ಆಯುರ್ಹರತಿ ವೈ
ಪುಂಸಾಂ ಉದ್ಯನ್ನಸ್ತಂ ಚ ಯನ್ನಸೌ ।
ತಸ್ಯರ್ತೇ ಯಃ
ಕ್ಷಣೋ ನೀತ ಉತ್ತಮಶ್ಲೋಕವಾರ್ತಯಾ ॥೧೭॥
ಉಗ್ರಶ್ರವಸ್ಸಿನ
ಮಾತನ್ನು ಕೇಳಿದ ಶೌನಕರು ತಾವಿನ್ನೂ ಅನೇಕ ಅಪೂರ್ವ ವಿಚಾರವನ್ನು ಭಾಗವತದಿಂದ ತಿಳಿಯಬೇಕೆಂದು ಅಪೇಕ್ಷಿಸುತ್ತಾ
ಒಂದು ಕಾವ್ಯಮಯವಾದ ಸುಂದರವಾದ ಮಾತನ್ನು ಹೇಳುವುದನ್ನು ಈ ಶ್ಲೋಕದಲ್ಲಿ ಕಾಣುತ್ತೇವೆ.
ಯಾವುದು ನಿತ್ಯ
ನಡೆಯುತ್ತದೋ ಅದೆಲ್ಲವೂ ನಮಗೆ ಅಭ್ಯಾಸವಾಗಿ ಹೋಗುತ್ತದೆ ಮತ್ತು ಕ್ರಮೇಣ ಅದನ್ನು ನಾವು
ಯಾಂತ್ರಿಕವಾಗಿ ನೋಡಲಾರಂಭಿಸುತ್ತೇವೆ. ಚಿಕ್ಕ ವಯಸ್ಸಿನಲ್ಲಿ ನಮ್ಮ ತಂದೆ-ತಾಯಿ ಹೇಳಿ ಕೊಟ್ಟಂತೆ
ನಾವು ಅನೇಕ ಅನುಷ್ಠಾನಗಳನ್ನು ಮಾಡುತ್ತೇವೆ. ಆದರೆ ಆ ಆಚಾರದ ಹಿಂದಿನ ವಿಜ್ಞಾನವೇನು
ಎನ್ನುವುದನ್ನು ನಾವೆಂದೂ ಯೋಚಿಸಿರುವುದಿಲ್ಲ. ಇದರಿಂದಾಗಿ ನಮ್ಮೆಲ್ಲಾ ಅನುಷ್ಠಾನಗಳೂ ಯಾಂತ್ರಿಕವಾಗುತ್ತಾ ಹೋಗುತ್ತವೆ. ಪ್ರಕೃತಿಯಲ್ಲಿ
ನಡೆಯುವ ಒಂದೊಂದು ಕ್ರಿಯೆಯ ಹಿಂದೆ ನಾವು ಕಲಿಯಬೇಕಾದ ಪಾಠ ಅನೇಕ. ಸೂಕ್ಷ್ಮವಾಗಿ ನೋಡಿದಾಗ ಮಾತ್ರ ಅದು ನಮಗೆ ತಿಳಿಯುತ್ತದೆ. ಉದಾಹರಣೆಗೆ ಸೂರ್ಯೋದಯ-ಸೂರ್ಯಾಸ್ತ ಇದು ನಿತ್ಯ ನಮ್ಮ
ಕಣ್ಣಮುಂದೆ ನಡೆಯುವ ಕ್ರಿಯೆ. ಇದು ನಮಗೆ ಸರ್ವೇ ಸಾಮಾನ್ಯ ವಿಷಯ. ಇದರ ಬಗ್ಗೆ ನಾವೆಂದೂ ಆಳವಾಗಿ
ಚಿಂತಿಸಿರುವುದಿಲ್ಲ. ಆದರೆ ಈ ವಿಷಯವನ್ನು ಸೂಕ್ಷ್ಮವಾಗಿ ನೋಡಿದರೆ ಇದರಲ್ಲಿ ಅನೇಕ ವಿಷಯಗಳು
ಅಡಗಿರುವುದು ತಿಳಿಯುತ್ತದೆ. ಸೂರ್ಯನಿಗೆ ಪ್ರಸಿದ್ಧವಾದ ಹೆಸರು ಆದಿತ್ಯ. ಈ ಆದಿತ್ಯ ಪದದ ಅರ್ಥ
ಅತ್ಯಂತ ಅಪೂರ್ವ. ಆದತ್ತೇ ಇತೀ ಆದಿತ್ಯಃ. ಅಂದರೆ ಸೆಳೆದುಕೊಳ್ಳುವವ, ಸ್ವೀಕರಿಸುವವನು ಅಥವಾ ಬದುಕನ್ನು ಕೊಡುವವನು ಎಂದರ್ಥ.
