ಸ ಸರ್ವವಿದ್
ಹೃದ್ಯನುಭೂಶ್ಚ ಸರ್ವ ಆತ್ಮಾ ಯಥಾ ಸುಪ್ತಜನೇಕ್ಷಿತೈಕಃ ।
ತಂ ಸತ್ಯ
ಮಾನಂದನಿಧಿಂ ಭಜೇತ ಸರ್ವಾತ್ಮನಾSತೋSನ್ಯತ
ಆತ್ಮಘಾತಃ ॥೦೭॥
ಈ ಶ್ಲೋಕದಲ್ಲಿ ಶುಕಾಚಾರ್ಯರು
ಭಗವಂತನ ಚಿತ್ರಣ ಕೊಡುತ್ತಾ ಆತನನ್ನು ‘ಸರ್ವವಿತ್’
ಎಂದು ಕರೆದಿದ್ದಾರೆ. ಮೇಲ್ನೋಟಕ್ಕೆ ಸರ್ವವಿತ್ ಎಂದರೆ ಎಲ್ಲವನ್ನೂ ಬಲ್ಲವ(ಸರ್ವಜ್ಞ) ಎಂದರ್ಥ.
ಆದರೆ ಉಪನಿಷತ್ತಿನಲ್ಲಿ ಹೇಳುವಂತೆ: ಯಃ ಸರ್ವಜ್ಞಃ ಸರ್ವವಿದ್ಯಸ್ಯ ಜ್ಞಾನಮಯಂ
ತಪಃ । ಮುಂಡಕ ೧.೧.೯ । ಇಲ್ಲಿ ಭಗವಂತನನ್ನು ಸರ್ವಜ್ಞ ಮತ್ತು ಸರ್ವವಿತ್ ಎಂದು ಬೇರೆ ಬೇರೆಯಾಗಿ
ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಸರ್ವವಿತ್ ಎಂದರೆ ಕೇವಲ ಸರ್ವಜ್ಞ ಅಲ್ಲ. ಸರ್ವಂ ವಿದಂತಿ-ಸರ್ವವಿತ್.
ಏನನ್ನು ಪಡೆಯಬೇಕೋ ಅದೆಲ್ಲವನ್ನೂ ಪಡೆದವನು(ಆಪ್ತಕಾಮ) ಮತ್ತು ಎಲ್ಲವನ್ನೂ ಬಲ್ಲ ಭಗವಂತ ಸರ್ವವಿತ್.
ಇಂತಹ ಭಗವಂತ ಎಲ್ಲಿದ್ದಾನೆ ಎಂದರೆ ಶುಕಾಚಾರ್ಯರು
ಹೇಳುತ್ತಾರೆ: “ಆತ ನಿಮ್ಮ ಹೃದಯ ಕಮಲದಲ್ಲೇ ಇದ್ದಾನೆ” ಎಂದು. ಈ ಕುರಿತ ಸುಂದರ ವಿವರಣೆ ಮುಂದೆ ಭಾಗವತದಲ್ಲೇ
ಬರುತ್ತದೆ. ತಸ್ಯಾವಿಜ್ಞಾತನಾಮಾSSಸೀತ್
ಸಖಾSವಿಜ್ಞಾತಚೇಷ್ಟಿತಃ ।ಭಾಗವತ-೪-೨೫-೧೦ । ಈ ದೇಹದೊಳಗೆ ಒಬ್ಬ ಜೀವನಿದ್ದಾನೆ ಮತ್ತು ಸದಾ ಅವನೊಂದಿಗಿರುವ ಒಬ್ಬ ಗೆಳೆಯನಿದ್ದಾನೆ.
ಆದರೆ ಆ ಗೆಳೆಯನ ಹೆಸರೇನು, ಆತ ಏನನ್ನು ಮಾಡುತ್ತಿದ್ದಾನೆ ಎನ್ನುವುದು ಜೀವನಿಗೆ ತಿಳಿದಿಲ್ಲ!
