ಚತುರ್ಥೋSಧ್ಯಾಯಃ
ನೈಮಿಶಾರಣ್ಯದಲ್ಲಿ ಶೌನಕಾದಿಗಳಿಗೆ ಭಾಗವತ ಪ್ರವಚನ ಮಾಡುತ್ತಿರುವ ಉಗ್ರಶ್ರವಸ್ಸು,
ಶೌನಕಾದಿಗಳು ತೋರಿದ ಆಸಕ್ತಿಯನ್ನು ನೋಡಿ
ಹೇಳುತ್ತಾರೆ: “ನೀವು ಏನು ಹೇಳಿದಿರೋ ಅದೇ ಮಾತನ್ನು ಪರೀಕ್ಷಿತ ಶುಕಾಚಾರ್ಯರಲ್ಲಿ ಹೇಳಿದ” ಎಂದು.
ಈ ಹಿಂದೆ ಹೇಳಿದಂತೆ- ಶುಕಾಚಾರ್ಯರು ಎಲ್ಲವನ್ನೂ ಸಂಕ್ಷಿಪ್ತವಾಗಿ ಹೇಳಿ ಒಂದು ವಿರಾಮ(Pause) ಕೊಡುತ್ತಾರೆ.
ಆಗ ಪರೀಕ್ಷಿತ “ಇನ್ನೂ ಈ ಕುರಿತು ವಿವರವಾಗಿ ಹೇಳಿ” ಎಂದು ಕೇಳಿಕೊಳ್ಳುತ್ತಾನೆ. ಈ ಹಿಂದೆ ಭಗವಂತನನ್ನು ‘ವಿಜ್ಞಾನತತ್ತ್ವಂ
ಗುಣಸನ್ನಿರೋಧಂ’ ಎಂದು
ವರ್ಣಿಸಿದ್ದಾರೆ. ಅಂದರೆ ಆತ ಎಲ್ಲಾ ಗುಣಗಳಿಂದ ಅತೀತ. ಹೀಗಿರುವಾಗ ಆತ ತ್ರಿಗುಣವನ್ನು
ಬಳಸಿಕೊಂಡು ಸೃಷ್ಟಿ-ಸ್ಥಿತಿ-ಸಂಹಾರವನ್ನು ಏಕೆ ಮಾಡುತ್ತಾನೆ? ಈ ವಿಶ್ವದ ರಚನೆ ಏಕಾಯಿತು?
ನಾವೆಲ್ಲರೂ ಈ ವಿಶ್ವದಲ್ಲಿ ಏಕೆ ಹುಟ್ಟಿದೆವು? ನಮ್ಮನ್ನು ಈ ಭೂಮಿಯಲ್ಲಿ ಹುಟ್ಟಿಸುವುದರಿಂದ
ಭಗವಂತನಿಗೇನು ಉಪಯೋಗ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಸಿ ಎಂದು ಪರೀಕ್ಷಿತ
ಶುಕಾಚಾರ್ಯರಲ್ಲಿ ಕೇಳಿಕೊಳ್ಳುತ್ತಾನೆ.
ಸೂತ ಉವಾಚ--
ಆತ್ಮಜಾಯಾತ್ಮಜಾಗಾರ
ಪಶುದ್ರವಿಣಬಂಧುಷು ।
ರಾಜ್ಯೇ
ಚಾವಿಕಲೇ ನಿತ್ಯಂನಿರೂಢಾಂ ಮಮತಾಂ ಜಹೌ ॥೦೨॥
ಪರೀಕ್ಷಿತ ಈ ರೀತಿ ಪ್ರಶ್ನೆ ಮಾಡುವಾಗ ಆತನ ಮನಃಸ್ಥಿತಿ ಹೇಗಿತ್ತು ಎನ್ನುವುದನ್ನು ಇಲ್ಲಿ
ಸೂತರು ವಿವರಿಸುವುದನ್ನು ಕಾಣುತ್ತೇವೆ. “ಆತ ತನ್ನ ದೇಹ, ಪತ್ನಿ, ಮಕ್ಕಳು, ಮನೆ, ಪಶು,
ಸಂಪತ್ತು, ಬಂಧುಗಳು, ದೇಶ, ಎಲ್ಲವುದರ ಮೋಹ ತೊರೆದು
ನಿರ್ಮಲ ಮನಸ್ಕನಾಗಿದ್ದ” ಎನ್ನುತ್ತಾರೆ ಸೂತರು(ಉಗ್ರಶ್ರವಸ್ಸು). ಈ ಮಾತನ್ನು ಕೇಳಿದಾಗ ನಮಗೊಂದು ಸಂಶಯ ಬರುತ್ತದೆ.
