Download in PDF Format :

ಸುಮಾರು ಐದು ಸಾವಿರ ವರ್ಷಗಳ ಹಿಂದೆ, ದ್ವಾಪರದ ಕೊನೆಯಲ್ಲಿ, ವೇದಗಳನ್ನು ವಿಂಗಡಿಸಿ ಬಳಕೆಗೆ ತಂದ ಮಹರ್ಷಿ ವೇದವ್ಯಾಸರೇ ಅವುಗಳ ಅರ್ಥವನ್ನು ತಿಳಿಯಾಗಿ ವಿವರಿಸಲು ಹದಿನೆಂಟು ಪುರಾಣಗಳನ್ನು ರಚಿಸಿದರು. ಈ ಪುರಾಣಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ಹಾಗೂ ಪುರಾಣಗಳ ರಾಜ ಎನ್ನಬಹುದಾದ ಮಹಾಪುರಾಣ ಭಾಗವತ.
ಸಾವು ಎನ್ನುವ ಹಾವು ಬಾಯಿ ತೆರೆದು ನಿಂತಿದೆ. ಜಗತ್ತಿನ ಎಲ್ಲಾ ಜೀವಜಾತಗಳು ಅಸಾಯಕವಾಗಿ ಅದರ ಬಾಯಿಯೊಳಗೆ ಸಾಗುತ್ತಿವೆ. ಈ ಹಾವಿನಿಂದ ಪಾರಾಗುವ ಉಪಾಯ ಉಂಟೇ? ಉಂಟು, ಶುಕಮುನಿ ನುಡಿದ ಶ್ರೀಮದ್ಭಾಗವತವೇ ಅಂಥಹ ದಿವ್ಯೌಷಧ. ಜ್ಞಾನ-ಭಕ್ತಿ ವಿರಳವಾಗಿರುವ ಕಲಿಯುಗದಲ್ಲಂತೂ ಇದು ತೀರಾ ಅವಶ್ಯವಾದ ದಾರಿದೀಪ.
ಇಲ್ಲಿ ಅನೇಕ ಕಥೆಗಳಿವೆ. ಆದರೆ ನಮಗೆ ಕಥೆಗಳಿಗಿಂತ ಅದರ ಹಿಂದಿರುವ ಸಂದೇಶ ಮುಖ್ಯ. ಒಂದು ತತ್ತ್ವದ ಸಂದೇಶಕ್ಕಾಗಿ ಒಂದು ಕಥೆ ಹೊರತು, ಅದನ್ನು ವಾಸ್ತವವಾಗಿ ನಡೆದ ಘಟನೆ ಎಂದು ತಿಳಿಯಬೇಕಾಗಿಲ್ಲ.
ಮನಸ್ಸು ಶುದ್ಧವಾಗಿದ್ದರೆ ಎಲ್ಲವೂ ಶುದ್ಧ. ಮನಸ್ಸು ಮಲೀನವಾದರೆ ಮೈತೊಳೆದು ಏನು ಉಪಯೋಗ? ನಮ್ಮ ಮನಸ್ಸನ್ನು ತೊಳೆದು ಶುದ್ಧ ಮಾಡುವ ಸಾಧನ ಈ ಭಾಗವತ. ಶ್ರದ್ಧೆಯಿಂದ ಭಾಗವತ ಓದಿದರೆ ಮನಸ್ಸು ಪರಿಶುದ್ಧವಾಗಿ ಭಗವಂತನ ಚಿಂತನೆಗೆ ತೊಡಗುತ್ತದೆ. ಬಿಡುಗಡೆಯ ದಾರಿಯನ್ನು ತೆರೆದು ತೋರಿಸುತ್ತದೆ.
ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಭಾಗವತ ಪ್ರವಚನದಲ್ಲಿ ಒಬ್ಬ ಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸಿದ ಭಾಗವತದ ಅರ್ಥಸಾರವನ್ನು ಇ-ಪುಸ್ತಕ ರೂಪದಲ್ಲಿ ಸೆರೆ ಹಿಡಿದು ಆಸಕ್ತ ಭಕ್ತರಿಗೆ ತಲುಪಿಸುವ ಒಂದು ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ. ಚಿತ್ರಕೃಪೆ: ಅಂತರ್ಜಾಲ.
Download in PDF Format :
Skandha-01:All 20 Chapters e-Book
Skandha-02 All 10 chapters e-Book

Note: due to unavoidable reason we are unable to publish regular posts. But we will come back soon.......

