Monday, February 10, 2014

Shrimad BhAgavata in Kannada -Skandha-02-Ch-02(19)

ಭಗವಾನ್ ಸರ್ವಭೂತೇಷು ಲಕ್ಷಿತಶ್ಚಾತ್ಮನಾ ಹರಿಃ
ದೃಶ್ಯೈರ್ಬುದ್ಧ್ಯಾದಿಭಿರ್ದ್ರಷ್ಟಾ ಲಕ್ಷಣೈರನುಮಾಪಕೈಃ ೩೮

ಭಾಗವತ ಗ್ರಂಥದ ವಿಶೇಷವನ್ನು ಶುಕಾಚಾರ್ಯರು ಇಲ್ಲಿ ಮತ್ತೊಮ್ಮೆ ವಿವರಿಸಿದ್ದಾರೆ. ಭಗವಂತನನ್ನು ಕೇವಲ ಯುಕ್ತಿ(Logic)ಯಿಂದ ತಿಳಿಯುವುದು ಸಾಧ್ಯವಿಲ್ಲವಾದರೂ ಕೂಡಾ, ಅನುಭವದಿಂದ ಕೂಡಿದ ಯುಕ್ತಿಯಿಂದ ಭಗವಂತನನ್ನು ತಿಳಿಯಬಹುದು ಎಂದು ಭಾಗವತ ಹೇಳುತ್ತದೆ. ಪ್ರತಿಯೊಬ್ಬ ಜೀವನೂ ಕೂಡಾ ತನ್ನೊಳಗಿರುವ ಭಗವಂತನನ್ನು ಗುರುತಿಸಬಹುದು ಎನ್ನುವ ಬರವಸೆಯನ್ನು ಭಾಗವತ ನೀಡುತ್ತದೆ. “ಭಗವಂತನನ್ನು ನೀವು ನಿಮ್ಮೊಳಗೇ ಗುರುತಿಸಿಕೊಳ್ಳಬಹುದು” ಎಂದು ವೇದವ್ಯಾಸ ರೂಪದಲ್ಲಿ ಸ್ವಯಂ ಭಗವಂತನೇ ಹೇಳಿದ್ದಾನೆ. ಭಗವಂತನ ಅಸ್ಥಿತ್ವದ ಚಿಂತನಾಕ್ರಮವನ್ನು ಹೇಗೆ ಭಾಗವತ ನಮಗೆ ನೀಡುತ್ತದೆ ಎನ್ನುವುದನ್ನು ಇಲ್ಲಿ   ಶುಕಾಚಾರ್ಯರು ವಿವರಿಸಿರುವುದನ್ನು ಕಾಣುತ್ತೇವೆ. ಜ್ಞಾನ/ಅಜ್ಞಾನ-ಇಚ್ಛೆ-ಪ್ರಯತ್ನ-ಸುಖ/ದುಃಖ ಇವು ಪ್ರತಿಯೊಂದು ಚೇತನವೂ ಅನುಭವಿಸುವ ಸಂಗತಿಗಳು. ಇವೆಲ್ಲವೂ ನಮ್ಮಲ್ಲೇ ಇದ್ದರೂ ಕೂಡಾ, ಇವು ನಮ್ಮ ಅಧೀನವಾಗಿಲ್ಲ ಎಂದು ಚಿಂತಿಸುವಂತೆ ಮಾಡುತ್ತದೆ ಭಾಗವತ. ಉದಾಹರಣೆಗೆ ನಾವು ಸುಖ ಪಡಬೇಕೆಂದು ಇಚ್ಛೆ ಪಡುತ್ತೇವೆ, ಆದರೆ ದುಃಖ ಸರಮಾಲೆಯಾಗಿ ಬರುತ್ತದೆ. ನಮ್ಮ ಇಚ್ಛೆಯ ಹಿಡಿತ/ನಿಯಂತ್ರಣ ನಮ್ಮಲ್ಲಿಲ್ಲ. ನಾವು ಗೆಲ್ಲಲ್ಲು ಪ್ರಯತ್ನಿಸುತ್ತವೆ, ಆದರೆ ಸೋಲುತ್ತವೆ. ಇವೆಲ್ಲವೂ ಪ್ರತಿಯೊಬ್ಬರಿಗೂ ಜೀವನದಲ್ಲಿ ಅನುಭವಕ್ಕೆ ಬರುವ ಸಂಗತಿ. ಇದರಿಂದ ಸ್ಪಷ್ಟವಾಗಿ ನಮಗೆ ತಿಳಿಯುವುದು ಏನೆಂದರೆ: ನಮ್ಮಲ್ಲಿ    ಜ್ಞಾನ/ಅಜ್ಞಾನ-ಇಚ್ಛೆ-ಪ್ರಯತ್ನ-ಸುಖ/ದುಃಖ ಎಲ್ಲವೂ ಇದೆ, ಆದರೆ ನಾವು ಅದರ ಒಡೆಯರಲ್ಲ ಎನ್ನುವುದು. ಈ ಅನುಭವದ ಯುಕ್ತಿಯಿಂದ ನಾವು ನೋಡಿದಾಗ ಇವೆಲ್ಲವನ್ನೂ ನಿಯಂತ್ರಿಸುವ ಪರಶಕ್ತಿಯೊಂದಿದೆ ಎನ್ನುವುದು ತಿಳಿಯುತ್ತದೆ.  “ನನ್ನಲ್ಲಿ ಇಚ್ಛೆ ಇದೆ, ಪ್ರಯತ್ನವಿದೆ, ಜ್ಞಾನವಿದೆ. ಇವೆಲ್ಲಾ ಇದ್ದರೂ ಕೂಡಾ ಇದರ ಒಡೆತನ ನನ್ನಲ್ಲಿ ಏಕಿಲ್ಲಾ”  ಎಂದು ನಾವು ಚಿಂತನೆ ಮಾಡಬೇಕು. ಕೇನೋಪನಿಷತ್ತಿನಲ್ಲಿ ಹೇಳುವಂತೆ: ಕೇನೇಷಿತಂ ಪತತಿ ಪ್ರೇಷಿತಂ ಮನಃ ಕೇನ ಪ್ರಾಣಃ ಪ್ರಥಮಃ ಪ್ರೈತಿ ಯುಕ್ತಃ ಕೇನೇಷಿತಾಂ ವಾಚಮಿಮಾಂ ವದಂತಿ ಚಕ್ಷುಃ ಶ್ರೋತ್ರಂ ಕ ಉ ದೇವೋ ಯುನಕ್ತಿ ೧-೧  ಅಧ್ಯಾತ್ಮ ಚಿಂತನೆಯ ಮೂಲಭೂತ ಉಪಕ್ರಮವಿದು. ನಮ್ಮ ಮನಸ್ಸು ಯಾವುದ್ಯಾವುದೋ ವಿಷಯಗಳ ಕಡೆಗೆ ಹರಿಯುತ್ತದೆ. ಕೆಲವನ್ನು ಗ್ರಹಿಸುತ್ತದೆ, ಇನ್ನು ಕೆಲವನ್ನು ಗ್ರಹಿಸುವುದಿಲ್ಲ; ಕೆಲವನ್ನು ಬಯಸುತ್ತದೆ, ಇನ್ನು ಕೆಲವನ್ನು ಬಯಸುವುದಿಲ್ಲ; ಕೆಲವನ್ನು ಮರೆಯುತ್ತದೆ, ಇನ್ನು ಕೆಲವನ್ನು ಮರೆಯುವುದಿಲ್ಲ. ವಿಷಯ ಗ್ರಹಣ ಮಾಡಬೇಕು ಎಂದರೆ ಮಾಡಲು ಆಗುವುದಿಲ್ಲ, ಮಾಡಬಾರದು ಎಂದರೆ ಮಾಡುತ್ತದೆ;  ಮರೆತುಬಿಡು ಎಂದರೆ ಮರೆಯುವುದಿಲ್ಲಾ, ನೆನಪಿನಲ್ಲಿಟ್ಟುಕೋ ಎಂದರೆ ಮರೆತುಬಿಡುತ್ತದೆ!  