Sunday, March 30, 2014

Shrimad BhAgavata in Kannada -Skandha-02-Ch-04(02)

ಪರೀಕ್ಷಿತನ ಪ್ರಾರ್ಥನೆಯನ್ನು ಕೇಳಿದ ಶುಕಾಚಾರ್ಯರು ಹೇಳುತ್ತಾರೆ: “ಈ ಉಪದೇಶದ ಹಿಂದೆ ದೊಡ್ಡ ಇತಿಹಾಸವಿದೆ. ಮೊಟ್ಟಮೊದಲು ಸೃಷ್ಟಿಯ ಆದಿಯಲ್ಲಿ ಭಾಗವತದ ಪ್ರಮೇಯವನ್ನು ಸ್ವಯಂ ನಾರಾಯಣ ಚತುರ್ಮುಖನಿಗೆ ಉಪದೇಶಿಸಿದ. ಆನಂತರ ನಾರದರ ನಿವೇದನೆಯಂತೆ, ಸಮಸ್ತ ಮನುಕುಲದ ಉದ್ಧಾರಕ್ಕಾಗಿ  ಭಗವಾನ್ ವೇದವ್ಯಾಸರು ಭಾಗವತ ರಚನೆ ಮಾಡಿದರು. ಹೀಗೆ ವೇದವ್ಯಾಸರಿಂದ ನನಗೆ ಹರಿದು ಬಂದ ಜ್ಞಾನವನ್ನು ನಾನು ನಿನಗೆ ನೀಡುತ್ತಿದ್ದೇನೆ” ಎಂದು.  ಹೀಗೆ ಒಂದು ದೃಷ್ಟಿಯಿಂದ ಸೃಷ್ಟಿಯ ಆದಿಯಿಂದ ಬೆಳೆದುಬಂದ ಜ್ಞಾನ ಪರಂಪರೆ ಅತ್ತ್ಯಂತ ಮಹತ್ತ್ವದ್ದು ಮತ್ತು ಪುರಾತನವಾದುದ್ದು. ಭಗವಂತನಿಂದ ಬಂದ ಹಾಗೂ ಭಗವಂತನ ಬಗೆಗಿನ ಜ್ಞಾನವಾದುದರಿಂದ ಇದು ಭಾಗವತ. “ಅತ್ಯಂತ ರಹಸ್ಯವಾದ ಈ ಜ್ಞಾನ ಪರಂಪರೆಯನ್ನು ನನ್ನ ತಂದೆಯಾದ ವೇದವ್ಯಾಸರಿಂದ ಕೇಳಿದ್ದೇನೆ. ಅದನ್ನೇ ವಿಸ್ತಾರವಾಗಿ ನಿನಗೆ ಹೇಳುತ್ತೇನೆ.  ಹೇಳುವ ಮೊದಲು ನಾವೆಲ್ಲರೂ ಆ ಭಗವಂತನನ್ನು ಧ್ಯಾನ ಮಾಡೋಣ. ನಮ್ಮ ಮನಸ್ಸು ಆ ಭಗವಂತನಲ್ಲಿ ಶ್ರುತಿಗೂಡಲಿ” ಎಂದು ಹೇಳಿ ಪುನಃ ವಿಸ್ತಾರವಾಗಿ ಮಂಗಳಾಚರಣೆ ಮಾಡುತ್ತಾರೆ ಶುಕಾಚಾರ್ಯರು. 
ಶ್ರೀಶುಕ ಉವಾಚ--
ನಮಃ ಪರಸ್ಮೈ ಪುರುಷಾಯ ಭೂಯಸೇ ಸದುದ್ಭವಸ್ಥಾನನಿರೋಧಲೀಲಯಾ
ಗೃಹೀತಶಕ್ತಿತ್ರಿತಯಾಯ ದೇಹಿನಾಮಂರ್ಧ್ರುವಾಯಾನುಪಲಭ್ಯವರ್ತ್ಮನೇ ೧೨

ಮಂಗಳಾಚರಣೆ ಮಾಡುತ್ತಾ ಶುಕಮುನಿಗಳು ಹೇಳುತ್ತಾರೆ: “ಯಾರನ್ನು ಉಪಾಸನೆ ಮಾಡಿದರೆ ಎಲ್ಲವನ್ನೂ ಪಡೆಯಬಹುದೋ ಆ ಪರಮ ಪುರುಷ ಭಗವಂತನಿಗೆ ನಮಸ್ಕಾರ. ಈ ಸತ್ಯವಾದ(ಸತ್) ಪ್ರಪಂಚದ ಉದ್ಭವ-ಸ್ಥಾನ-ನಿರೋಧ ಅಥವಾ ಸೃಷ್ಟಿ-ಸ್ಥಿತಿ-ಸಂಹಾರ ಯಾರಿಗೆ ಒಂದು ಲೀಲೆಯೋ ಅವನಿಗೆ ನಮಸ್ಕಾರ” ಎಂದು. ಹೀಗೆ ಹೇಳುವಾಗ ಇಲ್ಲಿ “ಭಗವಂತ ಇದ್ದದ್ದನ್ನು ಸೃಷ್ಟಿ ಮಾಡಿದ” ಎಂದು ಒಂದು ಮುಖ್ಯವಾದ ಮಾತನ್ನು ಹೇಳುವುದನ್ನು ಕಾಣುತ್ತೇವೆ. ಈ ಮಾತು ಕೆಲವರಿಗೆ ಗೊಂದಲವನ್ನುಂಟುಮಾಡುತ್ತದೆ. ಈ ಮಾತನ್ನು ನಾವು ಅರ್ಥ ಮಾಡಿಕೊಳ್ಳಬೇಕಾದರೆ ನಮಗೆ ‘ಸೃಷ್ಟಿ’ ಎನ್ನುವ ಪದದ ಅರ್ಥ ಏನು ಎನ್ನುವುದು ತಿಳಿದಿರಬೇಕು. ಸೃಷ್ಟಿ ಎಂದರೆ ಇಲ್ಲದ್ದು ಉಂಟಾಗುವುದಲ್ಲ, ಬದಲಿಗೆ ಇರುವ ವಸ್ತುವಿಗೆ ಆಕಾರ ಬರುವುದು. ಕುಂಬಾರನಿಂದ ಮಡಿಕೆ ಸೃಷ್ಟಿಯಾಯಿತು ಎಂದರೆ ಅಲ್ಲಿ ಮಣ್ಣು-ನೀರು ಎಲ್ಲವೂ ಇತ್ತು. ಇದ್ದ ವಸ್ತುಗಳೇ ಸೇರಿ ಅದರಿಂದ ಹೊಸದೊಂದು ಆಕಾರ ನಿರ್ಮಾಣವಾಯಿತು ಅಷ್ಟೇ. ಇದೇ ರೀತಿ ಭಗವಂತ ಇರುವ ವಸ್ತುವಿಗೆ ಆಕಾರ ಕೊಟ್ಟು, ಈ ನಾಮಾತ್ಮಕ ಮತ್ತು ರೂಪಾತ್ಮಕ ಪ್ರಪಂಚವನ್ನು ನಿರ್ಮಾಣ ಮಾಡುತ್ತಾನೆ. ಹೀಗಾಗಿ ಈ ಪ್ರಪಂಚ ಸತ್. ಅಂದರೆ ಇತ್ತು, ಇದ್ದದ್ದಕ್ಕೇ ಒಂದು ಆಕಾರ ಬಂತು. ಪ್ರಪಂಚವನ್ನು ಸೂಕ್ಷ್ಮವಾಗಿ ನೋಡಿದರೆ ಈ ಸತ್ಯ ನಮಗೆ ತಿಳಿಯುತ್ತದೆ. ಉದಾಹರಣೆಗೆ ಹುಟ್ಟುವುದು ಎಂದರೆ ಅಲ್ಲಿ ಕಾಣುವ ಒಂದು ಶರೀರ ಬರುವುದು. ಅದೇ ರೀತಿ ಸಾಯುವುದು ಎಂದರೆ ಕಾಣುವ ಶರೀರ ಹೋಗುವುದು. ಮೂಲತಃ ಜೀವಕ್ಕೆ ಹುಟ್ಟೂ ಇಲ್ಲಾ, ಸಾವೂ ಇಲ್ಲಾ. ಅದು ಅನಾದಿನಿತ್ಯ. ಇದೇ ರೀತಿ ಪ್ರಳಯ ಕಾಲದಲ್ಲಿ ಭೂಮಿ ಸಿಡಿದು ನಾಶವಾಯಿತು ಎಂದರೆ ಕಣ್ಣಿಗೆ ಕಾಣುವ ಭೂಮಿ ಸಿಡಿದು ಕಣ್ಣಿಗೆ-ಕಾಣದ ಅಣು-ಕಣವಾಗಿ ವಾತಾವರಣದಲ್ಲಿ ಪರಮಾಣು ಸಮುದ್ರವಾಗಿರುವುದೇ ಹೊರತು ಇಲ್ಲವಾಗುವುದಲ್ಲ.
ಈ ಶ್ಲೋಕದಲ್ಲಿ ‘ಗೃಹೀತಶಕ್ತಿತ್ರಿತಯಾಯ’ ಎನ್ನುವಲ್ಲಿ  ಸೃಷ್ಟಿ-ಸ್ಥಿತಿ-ಸಂಹಾರ ಮಾಡುವುದಕ್ಕಾಗಿ ಭಗವಂತ ಮೂರು ಶಕ್ತಿಗಳನ್ನು ಪ್ರಪಂಚದಿಂದ ತೆಗೆದುಕೊಳ್ಳುತ್ತಾನೆ ಎಂದು ಹೇಳಿದಂತೆ ಕಾಣುತ್ತದೆ. ಆದರೆ ಇಲ್ಲಿ ಹೇಳುವುದು ಅದನ್ನಲ್ಲ. ಏಕೆಂದರೆ ಪ್ರಕಾಶಸಂಹಿತಾದಲ್ಲಿ ಹೀಗೆ ಹೇಳಿದ್ದಾರೆ: 
ಗೃಹೀತಶಕ್ತಿತ್ರಿತಯಾಯಯೇತಿ
ಇಚ್ಛಾ ಜ್ಞಾನಂ ಕ್ರಿಯಾ ಚೇತಿ ನಿತ್ಯಾಃ ಶಕ್ತಯ ಈಶಿತುಃ
ಸ್ವರೂಪಭೂತಾ ಅಪಿತು ಭೇದವದ್ ವ್ಯಾವಹಾರಿಕಾಃ
-ಇತಿ ಪ್ರಕಾಶಸಂಹಿತಾವಚನಾನ್ನಿತ್ಯ ಗೃಹೀತಶಕ್ತಿತ್ವಮೇವ

ಭಗವಂತ ತನ್ನಲ್ಲಿರುವ ಮೂರು ನಿತ್ಯಶಕ್ತಿಗಳಿಂದ ಎಲ್ಲವನ್ನೂ ಮಾಡುತ್ತಾನೆ. ಅವುಗಳೆಂದರೆ: ಇಚ್ಛಾಶಕ್ತಿ,  ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿ. ಯಾವುದೇ ಒಂದು ಕ್ರಿಯೆ ಆಗಬೇಕಾದರೆ ಬೇಕಾಗಿರುವ ಮೂಲಭೂತ ಆಂತರಿಕ ಶಕ್ತಿಗಳಿವು. ಇವು ಭಗವಂತನ ಸ್ವರೂಪಭೂತ ಶಕ್ತಿಗಳು. [ಸತ್ವ-ರಜಸ್ಸು-ತಮಸ್ಸು ಬಾಹ್ಯ ಶಕ್ತಿಗಳು. ಇವು  ಒಮ್ಮೊಮ್ಮೆ ಶಕ್ತಿಗಳಾಗಿರದೇ ಅಶಕ್ತಿಯಾಗಿ ನಮ್ಮ ದೌರ್ಬಲ್ಯಕ್ಕೆ ಕಾರಣವಾಗುತ್ತವೆ]. ಹೀಗೆ ಭಗವಂತನ ಸ್ವರೂಪಭೂತವಾಗಿರುವ ಮೂರು ಶಕ್ತಿಗಳಿಂದಲೇ ಸೃಷ್ಟಿ-ಸ್ಥಿತಿ-ಸಂಹಾರ ನಡೆಯುತ್ತದೆ. ಪ್ರಾಪಂಚಿಕವಾಗಿ ನೋಡಿದರೂ ಕೂಡಾ ನಮಗೆ ಈ ವಿಷಯ ಸ್ಪಷ್ಟವಾಗಿ ತಿಳಿಯುತ್ತದೆ. ಉದಾಹರಣೆಗೆ ಮಡಕೆಯನ್ನು ಒಬ್ಬ ಕುಂಬಾರ ಮಾಡಬೇಕಾದರೆ ಆ ಮಡಕೆಯನ್ನು ಯಾವ ಮಣ್ಣಿನಿಂದ ಮಾಡಬೇಕು, ಎಷ್ಟು ನೀರು ಹಾಕಬೇಕು, ಎಷ್ಟು ಹದ ಮಾಡಬೇಕು, ಹೇಗೆ ಆಕಾರ ಕೊಡಬೇಕು, ಇತ್ಯಾದಿ ಜ್ಞಾನ ಬೇಕು. ಕೇವಲ ಜ್ಞಾನ ಇದ್ದರೆ ಸಾಲದು, ಮಾಡಬೇಕು ಎನ್ನುವ ಇಚ್ಛೆ ಇರಬೇಕು ಮತ್ತು ಬಾಹ್ಯ ಪರಿಕರಗಳನ್ನು ಬಳಸಿ ಮಾಡಬೇಕು. ಹೀಗೆ ಯಾವುದೇ ಒಂದು ವಸ್ತು ನಿರ್ಮಾಣವಾಗಬೇಕಾದರೆ ಅಲ್ಲಿ ಇಚ್ಛಾಶಕ್ತಿ,  ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳು ಮೂಲಭೂತ ಶಕ್ತಿಗಳಾಗಿರುತ್ತವೆ. ಇವು ಮೊಟ್ಟಮೊದಲು ಸೃಷ್ಟಿಯ ಹಿನ್ನೆಲೆಯಲ್ಲಿ ಭಗವಂತನಲ್ಲಿರುವ ಶಕ್ತಿಗಳು. ಭಗವಂತನ ಜ್ಞಾನವೇ ಆತನ ಇಚ್ಛೆ, ಆತನ ಇಚ್ಛೆಯೇ ಆತನ ಕ್ರಿಯೆ, ಆತನ ಕ್ರಿಯೆಯೇ ಆತನ ಜ್ಞಾನ.   ಇನ್ನು ಈ ಶ್ಲೋಕದಲ್ಲಿ ‘ಗ್ರಹೀತ’ ಎನ್ನುವ ಪದ ಬಳಕೆ ಏಕೆ ಮಾಡಿದರು ಎನ್ನುವುದು ಪ್ರಶ್ನೆ. ಗ್ರಹೀತ ಎಂದರೆ ಇಲ್ಲದೇ ಇರುವುದಲ್ಲ, ಇದ್ದ ಶಕ್ತಿಯನ್ನು ಬೇಕಾದಾಗ ಬಳಸುವುದು.  ಭಗವಂತನಲ್ಲಿ ಈ ಎಲ್ಲಾ ಶಕ್ತಿಗಳೂ ಸದಾ ಇರುತ್ತವೆ. ಆದರೆ ಅಭಿವ್ಯಕ್ತಿ ಮಾತ್ರ ಯಾವಾಗ ಬೇಕೋ ಆವಾಗ ಎನ್ನುವುದನ್ನು ‘ಗ್ರಹೀತ’ ಪದ ಸೂಚಿಸುತ್ತದೆ.

