ಸ
ಭೂತಸೂಕ್ಷ್ಮೇಂದ್ರಿಯಸನ್ನಿಕರ್ಷಾತ್ ಸನಾತನೋSಸೌ
ಭಗವಾನನಾದಿಃ ।
ಮನೋಮಯಂ
ದೇವಮಯಂ ವಿಕಾರ್ಯಂ ಸಂಸಾದ್ಯ ಮತ್ಯಾ ಸಹ ತೇನ ಯಾತಿ ॥೩೩॥
ಈ ಹಂತದಲ್ಲಿ ಪಂಚಭೂತಗಳು, ಪಂಚಜ್ಞಾನೇಂದ್ರಿಯಗಳು, ಪಂಚತನ್ಮಾತ್ರೆಗಳು ಈ ಎಲ್ಲವುದರ
ಅಭಿಮಾನಿ ದೇವತೆಗಳು ಅಂತರ್ಭಾವವಾಗಿ ಭಗವಂತನಲ್ಲಿ ಸೇರಿದ್ದಾರೆ. ಇವರೆಲ್ಲರ ಜೊತೆಗೆ ‘ಜೀವರು’
ಮೋಕ್ಷ ಮಾರ್ಗದಲ್ಲಿ ಮುನ್ನೆಡೆಯುತ್ತಾ, ಆಕಾಶದಲ್ಲಿರುವ ಪ್ರದ್ಯುಮ್ನನ ಪ್ರಾಣಮಯ ರೂಪದಲ್ಲಿ
ಸೇರಿದ್ದಾರೆ. ಇಲ್ಲಿ ಶುಕಾಚಾರ್ಯರು “ಭಗವಂತನ ಈ ರೂಪ ಸನಾತನ ಹಾಗೂ ಅನಾಧಿ” ಎಂದಿದ್ದಾರೆ.
ಮೇಲ್ನೋಟಕ್ಕೆ ಅನಾಧಿ ಮತ್ತು ಸನಾತನ ಎನ್ನುವ ಎರಡೂ ಪದಗಳು ಒಂದೇ ಅರ್ಥವನ್ನು ಕೊಡುತ್ತವೆ
ಎನಿಸಿದರೂ ಕೂಡಾ, ಇಲ್ಲಿನ ಪ್ರಯೋಗವನ್ನು ನೋಡಿದಾಗ ಸನಾತನ ಎನ್ನುವ ಪದಕ್ಕೆ ಭಿನ್ನ ಅರ್ಥವಿದೆ
ಎನ್ನುವುದು ತಿಳಿಯುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದರೆ ‘ನಾತನ’ ಎಂದರೆ ‘ನಾದನ’, ಅಂದರೆ ‘ಶಬ್ದ’ ಎಂದರ್ಥ. [ತೃತಿಯೇ ಅತಿಶಯೋ ಎನ್ನುವ ವ್ಯಾಕರಣ
ನಿಯಮದಂತೆ ನಾತನ=ನಾದನ] ಆದ್ದರಿಂದ ಸನಾತನ ಎಂದರೆ ಶಬ್ದದಿಂದ ಕೂಡಿದ ಆಕಾಶಗತನಾಗಿರುವ ಪ್ರಾಣಮಯ
ನಾಮಕ ಭಗವಂತ. ಭಗವಂತನ ಈ ಪ್ರದ್ಯುಮ್ನ ರೂಪದೊಂದಿಗೆ ಮುಂದೆ ಸಾಗುವ ಜೀವರು ಮುಂದೆ ಮನಸ್ಸಿನ
ನಿಯಾಮಕನಾಗಿರುವ ಸಂಕರ್ಷಣ ರೂಪವನ್ನು ಹೊಂದುತ್ತಾರೆ.
ಸಂಕರ್ಷಣನಿಗೆ ಮೂರು
ರೂಪಗಳು. ಮನಸ್ಸು-ಬುದ್ಧಿ-ಅಹಂಕಾರ. ಈ ಮೂರು ತತ್ವಗಳಲ್ಲಿ
ಮೂರು ರೂಪದಲ್ಲಿರುವ ಭಗವಂತನನ್ನು ಇಲ್ಲಿ ಶುಕಾಚಾರ್ಯರು ‘ದೇವಮಯ’ ಎಂದು ಕರೆದಿದ್ದಾರೆ. ಏಕೆಂದರೆ
ಮನಸ್ಸನ್ನು ನಿಯಂತ್ರಿಸತಕ್ಕಂತಹ ಶಿವನಲ್ಲಿರುವ ಭಗವಂತನ ರೂಪವೇ ಇಂದ್ರಾದಿ ಸಮಸ್ತ ದೇವತೆಗಳನ್ನು ಎತ್ತರಕ್ಕೇರಿಸುವ
ರೂಪ. ಇದು ಮನಸ್ಸಿನ ಪ್ರೇರಕರಾದ ರುದ್ರದೇವರ ಒಳಗಿರುವ, ಎಲ್ಲಾ ದೇವತೆಗಳಿಗೂ ಪ್ರಾಧಾನ್ಯವನ್ನು ಕೊಡುವ,
ದೇವತೆಗಳನ್ನು ಎತ್ತರಕ್ಕೆ ಕರ್ಷಣೆ ಮಾಡುವ ರೂಪ.