ಅದೇನೆಂದರೆ ಈ ಹಿಂದೆ ಒಂದನೇ ಸ್ಕಂಧದಲ್ಲಿ, ಶುಕಾಚಾರ್ಯರ
ಆಗಮನಕ್ಕೂ ಮೊದಲು ಆತ ಎಲ್ಲಾ ಮೋಹವನ್ನು ತೊರೆದು ಗಂಗಾತೀರಕ್ಕೆ ಬಂದಿದ್ದ ಎಂದು ಹೇಳಲಾಗಿದೆ.[ ಮುನಿವ್ರತೋ ಮುಕ್ತಸಮಸ್ತಸಂಗಃ-೦೧-೧೯-೦೭]. ಹಾಗಾಗಿ ಪುನಃ ಇಲ್ಲಿ ಶುಕಾಚಾರ್ಯರ ಉಪದೇಶ ಕೇಳಿದ ಮೇಲೆ ನಿರೂಢಾಂ
ಮಮತಾಂ ಜಹೌ ಎಂದು ಏಕೆ ಹೇಳಿದರು ಎನ್ನುವುದು ನಮಗೆ ತಿಳಿಯುವುದಿಲ್ಲ. ಈ ನಮ್ಮ
ಗೊಂದಲ ಪರಿಹರಿಸುತ್ತಾ ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಹೇಳುತ್ತಾರೆ: “ಅನ್ಯೇಷಾಂ
ನಿತ್ಯಂ ನಿರೂಢಾಂ ತದಾ ವಿಶೇಷತೋ ಜಹೌ” ಎಂದು. ಅಂದರೆ ಬೇರೆಯವರಿಂದ ಎಂದೂ ಬಿಡಲಾಗದಂತಹ ಮಮತೆಯನ್ನು ಪರೀಕ್ಷಿತ ಮೊದಲೇ
ಬಿಟ್ಟಿದ್ದರಿಂದ ಆತನಲ್ಲಿ ಯಾವುದೇ ಮೋಹದ ಲವಲೇಶ ಇರಲಿಲ್ಲ ಎನ್ನುವುದು ಮೇಲಿನ ಶ್ಲೋಕದ ತಾತ್ಪರ್ಯ.
ಸಂಸ್ಥಾಂ
ವಿಜ್ಞಾಯ ಸನ್ನ್ಯಸ್ಯ ಕರ್ಮ ತ್ರೈವರ್ಗಿಕಂ ಚ ಯತ್ ।
ವಾಸುದೇವೇ
ಭಗವತಿ ಸ್ವಾತ್ಮಭಾವಂ ದೃಢಂ ಗತಃ ॥೦೪॥
“ತನ್ನ ಸಾವಿನ ವಿಷಯದಲ್ಲಿ ಸ್ಪಷ್ಟವಾದ ಅರಿವನ್ನು ಪಡೆದಿದ್ದ ಪರೀಕ್ಷಿತ, ತ್ರಿವರ್ಗ(ಐಹಿಕ ಧರ್ಮ-ಅರ್ಥ-ಕಾಮ)ವನ್ನು
ಬಿಟ್ಟು, ಸಮಸ್ತ ಗುಣಪೂರ್ಣನಾಗಿರುವ ವಾಸುದೇವನೇ ತನ್ನ ‘ಆತ್ಮಾ’ ಎಂದು ಗಟ್ಟಿಯಾಗಿ ತಿಳಿದುಕೊಂಡ”
ಎನ್ನುತ್ತಾರೆ ಸೂತರು. ಇಲ್ಲಿ “ಪರೀಕ್ಷಿತ ತನ್ನ ಆತ್ಮ ವಾಸುದೇವ ಎಂದು ದೃಢವಾಗಿ ತಿಳಿದುಕೊಂಡ” ಎಂದಿದ್ದಾರೆ.
