ಯೋಗೇಶ್ವರಾಣಾಂ
ಗತಿಮಾಮನಂತಿ ಬಹಿಸ್ತ್ರಿಲೋಕ್ಯಾಃ ಪವನಾಂತರಾತ್ಮಾ ।
ನ ಕರ್ಮಭಿಸ್ತಾಂ
ಗತಿಮಾಪ್ನುವಂತಿ ವಿದ್ಯಾತಪೋಯೋಗಸಮಾಧಿಭಾಜಾಮ್ ॥೨೪॥
ಭಗವಂತನ ಅಪರೋಕ್ಷದಿಂದ ಬಹಳ ಎತ್ತರಕ್ಕೇರಿದ ಜ್ಞಾನಿಗಳು ಮೋಕ್ಷಕ್ಕೆ
ಮೊದಲು ಭೂಮಿ, ಅಂತರಿಕ್ಷ ಮತ್ತು ಸ್ವರ್ಗದಿಂದಾಚೆಗಿನ ಲೋಕದಲ್ಲಿರುತ್ತಾರೆ. ಈ ಲೋಕಗಳಿಗೆ ಕೇವಲ
ಮೋಕ್ಷಯೋಗ್ಯರಿಗೆ ಮಾತ್ರ ಪ್ರವೇಶ ಮತ್ತು ಇವು ನಮ್ಮ ಕಣ್ಣಿಗೆ ಕಾಣುವ ಲೋಕಗಳಲ್ಲ. ಹೇಗೆ ವಾತಾವರಣದಲ್ಲಿರುವ
ಲಕ್ಷೋಪಲಕ್ಷ ಜೀವಗಳು ನಮಗೆ ಕಾಣುವುದಿಲ್ಲವೋ ಹಾಗೇ ಈ ಲೋಕಗಳು ನಮ್ಮ ಸ್ಥೂಲವಾದ ಕಣ್ಣಿಗೆ ಕಾಣುವುದಿಲ್ಲ. ಪುರಾಣದಲ್ಲಿ ಹೇಳುವಂತೆ ಭೂಮಿಯಲ್ಲೇ
ಎಷ್ಟೋ ಭಾಗ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಸಪ್ತಸಾಗರದಲ್ಲಿ
ಕೊನೆಯಸಾಗರ ಈ ಭೂಭಾಗದಲ್ಲೇ ಇದ್ದರೂ ಕೂಡಾ ಅದು
ನಮಗೆ ಕಾಣದು ಎನ್ನುತ್ತಾರೆ ಶಾಸ್ತ್ರಕಾರರು. ಅದನ್ನು ಜ್ಞಾನದಿಂದ ಒಳಗಣ್ಣು ತೆರೆದ ಅಪರೋಕ್ಷ
ಜ್ಞಾನಿಗಳಿಗಷ್ಟೇ ಕಾಣಬಲ್ಲರು. ಹೀಗಾಗಿ ಭೂಮಿಯಿಂದ ಮೇಲೆ ಹೋದಂತೆ ಒಂದಕ್ಕಿಂತ ಒಂದು
ಸೂಕ್ಷ್ಮವಾಗಿರುವ ಲೋಕಗಳಿವೆ. ಮೊದಲು ಅಂತರಿಕ್ಷ, ಅಂತರಿಕ್ಷಕ್ಕಿಂತ ಸೂಕ್ಷ-ಸ್ವರ್ಗ,
ಸ್ವರ್ಗಕ್ಕಿಂತ ಸೂಕ್ಷ್ಮ-ಮಹರ್ಲೋಕ, ಮಹರ್ಲೋಕಕ್ಕಿಂತಲೂ ಸೂಕ್ಷ್ಮಲೋಕ-ಜನರ್ಲೋಕ, ಜನರ್ಲೋಕಕ್ಕಿಂತ
ಸೂಕ್ಷ್ಮ-ತಪರ್ಲೋಕ, ತಪರ್ಲೋಕಕ್ಕಿಂತ ಸೂಕ್ಷ್ಮ-ಸತ್ಯಲೋಕ. ಉಪನಿಷತ್ತಿನಲ್ಲಿ ಹೇಳುವಂತೆ
ಸತ್ಯವನ್ನು ಕಾಣಲು ಸೂಕ್ಷ್ಮವಾದ ಕಣ್ಣು, ಸೂಕ್ಷ್ಮವಾದ ಬುದ್ಧಿ ಬೇಕು. ನಮ್ಮ ಸ್ಥೂಲ ಕಣ್ಣಿಗೆ,
ಸ್ಥೂಲ ಬುದ್ಧಿಗೆ ಯಾವುದೂ ಕಾಣದು, ಯಾವುದೂ ತಿಳಿಯದು. ಈ ಪ್ರಪಂಚದಲ್ಲಿ ಸ್ಥೂಲವಾಗಿರುವ ಭಾಗ
ನೂರನೇ ಒಂದು ಭಾಗಕ್ಕಿಂತಲೂ ಕಡಿಮೆ. ಇಂತಹ ಸೂಕ್ಷ್ಮ ಪ್ರಪಂಚವನ್ನು ನಾವು ಸ್ಥೂಲ ಇಂದ್ರಿಯಗಳಿಂದ
ಗ್ರಹಿಸುವುದು ಸಾಧ್ಯವಿಲ್ಲ. ಅದು ಯಾವ ಭೂತಗನ್ನಡಿಗೂ
ಕಾಣದು.
ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: ಕರ್ಮ, ಯಜ್ಞ-ಯಾಗ, ಇತ್ಯಾದಿಯಿಂದ
ಹೆಚ್ಚೆಂದರೆ ಸ್ವರ್ಗದ ತನಕ ಹೋಗಬಹುದು, ಆದರೆ ಸ್ವರ್ಗದಿಂದಾಚೆಗೆ ಹೋಗಬೇಕಾದರೆ ಜ್ಞಾನಯೋಗ ಬೇಕು
ಎಂದು. ಅವು ಕೇವಲ ಅಪರೋಕ್ಷ ಜ್ಞಾನಿಗಳು ಕಾಣಬಹುದಾದ ಮತ್ತು ಅನುಭವಿಸಬಹುದಾದ ಲೋಕಗಳು. ಇಲ್ಲಿ ಶುಕಾಚಾರ್ಯರು “ಅಪರೋಕ್ಷ ಜ್ಞಾನಿಗಳು ಹೋಗಿ
ಸೇರುವ ತಾಣ ಪವನಾಂತರಾತ್ಮಾ” ಎಂದಿದ್ದಾರೆ. ಪವನಾಂತರಾತ್ಮಾ
ಎಂದರೆ ಎಲ್ಲರ ಒಳಗೂ ಅಂತರ್ಯಾಮಿಯಾಗಿರುವ ಪವನನ ಲೋಕವಾದ ಸತ್ಯಲೋಕ ಎನ್ನುವುದು ಒಂದು ಅರ್ಥವಾದರೆ,
ಪವನನ ಅಂತರಾತ್ಮನಾದ ಭಗವಂತನ ಲೋಕ(ಮೋಕ್ಷ) ಎನ್ನುವುದು ಇನ್ನೊಂದು ಅರ್ಥ. ಇವೇ ಯೋಗೇಶ್ವರರ ಎರಡು
ಲೋಕಗಳು. ಜ್ಞಾನಯೋಗದಲ್ಲಿ ಬಹಳ ಎತ್ತರಕ್ಕೇರಿದವರು ಮಾತ್ರ ಈ ಲೋಕಗಳಿಗೆ ಹೋಗಿ ಇರಬಲ್ಲರು.
‘ಪವನಾಂತರಾತ್ಮಾ’ ಎನ್ನುವುದನ್ನು ಆಚಾರ್ಯ ಮಧ್ವರು “ಪವನಃ ಅಂತರಾತ್ಮಾ” ಎಂದು ವಿವರಿಸಿದ್ದಾರೆ.