ಇದನ್ನೇ ಉಪನಿಷತ್ತಿನಲ್ಲಿ “ದ್ವಾ ಸುಪರ್ಣಾ ಸಯುಜಾ ಸಖಾಯಾ । ಮುಂಡಕ ೩-೧-೧ । ಎಂದಿದ್ದಾರೆ. ಹೃದಿ ಹ್ಯೇಷ ಆತ್ಮಾ । ಷಟ್ ಪ್ರಶ್ನ ೩.೫ । ನಮ್ಮ ಜೀವ ಇರುವುದೂ ಹೃದಯದಲ್ಲಿ, ಭಗವಂತ ಇರುವುದೂ
ಹೃದಯದಲ್ಲಿ. ನಮ್ಮ ಆತ್ಮದ ಅತ್ಯಂತ ಆತ್ಮೀಯ ಗೆಳೆಯನಾಗಿ ಪಕ್ಕದಲ್ಲೇ ಭಗವಂತನಿದ್ದಾನೆ. ಆದರೆ ನಮಗೆ ಆತನ ಪರಿಚಯವೇ ಇಲ್ಲ. ಹಾಗಾಗಿ ನಮ್ಮ ಪಾಲಿಗೆ
ಆತ ಇದ್ದೂ ಇಲ್ಲವಾಗಿದ್ದಾನೆ. ಇದಕ್ಕಾಗಿ ಇಲ್ಲಿ ಶುಕಾಚಾರ್ಯರು
“ಭಗವಂತ ನಿಮ್ಮ ಹೃದಯ ಕಮಲದಲ್ಲೇ ಇದ್ದಾನೆ, ಅವನನ್ನು ಇನ್ನೆಲ್ಲೋ ಹುಡುಕಬೇಡಿ”ಎಂದಿದ್ದಾರೆ.
ಈ ಶ್ಲೋಕದಲ್ಲಿ ಶುಕಾಚಾರ್ಯರು ಭಗವಂತನನ್ನು ‘ಅನುಭೂಃ’ ಎಂದಿದ್ದಾರೆ. ಅನುಭೂಃ
ಎಂದರೆ ತನ್ನ ಇಚ್ಛೆಗನುಗುಣವಾಗಿ ತಾನಿರುವವ.
ಇಚ್ಛಾಮಾತ್ರದಿಂದದಲೇ ಸೃಷ್ಟಿ-ಸ್ಥಿತಿ-ಸಂಹಾರ ಮಾಡಬಲ್ಲ ಭಗವಂತ ತಾನು ಬಯಸಿದ ಅನಂತ ರೂಪ ತೊಡಬಲ್ಲ.
ಇಂತಹ ಭಗವಂತನನ್ನು ಶುಕಾಚಾರಾಯರು ‘ಸರ್ವಃ’ ಎಂದು ಸಂಬೋಧಿಸಿದ್ದಾರೆ. ಸರ್ವಃ ಪದದ ವಿವರಣೆ ಗೀತೆಯಲ್ಲಿ
ಬರುತ್ತದೆ. ಅಲ್ಲಿ ಅರ್ಜುನ ಸರ್ವಂ ಸಮಾಪ್ನೋಷಿ ತತೋSಸಿ
ಸರ್ವಃ ಎಂದಿದ್ದಾನೆ. [ಭಗವದ್ಗೀತಾ-೧೧-೪೦].
ಎಲ್ಲಾ ಕಡೆ ವ್ಯಾಪಿಸಿರುವ, ಎಲ್ಲಾ ಗುಣಗಳಿಂದ ಪೂರ್ಣನಾದ, ಸರ್ವಕರ್ತ, ಸರ್ವಗತ, ಸರ್ವಸಮರ್ಥ
ಭಗವಂತ ಸರ್ವಃ. ಇಂತಹ ಭಗವಂತ ನಮ್ಮೆಲ್ಲರ ಹೃದಯದಲ್ಲಿ ಹೇಗಿದ್ದಾನೆ ಎನ್ನುವುದನ್ನು
ವಿವರಿಸುತ್ತಾ ಶುಕಾಚಾರ್ಯರು ಇಲ್ಲಿ ಬಹಳ ಸುಂದರವಾದ ಮಾತೊಂದನ್ನು ಹೇಳುತ್ತಾರೆ. ಹೇಗೆ ಎಲ್ಲರೂ ಮಲಗಿರುವ
ಮನೆಯೊಂದನ್ನು ಒಬ್ಬ ಕಾವಲುಗಾರ ಸದಾ ಎಚ್ಚರವಾಗಿದ್ದು ಕಾಯುತ್ತಿರುತ್ತಾನೋ ಹಾಗೇ, ನಿದ್ರೆಯಲ್ಲಿರುವ
ಅನಂತ ಜೀವರಾಶಿಯನ್ನು ಪ್ರಾಣದೇವರ ಅಂತರ್ಯಾಮಿಯಾಗಿ ನಿಂತು ಭಗವಂತ ಕಾಪಾಡುತ್ತಿದ್ದಾನೆ. ನಾವು ನಿದ್ರಿಸಿದಾಗ
ನಮ್ಮೆಲ್ಲಾ ಇಂದ್ರಿಯಾಭಿಮಾನಿ ದೇವತೆಗಳು ನಿದ್ರಿಸಬಹುದು. ಆದರೆ ಸದಾ ಎಚ್ಚರವಾಗಿದ್ದು ನಾವು ಉಸಿರಾಡುವಂತೆ
ಮಾಡುವವ ‘ಪ್ರಾಣ’. ಇಂತಹ ಪ್ರಾಣದೇವರ ಅಂತರ್ಯಾಮಿಯಾಗಿರುವ ಭಗವಂತ ಎಲ್ಲಾ ಸತ್ಯಗಳಿಗೂ ಮಿಗಿಲಾದ ನಿರ್ದುಷ್ಟವಾದ
ಸತ್ಯ. “ಯಾವ ದೋಷದ ಸ್ಪರ್ಶವೂ ಇಲ್ಲದ, ಎಲ್ಲಾ ಸದ್ಗುಣಗಳಿಂದ
ಭರಿತವಾದ, ಸದಾ ಸಜ್ಜನರನ್ನು ರಕ್ಷಿಸುವ ಭಗವಂತನೆಂಬ ಆನಂದದ ಕಡಲಿನತ್ತ ಹೋಗು” ಎಂದಿದ್ದಾರೆ ಶುಕಾಚಾರ್ಯರು.