ಈ ಮಾತು ನಮಗೆ ಪೂರ್ಣ ಅರ್ಥವಾಗಬೇಕಾದರೆ ನಾವು ಆತ್ಮ ಪದದ ಮೂಲ ಅರ್ಥವೇನೆಂದು ತಿಳಿಯಬೇಕು. ವಾಸುದೇವಃ
ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ ॥೭-೧೯॥ ವಾಸುದೇವನೇ ಸರ್ವ, ಆತನೇ ನಿಜವಾದ ಆತ್ಮ ಎನ್ನುತ್ತದೆ
ಗೀತೆ. ಆತ್ಮ ಎನ್ನುವ ಪದದ ಅರ್ಥವನ್ನು ಭಾರತ ಹೀಗೆ ವರ್ಣಿಸುತ್ತದೆ: ‘ಯಚ್ಚಾಪ್ನೋತಿ
ಯದಾದತ್ತೇ ಯಚ್ಚಾತ್ತಿ ವಿಷಯಾನಿಹ| ಯಚ್ಚಾಸ್ಯ ಸನ್ತತೋ ಭಾವಸ್ತಸ್ಮಾದಾತ್ಮೇತಿ ಭಣ್ಯತೇ’
ಇತಿ| ಅಂದರೆ ಎಲ್ಲವನ್ನೂ ಪಡೆದವನು ಆತ್ಮ. ವಾಮನ ಪುರಾಣದಲ್ಲಿ ಹೇಳುವಂತೆ:
ಆಪ್ತೇಃ ಸರ್ವಗುಣಾನಾಂ ಯ ಆತ್ಮಣಾಮತಯಾ ಹರಿಂ । ಉಪಾಸ್ತೇ
ನಿತ್ಯಶೋ ವಿದ್ವಾನ್ ಆಪ್ತಕಾಮಸ್ತದಾ ಭವೇತ್ ॥ ಸರ್ವಗುಣಪೂರ್ಣನಾದ ಭಗವಂತ ಆತ್ಮ. ಅವನ ಮುಂದೆ ನಾವೆಲ್ಲರೂ ಅನಾತ್ಮರು. [ಜಡದೊಂದಿಗೆ ಹೋಲಿಸಿದಾಗ
ನಾವು ಆತ್ಮರು. ಆದರೆ ನಮಗಿಂತ ದೊಡ್ಡ ಆತ್ಮ ಆ ಪರಮಾತ್ಮ]. ಹೀಗಾಗಿ ಆತ್ಮಾ ಎಂದರೆ ಸರ್ವಗುಣಪೂರ್ಣ,
ಸರ್ವಾಂತರ್ಯಾಮಿ. ಏಷ ತೇ ಆತ್ಮಾ ಅಂತರ್ಯಾಮಿ ಅಮೃತಃ. ನಮ್ಮೊಳಗಿದ್ದು ನಮ್ಮನ್ನು ನಿಯಮಿಸುವ ಭಗವಂತ ಆತ್ಮ. ಇದನ್ನೇ ಬ್ರಹ್ಮಸೂತ್ರದಲ್ಲಿ ಹೀಗೆ ಹೇಳಿದ್ದಾರೆ
: “ಓಂ ಆತ್ಮೇತಿ
ತೋಪಗಚ್ಚಂತಿ ಗ್ರಾಹಯಂತಿ ಚ ಓಂ ॥ ೩-೪೮೭ ॥” ಒಟ್ಟನಲ್ಲಿ ಹೇಳಬೇಕೆಂದರೆ: ಸಚ್ಚಿದಾನಂದಸ್ವರೂಪನಾದ ಭಗವಂತನೇ ಸರ್ವಗುಣಪೂರ್ಣ. ಆತನೇ ನಮ್ಮೆಲ್ಲರ
ಅಂತರ್ಯಾಮಿ. ಆದ್ದರಿಂದ ಅವನೇ ನಮ್ಮ ಸ್ವಾಮಿ ಎನ್ನುವ
ಭಾವನೆ ಹೊಂದುವುದೇ ಆತ್ಮಜ್ಞಾನವನ್ನು ಹೊಂದುವುದು. ಇದನ್ನೇ ಗೀತೆಯಲ್ಲಿ ವಾಸುದೇವಂ
ಸರ್ವಂ ಎಂದಿದ್ದಾರೆ. ಸರ್ವಂ ಎಂದರೆ ಪರಿಪೂರ್ಣ ವಸ್ತು.
ಭಗವಂತನೊಬ್ಬನೇ ಪರಿಪೂರ್ಣ, ಉಳಿದಿದ್ದೆಲ್ಲಾವೂ ಅಪೂರ್ಣ. ಹೀಗೆ ಪರೀಕ್ಷಿತ ಸರ್ವಾಂತರ್ಯಾಮಿಯೂ,
ಸರ್ವಗುಣಪೂರ್ಣನೂ ಆದ ಭಗವಂತನೊಬ್ಬನೇ ತನ್ನ ಆತ್ಮ ಎಂದು ಗಟ್ಟಿಯಾಗಿ ನಂಬಿದ. “ಭಗವಂತನೇ ಆತ್ಮ,
ಅವನ ಅನಂತರ ಕೆಳಗಿನ ಮಟ್ಟದಲ್ಲಿ ಉಳಿದವರಿದ್ದಾರೆ. ಹೀಗಾಗಿ ಭಗವಂತನೇ ನನಗೆ ಸ್ವಾಮಿ, ಅವನೇ ನಿಯಾಮಕ,
ಅವನಲ್ಲಿ ನಾನು ಶರಣುಹೋಗಿದ್ದೇನೆ. ಅವನನ್ನು ಬಿಟ್ಟು ಇನ್ನೇನನ್ನೂ ನಾನು ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ”
ಎಂದು ತೀರ್ಮಾನ ಮಾಡಿದ ಪರೀಕ್ಷಿತ, ಭಗವಂತನ ಕುರಿತು ಇನ್ನೂ ಹೆಚ್ಚಿಗೆ ಹೇಳಿ ಎಂದು ಶುಕಾಚಾರ್ಯರಲ್ಲಿ
ಪ್ರಾರ್ಥಿಸುತ್ತಾನೆ.
No comments:
Post a Comment