Wednesday, December 11, 2013

Shrimad BhAgavata in Kannada -Skandha-02-Ch-02(9)

ಸ್ಥಿರಂ ಸುಖಂ ಚಾಸನಮಾಸ್ಥಿತೋ ಯತಿರ್ಯದಾ ಜಿಹಾಸುರಿಮಮಂಗ ಲೋಕಮ್
ಕಾಲೇ ಚ ದೇಶೇ ಚ ಮನೋ ನ ಸಜ್ಜೇತ್ ಪ್ರಾಣಾನ್ ನಿಯಚ್ಛೇನ್ಮನಸಾ ಜಿತಾಸುಃ ೧೬

ಮನಶ್ಚ ಬುದ್ಧ್ಯಾSಮಲಯಾ ನಿಯಮ್ಯ ಕ್ಷೇತ್ರಜ್ಞ ಏತಾಂ ನಿನಯೇತ್ ತಮಾತ್ಮನಿ
ಆತ್ಮಾನಮಾತ್ಮನ್ಯವರುಧ್ಯ ಧೀರೋ ಲಬ್ಧೋಪಶಾಂತಿರ್ವಿರಮೇತ ಕೃತ್ಯಾತ್ ೧೭

“ಬುದ್ಧಿಪೂರ್ವಕವಾಗಿ ದೇಹತ್ಯಾಗ ಮಾಡುವವರು ಭಧ್ರವಾದ ಆಸನದಲ್ಲಿ ಚಲನೆ ಇಲ್ಲದೆ ನಿಶ್ಚಲವಾಗಿ ಕುಳಿತುಕೊಂಡು ದೇಶ-ಕಾಲದ ಬಗ್ಗೆ ಯೋಚನೆ ಮಾಡದೇ  ಧ್ಯಾನಕ್ಕೆ ತೊಡಗಬೇಕು” ಎಂದಿದ್ದಾರೆ ಶುಕಾಚಾರ್ಯರು. ಇದು ಬಹಳ ಮುಖ್ಯವಾದ ವಿಚಾರ. ನಮ್ಮಲ್ಲಿ ಕೆಲವರಿಗೆ ಒಂದು ತಪ್ಪು ಕಲ್ಪನೆ ಇದೆ. ಅದೇನೆಂದರೆ ಉತ್ತರಾಯಣದಲ್ಲಿ ಅದರಲ್ಲೂ ಹಗಲಲಿ ಸತ್ತರೆ ಮಾತ್ರ ಮೋಕ್ಷ ಎಂದು. ಇದು ಭೀಷ್ಮಾಚಾರ್ಯರ ಕಥೆಯನ್ನು ಕೇಳಿ ಬಂದಿರುವ ತಪ್ಪು ತಿಳುವಳಿಕೆ. ಉತ್ತರಾಯಣದಲ್ಲಿ ಸತ್ತವರೆಲ್ಲಾ ಮೋಕ್ಷಕ್ಕೆ ಹೋಗುವುದಿಲ್ಲ. ಮೋಕ್ಷ ಯೋಗ್ಯರು ಯಾವಾಗ ಸತ್ತರೂ ಮೋಕ್ಷವನ್ನು ಸೇರುತ್ತಾರೆ.  ಶಾಸ್ತ್ರದಲ್ಲಿ ಬರುವ ಉತ್ತರಾಯಣ, ಶುಕ್ಲಪಕ್ಷ,  ಇತ್ಯಾದಿ ಉಲ್ಲೇಖಗಳು ನಾವು ಹೋಗಿ ಸೇರುವ ದೇವತೆಗಳ ಉಲ್ಲೇಖವಾಗಿದೆ. ಇನ್ನು ಪುರಾಣದಲ್ಲಿ ಪ್ರಯಾಗ-ತ್ರಿವೇಣಿ ಸಂಗಮದಲ್ಲಿ ಸತ್ತರೆ ಮೋಕ್ಷ ಎನ್ನುವ ಮಾತಿದೆ. ಇದು ಆ ಕ್ಷೇತ್ರ ಎಷ್ಟು ಪವಿತ್ರ ಎನ್ನುವುದನ್ನು ಸೂಚಿಸುತ್ತದೆ. ಅಲ್ಲಿ ಸ್ನಾನ ಮಾಡುವುದರಿಂದ ಕ್ರಮೇಣ ಮನಃಶುದ್ಧಿಯಾಗಿ, ಜ್ಞಾನವೃದ್ಧಿಯಾಗಿ ಮೋಕ್ಷಕ್ಕೆ ಹೋಗಬಹುದೇ ಹೊರತು, ಗಂಗೆಗೆ ಹಾರಿದರೆ ಮೋಕ್ಷ ಸಿಗುವುದಿಲ್ಲ.  ಹೀಗಾಗಿ ಇಲ್ಲಿ ಮುಖ್ಯವಾಗಿ ಶುಕಾಚಾರ್ಯರು “ಪ್ರಾಣೋತ್ಕ್ರಮಣ ಕಾಲದಲ್ಲಿ, ದೇಹತ್ಯಾಗ ಮಾಡುವಾಗ  ದೇಶ-ಕಾಲದ ಬಗ್ಗೆ ಯೋಚಿಸಲೇ ಬೇಡ” ಎಂದಿದ್ದಾರೆ. ‘ತದೇವ ಲಗ್ನಂ, ಸುದಿನಂ ತದೇವ’ ಯಾವ ದೇಶದಲ್ಲಿ, ಯಾವ ಕಾಲದಲ್ಲಿ ಭಗವಂತನ ಸ್ಮರಣೆ ಬಂತೋ ಅದೇ ಪುಣ್ಯಕಾಲ, ಅದೇ ಪುಣ್ಯದೇಶ. ಭಗವಂತನ ಸ್ಮರಣೆ ಇಲ್ಲದೆ ಯಾವ-ದೇಶ ಕಾಲದಲ್ಲಿ ಸತ್ತರೂ ಉಪಯೋಗವಿಲ್ಲ. ಹೀಗಾಗಿ ನಮ್ಮ ಚಿಂತನೆ ಕೇವಲ ಭಗವಂತನ ಕುರಿತಾಗಿರಲಿ, ದೇಶ-ಕಾಲದಲ್ಲಿ ಬೇಡ.