ವಿಜ್ಞಾನತತ್ತ್ವಂ
ಗುಣಸನ್ನಿರೋಧಂ ತೇನಾತ್ಮನಾSSತ್ಮಾನಮುಪೈತಿ ಶಾಂತಿಮ್ ।
ಆನಂದಮಾನಂದಮಯೋSವಸಾನೇ ಸರ್ವಾತ್ಮಕೇ ಬ್ರಹ್ಮಣಿ ವಾಸುದೇವೇ ॥೩೪॥
ಆನಂದಮಾನಂದಮಯೋSವಸಾನೇ ಸರ್ವಾತ್ಮಕೇ ಬ್ರಹ್ಮಣಿ ವಾಸುದೇವೇ ॥೩೪॥
ಮನಸ್ಸು-ಬುದ್ಧಿ-ಅಹಂಕಾರದಿಂದಾಚೆಗೆ
ಚಿತ್ತ. ಅದು ನಮ್ಮ ಅನುಭವಗಳ, ನೆನಪಿನ ಸಂಗ್ರಹ ಸ್ಥಾನ (ವಿಜ್ಞಾನಮಯಕೋಶ). ಈ ಚಿತ್ತದಲ್ಲಿ ಭಗವಂತ
ವಾಸುದೇವ ರೂಪನಾಗಿದ್ದಾನೆ. ಇದು ಯಾವ ಗುಣಗಳ ಸ್ಪರ್ಶವೂ ಇಲ್ಲದ ನಿರ್ಗುಣರೂಪ. ಭಗವಂತನ ಅನಿರುದ್ಧ,
ಪ್ರದ್ಯುಮ್ನ ಮತ್ತು ಸಂಕರ್ಷಣ ರೂಪಗಳು ಸೃಷ್ಟಿ-ಸ್ಥಿತಿ-ಸಂಹಾರಕ್ಕಾಗಿ ಸತ್ವ-ರಜಸ್ಸು-ತಮೋಗುಣಗಳನ್ನು
ಬಳಸುವ ರೂಪವಾದರೆ, ವಾಸುದೇವ ರೂಪ ಈ ತ್ರಿಗುಣಗಳಿಂದಾಚೆಗಿನ
ಮೋಕ್ಷವನ್ನು ಕರುಣಿಸುವ ರೂಪ. ಇಂತಹ ವಿಜ್ಞಾನಮಯ ರೂಪವನ್ನು ಕಂಡ ಜೀವರು ಮುಂದೆ ಭಗವಂತನ ಆನಂದಮಯರೂಪವನ್ನು
ಕಾಣುತ್ತಾರೆ. ಈ ಆನಂದಮಯ ಕೋಶದಲ್ಲಿ ಆನಂದದ ಪರಾಕಾಷ್ಠೆಯಲ್ಲಿ ಶ್ರೀಲಕ್ಷ್ಮಿ ಇದ್ದಾಳೆ. ಈ ಶ್ರಿತತ್ತ್ವದ
ಜೊತೆಗೆ ಜೀವರು ಚೇತನದ ನಿಯಾಮಕನಾದ ಭಗವಂತನ ನಾರಾಯಣ ರೂಪದ ದರ್ಶನ ಪಡೆಯುತ್ತಾರೆ. ಈ ದರ್ಶನದ ನಂತರ
ಎಲ್ಲಾ ಜೀವರು ಮುಕ್ತ ನಿಯಾಮಕ ವಾಸುದೇವ ರೂಪದ ಅಧೀನದಲ್ಲಿ ಸದಾ ಕಾಲ ಮೊಕ್ಷದಲ್ಲಿರುತ್ತಾರೆ.
ಇಲ್ಲಿ ಶುಕಾಚಾರ್ಯರು
ಹೇಳುತ್ತಾರೆ: “ಏತಾಂ ಗತಿಂ ಭಾಗವತೋ ಗತೋ ಯಃ ಸ ವೈ ಪುನರ್ನೇಹ ವಿಷಜ್ಜತೇSಙ್ಗ” ಎಂದು. ಅಂದರೆ: ಈ ಸ್ಥಿತಿಯನ್ನು ಪಡೆದ ಜೀವನಿಗೆ ಸಂಸಾರದ ಲವಲೇಶವಿರುವುದಿಲ್ಲ. ಆತ ಸದಾ ವಾಸುದೇವನ
ಜೊತೆಗೆ ವಾಸಮಾಡುತ್ತಾನೆ. ಸಂಸಾರದಲ್ಲಿ ಮುಚ್ಚಿಕೊಂಡು, ಮೋಕ್ಷದಲ್ಲಿ ಮೋಕ್ಷವನ್ನು ಸೇರಿದ ಜೀವರಿಗೆ
ತನ್ನನ್ನು ತಾನು ಬಿಚ್ಚಿ ಬೆಳಗಿಸಿ ತೋರುವ ರೂಪ-ಭಗವಂತನ ವಾಸುದೇವ ರೂಪ.
No comments:
Post a Comment