ಸಾವನ್ನು ಎದುರು
ನೋಡುತ್ತಿರುವ ಪರೀಕ್ಷಿತನೊಂದಿಗೆ ಕುಳಿತು ಶುಕಾಚಾರ್ಯರಿಂದ ಭಾಗವತ ಉಪದೇಶವನ್ನು ಕೇಳುತ್ತಿರುವ
ನಿಮಗೆ ಈ ಹಂತದಲ್ಲಿ ಒಂದು ಪ್ರಶ್ನೆ ಬರಬಹುದು. ಅದೇನೆಂದರೆ: “ಪರೀಕ್ಷಿತ ಇನ್ನು ಏಳು ದಿನಗಳಲ್ಲಿ
ದೇಹತ್ಯಾಗ ಮಾಡಿ ಹೊರಟು ಹೋಗುತ್ತಾನೆ, ಆದ್ದರಿಂದ ಆತನಿಗೆ ಯಾವುದೇ ಐಹಿಕ ಕಾಮನೆಗಳಿಲ್ಲ. ಆದರೆ ಐಹಿಕ
ಕಾಮನೆಗಳೊಂದಿಗೆ ಬದುಕಬೇಕು ಎಂದುಕೊಂಡಿರುವ ನಮಗೆ ಶುಕಾಚಾರ್ಯರ ಸಂದೇಶವೇನು” ಎಂದು. ಬನ್ನಿ, ಈ
ನಮ್ಮ ಪ್ರಶ್ನೆಗೆ ಶುಕಾಚಾರ್ಯರ ಉತ್ತರವೇನೆಂದು ಅವರ ಬಾಯಿಂದಲೇ ಕೇಳೋಣ.
ಶ್ರೀಶುಕ ಉವಾಚ--
ಬ್ರಹ್ಮವರ್ಚಸಕಾಮಸ್ತು
ಯಜೇತ ಬ್ರಹ್ಮಣಸ್ಪತಿಮ್ ।
ಇಂದ್ರಮಿಂದ್ರಿಯಕಾಮಸ್ತು
ಪ್ರಜಾಕಾಮಃ ಪ್ರಜಾಪತೀನ್ ॥೦೨॥
ಇಲ್ಲಿ
ಶುಕಾಚಾರ್ಯರು ಕಾಮನೆಗಳಲ್ಲಿ ಒಳ್ಳೆಯ ಕಾಮನೆಗಳ ಕುರಿತು ಹೇಳುವುದನ್ನು ಕಾಣುತ್ತೇವೆ. ನಾವು ಯಾವುದನ್ನೂ ಬಯಸಲೇಬಾರದು ಎಂದೇನೂ ಇಲ್ಲಾ. ಕಾಮನೆಗಳಲ್ಲಿ
ಒಳ್ಳೆಯ ಕಾಮನೆಗಳೂ ಇವೆ. ಹಾಗಾಗಿ ಅಂತಹ ಒಳ್ಳೆಯ ಕಾಮನೆಗಳಲ್ಲಿ ಬ್ರಹ್ಮವರ್ಚಸ್ಸು, ಇಂದ್ರಿಯಪಾತವ
ಮತ್ತು ಪ್ರಜಾಕಾಮದ ಕುರಿತು ಈ ಶ್ಲೋಕದಲ್ಲಿ ಶುಕಾಚಾರ್ಯರು ವಿವರಿಸುವುದನ್ನು ಕಾಣುತ್ತೇವೆ.
ಇಂದ್ರಿಯನಿಗ್ರಹ
ಮಾಡಿ, ವೇದದ ಮೂಲಕ ಭಗವಂತನ ಅರಿವನ್ನು ಪಡೆದಾಗ, ಸಹಜವಾಗಿ ಮುಖದಲ್ಲಿ ತೇಜಸ್ಸು ಮೂಡುತ್ತದೆ.
ಇದನ್ನು ಬ್ರಹ್ಮವರ್ಚಸ್ಸು ಎನ್ನುತ್ತಾರೆ. ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ಈ ರೀತಿ ವೇದದ
ರಹಸ್ಯವನ್ನು ತಿಳಿದು, ಬ್ರಹ್ಮವರ್ಚಸ್ಸಿಯಾಗಬೇಕು ಎನ್ನುವ ಕಾಮನೆ ಉಳ್ಳವರು ಬೃಹಸ್ಪತಿಯ ಅನುಗ್ರಹ
ಪಡೆಯಬೇಕು” ಎಂದು. ಸ್ಥೂಲವಾಗಿ ನೋಡಿದರೆ ಬೃಹಸ್ಪತಿ ಎಂದರೆ ದೇವತೆಗಳ ಗುರು, ನಮ್ಮ ಬುದ್ಧಿಯ
ದೇವತೆ. ಆದರೆ ಸೂಕ್ಷ್ಮವಾಗಿ ನೋಡಿದರೆ ಬೃಹಸ್ಪತಿ
ಎಂದರೆ ಬೃಹತೀ-ಪತಿ. ಅಂದರೆ ವೇದಮಾನಿನಿ ಭಾರತೀ-ಪತಿ.