Tuesday, March 11, 2014

Shrimad BhAgavata in Kannada -Skandha-02-Ch-03(03)

ಧರ್ಮಾರ್ಥಮುತ್ತಮಶ್ಲೋಕಂ ತಂತುಂ ತನ್ವನ್ ಪಿತೃನ್ ಯಜೇತ್  ॥೦೮

ಜೀವನದಲ್ಲಿ ಧರ್ಮಕ್ಕೆ ಚ್ಯುತಿ ಆಗದಂತೆ ನಡೆದುಕೊಳ್ಳಬೇಕು ಎನ್ನುವ ಕಾಮನೆ ಉಳ್ಳವರು ಜಗತ್ತಿನ ಧಾರಕ ಶಕ್ತಿಯಾದ ಭಗವಂತನ ಆರಾಧನೆ ಮಾಡಬೇಕು. ಎಲ್ಲರೂ ಬದುಕಬೇಕು ಹಾಗೂ ಎಲ್ಲರೊಂದಿಗೆ ನಾನೂ ಬದುಕಬೇಕು ಎನ್ನುವುದು ಧರ್ಮ. ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದು, ಎಲ್ಲರೂ ಒಂದಾಗಿ ಉನ್ನತಿಕೆಯನ್ನು ಸಾಧಿಸುವುದು-ಧರ್ಮ. ಪದ್ಮಾಪುರಾಣದಲ್ಲಿ ಹೇಳುವಂತೆ: ಸ್ಮರ್ತವ್ಯ ಸತತಂ ವಿಷ್ಣುಃ ವಿಸ್ಮರ್ತವ್ಯೋ ನಜಾನಚಿತ್ ಸರ್ವೇ ವಿಧಿ ನಿಷೇಧಾಸ್ಯುಃ ಏತಯೋರ್ ಏವ ಕಿಂಕರಃ. ಯಾವ ಕ್ರಿಯೆ ಭಗವಂತನ ಸ್ಮರಣೆಗೆ ಪೂರಕವಾಗುತ್ತದೋ ಅದು ಧರ್ಮ,  ಭಗವಂತನನ್ನು ಮರೆತು ನಡೆಯುವ ನಡೆ ಅಧರ್ಮ. ಧರ್ಮದ ಅರಿವು ಬರಲು ಜಗತ್ತಿನ  ಧಾರಕ ಶಕ್ತಿಯಾದ ನಾರಾಯಣನನ್ನು ಆರಾಧಿಸಬೇಕು.
ಧರ್ಮದ ನಡೆಯಲ್ಲಿ ನಡೆಯುವಂತಾಗಲು, ಧರ್ಮದ ಪರಂಪರೆಯ ವಂಶ ಮುಂದುವರಿಕೆಗಾಗಿ ಪಿತೃದೇವತೆಗಳನ್ನು ಅವರ ಅಂತರ್ಯಾಮಿ ಭಗವಂತನ ಚಿಂತನೆಯೊಂದಿಗೆ ಆರಾಧನೆ ಮಾಡಬೇಕು.  