ಇಂತಹ ಮನಸ್ಸೆಂಬ ಒಂದು ವಿಶಿಷ್ಠ ಯಂತ್ರ ನಮ್ಮೊಳಗೆ ಕಾರ್ಯ ನಿರ್ವಹಿಸುತ್ತಿರುತ್ತದೆ. ಅದನ್ನು ಯಾರೋ ನಿಯಂತ್ರಿಸುತ್ತಿರುತ್ತಾರೆ. ಇನ್ನು ನಮ್ಮ ಉಸಿರು. ತಾಯಿಯ ಹೊಟ್ಟೆಯಲ್ಲಿದ್ದಾಗ ನಾವು ಮೂಗಿನಿಂದ ಉಸಿರಾಡುತ್ತಿರಲಿಲ್ಲ, ಆದರೆ ಈ ಭೂಮಿಗೆ ಬಿದ್ದ ತಕ್ಷಣ ಉಸಿರು ಆರಂಭವಾಯಿತು. ಈ ಉಸಿರು ಎಂದು ನಿಲ್ಲುತ್ತದೆ ಎನ್ನುವುದು ನಮಗೆ ತಿಳಿದಿಲ್ಲ, ಅದರ ನಿಯಂತ್ರಣ ನಮ್ಮ ಕೈಯಲ್ಲಿಲ್ಲ.  ಇದೇ ರೀತಿ ನಮ್ಮ ಮಾತು, ನಮ್ಮ ದೃಷ್ಟಿ(ಕಣ್ಣು) ಇತ್ಯಾದಿ. ಎಲ್ಲವೂ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿರುತ್ತದೆ. ಈ ವ್ಯವಸ್ಥೆಯ ಹಿಂದಿನ ಶಕ್ತಿ ಯಾವುದು ಎನ್ನುವುದಕ್ಕೆ ಇಂದಿನ ವಿಜ್ಞಾನದಲ್ಲಿ ಉತ್ತರವಿಲ್ಲ. ಆದರೆ ಇವೆಲ್ಲವುದಕ್ಕೂ ಉತ್ತರವಾಗಿರುವ ಭಗವಂತನನ್ನು ಭಾಗವತ ನಮ್ಮ ಮುಂದೆ ತೆರೆದಿಡುತ್ತದೆ. ಋಗ್ವೇದದಲ್ಲಿ ಹೇಳುವಂತೆ: ಯೋ ದೇವಾನಾಂ ನಾಮಧಾ ಏಕ ಏವ ತಂ ಸಂಪ್ರಶ್ನಂ ಭುವನಾ ಯಂತ್ಯನ್ಯಾ೧೦.೦೮೨.೦೩  ಎಲ್ಲಾ ಪ್ರಶ್ನೆಗಳಿಗೂ ಕೊನೇಯ ಉತ್ತರ ಹಾಗೂ ಎಲ್ಲರಿಗೂ ಕೊನೇಯ ತನಕ ಪ್ರಶ್ನೆಯೇ ಆಗಿರುವವ ಯಾರೋ ಅವನೇ ಭಗವಂತ. ಮನುಷ್ಯ ತನ್ನನ್ನು ತಾನು ವಿಶ್ಲೇಷಣೆ ಮಾಡಿಕೊಂಡಾಗ, ಅಲ್ಲಿ ಬರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರರೂಪವಾಗಿ ಸಿಗುವಂತಹ ವಸ್ತುವನ್ನು ವೇದವ್ಯಾಸರು ಭಾಗವತ ರೂಪದಲ್ಲಿ ಶುಕಾಚಾರ್ಯರಿಗೆ ನೀಡಿದರು.  ಇದು ನಮ್ಮೊಳಗಿರುವ ಅಂತರ್ಯಾಮಿ ಭಗವಂತನ ಅರಿವು ಕೊಡುವ ಶ್ರೇಷ್ಠ ಗ್ರಂಥವಾಗಿರುವುದರಿಂದ, ಶುಕಾಚಾರ್ಯರು ಇದನ್ನು ಪರೀಕ್ಷಿತನಿಗೆ ಉಪದೇಶಿಸಲು ಆಯ್ಕೆ ಮಾಡಿಕೊಂಡರು.