ಅಂದರೆ ಪ್ರತಿಯೊಂದು ಜೀವಸ್ವರೂಪದೊಳಗೂ ಅಂತರ್ಯಾಮಿಯಾಗಿ ಪ್ರಾಣದೇವರು ಮತ್ತು ಬ್ರಹ್ಮ ದೇವರಿದ್ದಾರೆ
ಎಂದರ್ಥ. [ಈ ವಿಷಯವನ್ನು ಸರಿಯಾಗಿ ಅರಿಯದೇ, ದಾಸ ಸಾಹಿತ್ಯವನ್ನೂ ತಪ್ಪಾಗಿ ಅರ್ಥೈಸಿ, ಪ್ರಾಣದೇವರಿಗೆ ಜೀವ ಸ್ವರೂಪದೊಳಗೆ ಪ್ರವೇಶವಿಲ್ಲ ಎಂದು ಇತ್ತೀಚೆಗಿನ
ಕೆಲವು ಪುಸ್ತಕಗಳಲ್ಲಿ ಹೇಳಲಾಗಿದೆ. ಆದರೆ ಅದು ತಪ್ಪು ತಿಳುವಳಿಕೆ]. ಭಗವಂತನೊಂದಿಗೆ ನಮ್ಮ ಆತ್ಮಸ್ವರೂಪದೊಳಗಿದ್ದು
ನಮ್ಮನ್ನು ನಿಯಂತ್ರಿಸುತ್ತಾರೆ ಪ್ರಾಣದೇವರು. ಹೀಗಾಗಿ ಜ್ಞಾನಿಗಳು ಮೊದಲು ಹೋಗಿ ಸೇರುವುದು ಪವನನ
ಲೋಕವನ್ನು. ಅಲ್ಲಿಂದ ಆತ ಜೀವನನ್ನು ಭಗವಂತನ ಬಳಿ ಕರೆದುಕೊಂಡು ಹೋಗುತ್ತಾನೆ.
ಶುಕಾಚಾರ್ಯರು ಹೇಳುತ್ತಾರೆ: “ಸ್ವರ್ಗಲೋಕದಿಂದ ಆಚೆಗಿನ ಲೋಕಗಳು ಕೇವಲ ವಿದ್ಯೆ, ತಪಸ್ಸು, ಯೋಗ ಮತ್ತು ಸಮಾಧಿ ಇದ್ದವರಿಗೆ ಮಾತ್ರ ದಕ್ಕುವ ಲೋಕಗಳು” ಎಂದು. ವಿದ್ಯೆ ಎಂದರೆ ಶಾಸ್ತ್ರದಿಂದ ತತ್ತ್ವವನ್ನು ಯಥಾರ್ಥವಾಗಿ ತಿಳಿಯುವುದು; ತಪಸ್ಸು ಎಂದರೆ ತಿಳಿದಿರುವ ವಿಷಯದ ನಿರಂತರ ಮನನ; ಯೋಗ ಎಂದರೆ ಭಗವಂತನಲ್ಲಿ ಭಕ್ತಿಯೋಗ ಮತ್ತು ಸಮಾಧಿ ಎಂದರೆ ಭಗವಂತನನ್ನು ಸದಾ ಕಾಣುವ ಅಂತರ್ದೃಷ್ಟಿ. ಆದರೆ ಇಲ್ಲಿ ಹೇಳಿದ ವಿದ್ಯೆ, ತಪಸ್ಸು, ಯೋಗ ಮತ್ತು ಸಮಾಧಿ ಎನ್ನುವುದಕ್ಕೆ ಇದಲ್ಲದೆ ಇನ್ನೊಂದು ಅಪೂರ್ವ ಅರ್ಥವಿದೆ. ಈ ಕುರಿತು ಭಾಗವತದ ಏಕಾದಶ ಸ್ಕಂಧದಲ್ಲಿ ವಿವರಣೆಯನ್ನು ಕಾಣಬಹುದು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ: ಸಾಧಕರಲ್ಲಿ ಐದು ವಿಧ. ಮಹಾಜ್ಞಾನಿ, ಜ್ಞಾನಿ, ತಪಸ್ವಿ, ಯೋಗಿ ಮತ್ತು ಪಾದಯೋಗಿ. ಜ್ಞಾನಿಗಳಲ್ಲಿ ಅತ್ಯಂತ ಕೆಳಗಿನ ಸ್ಥರದಲ್ಲಿರುವವರು ಪಾದಯೋಗಿಗಳು. ಅವರಿಗಿಂತ ಎತ್ತರದಲ್ಲಿ ಕ್ರಮವಾಗಿ ಯೋಗಿಗಳು, ತಪಸ್ವಿಗಳು ಮತ್ತು ಜ್ಞಾನಿಗಳಿದ್ದಾರೆ. ಮಹಾಜ್ಞಾನಿಗಳು