ಗ್ರಾಮಕಾಮೋ ಯಜೇತ್ ಸೋಮಮಕಾಮಃ ಪುರುಷಂ ಪುಮಾನ್  ೦೯

ಗ್ರಾಮ್ಯಸುಖಕ್ಕಾಗಿ(ವಂಶಾಭಿವೃದ್ಧಿಗೆ ಪೂರಕವಾದ ಲೈಂಗಿಕ ಸ್ವಾಸ್ಥ್ಯ/ಸುಖಕ್ಕಾಗಿ) ಸೋಮನ ಆರಾಧನೆ ಮಾಡಬೇಕು.  ಸೋಮ ಎಂದರೆ ಚಂದ್ರ.  ಸೋಮೋ ಪವಮಾನೋ ದೇವತಾ-ಚಂದ್ರನ ಅಂತರ್ಯಾಮಿ ಪವಮಾನ. ಪವಮಾನನ ಅಂತರ್ಯಾಮಿ ಭಗವಂತ. ಸೋಮನ ಅಂತರ್ಯಾಮಿ ಭಗವಂತನನ್ನು ಧನ್ವಂತರಿಯಲ್ಲಿ ಹೀಗೆ ವರ್ಣಿಸಿದ್ದಾರೆ: ಚಂದ್ರೌಘಕಾಂತಿಂ ಅಮೃತೋರು ಕರೈರ್ಜಗಂತಿ ಸಂಜೀವಯಂತಂ ಅಮಿತಾತ್ಮ ಸುಖಂ ಪರೇಶಮ್|  ಜ್ಞಾನಂ ಸುಧಾಕಲಶಮೇವ ಚ ಸಂದಧಾನಂ ಶೀತಾಂಶು ಮಂಡಲಗತಂ ಸ್ಮರತಾತ್ಮ ಸಂಸ್ಥಮ್ ||||  ಗ್ರಾಮ್ಯಕಾಮ ಇಷ್ಟಾರ್ಥಸಿದ್ಧಿಗಾಗಿ  ಸೋಮನೊಳಗೆ ಸೋಮನಾಗಿರುವ ಪ್ರಾಣ-ನಾರಾಯಣರ ಆರಾಧನೆ ಮಾಡಬೇಕು. ಇದೇ ರೀತಿ ದೇವರ ಅನುಗ್ರಹ ಪ್ರಾಪ್ತಿಗಾಗಿ ಭಗವಂತನ ಪುರುಷ ರೂಪವನ್ನು(ಪುರುಷಸೂಕ್ತ ಪ್ರತಿಪಾಧ್ಯನಾದ ಭಗವಂತನನ್ನು) ಆರಾಧಿಸಬೇಕು.
ಇಲ್ಲಿಯ ತನಕ ನಾವು ಶುಕಾಚಾರ್ಯರಿಂದ ಹೇಗೆ ಬೇರೆಬೇರೆ ದೇವತೆಗಳ ಪ್ರತೀಕದ ಮೂಲಕ ಭಗವಂತನನ್ನು ಆರಾಧಿಸಿ ನಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಬಹುದು ಎನ್ನುವುದನ್ನು ನೋಡಿದೆವು. ಈ ಹಂತದಲ್ಲಿ ನಮಗೆ ಒಂದು ಪ್ರಶ್ನೆ ಬರಬಹುದು. ಅದೇನೆಂದರೆ: “ಬೇರೆಬೇರೆ ಬಯಕೆಗಳ ಈಡೇರಿಕೆಗೆ ಬೇರೆಬೇರೆ ದೇವತೆಗಳ ಮೂಲಕವೇ ಹೋಗಬೇಕೇ? ಭಗವಂತನನ್ನೇ ಕೇಳಿಕೊಂಡರೆ ಸಾಲದೇ” ಎಂದು. ಈ ಪ್ರಶ್ನೆಗೆ ಉತ್ತರ ತಿಳಿಯಬೇಕಾದರೆ  ವಿಶ್ವನಿಯಾಮಕ ಭಗವಂತನ ವ್ಯವಸ್ಥೆಯ ತಿಳುವಳಿಕೆ ನಮಗಿರಬೇಕು. ಪ್ರಪಂಚದಲ್ಲಿ ಲೌಕಿಕವಾಗಿ ಹೇಗೆ ಆಡಳಿತ ವ್ಯವಸ್ಥೆ ಇರುತ್ತದೋ ಹಾಗೇ, ಶಾಸ್ತ್ರೀಯವಾಗಿ ವಿಶ್ವದಲ್ಲಿ ಒಂದೊಂದು ವಿಭಾಗದ ನಿರ್ವಹಣೆಗಾಗಿ ಒಂದೊಂದು ದೇವತೆಯನ್ನು ಭಗವಂತ ನಿಯಮಿಸಿದ್ದಾನೆ. ಆದ್ದರಿಂದ ನಾವು ಆಯಾ ವಿಭಾಗದ ದೇವತೆಗಳ ಮುಖೇನವೇ ದೇವರನ್ನು ತಲುಪಬೇಕು.  ದೇವತೆಗಳೇ ಭಗವಂತನ ಪರಿವಾರ. ಆ ಪರಿವಾರ ಸಮೇತನಾದ ಭಗವಂತನ ವೈಭವವನ್ನು ನಾವು ಏಕದೇವ ನಿಷ್ಠೆಯಿಂದ, ಅಂತರ್ಯಾಮಿ ಚಿಂತನೆಯಿಂದ ಅನುಸಂಧಾನ ಮಾಡಬೇಕು. ಪರಿವಾರವನ್ನು ನಿರಾಕರಣೆ ಮಾಡಿ ಭಗವಂತನನ್ನು ನೇರ ಅನುಸಂಧಾನ ಮಾಡಿದರೆ ಅದನ್ನು ಭಗವಂತ ಸ್ವೀಕರಿಸಲಾರ. [ಇದಕ್ಕೆ ಅಪವಾದ ಎಂದರೆ ಜ್ಞಾನದಲ್ಲಿ ಎತ್ತರಕ್ಕೇರಿದ ಸಾಧಕರು. ಅವರಿಗೆ ಭಗವಂತನ ಪರಿವಾರದ ಪೂರ್ಣ ಅರಿವಿರುತ್ತದೆ. ಈ ಅರಿವಿನೊಂದಿಗೆ ಅವರು ನೇರ ಭಗವಂತನೊಂದಿಗೆ ಸಂವಹನ ಮಾಡಬಲ್ಲರು]. ಈ ಎಲ್ಲಾ ಕಾರಣಕ್ಕಾಗಿ ಶುಕಾಚಾರ್ಯರು ಭಗವಂತನ ಪರಿವಾರದ ಜೊತೆಗೆ ಅದರ ಒಳಗಿರುವ ಭಗವದ್ ಶಕ್ತಿಯನ್ನು ಉಪಾಸನೆ ಮಾಡು ಎಂದಿದ್ದಾರೆ.

