ದೇವೀಂ ಮಾಯಾಂ
ತು ಶ್ರೀಕಾಮಃ ತೇಜಸ್ಕಾಮೋ ವಿಭಾವಸುಮ್ ।
ವಸುಕಾಮೋ
ವಸೂನ್ ರುದ್ರಾನ್ ವೀರ್ಯಕಾಮಸ್ತು ವೀರ್ಯದಾನ್ ॥೦೩॥
ಮುಂದುವರಿದು
ಶುಕಾಚಾರ್ಯರು ಹೇಳುತ್ತಾರೆ: “ಜೀವನದಲ್ಲಿ ಉನ್ನತಿಕೆಯನ್ನು ಪಡೆಯಲು ಮಾಯಾ-ದೇವಿ
ಶ್ರಿಲಕ್ಷ್ಮಿಯನ್ನು ಆರಾಧಿಸು” ಎಂದು. ಇಲ್ಲಿ ಉನ್ನತಿಕೆ ಎಂದರೆ ಅದು ಜ್ಞಾನದ ಉನ್ನತಿಕೆ
ಇರಬಹುದು, ಸಂಪತ್ತಿನಲ್ಲಿ ಉನ್ನತಿಕೆ ಇರಬಹುದು ಅಥವಾ ಇತರೆ ಯಾವುದೇ ಉನ್ನತಿಕೆ ಇರಬಹುದು.
ಒಟ್ಟಿನಲ್ಲಿ ಸಮೃದ್ಧಿಯನ್ನು ಪಡೆಯಲು ಲಕ್ಷ್ಮಿಯ ಉಪಾಸನೆ ಜೊತೆಗೆ ಲಕ್ಷ್ಮೀಪತಿ ನಾರಾಯಣನ ಉಪಾಸನೆ
ಮಾಡಬೇಕು.
ಮಹಾತೇಜಸ್ವಿಯಾಗಬೇಕು
ಎಂದರೆ ಅಗ್ನಿಯನ್ನು ಆರಾಧಿಸಬೇಕು. ಅಗ್ನಿ, ಅಗ್ನಿಯಲ್ಲಿ ಪ್ರಾಣಾಗ್ನಿ ಮತ್ತು ಪ್ರಾಣಾಗ್ನಿಯಲ್ಲಿ
ಅಗ್ನಿನಾರಾಯಣನನ್ನು ಆರಾಧಿಸುವುದರಿಂದ ತೇಜಸ್ವೀ ಎಂದು ಖ್ಯಾತಿಗಳಿಸಬಹುದು. ಇನ್ನು ಜ್ಞಾನ
ಕಾರ್ಯಕ್ಕೆ, ವಿದ್ಯಾರ್ಥಿ ಸೇವೆ ಇತ್ಯಾದಿ ಪುಣ್ಯಕಾರ್ಯಕ್ಕೆ ದುಡ್ಡು ಬೇಕು ಎನ್ನುವ ಕಾಮನೆ
ಇದ್ದರೆ, ಅದಕ್ಕೆ ವಸುಗಳನ್ನು ಆರಾಧನೆ ಮಾಡಬೇಕು.
ವಸುಗಳು ಒಟ್ಟಿಗೆ ಎಂಟು ಮಂದಿ. ಅವರೆಂದರೆ: ದ್ರೋಣ, ಪ್ರಾಣ, ಧ್ರುವ, ಅರ್ಕ, ಅಗ್ನಿ, ದೋಷ,
ವಸ್ತು ಮತ್ತು ವಿಭಾವಸು(ದ್ಯುವಸು). ಇವರಲ್ಲಿ ಅಗ್ನಿಯೇ ಪ್ರಧಾನ ವಸು. ಈತನಿಗೆ ಅನೇಕ
ನಾಮಗಳು: ವಿಭಾವಸು, ವೈಶ್ವಾನರ, ವಹ್ನಿ, ಜಾತವೇದ, ಹುತಾಶನ, ಪಾವಕ, ಅನಲ, ದಹನ, ಇತ್ಯಾದಿ.
ಪೌರುಷ ಅಥವಾ
ಪರಾಕ್ರಮಕ್ಕಾಗಿ ರುದ್ರರನ್ನು ಆರಾಧನೆ ಮಾಡಬೇಕು. ರುದ್ರರು ಒಟ್ಟಿಗೆ ಹನ್ನೊಂದು ಮಂದಿ. ಅವರಲ್ಲಿ
ಶಿವ ಪ್ರಧಾನ ರುದ್ರ. ದುಷ್ಟರನ್ನು ಬಗ್ಗುಬಡಿಯುವ ಶೌರ್ಯವನ್ನು ಕೊಡುವ ವಿಶೇಷ ಶಕ್ತಿ ರುದ್ರ ಶಕ್ತಿ.