ಮೊತ್ತಮೊದಲು ಪ್ರಾಣಾಯಾಮದಿಂದ ಉಸಿರನ್ನು ಗೆದ್ದು, ಪ್ರಾಣದೇವರಲ್ಲಿ ಮನಸ್ಸನ್ನು ನಿಲ್ಲಿಸಿ, ಪ್ರಾಣಾಂತರ್ಗತ ಭಗವಂತನನ್ನು ಧ್ಯಾನ ಮಾಡಬೇಕು. ಪ್ರಾಣದೇವರ ಅನುಗ್ರಹದಿಂದ ಇಂದ್ರಿಯಾಭಿಮಾನಿ ದೇವತೆಗಳನ್ನು ಮನೋಭಿಮಾನಿ ದೇವತೆಗಳ ಅಧೀನವಾಗಿ(ಲಯ ಚಿಂತನೆ) ಧ್ಯಾನ ಮಾಡಬೇಕು. [ಇಂದ್ರಿಯಾಭಿಮಾನಿ ದೇವತೆಗಳು ಯಾರು ಎನ್ನುವ ವಿವರಣೆ ಮುಂದೆ ಭಾಗವತದಲ್ಲೇ ಬರುತ್ತದೆ. ಹದಿನೆಂಟನೇ ಕಕ್ಷ್ಯೆದಿಂದ ಎಂಟನೇ ಕಕ್ಷ್ಯೆಯ ಇಂದ್ರನ  ತನಕ  ಎಲ್ಲಾ ದೇವತೆಗಳು ನಮ್ಮ ಇಂದ್ರಿಯಾಭಿಮಾನಿಗಳು. ಲಯ ಚಿಂತನೆಯ ಕುರಿತು ಈಗಾಗಲೇ ಒಂದನೇ ಸ್ಕಂಧದಲ್ಲಿ ವಿವರಿಸಲಾಗಿದೆ ೧-೧೫-೧೦]. ಇಂದ್ರಿಯಾಭಿಮಾನಿ ದೇವತೆಗಳು  ಮನೋಮಯಕೋಶದ ದೇವತೆಗಳಾದ ಗರುಡ-ಶೇಷ-ರುದ್ರರ ಅಧೀನವಾಗಿ ಪ್ರಾಣಮಯಕೋಶವನ್ನು ನಿಯಂತ್ರಿಸುತ್ತಾರೆ ಎಂದು ಚಿಂತನೆ ಮಾಡಬೇಕು. ನಂತರ ಮನೋಮಯಕೋಶದ ದೇವತೆಗಳನ್ನು ಬುದ್ಧಿಯ ಅಭಿಮಾನಿನಿಯರಾದ ಸರಸ್ವತಿ-ಭಾರತಿಯರ ಅಧೀನವಾಗಿ ಮತ್ತು ಬುದ್ಧಿಯ ಅಭಿಮಾನಿಯರು  ವಿಜ್ಞಾನ ಮತ್ತು ಆನಂದಮಯಕೋಶದ ಅಭಿಮಾನಿಯರಾದ ಬ್ರಹ್ಮ-ವಾಯುವಿನ ಅಧೀನ ಎಂದು ತಾರತಮ್ಯ(portfolio) ಚಿಂತನೆ ಮಾಡಬೇಕು. ಕೊನೆಯಲ್ಲಿ ಎಲ್ಲಾ ದೇವತೆಗಳು ಜೀವಸ್ವರೂಪದಲ್ಲಿರುವ ಕ್ಷೇತ್ರಜ್ಞನಾದ ಭಗವಂತನ ಅಧೀನ ಎಂದು ಚಿಂತನೆ ಮಾಡಬೇಕು. ಜೀವಸ್ವರೂಪದಲ್ಲಿ ಅಣೋರಣೀಯನಾಗಿರುವ  ಕ್ಷೇತ್ರಜ್ಞನಾದ ಭಗವಂತ ಪಿಂಡಾಂಡದಲ್ಲಿರುವ ಭಗವಂತನ ಸ್ವರೂಪ. ಪಿಂಡಾಂಡದಲ್ಲಿರುವ ಭಗವಂತ ಬ್ರಹ್ಮಾಂಡದಲ್ಲಿರುವ ಭಗವಂತನ ಸ್ವರೂಪ. ಬ್ರಹ್ಮಾಂಡದಲ್ಲಿರುವ ಭಗವಂತ ಸರ್ವಗತನಾದ ಭಗವಂತನ ಸ್ವರೂಪ ಎಂದು ಐಕ್ಯಚಿಂತನೆ ಮಾಡಬೇಕು. ಈ ರೀತಿ ಚಿಂತನೆ ಮಾಡುತ್ತಾ ಜೀವ ದೇಹದಿಂದ ಮೇಲಕ್ಕೆ ಹೋಗಬೇಕು.

No comments:

Post a Comment