Saturday, December 14, 2013

Shrimad BhAgavata in Kannada -Skandha-02-Ch-02(10)

ನಾಭ್ಯಾಂ ಸ್ಥಿತಂ ಹೃದ್ಯವರೋಪ್ಯ ತಸ್ಮಾದುದಾನಗತ್ಯೋರಸಿ ತಂ ನಯೇನ್ಮುನಿಃ
ತತೋಽನುಸಂಧಾಯ ಧಿಯಾ ಮನಸ್ವೀ ಸ್ವತಾಲುಮೂಲಂ ಶನಕೈರ್ನಯೇತ ೨೧

ತಸ್ಮಾದ್ ಭ್ರುವೋರಂತರಮುನ್ನಯೇತ ನಿರುದ್ಧಸಪ್ತಾಶ್ವಪ ಥೋSನಪೇಕ್ಷಃ
ಸ್ಥಿತ್ವಾ ಮುಹೂರ್ತಾರ್ಧಮಕುಂಠದೃಷ್ಟಿರ್ನಿರ್ಭಿದ್ಯ ಮೂರ್ಧನ್ ವಿಸೃಜೇತ್ ಪರಂ ಗತಃ ೨೨

ಸ್ವ-ಇಚ್ಛೆಯಿಂದ ಪ್ರಾಣತ್ಯಾಗ ಮಾಡುವಾಗ ಜೀವವನ್ನು ಹೇಗೆ ದೇಹದಿಂದ ಹೊರ ಕಳುಹಿಸುವುದು  ಎನ್ನುವುದನ್ನು ಇಲ್ಲಿ ಶುಕಾಚಾರ್ಯರು ವರ್ಣಿಸಿರುವುದನ್ನು ಕಾಣುತ್ತೇವೆ. [ಈ ರೀತಿ ಪ್ರಾಣತ್ಯಾಗ ಮಾಡುವ ಯತಿಗಳು ಇಂದಿಗೂ ಹಿಮಾಲದಲ್ಲಿದ್ದಾರೆ. ಇಂತಹ ಯತಿಗಳ ದೇಹತ್ಯಾಗವನ್ನು  ಕಣ್ಣಾರೆ ಕಂಡ ವಿವರಣೆಯನ್ನು “ಲಿವಿಂಗ್ ವಿತ್ ಹಿಮಾಲಯನ್ ಮಾಸ್ಟರ್ಸ್” ಎನ್ನುವ ಪುಸ್ತಕದಲ್ಲಿ ಸ್ವಾಮಿರಾಮ್ ಅವರು ಸುಂದರವಾಗಿ ವರ್ಣಿಸಿರುವುದನ್ನು ಕಾಣುತ್ತೇವೆ. ಇದೊಂದು ಓದಲೇ ಬೇಕಾದ ಉತ್ತಮ ಪುಸ್ತಕ]. ಮೊದಲು ಮೂಲಾಧಾರದಿಂದ ಪ್ರಾಣಶಕ್ತಿಯನ್ನು ಊರ್ಧ್ವಮುಖಗೊಳಿಸಿ ನಾಭಿಯಲ್ಲಿ ತಂದು ನಿಲ್ಲಿಸಬೇಕು. ನಂತರ ನಾಭಿಯಿಂದ ಅದನ್ನು ಅನಾಹತಚಕ್ರಕ್ಕೆ ತಂದು ಅಲ್ಲಿಂದ ಸುಷುಮ್ನಾ ನಾಡಿಯ ಮುಖೇನ ಹೃತ್ಕಮಲದಲ್ಲಿ ತಂದು ನಿಲ್ಲಿಸಬೇಕು. ನಮಗೆ ತಿಳಿದಂತೆ ಹೃತ್ಕಮಲದಲ್ಲಿ ಜೀವನಿದ್ದಾನೆ ಮತ್ತು ಭಗವಂತನಿದ್ದಾನೆ. ಇದು ಎಲ್ಲಾ ಚಟುವಟಿಕೆಗಳ ಕೇಂದ್ರಸ್ಥಾನ. ಇಲ್ಲಿಂದ ಪ್ರಾಣಶಕ್ತಿಯನ್ನು ಭಗವಂತ ಮತ್ತು ಜೀವನ ಜೊತೆಗೆ  ಮೇಲಕ್ಕೆ ಕಳುಹಿಸಬೇಕು. ಹೀಗೆ ಮಾಡುವಾಗ ಹೃದಯದಲ್ಲಿರುವ ಪ್ರಾಣದೇವರ ಮತ್ತು ಭಗವಂತನ ಅನುಸಂಧಾನ ಗಟ್ಟಿಯಾಗಿರಬೇಕು ಮತ್ತು ಅವರ ರಕ್ಷೆಯಲ್ಲಿರುವ ಜೀವಸ್ವರೂಪದ ಚಿಂತನೆ ಮಾಡಬೇಕು. ಈ ಹಂತದಲ್ಲಿ ಜೀವಸ್ವರೂಪವನ್ನು ಪಾಂಚಭೌತಿಕ ದೇಹದಿಂದ ಸ್ಪಷ್ಟವಾಗಿ ಗುರುತಿಸಿಕೊಳ್ಳಬೇಕು. “ಈ ಸ್ಥಿತಿಯಲ್ಲಿ ಮನಸ್ಸು ದೃಢವಾಗಿರಲಿ” ಎಂದು ಇಲ್ಲಿ ಶುಕಾಚಾರ್ಯರು ಎಚ್ಚರಿಸಿರುವುದನ್ನು ಕಾಣುತ್ತೇವೆ.  ಏಕೆಂದರೆ ಇಲ್ಲಿಂದ ಮೇಲೆ ಜೀವ ಹೊರಹೋಗಲು ಅನೇಕ ಮಾರ್ಗಗಳಿವೆ. ರೋಮಕೂಪವಿರಬಹುದು ಅಥವಾ ಬಾಯಿ, ಕಣ್ಣು, ಮೂಗು, ಕಿವಿಗಳಿರಬಹುದು.  ಈ ಯಾವುದೇ ದ್ವಾರದ ಮುಖೇನ ಪ್ರಾಣಶಕ್ತಿ ನುಣುಚಿಕೊಳ್ಳದಂತೆ ಎಚ್ಚರಿಕೆವಹಿಸಬೇಕು. ಹೃತ್ಕಮಲದಿಂದ ಮೇಲಕ್ಕೆ ಪ್ರಾಣಶಕ್ತಿಯನ್ನು ಕೊಂಡೊಯ್ದು ಸ್ವಪ್ನದ ಕೇಂದ್ರಸ್ಥಾನವಾದ ವಿಶುದ್ಧಿಚಕ್ರದಲ್ಲಿ ನಿಲ್ಲಿಸಬೇಕು. ಇಲ್ಲಿಂದ ಮೇಲಿನ ಪಯಣ ಅತ್ಯಂತ ಕ್ಲಿಷ್ಟ. ಇಲ್ಲಿ ಪ್ರತಿ ಹೆಜ್ಜೆಹೆಜ್ಜೆಗೂ ಎಚ್ಚರ ಅಗತ್ಯ. ವಿಶುದ್ಧಿಚಕ್ರದಿಂದ ಬ್ರಹ್ಮನಾಡಿಯ ಮುಖೇನ ಭ್ರೂಮಧ್ಯಕ್ಕೆ ಬರಬೇಕು.  “ಈ ಹಂತದಲ್ಲಿ ಎಲ್ಲಾ ಐಹಿಕ ಕಾಮನೆಗಳನ್ನು ತ್ಯಜಿಸಿ ಅದರ ಮುಖೇನ ಇಲ್ಲಿರುವ ಎಲ್ಲಾ ಏಳು ಕುದುರೆಗಳ ಬಾಗಿಲುಗಳನ್ನು(೨ ಕಿವಿ, ೨ ಮೂಗಿನ ದ್ವಾರ, ೨ ಕಣ್ಣು ಹಾಗೂ ಬಾಯಿ)   ಮುಚ್ಚು” ಎಂದಿದ್ದಾರೆ ಶುಕಾಚಾರ್ಯರು. ಇಲ್ಲಿ ಬುದ್ಧಿ ಕುಸಿಯದಂತೆ ಎಚ್ಚರವಹಿಸಿ ಸದಾ ಭಗವಂತನನ್ನು ನೆನೆಯುತ್ತಾ ಸ್ವಲ್ಪಕಾಲ ಜೀವವನ್ನು ಅಲ್ಲೇ  ನಿಲ್ಲಿಸಿ ಅದನ್ನು ಮತ್ತೆ ಊರ್ಧ್ವಕ್ಕೆ ಹೋಗಲು ಅಣಿಗೊಳಿಸಬೇಕು. ನಂತರ ಸಹಸ್ರಾರವನ್ನು ಭೇದಿಸಿ ಬ್ರಹ್ಮನಾಡಿಯಿಂದ ಜೀವ ಹೊರಹೋಗಬೇಕು. ಇದು ನಮ್ಮ ದೇಹದಲ್ಲಿರುವ ಶಕ್ತಿಕೇಂದ್ರಗಳ ಮೂಲಕ ಪ್ರಾಣಶಕ್ತಿಯನ್ನು ಊರ್ಧ್ವಮುಖಗೊಳಿಸಿ, ಊರ್ಧ್ವಮುಖವಾದ ಪ್ರಾಣಶಕ್ತಿಯ ಜೊತೆಗೆ ಜೀವವನ್ನು ಬ್ರಹ್ಮನಾಡಿಯಲ್ಲಿ ಹೊರಕ್ಕೆ ಕಳುಹಿಸುವ ಒಂದು ಅದ್ಭುತ ಪ್ರಕ್ರಿಯೆ. [ಈ ರೀತಿಯ ಹಠಯೋಗ ಕಠಿಣ ಸಾಧನವಾಗಿರುವುದರಿಂದ ಪ್ರಾಚೀನರು ಅದಕ್ಕೆ ಪೂರಕವಾದ ಅತ್ಯಂತ ಸರಳ ವಿಧಾನವನ್ನು ತಮ್ಮ ದೈನಂದಿನ ಜೀವನದಲ್ಲಿ ತೊಡಗಿಸಿಕೊಂಡಿದ್ದರು. ಇದಕ್ಕೆ ಉತ್ತಮ ಉದಾಹರಣೆ ಊರ್ಧ್ವಪುಂಡ್ರ ಧಾರಣೆ.  ಜೀವದ ಊರ್ಧ್ವಮುಖ ಗತಿಗೆ ಸಂಬಂಧಪಟ್ಟ ಈ ಆಚರಣೆ ಪೂರ್ಣ ಪ್ರಮಾಣದಲ್ಲಿ ದೇಹದಲ್ಲಿರುವ ಶಕ್ತಿ ಕೇಂದ್ರಗಳನ್ನು ಜಾಗೃತಿಗೊಳಿಸುವ ಒಂದು ಸರಳವಾದ ಬಾಹ್ಯ ವಿಧಾನ]. ಶುಕಾಚಾರ್ಯರು ಇಲ್ಲಿ ವಿವರಿಸಿರುವ ಅಂತ್ಯಕಾಲದ ಅನುಸಂಧಾನ ಮತ್ತು ಜೀವದಗತಿ ಇಷ್ಟು ಸ್ಪಷ್ಟವಾಗಿ ಇನ್ನೆಲ್ಲೂ ಕಾಣಸಿಗುವುದಿಲ್ಲ. ಇದು ಭಾಗವತದಲ್ಲಿ ಬಂದಿರುವ ಅದ್ಭುತ ವಿವರಣೆ.

No comments:

Post a Comment