ರುದ್ರನಲ್ಲಿ ಪ್ರಾಣಶಕ್ತಿಯನ್ನೂ, ನರಸಿಂಹನನ್ನೂ ಮತ್ತು ಪ್ರಳಯಕಾಲದಲ್ಲಿ ಎಲ್ಲವನ್ನೂ ಸುಡುವ
ಸಂಕರ್ಷಣನನ್ನೂ ಉಪಾಸನೆ ಮಾಡುವುದರಿಂದ ಇಂಥಹ ಪೌರುಷ ಸಿಗುತ್ತದೆ.
ಆಧಿಪತ್ಯಕಾಮಃ
ಸರ್ವೇಷಾಂ ಯಜೇತ ಪರಮೇಷ್ಠಿನಮ್ ॥೦೬॥
ಎಲ್ಲರನ್ನೂ ಆಳುವ ತಾಕತ್ತು, ಜನಾಂಗದ ನಾಯಕನಾಗಬೇಕು ಎನ್ನುವ ಅಪೇಕ್ಷೆ
ಉಳ್ಳವನು ಎಲ್ಲಾ ದೇವತೆಗಳ ಅಧಿಪತಿಯಾದ ಚತುರ್ಮುಖ
ಬ್ರಹ್ಮನ ಅಂತರ್ಗತನಾದ ಭಗವಂತನ ಉಪಾಸನೆ ಮಾಡಬೇಕು. [ಆರಾಧನೆ ಮಾಡಿದ ತಕ್ಷಣ ಅಪೇಕ್ಷೆ ಈಡೇರುವುದಿಲ್ಲ.
ಅದಕ್ಕೆ ಕಾಲ ಪಕ್ವವಾಗಬೇಕು. ಆಗ ಯೋಗ್ಯತೆಗೆ ತಕ್ಕಂತೆ ಆಧಿಪತ್ಯ ಸಿಗುತ್ತದೆ]
ವಿದ್ಯಾಕಾಮಸ್ತು
ಗಿರಿಶಂ ದಾಂಪತ್ಯಾರ್ಥ ಉಮಾಂ ಸತೀಮ್ ॥೦೭॥
ವಿದ್ಯೆ ಬೇಕು
ಎನ್ನುವ ಅಪೇಕ್ಷೆ ಉಳ್ಳವನು ಗಿರೀಶನನ್ನು ಆರಾಧಿಸಬೇಕು. ಗಿರೀಶ ಎಂದರೆ ಶಿವ. ಉಪನಿಷತ್ತಿನಲ್ಲಿ ಹೇಳುವಂತೆ ನಮ್ಮ ದೇಹದಲ್ಲಿ
ಮುಖ್ಯವಾಗಿ ಐದು ಗಿರಿಗಳಿವೆ. ಚಕ್ಷು, ಶ್ರೋತ್ರಂ, ಮನೋ, ವಾಕ್, ಪ್ರಾಣ- ಇವೇ ಆ ಐದು ಗಿರಿಗಳು.
ಇವು ನಮ್ಮ ಜ್ಞಾನ ಸಾಧನಗಳು. ಶಾಸ್ತ್ರಗಳಲ್ಲಿ ಹೇಳುವಂತೆ ದೃಷ್ಟವ್ಯಃ, ಶ್ರೋತವ್ಯಃ, ಮಂತವ್ಯಃ. ಇವು ಜ್ಞಾನದ ಮೂರು
ಬಾಗಿಲುಗಳು. ನೋಡಿ-ಕೇಳಿ-ಮನನಮಾಡಿ ತಿಳಿಯುವುದು,
ತಿಳಿದದ್ದನ್ನು ಇನ್ನೊಬ್ಬರಿಗೆ ಹೇಳುವುದು. ಇವೆಲ್ಲವನ್ನೂ ಮಾಡಲು ಬದುಕಿರಬೇಕು. ಅದಕ್ಕೆ ಪ್ರಾಣ(ಉಸಿರು)
ಬೇಕು. ಇಂಥಹ ವಿಶಿಷ್ಟವಾದ ಐದು ಗಿರಿಗಳಲ್ಲಿರುವ ಶಿವ
ಗಿರೀಶ. ಸದ್ದ್ಯೋಜಾತ, ವಾಮದೇವ, ತತ್ಪುರುಷ,
ಅಘೋರ ಮತ್ತು ಈಶಾನ ಇವು ಶಿವನ ಐದು ರೂಪಗಳು. ಇಂತಹ ಶಿವನನ್ನು ಮತ್ತು ಆತನ ಅಂತರ್ಯಾಮಿ ಭಗವಂತನನ್ನು
ಆರಾಧಿಸುವುದರಿಂದ ವಿದ್ಯೆಯ
ಅಪೇಕ್ಷೆ ಕೈಗೂಡುತ್ತದೆ.