ಅಕಾಮಃ ಸರ್ವಕಾಮೋ ವಾ ಮೋಕ್ಷಕಾಮ ಉದಾರಧೀಃ
ತೀವ್ರೇಣ ಭಕ್ತಿಯೋಗೇನ ಯಜೇತ ಪುರುಷಂ ಪರಮ್ ೧೦

ಭಕ್ತಿಯಲ್ಲಿ ಅತ್ಯಂತ ಶ್ರೇಷ್ಠಭಕ್ತಿ ಎಂದರೆ ಯಾವುದೇ ಕಾಮನೆ ಇಲ್ಲದೆ ದೇವರನ್ನು ಆರಾಧಿಸುವುದು(ಅಕಾಮಃ). ಏಕೆಂದರೆ ಒಂದು ವಸ್ತುವನ್ನು ಬಯಸಿ ದೇವರನ್ನು ಆರಾಧಿಸುವಾಗ, ಅದರಿಂದ ಮುಂದೆ ಒಳಿತಾಗುತ್ತದೋ ಅಥವಾ ಕೆಡುಕಾಗುತ್ತದೋ ಎನ್ನುವ ಜ್ಞಾನ ನಮಗಿರುವುದಿಲ್ಲ. ಇದರಿಂದಾಗಿ ನಾವು ಬಯಸಿ ಪಡೆದ ವಸ್ತುವಿನಿಂದಲೇ ನಮಗೆ ಕೆಟ್ಟದ್ದಾಗುವ ಸಾಧ್ಯತೆಗಳಿವೆ. ಇಷ್ಟೇ ಅಲ್ಲದೆ ನಾವು ಯಾವುದೋ ಒಂದನ್ನು ಅಪೇಕ್ಷಿಸಿ ದೇವರನ್ನು ಆರಾಧಿಸಿದರೆ ಆತ ಅದಷ್ಟನ್ನೇ ಕೊಡುತ್ತಾನೆ. ಏನನ್ನೂ ಬಯಸದೇ ಆರಾಧಿಸಿದರೆ ಆತ ನಮಗೆ ಏನೇನು ಅಗತ್ಯವೋ ಅವೆಲ್ಲವನ್ನೂ ಕೊಡುತ್ತಾನೆ.
ಸರ್ವಕಾಮ ಎಂದರೆ ಲೌಕಿಕ ಉದ್ದೇಶಕ್ಕಾಗಿ ಎಲ್ಲವನ್ನೂ ಬಯಸುವವನು. ಮೋಕ್ಷಕಾಮ ಎಂದರೆ ಮೋಕ್ಷವನ್ನು ಬಯಸಿ ಭಗವಂತನನ್ನು ಆರಾಧಿಸುವವನು. ಅಕಾಮ ಎಂದರೆ ಎಲ್ಲವನ್ನೂ ಭಗವಂತನಿಗಾಗಿ ಮಾಡುತ್ತಿರುವವನು. ಈತ ಮೋಕ್ಷವನ್ನು ಕೂಡಾ ಬಯಸುವುದಿಲ್ಲ. ತೀವ್ರ ಭಕ್ತಿ ಉಳ್ಳ ಮತ್ತು ಬಹಳ ಎತ್ತರಕ್ಕೇರಿದ ಜ್ಞಾನಿಗಳು ಈ ಮೇಲಿನ ಯಾವುದೇ ಗುಂಪಿಗೆ ಸೇರಿದ್ದರೂ ಕೂಡಾ, ದೇವತೆಗಳ ಮುಖೇನ  ಭಗವಂತನನ್ನು ಆರಾಧಿಸದೇ ನೇರವಾಗಿ ಭಗವಂತನಲ್ಲೇ ಶರಣಾಗಿ ಎಲ್ಲವನ್ನೂ ಪಡೆಯಬಲ್ಲರು. ಇವರು ಭಗವಂತನ ಸಮಸ್ತ ಪರಿವಾರದ ಎಚ್ಚರದೊಂದಿಗೆ ನೇರವಾಗಿ ಪುರುಷಸೂಕ್ತ ಪ್ರತಿಪಾದ್ಯ ಹಾಗೂ ವೇದ ಪ್ರದಿಪಾದ್ಯ ಭಗವಂತನನ್ನು ಆರಾಧಿಸುವುದರಿಂದ ಎಲ್ಲವನ್ನೂ ಪಡೆದುಕೊಳ್ಳುತ್ತಾರೆ.