ಹಾಗಾಗಿ ವೇದ ನಮಗೆ ಅರ್ಥವಾಗಿ ನಾವು ಬ್ರಹವರ್ಚಸ್ಸಿಯಾಗಬೇಕು ಎಂದರೆ ವಿಜ್ಞಾನಮಯಕೋಶದ
ನಿಯಾಮಕರಾದ ಬ್ರಹ್ಮ-ವಾಯುವಿನ ಅನುಗ್ರಹ ಪಡೆಯಬೇಕು. ಬ್ರಹ್ಮಾಂಡದಲ್ಲಿ ವಿಜ್ಞಾನಮಯಕೋಶದ ನಿಯಾಮಕ
ಚತುರ್ಮುಖ ಬ್ರಹ್ಮನಾದರೆ, ಪಿಂಡಾಂಡದಲ್ಲಿ ಪ್ರಾಣದೇವರು ವಿಜ್ಞಾನಮಯಕೋಶದ ನಿಯಾಮಕರು. ಹೀಗಾಗಿ
ವಿದ್ಯಾದೇವತೆ ನಮಗೆ ಒಲಿಯಬೇಕಾದರೆ ಮತ್ತು ನಮ್ಮ ವಿಜ್ಞಾನಮಯಕೋಶ ತೆರೆದುಕೊಳ್ಳಬೇಕಾದರೆ ನಾವು
ಭಾರತೀಪತಿ ಮುಖ್ಯಪ್ರಾಣನಿಗೆ ಹಾಗೂ ಆತನ ಅಂತರ್ಗತ ಮತ್ತು ಅತ್ಯಂತ ಶ್ರೇಷ್ಠನಾದ, ಸರ್ವದೇವತೆಗಳ ಒಡೆಯನಾದ
ಭಗವಂತನಿಗೆ ಶರಣಾಗಬೇಕು.
‘ಇಂದ್ರಿಯಪಾತವ’
ಇನ್ನೊಂದು ಉತ್ತಮವಾದ ಬಯಕೆ. ನಮ್ಮ ಕಣ್ಣು-ಕಿವಿ ಇತ್ಯಾದಿ ಇಂದ್ರಿಯಗಳು ಚನ್ನಾಗಿರಬೇಕು ಎನ್ನುವ
ಬಯಕೆಯೇ ಇಂದ್ರಿಯಪಾತವ. ನಾನು ಬೇರೆಬೇರೆ ಪುಣ್ಯಕ್ಷೇತ್ರಗಳಿಗೆ ಹೋಗಬೇಕು, ಆ ಕ್ಷೇತ್ರಗಳಲ್ಲಿನ
ಭಗವಂತನ ಮೂರ್ತಿಯನ್ನು ಕಣ್ಣಾರೆ ನೋಡಬೇಕು; ವೇದ ಉಪನಿಷತ್ತುಗಳನ್ನು ಓದಬೇಕು; ಜ್ಞಾನಿಗಳ
ಮಾತನ್ನು ಕೇಳಬೇಕು; ಒಳ್ಳೆಯ ಮಾತನ್ನಾಡಬೇಕು; ಇತ್ಯಾದಿ ಬಯಕೆಗಳು ಶ್ರೇಷ್ಠ ಬಯಕೆಗಳು. ಈ ರೀತಿಯ ಬಯಕೆಯನ್ನು
ವ್ಯಕ್ತಪಡಿಸುವುದನ್ನು ನಾವು ಶಾಂತಿಮಂತ್ರದ ಪ್ರಾರ್ಥನೆಯಲ್ಲಿ ಕಾಣುತ್ತೇವೆ. ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ, ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ ।
ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿರ್ವ್ಯಶೇಮ ದೇವಹಿತಂಯದಾಯುಃ ॥ ಇದು ಅಧ್ಯಯನಕ್ಕೆ
ಮೊದಲು ಗುರು-ಶಿಷ್ಯರು ಪೂಜಾರ್ಹರಾದ ತಮ್ಮ ಇಂದ್ರಿಯಾಭಿಮಾನಿ ದೇವತೆಗಳಲ್ಲಿ ಮಾಡುವ ಪ್ರಾರ್ಥನೆ.