ತಸ್ಮಾತ್ ಸರ್ವಾತ್ಮನಾ ರಾಜನ್ ಹರಿಃ ಸರ್ವತ್ರ ಸರ್ವದಾ
ಶ್ರೋತವ್ಯಃ ಕೀರ್ತಿತವ್ಯಶ್ಚ ಸ್ಮರ್ತವ್ಯೋ ಭಗವಾನ್ನೃಣಾಮ್ ೩೯

ಈ ಅಧ್ಯಾಯದ ಪ್ರಾರಂಭದಲ್ಲಿ ಹೇಳಿರುವ ಮಾತನ್ನು ಶುಕಾಚಾರ್ಯರು ಇಲ್ಲಿ ಉಪಸಂಹಾರ ಮಾಡುತ್ತಿದ್ದಾರೆ. ನಾವು ಎಲ್ಲಾ ಕಾಲದಲ್ಲಿ, ಎಲ್ಲಾ ದೇಶದಲ್ಲಿ, ಎಲ್ಲಾ ಬಗೆಯಿಂದ ಮಾಡಬೇಕಾಗಿರುವುದು ಏನೆಂದರೆ: ಸದಾ ಭಗವಂತನ ಬಗೆಗೆ ಕೇಳುವುದು(ತಿಳಿದವರಿಂದ/ಗುರುಮುಖದಿಂದ), ಸದಾ ಭಗವಂತನ  ಸ್ಮರಣೆ ಮಾಡುವುದು ಹಾಗೂ ನಮ್ಮಲ್ಲಿರುವ ಜ್ಞಾನವನ್ನು ಶಿಷ್ಯರಿಗೆ ಕೊಡುವುದು.
ಜೀವನದ ದೊಡ್ಡ ತಪಸ್ಸು ಎಂದರೆ ನಿರಂತರ ಅಧ್ಯಯನ; ಆ ಅಧ್ಯಯನ ಮಾಡಿ ನಾವು ಏನನ್ನು ಜೀರ್ಣಿಸಿಕೊಂಡಿದ್ದೇವೆ, ಅದನ್ನು  ಇನ್ನೊಬ್ಬರಿಗೆ ಕೊಡಬೇಕು. ನಾವು ಗಳಿಸಿದ ಜ್ಞಾನವನ್ನು ಇನ್ನೊಬ್ಬರಿಗೆ ಕೊಡದೇ ಬದುಕುವುದು ಲೋಭತನವಾಗುತ್ತದೆ. ಜ್ಞಾನಲೋಭ ಧನಲೋಭಕ್ಕಿಂತ ಕೆಟ್ಟದ್ದು. ಜ್ಞಾನಿಗಳು ತಮ್ಮೊಳಗಿರುವ ಜ್ಞಾನವನ್ನು ಸಮಾಜಕ್ಕೆ ಕೊಡದೇ ಇದ್ದರೆ, ಸಮಾಜ ಆ ಜ್ಞಾನದಿಂದ ವಂಚಿತವಾಗಿ ಅಜ್ಞಾನದ ದಾರಿದ್ರ್ಯದಲ್ಲಿ ಮುಳುಗುತ್ತದೆ. ಹೀಗಾಗಿ ಮೊದಲು ಕೇಳಬೇಕು, ಕೇಳಿದ್ದನ್ನು ತಿಳಿದುಕೊಳ್ಳಬೇಕು ಮತ್ತು ತಿಳಿದುಕೊಂಡಿದ್ದನ್ನು ಸಮಾಜಕ್ಕೆ ಹಂಚಬೇಕು.