ಈ ಹಿಂದೆ ಧರ್ಮವನ್ನು ಬಯಸುವವನು ನಾರಾಯಣನನ್ನು ಉಪಾಸನೆ ಮಾಡಬೇಕು ಎಂದು ಹೇಳಿದ್ದನ್ನು ನೋಡಿದ್ದೇವೆ. ಹಿಂದೆ ಹೇಳಿದ ನಾರಾಯಣನ ಉಪಾಸನೆ ಮತ್ತು ಈ ಮೇಲಿನ ಶ್ಲೋಕದಲ್ಲಿನ ಭಗವಂತನ ಉಪಾಸನೆಯ ವಿವರಣೆಗೆ ಪೂರಕವಾಗಿ ಆಚಾರ್ಯ ಮಧ್ವರು ಸ್ಕಾಂದ ಪುರಾಣದಲ್ಲಿನ ಒಂದು ಪ್ರಮಾಣ ಶ್ಲೋಕವನ್ನು ನೀಡಿದ್ದಾರೆ.   ಅಕಾಮೋ ಧರ್ಮಕಾಮೋ ವಾ ಮೋಕ್ಷಕಾಮೋSಪಿ ಯೋ ಭವೇತ್ ಅಥವಾ ಸರ್ವಕಾಮೋ ಯಃ ಸ ವಿಷ್ಣುಂ ಪುರುಷಂ ಯಜೇತ್   ಇತಿ ಸ್ಕಾಂದೇ   ಧರ್ಮ-ಮೋಕ್ಷಗಳಿಗೆ ನೇರವಾಗಿ ಭಗವಂತನನ್ನೇ ಉಪಾಸನೆ ಮಾಡಬೇಕು. ಅರ್ಥ-ಕಾಮಗಳಿಗೆ ಇತರ ದೇವತೆಗಳನ್ನು ಅಂತರ್ಯಾಮಿ ಭಗವಂತನ ಎಚ್ಚರದಿಂದ ಉಪಾಸನೆ ಮಾಡಬಹುದು. ಜ್ಞಾನದಲ್ಲಿ ಎತ್ತರಕ್ಕೇರಿದವರು ಅರ್ಥ-ಕಾಮಗಳಿಗೂ ನೇರವಾಗಿ ಭಗವಂತನ ಉಪಾಸನೆ ಮಾಡಬಹುದು.
ಇಲ್ಲಿ ಶುಕಾಚಾರ್ಯರು ಪರೀಕ್ಷಿತನಿಗೆ ಐಹಿಕ ಉಪಾಸನೆಯಿಂದ ಮೋಕ್ಷಸಾಧನೆಯವರೆಗೆ  ಎಲ್ಲವನ್ನೂ ಸಂಕ್ಷಿಪ್ತವಾಗಿ, ಸಾರರೂಪದಲ್ಲಿ ಹೇಳಿರುವುದನ್ನು ಕಾಣುತ್ತೇವೆ. ಇದು ಪ್ರಾಚೀನರ ಕ್ರಮ. “ಸಂಕ್ಷೇಪ ವಿಸ್ತರಾಭ್ಯಾಂ ಪ್ರವದಂತಿ ಮನೀಶಿಣಃ”  ಎನ್ನುವ ಮಾತೊಂದಿದೆ. ಯಾವಾಗಲೂ ಒಮ್ಮೆಗೇ ವಿಸ್ತಾರವಾಗಿ ಹೇಳಬಾರದು. ಮೊದಲು ಸಂಕ್ಷಿಪ್ತವಾಗಿ ಹೇಳಬೇಕು. ಇದು ಶೋತೃಗಳ ಗಮನವನ್ನು ಕೇಂದ್ರೀಕರಿಸುವ ಒಂದು ಮನಃಶಾಸ್ತ್ರ.

ಈ ಹಂತದಲ್ಲಿ ನೈಮಿಶಾರಣ್ಯದಲ್ಲಿ ಭಾಗವತವನ್ನು ಶೌನಕಾದಿಗಳಿಗೆ ಹೇಳುತ್ತಿರುವ ಉಗ್ರಶ್ರವಸ್ಸು ಹೇಳುತ್ತಾರೆ: ಸಂಕ್ಷಿಪ್ತವಾಗಿ ಎಲ್ಲವನ್ನೂ ಹೇಳಿದ ಶುಕಾಚಾರ್ಯರು,  ‘ನೀನಂತೂ ಭಾಗವತ ಪ್ರಧಾನ, ನಿನಗೆ ಭಗವದನುಗ್ರಹವಿದೆ, ಹಾಗಾಗಿ ನಿನ್ನ ದಾರಿ ಸುಗಮ’  ಎಂದು ಪರೀಕ್ಷಿತನಿಗೆ ಹೇಳಿ, ತಮ್ಮ ಉಪದೇಶವನ್ನು ನಿಲ್ಲಿಸಿ ಬಿಡುತ್ತಾರೆ” ಎಂದು.

No comments:

Post a Comment