ಭಗವಂತನ ಕುರಿತು ಹೇಳಿದಾಗ ಎಲ್ಲರಲ್ಲೂ ಮೂಡುವ ಸರ್ವೇ ಸಾಮಾನ್ಯ ಪ್ರಶ್ನೆ- “ಇಂಥಹ ಪರಮ ಪುರುಷ ಭಗವಂತ ಎಲ್ಲಿದ್ದಾನೆ” ಎನ್ನುವುದು. ಈ ಪ್ರಶ್ನೆಗೆ ಉತ್ತರಿಸುತ್ತಾ ಶುಕಾಚಾರ್ಯರು ಹೇಳುತ್ತಾರೆ: “ಆತ ನಮ್ಮೊಳಗೇ ಸ್ಥಿರವಾಗಿದ್ದಾನೆ” ಎಂದು. ಆತ  ನಮ್ಮೊಳಗೆ ಇರುವುದರಿಂದಲೇ ನಮಗೆ ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳಿರುವುದು.  ದೀಪದ ಅಡಿಯಲ್ಲಿರುವುದು ಹೇಗೆ ಕಾಣುವುದಿಲ್ಲವೋ ಹಾಗೇ ಭಗವಂತ ಬಹಳ ಹತ್ತಿರವಿದ್ದರೂ ಕೂಡಾ, ಅವನನ್ನು ಹೋಗಿ ಸೇರುವ ದಾರಿ ನಮಗೆ ಕಾಣುವುದಿಲ್ಲ. ಹೀಗಾಗಿ ನಮ್ಮ ಹತ್ತಿರವೇ ಇರುವ ಭಗವಂತನನ್ನು ನಾವು ಎಲ್ಲೆಲ್ಲೂ ಹುಡುಕಾಡುತ್ತಿರುತ್ತೇವೆ.  ಇದು ಹೇಗೆಂದರೆ: ಮನೆಯೊಂದರಲ್ಲಿ ಎಲ್ಲಾ ವಿದ್ಯುತ್ ದೀಪಗಳಿದ್ದು, ಅದರ ಮುಖ್ಯ ಒತ್ತುಗುಂಡಿ(Main Switch) ತಿಳಿಯದೇ ಕತ್ತಲಲ್ಲಿ ಒದ್ದಾಡಿದಂತೆ. ಒಮ್ಮೆ ಆ ಗುಂಡಿ ಸಿಕ್ಕರೆ ಎಲ್ಲವೂ ಸುಲಭ. ಆದರೆ ಒತ್ತುಗುಂಡಿ(Switch) ಸಿಗುವ ತನಕ ಒದ್ದಾಟ. ಅಧ್ಯಾತ್ಮ ಸಾಧನೆ  ಎನ್ನುವುದು ಬೆಳಕಿನ ಒತ್ತುಗುಂಡಿಯನ್ನು ಹುಡುಕಿದಂತೆ-ಭಗವಂತನನ್ನು ಸೇರುವ ದಾರಿಯನ್ನು ಹುಡುಕುವ ಕ್ರಿಯೆ. ಒಮ್ಮೆ ದಾರಿ ಸಿಕ್ಕರೆ ಎಲ್ಲವೂ  ಬೆಳ್ಳಂಬೆಳಕು.    

No comments:

Post a Comment