ಎಲ್ಲರಿಗಿಂತ ಎತ್ತರದಲ್ಲಿದ್ದಾರೆ. ಇವರೆಲ್ಲರಿಗೂ ಸಮಾಧಿ ಬೇಕೇ ಬೇಕು. ಸಮಾಧಿ ಇಲ್ಲದೆ ಈ ಮಟ್ಟಕ್ಕೆ ಏರಲು ಸಾಧ್ಯವಿಲ್ಲ. ಈ ಹಿಂದೆ ಧ್ಯಾನ ಪ್ರಕ್ರಿಯೆಯಲ್ಲಿ ವಿಶ್ಲೇಷಿಸಿದಂತೆ: ಅಪರೋಕ್ಷ ಜ್ಞಾನಿಗಳಿಗೂ ಕೂಡಾ ನಿರಂತರ ನೇರ ಭಗವಂತನ ದರ್ಶನ ಸಾಧ್ಯವಿಲ್ಲ. ಇದನ್ನು ವಿವರಿಸುತ್ತಾ ಆಚಾರ್ಯ ಮಧ್ವರು ಹೇಳುತ್ತಾರೆ: ಪಾದಯೋಗಿಗಳಿಗೆ ನಾಲ್ಕನೇ ಒಂದು ಮಾತ್ರಾಕಾಲ ಭಗವಂತನ ನೇರ ದರ್ಶನ ಸಾಧ್ಯ ಎಂದು. [ಇದಕ್ಕಾಗಿ ಅವರನ್ನು ಪಾದಯೋಗಿಗಳು ಎನ್ನುತ್ತಾರೆ. ಒಂದು ಮಾತ್ರಾಕಾಲ ಎಂದರೆ ಒಂದು ಅಕ್ಷರವನ್ನು(ಉದಾಹರಣೆಗೆ ‘ಅ’) ಉಚ್ಛಾರ ಮಾಡುವಷ್ಟು ಕಾಲ]. ಇವರು ಮೋಕ್ಷಕ್ಕೆ ಮೊದಲು ಮಹಾರ್ಲೋಕಕ್ಕೆ ಹೋಗುತ್ತಾರೆ. ಇನ್ನು ಯೋಗಿಗಳು. ಇವರಿಗೆ ಭಗವಂತನ ನೇರ ದರ್ಶನ ಒಂದು ಮಾತ್ರಾಕಾಲ ಸಾಧ್ಯ ಮತ್ತು ಇವರು ಜನರ್ಲೋಕವನ್ನು ಪಡೆಯುತ್ತಾರೆ. ಯೋಗಿಗಳ ನಂತರ ತಪಸ್ವಿಗಳು. ಅವರಿಗೆ ಆರು ಮಾತ್ರಾಕಾಲ ಭಗವಂತನ ನೇರ ದರ್ಶನವಾಗುತ್ತದೆ ಹಾಗೂ ಅವರು ತಪರ್ಲೋಕವನ್ನು ಪಡೆಯುತ್ತಾರೆ. ಇವರ ನಂತರವಿರುವ ಜ್ಞಾನಯೋಗಿಗಳಿಗೆ ಒಂದು ಮಹೂರ್ತಾಕಾಲ ಅಂದರೆ ನಲವತ್ತೆಂಟು ನಿಮಿಷಗಳ ಕಾಲ ಭಗವಂತನ ದರ್ಶನವಾಗುತ್ತದೆ ಮತ್ತು ಅವರು ಸತ್ಯಲೋಕವನ್ನು ಪಡೆಯುತ್ತಾರೆ. ಎಲ್ಲರಿಂದಲೂ ಅಧಿಕ ಸಮಯ, ತಾಸುಗಟ್ಟಲೆ ಭಗವಂತನನ್ನು ನೇರ ನೋಡಬಲ್ಲ ಮಹಾಜ್ಞಾನಿಗಳು ನೇರವಾಗಿ ಮೋಕ್ಷಸ್ಥಾನಕ್ಕೆ ಹೋಗಬಲ್ಲರು. ಇವರೆಲ್ಲರೂ ಬೇಕೆನಿಸಿದಾಗ ಸಮಾಧಿ ಸ್ಥಿತಿಗೆ ಹೋಗಬಲ್ಲರು. ಕೇವಲ ಕರ್ಮಾನುಷ್ಠಾನದಿಂದ ಈ ಎತ್ತರಕ್ಕೆರಲು ಸಾಧ್ಯವಿಲ್ಲ. ಅಪರೋಕ್ಷಜ್ಞಾನಿಗಳು ಈ ಎತ್ತರಕ್ಕೆ ಹೋಗುವ ದಾರಿಯನ್ನು ಇಲ್ಲಿ ಶುಕಾಚಾರ್ಯರು ಪರೀಕ್ಷಿತನ ಮುಂದೆ ತೆರೆದಿಡುತ್ತಿದ್ದಾರೆ.

No comments:
Post a Comment