ಲಿ ಮನಸ್ಸನ್ನು ನಿಯಂತ್ರಿಸುವುದು ಸುಲಭವಾಗುತ್ತದೆ.

No comments:

Post a Comment