Sunday, February 9, 2014

Shrimad BhAgavata in Kannada -Skandha-02-Ch-02(18)

ಈ ಮೇಲೆ ವಿವರಿಸಿದ ಮೋಕ್ಷ ಮಾರ್ಗದಲ್ಲಿನ ಭಗವಂತನ ವಿವಿಧ ರೂಪದ ದರ್ಶನವನ್ನು ತೈತ್ತಿರೀಯ ಉಪನಿಷತ್ತು  ಈ ರೀತಿ ವರ್ಣಿಸುತ್ತದೆ: ಏತಮನ್ನಮಯಾತ್ಮಾನಮುಪಸಂಕ್ರಮ್ಯ ಏತಂ ಪ್ರಾಣಮಯಾತ್ಮಾನಮುಪಸಂಕ್ರಮ್ಯ ಏತಂ ಮನೋಮಯಾತ್ಮಾನಮುಪಸಂಕ್ರಮ್ಯ ಏತಂ ವಿಜ್ಞಾನಮಯಾತ್ಮಾನಮುಪಸಂಕ್ರಮ್ಯ ಏತಮಾನಂದಮಯಾತ್ಮಾನಮುಪಸಂಕ್ರಮ್ಯ (ಭೃಗುವಲ್ಲಿ-ಹತ್ತನೇ ಅನುವಾಕ).
ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ಏತಾಂ ಗತಿಂ ಭಾಗವತೋ ಗತೋ ಯಃ ಸ ವೈ ಪುನರ್ನೇಹ ವಿಷಜ್ಜತೇSಙ್ಗ” ಎಂದು. ಅಂದರೆ: ಈ ಸ್ಥಿತಿಯನ್ನು ಪಡೆದ ಜೀವನಿಗೆ ಸಂಸಾರದ ಲವಲೇಶವಿರುವುದಿಲ್ಲ. ಆತ ಸದಾ ವಾಸುದೇವನ ಜೊತೆಗೆ ವಾಸಮಾಡುತ್ತಾನೆ. ಸಂಸಾರದಲ್ಲಿ ಮುಚ್ಚಿಕೊಂಡು, ಮೋಕ್ಷದಲ್ಲಿ ತನ್ನನ್ನು ತಾನು ಬಿಚ್ಚಿ ಬೆಳಗಿಸಿ ತೋರುವ ರೂಪ-ಭಗವಂತನ ವಾಸುದೇವ ರೂಪ. ಇಂತಹ ವಾಸುದೇವ ರೂಪದ ಸಾಕ್ಷಾತ್ ಸಾನಿಧ್ಯದಲ್ಲಿರುವ ಜೀವ  ಎಂದೂ ಮರಳಿ ಸಂಸಾರಕ್ಕೆ ಬರಬೇಕೆಂದು ಅಪೇಕ್ಷಿಸುವುದಿಲ್ಲ.

ನ ಹ್ಯತೋSನ್ಯಃ ಶಿವಃ ಪಂಥಾ ವಿಶ್ರುತಃ ಸಂಸೃತಾವಿಹ
ವಾಸುದೇವೇ ಭಗವತಿ ಭಕ್ತಿಯೋಗೋ ಯತೋ ಭವೇತ್ ೩೬

ಮೋಕ್ಷ ಮಾರ್ಗವನ್ನು ವಿವರಿಸಿದ ಶುಕಾಚಾರ್ಯರು ಹೇಳುತ್ತಾರೆ: “ಈ ಅದ್ಭುತ ಅರಿವನ್ನು ಕೊಡುವುದಕ್ಕಾಗಿಯೇ  ವೇದವ್ಯಾಸರು ಭಾಗವತ ರಚಿಸಿದರು” ಎಂದು. ಭಾಗವತವನ್ನು ಬಿಟ್ಟು ಅದಕ್ಕಿಂತ ಒಳ್ಳೆಯ ಅಧ್ಯಾತ್ಮ ಮಾರ್ಗದರ್ಶಿ ಇನ್ನೊಂದಿಲ್ಲ. ಇದನ್ನು ಮೂಲದಲ್ಲಿ ಸ್ವಯಂ ಭಗವಂತನೇ ಚತುರ್ಮುಖನಿಗೆ ಉಪದೇಶ ಮಾಡಿದ. ಆನಂತರ ಆತ  ವೇದವ್ಯಾಸರ ರೂಪದಲ್ಲಿ ಭಾಗವತವನ್ನು ಶುಕಾಚಾರ್ಯರಿಗೆ ಉಪದೇಶಿಸಿದ. ಭಗವಂತನನ್ನು ಸೇರುವ ಮೋಕ್ಷ ಮಾರ್ಗವನ್ನು ಇಷ್ಟು ಸ್ಪಷ್ಟವಾಗಿ ಇತರ ಯಾವುದೇ ಗ್ರಂಥ ವಿವರಿಸುವುದಿಲ್ಲ. ಭಗವಂತನನ್ನು ಬಿಟ್ಟು ಉಳಿದ ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರಿಗೆ(ಸಂಸೃತಾ), ಸಂಸಾರವೇ ಸರ್ವಸ್ವ ಎಂದು ನಂಬುವವರಿಗೂ ಕೂಡಾ ಅರಿವನ್ನು ಕೊಡುವ ಗ್ರಂಥ ಈ  ಭಾಗವತ. ಇದು ಸಮಸ್ತ ವೇದದ ಸಾರವಾಗಿರುವುದರಿಂದ ಶ್ರೇಷ್ಠ ಗ್ರಂಥ ಎನಿಸಿದೆ.
ಭಗವಾನ್ ಬ್ರಹ್ಮ  ಕಾರ್ತ್ಸ್ನ್ಯೇನ ತ್ರಿರನ್ವೀಕ್ಷ್ಯ ಮನೀಷಯಾ
ತದ್ಧಿ ಹ್ಯಪಶ್ಯತ್ ಕೂಟಸ್ಥೇ ರತಿರಾತ್ಮನ್ ಯತೋ ಭವೇತ್ ೩೭