ಅವರು ಹೇಳುತ್ತಾರೆ: “ನೀವು ನಮ್ಮ ಕಿವಿ ಒಳ್ಳೆಯದನ್ನು ಕೇಳುವಂತೆ, ನಮ್ಮ ಕಣ್ಣು ಒಳ್ಳೆಯದನ್ನು ನೋಡುವಂತೆ ಅನುಗ್ರಹಿಸಿ; ನಾವು ಬದುಕ್ಕಿದ್ದಾಗ ನಮಗೆ
ಆರೋಗ್ಯವಂತ ಮತ್ತು ಗಟ್ಟಿಮುಟ್ಟಾದ ಇಂದ್ರಿಯ ಮತ್ತು ಶರೀರವನ್ನು ಕೊಡಿ” ಎಂದು. ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ಇಂಥಹ ಇಂದ್ರಿಯಪಾತವ ಪಡೆಯಲು
ಇಂದ್ರನನ್ನು ಪ್ರಾರ್ಥಿಸಿ” ಎಂದು. ನಮಗೆ ತಿಳಿದಂತೆ ನಮ್ಮ ಬಾಹ್ಯೇನ್ದ್ರಿಯಗಳ ಅಭಿಮಾನಿ
ದೇವತೆಗಳಲ್ಲಿ ಹಿರಿಯ ದೇವೇಂದ್ರ. ಹೀಗಾಗಿ
ಇಂದ್ರಿಯಪಾತವ ಬೇಕು ಎಂದರೆ ಇಂದ್ರಿಯಾಭಿಮಾನಿಗಳಲ್ಲೇ ಶ್ರೇಷ್ಠನಾದ ಇಂದ್ರನ ಉಪಾಸನೆ
ಮಾಡಬೇಕು. ಇಲ್ಲಿ ಇಂದ್ರ ಎಂದರೆ ಕೇವಲ ಇಂದ್ರನಲ್ಲ.
ಆಚಾರ್ಯ ಮಧ್ವರು ತೈತ್ತಿರೀಯ ಭಾಷ್ಯದಲ್ಲಿ ಹೇಳುವಂತೆ: ‘ಪ್ರದ್ಯುಮ್ನಂಚ ಇಂದ್ರ ನಾಮಕಃ’. ಆದ್ದರಿಂದ ಇಲ್ಲಿ ‘ಇಂದ್ರ’ ಎಂದರೆ ದೇವೇಂದ್ರ ಹಾಗೂ ಆತನ ಅಂತರ್ಗತನಾದ ಭಗವಂತ.
ಇಂದ್ರಿಯ ಕಾಮನೆ
ಎನ್ನುವಲ್ಲಿ ಮತ್ತೊಂದು ವಿಶಿಷ್ಟವಾದ ಕಾಮನೆ ಪ್ರಜಾಕಾಮನೆ. ನಾವು ಮಾಡಿದ ಅಧ್ಯಯನವನ್ನು ಮುಂದುವರಿಸಿಕೊಂಡು ಹೋಗುವ ಒಂದು ತಲೆಮಾರು ಬೇಕು ಎಂದು
ಬಯಸುವುದು ಪ್ರಜಾಕಾಮ. ಅದು ಮಗನಾಗಿರಬಹುದು, ಮಗಳಾಗಿರಬಹುದು ಅಥವಾ ಶಿಷ್ಯ/ವಿದ್ಯಾರ್ಥಿಯಾಗಿರಬಹುದು.
ಪ್ರಜಾಸಂತತಿಯ ಬೆಳವಣಿಗೆಗೆ ಕಾರಣೀಭೂತರು ಒಂಬತ್ತು ಮಂದಿ ಪ್ರಜಾಪತಿಗಳು. ಇವರಲ್ಲಿ ಹಿರಿಯ ಹತ್ತನೇ
ಕಕ್ಷ್ಯದಲ್ಲಿರುವ ಧಕ್ಷ. ನಂತರ ಹದಿನೈದನೇ ಕಕ್ಷ್ಯದಲ್ಲಿರುವ ಭೃಗು ಮತ್ತು ಹದಿನಾರನೇ ಕಕ್ಷ್ಯಯಲ್ಲಿರುವ
ಸಪ್ತರ್ಷಿಗಳು(ಕಶ್ಯಪ, ಅತ್ರಿ, ವಸಿಷ್ಠ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ಭಾರದ್ವಾಜ). ಈ ನವ ಪ್ರಜಾಪತಿಗಳು ಇಡೀ ಪ್ರಪಂಚದ ಸಂತತಿಯ
ಮೂಲಪುರುಷರು ಅಥವಾ ಆದಿಮಾನವರು. ಇಷ್ಟೇ ಅಲ್ಲದೆ ದಕ್ಷಪ್ರಜಾಪತಿ ನಮ್ಮ ಜನನೇಂದ್ರಿಯದ ಅಭಿಮಾನಿ ದೇವತೆ
ಕೂಡಾ ಹೌದು. ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ಪ್ರಜಾಕಾಮಕ್ಕಾಗಿ ಪ್ರಜಾಪತಿಯರನ್ನು ಪೂಜೆಮಾಡು”
ಎಂದು. ಪ್ರಜಾಪತಿಗಳು ಒಂಬತ್ತಾದರೂ ಕೂಡಾ, ಮುಖ್ಯ ಪ್ರಜಾಪತಿ ಬ್ರಹ್ಮ-ವಾಯು ಹಾಗೂ ಮಹಾಪ್ರಜಾಪತಿ ಆ
ಭಗವಂತ. ಹಾಗಾಗಿ ಪ್ರಜಾಕಾಮ ಸಿಧ್ಯರ್ಥಕ್ಕಾಗಿ ಈ ಎಲ್ಲಾ ನವ ಪ್ರಜಾಪತಿಗಳಲ್ಲಿ ಭಗವಂತನನ್ನು ಕಂಡು
ಆರಾಧನೆ ಮಾಡಬೇಕು.
No comments:
Post a Comment