ಜ್ಞಾನವನ್ನು ಹಂಚಬೇಕು ಎಂದು ಹೇಳಿದಾಗ ನಮಗೊಂದು ಸಮಸ್ಯೆ ಬರುತ್ತದೆ. ಬ್ರಹ್ಮಸೂತ್ರದಲ್ಲಿ ವೇದವ್ಯಾಸರು ಹೇಳಿರುವಂತೆ: ಓಂ ಅನಾಮಿಷ್ಕುರ್ವನ್ನನ್ವಯಾತ್ ಓಂ ೪೯-೪೮೨  ಅಂದರೆ: ಜ್ಞಾನ ಎಲ್ಲಿ ದುರುಪಯೋಗವಾಗುವ ಸಾಧ್ಯತೆ ಇದೆಯೋ ಅಲ್ಲಿ ಅದನ್ನು ಆವಿಷ್ಕಾರ ಮಾಡಬಾರದು. ಇದನ್ನೇ ಶ್ರೀಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ: ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ । ನಚಾಶುಶ್ರೂಷವೇ ವಾಚ್ಯಂ ನಚ ಮಾಂ ಯೋSಭ್ಯಸೂಯತಿ ॥೧೮-೬೭॥ ಅಂದರೆ: “ಇದನ್ನು ನೇಮದ ನಿಷ್ಠೆ ಇರದವರಿಗೆ ಹೇಳಬೇಡ. ಭಕ್ತಿ ಇರದವನಿಗೆ ಎಂದೂ ಹೇಳಬೇಡ. ಕೇಳುವಾಸೆ ಇರದವನಿಗೂ ಹೇಳಬೇಡ. ನನ್ನ ಬಗೆಗೆ ಕಿಚ್ಚು ಪಡುವವನಿಗಂತೂ ಹೇಳಲೇಬೇಡ” ಎಂದರ್ಥ. ಈ ಎಲ್ಲಾ ವಿಷಯವನ್ನು ಕೇಳಿದಾಗ ಜ್ಞಾನವನ್ನು ಯಾರಿಗೆ ಹೇಳಬೇಕು ಮತ್ತು ಯಾರಿಗೆ ಹೇಳಬಾರದು ಎನ್ನುವ ಸಮಸ್ಯೆ ಎದುರಾಗುತ್ತದೆ. ಈ ಎಲ್ಲಾ ಕಾರಣದಿಂದ ಒಂದು ಕಾಲದಲ್ಲಿ ವೇದಾಂತವನ್ನು ಸಾರ್ವಜನಿಕವಾಗಿ ಬಿಚ್ಚಿಡಬಾರದು, ಅದನ್ನು ರಹಸ್ಯವಾಗಿಡಬೇಕು ಎನ್ನುವ ಅಭಿಪ್ರಾಯ ಹೆಚ್ಚಾಗಿ ಬೆಳೆಯಿತು. ಇದರ ಪರಿಣಾಮ: ಕಾಲಕ್ರಮೇಣ ಮುಚ್ಚಿಟ್ಟ ಜ್ಞಾನವನ್ನು ತೆರೆಯುವವರೇ ಇಲ್ಲವಾಯಿತು. ಇಂದು ಆಧ್ಯಾತ್ಮಿಕ ಗ್ರಂಥಗಳಿಗೆ ಆರತಿ ಮಾಡಿ ಕುಂಕುಮ ಹಚ್ಚಿ ಮುಚ್ಚಿಡುವವರೇ ಹೆಚ್ಚಾಗಿದ್ದಾರೆ. ಈ ಕಾರಣದಿಂದ ನಾವು ಮುಚ್ಚಿಟ್ಟ ಈ ಅಮೂಲ್ಯ ಜ್ಞಾನವನ್ನು ತೆರೆದು ಆಯ್ಕೆ ಮಾಡಿ  ಕೊಡುವ ಕೆಲಸ ಮಾಡಬೇಕಾಗಿದೆ.