“ಲೋಕಕ್ಕೆ ಮಾರ್ಗದರ್ಶನ ನೀಡಲು ಮೂರು ಬಾರಿ ಸಮಸ್ತ ವೇದ-ವಾಙ್ಮಯವನ್ನು ಅತ್ಯಂತ ಒಳನೋಟದಿಂದ ಚಿಂತನ-ಮಂಥನ ಮಾಡಿ ವ್ಯಾಸರು ನನಗೆ ಉಪದೇಶ ಮಾಡಿದರು” ಎನ್ನುತ್ತಾರೆ ಶುಕಾಚಾರ್ಯರು.  ಇಲ್ಲಿ ಮೂರು ಬಾರಿ ಎಂದು ಹೇಳುವುದಕ್ಕೆ ಒಂದು ವಿಶೇಷ ಕಾರಣವಿದೆ. ಅದೇನೆಂದರೆ ವೇದಕ್ಕೆ ಸಹಜವಾಗಿ ಕಡಿಮೆ ಎಂದರೆ ಮೂರು ಅರ್ಥಗಳಿವೆ. ಲೌಕಿಕವಾಗಿ ಮಾತನಾಡುವಾಗ ಒಂದಕ್ಕಿಂತ ಹೆಚ್ಚು ಅರ್ಥದಲ್ಲಿ ವಾಕ್ಯ ಪ್ರಯೋಗ ಮಾಡಿದರೆ ಅದು ದೋಷವಾಗುತ್ತದೆ. ಆದರೆ ವೇದದಲ್ಲಿ ಮೂರು ಆಯಾಮದಲ್ಲಿ ಅರ್ಥವನ್ನು ಹೇಳಬೇಕು ಎನ್ನುವ ಉದ್ದೇಶದಿಂದಲೇ  ಆ ರೀತಿಯ ರಚನೆ ಮಾಡಲಾಗಿದೆ.  ಇದು ವ್ಯವಹಾರಕ್ಕಿಂತ ಅತೀತವಾದ ವಿಚಾರ. ಇಲ್ಲಿ ಅನೇಕ ಅರ್ಥದಲ್ಲಿ ತಾತ್ಪರ್ಯವಿರುವುದರಿಂದ ಇದು ದೋಷವಾಗುವುದಿಲ್ಲ. ಅನೇಕ ಆಯಾಮದಲ್ಲಿ ಅರ್ಥವನ್ನು ಹೇಳಬೇಕು ಎನ್ನುವುದೇ ವೇದದ ಉದ್ದೇಶ. ಇಂದಿನ ಶಾಲೆಗಳಲ್ಲಿ ತರಗತಿಗೊಂದು ಪಠ್ಯವಾದರೆ ಅಧ್ಯಾತ್ಮದಲ್ಲಿ ಎಲ್ಲಾ ತರಗತಿಗೂ ಒಂದೇ  ಪಠ್ಯ. ಅಲ್ಲಿ ಬೇರೆಬೇರೆ ಮಟ್ಟದಲ್ಲಿ ಬೇರೆಬೇರೆ ಆಯಾಮದಲ್ಲಿ  ವೇದಾಧ್ಯಯನ ನಡೆಯುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಈ ಹಿಂದೆ ವಿವರಿಸಿದ ‘ಆತ್ಮಾ’ ಎನ್ನುವ ಪದ. ವೇದಾಧ್ಯಯನ ಆರಂಭಿಸುವಾಗ ಆತ್ಮಾ ಎನ್ನುವ ಪದಕ್ಕೆ ವಿದ್ಯಾರ್ಥಿ ಕೇವಲ ಶರೀರ ಎನ್ನುವ ಅರ್ಥವನ್ನು ಕಂಡುಕೊಳ್ಳುತ್ತಾನೆ. ಆನಂತರ ಆತ್ಮಾ ಎಂದರೆ ಕೇವಲ ಶರೀರವಷ್ಟೇ ಅಲ್ಲಾ,  ಹೃದಯ ಕೂಡಾ ಆತ್ಮಾ ಎನ್ನುವುದು ಆತನಿಗೆ ತಿಳಿಯುತ್ತದೆ. ಹೀಗೆ ವಿದ್ಯಾಭ್ಯಾಸ ಮುಂದುವರಿದಾಗ ಹಂತ ಹಂತವಾಗಿ ಆತನಿಗೆ ಆತ್ಮಾ ಎಂದರೆ ಮನಸ್ಸು, ಆತ್ಮಾ ಎಂದರೆ ಜೀವ, ಆತ್ಮಾ ಎಂದರೆ ಪರಮಾತ್ಮಾ ಎನ್ನುವುದು ತಿಳಿಯುತ್ತದೆ. ಈ ರೀತಿ ಒಂದೇ ವೇದಮಂತ್ರಕ್ಕೆ ಹಂತಹಂತವಾಗಿ ಅನೇಕ ಆಯಾಮದಲ್ಲಿ ಅರ್ಥವನ್ನು ತಿಳಿಯುತ್ತಾ ವಿದ್ಯಾರ್ಥಿ ಎತ್ತರಕ್ಕೇರುತ್ತಾನೆ. ಓದುವ ಪುಸ್ತಕ ಒಂದೇ ಆದರೂ ಕೂಡಾ, ಅಲ್ಲಿ ವಿವಿಧ ಹಂತದಲ್ಲಿ ಎತ್ತರದ ಜ್ಞಾನ ಅಡಗಿರುವುದನ್ನು ತಿಳಿಯುತ್ತಾ ಮುಂದೆ ಸಾಗುವುದು ವೇದಾಂತ ವಿದ್ಯೆಯ ಕ್ರಮ. [ಹೇಗೆ ವೇದ ಮಂತ್ರ ಅನೇಕ ಆಯಾಮದಲ್ಲಿ ತೆರೆದುಕೊಳ್ಳುತ್ತದೆ ಎನ್ನುವುದನ್ನು ನಾವು ಈ ಹಿಂದೆ ನೋಡಿದ್ದೇವೆ]

ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ನಿರ್ವೀಕಾರನಾದ ಭಗವಂತನಲ್ಲಿ ವಿಕಾರಕ್ಕೊಳಪಡುವ ಮನಸ್ಸು ನೆಲೆ ನಿಲ್ಲಲು ಸಾಧ್ಯವಾಗುವ ಒಂದು ವಾಙ್ಮಯವನ್ನು ಕೊಡಬೇಕಾದರೆ, ವೇದವ್ಯಾಸರು ಸಮಸ್ತ ವೇದವನ್ನು ಮೂರು ಬಾರಿ ಚಿಂತನೆ ಮಾಡಿದರು” ಎಂದು. ಇದರರ್ಥ ವೇದವ್ಯಾಸರು ಅಷ್ಟೊಂದು ಕಷ್ಟಪಟ್ಟರು ಎಂದಲ್ಲ. ಎಲ್ಲರೂ ಎಷ್ಟು ಸಾಧನೆ ಮಾಡಬೇಕು ಎನ್ನುವುದನ್ನು ಭಗವಂತ ವೇದವ್ಯಾಸ ರೂಪದಲ್ಲಿ ತೋರಿಸಿದ ಬಗೆ ಇದು. “ಹೀಗೆ ಸ್ವಯಂ ಭಗವಂತನೇ ಹೇಳಿದ, ವೇದಮೂಲವಾಗಿರುವ,  ಸಮಸ್ತ ವೇದಗಳ ಸಾರಭೂತವಾಗಿರುವ ಭಾಗವತವನ್ನು ನನ್ನ ತಂದೆ ನನಗೆ ಕರುಣಿಸಿದರು” ಎಂದು ಪುನರುಚ್ಛರಿಸಿದ್ದಾರೆ ಶುಕಾಚಾರ್ಯರು.   

No comments:

Post a Comment