ಮದುವೆ ಆಗುವುದಕ್ಕೋಸ್ಕರ
ಮತ್ತು ಮದುವೆಯಾದಮೇಲೆ ಅನ್ಯೋನ್ಯ ದಾಂಪತ್ಯ ಪಡೆಯಲು ಶಿವಪತ್ನಿ ಉಮೆ(ಸತೀ)ಯನ್ನು ಆರಾಧಿಸಬೇಕು.
ನಮಗೆ ತಿಳಿದಂತೆ ದಾಂಪತ್ಯದಲ್ಲಿ ವಿರಸ ನಮ್ಮ ಇಡೀ ಜೀವನದ ಸಾಧನೆಯನ್ನು ಮಣ್ಣುಪಾಲು ಮಾಡಬಹುದು.
ಒಬ್ಬನ ಸಾಧನೆಗೆ ಇನ್ನೊಬ್ಬರು ಪೂರಕವಾಗಿಲ್ಲದೇ ಇದ್ದರೆ ಜೀವನ ನಿತ್ಯ ನರಕವಾಗುತ್ತದೆ. ಈ ರೀತಿ ಆಗದೇ
ದಾಂಪತ್ಯದಲ್ಲಿ ಸಾಮರಸ್ಯ ಇರಬೇಕು ಎನ್ನುವ ಅಪೇಕ್ಷೆ ಉಳ್ಳವರು ಉಮೆಯ ಆರಾಧನೆ ಮಾಡಬೇಕು. ಇಲ್ಲಿ ಪಾರ್ವತಿಯ
ಉಮೆ ಮತ್ತು ಸತೀ ಎನ್ನುವ ಎರಡು ನಾಮಗಳ ಉಲ್ಲೇಖವನ್ನು ಕಾಣುತ್ತೇವೆ. ಇದು ದಾಂಪತ್ಯದ ಅನ್ಯೋನ್ಯತೆಯ
ಶ್ರೇಷ್ಠ ಉದಾಹರಣೆ. ಪಾರ್ವತಿ(ಸತೀ) ದಕ್ಷ ಪ್ರಜಾಪತಿಯ ಮಗಳು. ಒಮ್ಮೆ ದಕ್ಷ ತಾನು ಮಾಡಿದ ಯಜ್ಞದಲ್ಲಿ
ಶಿವನನ್ನು ಆಮಂತ್ರಿಸದೇ ಅವಮಾನ ಮಾಡಿದಾಗ, ಅದನ್ನು ಸಹಿಸದ ಸತೀ ಯೋಗಾಗ್ನಿಯಲ್ಲಿ ತನ್ನ ದೇಹತ್ಯಾಗ
ಮಾಡುತ್ತಾಳೆ. ನಂತರ ತಾನು ಯಾರನ್ನು ವರಿಸಿದ್ದಳೋ ಆತನನ್ನೇ ಮದುವೆಯಾಗಬೇಕು ಎಂದು ಬಯಸಿ, ಮತ್ತೊಂದು
ರೂಪದಲ್ಲಿ ಪರ್ವತರಾಜನ ಮಗಳಾಗಿ(ಉಮೆ) ಬಂದು, ತಪಸ್ಸು ಮಾಡಿ ಶಿವನನ್ನು ವರಿಸುತ್ತಾಳೆ. ಈ ರೀತಿಯ ಅನ್ಯೋನ್ಯತೆ
ಪತಿ-ಪತ್ನಿಯಲ್ಲಿರಬೇಕಾದರೆ ಪಾರ್ವತಿಯ ಉಪಾಸನೆ ಮಾಡಬೇಕು. ಹೀಗೆಯೇ ಮದುವೆ ಆಗದೇ ಇದ್ದಾಗ, ಮದುವೆಯಾಗಲು ಪಾರ್ವತಿ ಆರಾಧನೆ
ಮಾಡಬೇಕು. ಇದಕ್ಕಾಗಿ ಜೋತಿಷಿಗಳು ಮದುವೆಯಾಗದೇ ಇದ್ದಾಗ
ಈ ಕೆಳಗಿನ ಸ್ವಯಂವರ ಪಾರ್ವತೀ ಮಂತ್ರವನ್ನು ಜಪಿಸುವಂತೆ
ಹೇಳುತ್ತಾರೆ. [ಓಂ ಹ್ರೀಂ ಯೋಗಿನಿ ಯೋಗಿನಿ ಯೋಗೇಶ್ವರಿ ಯೋಗಭಯಂಕರಿ ಸಕಲ ಸ್ಥಾವರ ಜಂಗಮಸ್ಯ ಮುಖ
ಹೃದಯಂ, ಮಮ-ವಶಂ-ಆಕರ್ಷಯ ಆಕರ್ಷಯ ಸ್ವಾಹಾ || ಸ್ವಯಂವರ ಪಾರ್ವತ್ಯೈ ನಮಃ || ]
No comments:
Post a Comment