ಜ್ಞಾನವನ್ನು ಯಾರಿಗೆ ಕೊಡಬೇಕು ಮತ್ತು ಯಾರಿಗೆ ಕೊಡಬಾರದು ಎನ್ನುವುದನ್ನು ವಿದ್ಯಾದೇವತೆ ಜ್ಞಾನಿಯಲ್ಲಿ ಹೇಳಿದ ಮಾತಿನಿಂದ ತಿಳಿಯಬಹುದು. ಆಕೆ ಹೇಳುತ್ತಾಳೆ:  ವಿದ್ಯಾ ಹ ವೈ ಬ್ರಾಹ್ಮಣಮಾಜಗಾಮ ಗೋಪಾಯ ಮಾಮ್  ಸೇವಧಿಸ್ಟೇ’ಹಮಸ್ಮೀ. “ನಾನು ನಿನ್ನ ನಿಧಿ, ನಿನ್ನಲ್ಲಿರುವ ಈ ಕೊಪ್ಪರಿಗೆಯನ್ನು ಎಲ್ಲೆಲ್ಲೋ ಚಲ್ಲಿ ಹಾಳು ಮಾಡಬೇಡ” ಅನಾರ್ಯಕಾಯ ಅನೃತವೇ ಶಠಾಯ ಮಾಸ್ಮಭ್ರೂಯಾಃ ರುಜವೇ ಬ್ರೂಹಿನಿತ್ಯಂ. “ಇನ್ನೊಬ್ಬರಿಗೆ ಟೋಪಿ ಹಾಕುವುದಕ್ಕಾಗಿಯೇ ವೇದಾಂತ ವಿದ್ಯೆಯನ್ನು ಕಲಿಯ ಬಯಸುವ ದುರ್ಜನರಿಗೆ; ನೇರ ನಡೆ-ನುಡಿ ಇಲ್ಲದ, ಇನ್ನೊಬ್ಬರಿಗೆ ಮೋಸಮಾಡುವುದಕ್ಕಾಗಿ ವೇದಾಂತ ಕಲಿಯಬಯಸುವವರಿಗೆ; ಯಾವ ಸತ್ಯವನ್ನೂ ಒಪ್ಪದ, ಅಸಭ್ಯ-ಅಪ್ರಮಾಣಿಕ  ಮೊಂಡರಿಗೆ ವಿದ್ಯೆಯನ್ನು ಕೊಡಬೇಡ. ಕೇವಲ ಪ್ರಾಮಾಣಿಕರಿಗೆ ಮತ್ತು ತಿಳಿಯಬೇಕು ಎನ್ನುವ ಕಳಕಳಿ ಉಳ್ಳವರಿಗೆ ಅಧ್ಯಾತ್ಮ ವಿದ್ಯೆಯನ್ನು ಕೊಡು” ಎಂದು. ಇದರಿಂದ ನಮಗೆ ತಿಳಿಯುವುದೇನೆಂದರೆ:  ಭಗವಂತನ ಬಗೆಗೆ ಯಾರೂ ಕೇಳಬಾರದು ಎನ್ನುವ ನಿಯಮವಿಲ್ಲ. ಮಾನವ ಜನ್ಮ ಇರುವುದೇ ಭಗವಂತನ ಅರಿವಿಗಾಗಿ. ಹೀಗಾಗಿ ಗಂಡಸು-ಹೆಂಗಸು, ಬ್ರಾಹ್ಮಣ-ಕ್ಷತ್ರೀಯ ಎನ್ನುವ ಭೇದ ಎಣಿಸದೇ, ಯಾರಿಗೆ ಭಗವಂತನನ್ನು ತಿಳಿಯಬೇಕು ಎನ್ನುವ ಕಳಕಳಿ ಇದೆ ಅವರಿಗೆ ಜ್ಞಾನ ದಾನ ಮಾಡಬೇಕು.  

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ದ್ವಿತೀಯಸ್ಕಂಧೇ ದ್ವಿತೀಯೋSಧ್ಯಾಯಃ
ಭಾಗವತ ಮಹಾಪುರಾಣದ ಎರಡನೇ  ಸ್ಕಂಧದ ಎರಡನೇ ಅಧ್ಯಾಯ ಮುಗಿಯಿತು

*********

No comments:

Post a Comment