“ಎಲ್ಲಾ ಬಗೆಯಿಂದಲೂ
ತ್ರಿಕರ್ಣಗಳಿಂದ(ಮನಸ್ಸು-ಮಾತು-ಕೃತಿಗಳಿಂದ), ಎಲ್ಲಾ ಅವಸ್ಥೆಗಳಲ್ಲಿ(ಎಚ್ಚರ-ಕನಸು-ನಿದ್ರೆ) ಭಗವಂತನೆಂಬ
ಸತ್ಯದ ಬೆನ್ನುಹತ್ತು. ಇಲ್ಲದಿದ್ದರೆ ಆತ್ಮನಾಶವನ್ನು ಹೊಂದುತ್ತೀಯ” ಎಂದು ಎಚ್ಚರಿಸಿದ್ದಾರೆ ಶುಕಾಚಾರ್ಯರು.
ಇಲ್ಲಿ ಹೇಳಲಾದ ‘ಆತ್ಮಘಾತ’ ಎನ್ನುವ ಪದಕ್ಕೆ ನಾಲ್ಕು
ಅರ್ಥಗಳಿವೆ. ಈ ಹಿಂದೆ ಹೇಳಿದಂತೆ ಆತ್ಮ ಎನ್ನುವ ಪದಕ್ಕೆ ದೇಹ, ಮನಸ್ಸು, ಜೀವ ಮತ್ತು ಪರಮಾತ್ಮ ಎನ್ನುವ
ನಾಲ್ಕು ಅರ್ಥಗಳಿವೆ. ಮನುಷ್ಯ ಜನ್ಮ ಬಂದಾಗಲೂ ಭಗವಂತನ ಸ್ಮರಣೆ ಮಾಡದೇ ಹೋದರೆ ಆ ದೇಹ ವ್ಯರ್ಥವಾಗುತ್ತದೆ.
ಇದು ದೇಹನಾಶ. ಭಗವಂತ ಕರುಣಿಸಿರುವ ಚಿಂತನಾಶೀಲ ಮನಸ್ಸಿನಲ್ಲಿ ಭಗವಂತನ ಸ್ಮರಣೆ ಮಾಡದೇ ಹೋದರೆ ಅದರಿಂದ
ಮನಸ್ಸಿನ ಮತ್ತು ಬುದ್ಧಿಯನಾಶವಾಗಿ ಆತ್ಮ ಉದ್ದಾರದ ಮಾರ್ಗದಲ್ಲಿ ಸಾಗದೇ ಅಧಃಪಾತವನ್ನು ಹೊಂದುತ್ತದೆ.
[ಬುದ್ಧಿನಾಶಾದ್ ವಿನಶ್ಯತಿ ॥ಭಗವದ್ಗೀತಾ-೨-೬೩॥]. ಇದರಿಂದಾಗಿ ನಾವು ಭಗವಂತನನ್ನು ನಿರಾಕರಣೆ ಮಾಡಿಕೊಂಡು ಬದುಕುತ್ತೇವೆ
ಮತ್ತು ಅದರಿಂದಾಗಿ ನಮ್ಮ ಪಾಲಿಗೆ ಭಗವಂತ ಇಲ್ಲವಾಗುತ್ತಾನೆ.
No comments:
Post a Comment