ನೆಲದಲ್ಲಿರುವ ನೀರನ್ನು ಸೂರ್ಯ ಆವಿಯಾಗಿಸಿ ಸ್ವೀಕಾರ ಮಾಡುತ್ತಾನೆ ಮತ್ತು ಅದರಿಂದ
ಇಳೆಗೆ ಮಳೆ ಕೊಟ್ಟು ನಮಗೆ ಬದುಕನ್ನು ನೀಡುತ್ತಾನೆ. ಆದಿತ್ಯಾತ್ ಜಾಯತೇ ವೃಷ್ಟಿಃ
ವೃಷ್ಟೇರನ್ನಂ ತತಾಃ ಪ್ರಜಾಃ. ಮಳೆ ಕೊಟ್ಟು, ಅನ್ನ(ಆಹಾರ) ಕೊಟ್ಟು, ಬದುಕನ್ನು ಕೊಡುವವನು
ಆದಿತ್ಯ. ಇವೆಲ್ಲವುದರ ಜೊತೆಗೆ ಒಂದು
ಸೂರ್ಯೋದಯದಿಂದ ಇನ್ನೊಂದು ಸೂರ್ಯೋದಯದ ನಡುವೆ ಆತ ನಮ್ಮ ಆಯುಸ್ಸಿನ ಇಪ್ಪತ್ನಾಲ್ಕು ಗಂಟೆಗಳನ್ನೂ
ಕೂಡಾ ಹೀರಿ, ನಮ್ಮನ್ನು ಇಪ್ಪತ್ನಾಲ್ಕು ಗಂಟೆಗಳಷ್ಟು ಕಾಲ ಸಾವಿಗೆ ಸಮೀಪ ಮಾಡುತ್ತಾನೆ. ಇದು
ಸೂರ್ಯೋದಯ ಅಥವಾ ಸೂರ್ಯಾಸ್ತದಲ್ಲಿ ನಾವು ತಿಳಿಯಬೇಕಾದ ಪಾಠ. ಇದೇ ವಿಚಾರವನ್ನು ಇಲ್ಲಿ ಶೌನಕರು
ಉಗ್ರಶ್ರವಸ್ಸರಲ್ಲಿ ಹೇಳುತ್ತಿದ್ದಾರೆ: “ಪ್ರತಿಯೊಂದು ಸೂರ್ಯೋದಯವಾದಾಗಲೂ ನಾವು ನಮ್ಮ
ಅಪೂರ್ವವಾದ ಸಮಯವನ್ನು ವ್ಯರ್ಥವಾಗಿ ಕಳೆದುಕೊಳ್ಳುತ್ತಿದ್ದೇವೆ ಎನ್ನುವ ಅರಿವು ಮೂಡುತ್ತದೆ. ಕಳೆದುಹೋದ ಕಾಲವನ್ನು ಮರಳಿ ಪಡೆಯಲು ಸಾಧ್ಯವಿಲ್ಲ ನಿಜ, ಆದರೆ ಉಳಿದ
ಕಾಲವನ್ನು ಆ ಸರ್ವೋತ್ತಮ ತತ್ತ್ವ ಭಗವಂತನ ಬಗೆಗೆ ತಿಳಿಯುವುದರಲ್ಲಿ ಕಳೆದು ಇರುವ ಆಯುಸ್ಸಿನ ಪ್ರತಿಕ್ಷಣವನ್ನೂ
ಸಾರ್ಥಕಪಡಿಸಿಕೊಳ್ಳಬೇಕು ಎನ್ನುವುದು ನಮ್ಮ ಇಚ್ಛೆ. ಹೀಗಾಗಿ ನೀವು ನಿಮ್ಮ ಉಪದೇಶವನ್ನು
ನಿಲ್ಲಿಸದೇ ಮುಂದುವರಿಸಬೇಕು” ಎಂದು ಶೌನಕರು ಪ್ರಾರ್ಥಿಸುತ್ತಾರೆ.
ತರವಃ ಕಿಂ ನ ಜೀವಂತಿ ಭಸ್ತ್ರಾಃ ಕಿಂ ನ ಶ್ವಸಂತ್ಯುತ ।
ನ ಖಾದಂತಿ ನ ಮೇಹಂತಿ ಕಿಂ ಗ್ರಾಮಪಶವೋSಪರೇ ॥೧೮॥
ಕೇವಲ ಬದುಕುವುದು ಒಂದು
ಸಾಧನೆ ಅಲ್ಲ. ಕಾಡಿನಲ್ಲಿರುವ ಮರಗಳೂ ನೂರಾರು ವರ್ಷ ಬದುಕುತ್ತವೆ. ಮನುಷ್ಯರಾಗಿ ಹುಟ್ಟಿದ ನಮಗೆ ಆ
ಭಗವಂತ ಪೂರ್ಣತೆಯನ್ನು ಪಡೆದ ಶರೀರವನ್ನು ಕೊಟ್ಟಿದ್ದಾನೆ. ಇಂತಹ ಶರೀರವನ್ನು ಕೇವಲ ಉಸಿರಾಡುತ್ತಾ ಬದುಕುವುದಕ್ಕೆ ಉಪಯೋಗಿಸುವುದು
ಬಸ್ತ್ರಾದಂತೆ ವ್ಯರ್ಥ. [ಬಸ್ತ್ರಾ ಎಂದರೆ ಕುಲುಮೆಯಲ್ಲಿ
ಇದ್ದಿಲು ಹಾಕಿ ಗಾಳಿ ಊದುವ ಯಂತ್ರ. ಇದನ್ನು ಕಮ್ಮಾರರು ಕಬ್ಬಿಣ ಕಾಯಿಸಲು ಬಳಸುತ್ತಾರೆ].
ಅಮೂಲ್ಯವಾದ ನಮ್ಮ ಆಯುಸ್ಸನ್ನು ಕೇವಲ ತಿನ್ನುವುದು, ಕುಡಿಯುವುದು, ಮೈಥುನ ಇತ್ಯಾದಿಯಲ್ಲಿ ಕಳೆಯಬಾರದು.
ಏಕೆಂದರೆ ಬೀದಿಯಲ್ಲಿರುವ ನಾಯಿ ಕೂಡಾ ಈ ಎಲ್ಲವನ್ನೂ ಮಾಡುತ್ತದೆ. ಮನುಷ್ಯರಾಗಿ ಮನೋಮಯ ಮತ್ತು ವಿಜ್ಞಾನಮಯಕೊಶವನ್ನು
ಭಗವಂತನಿಂದ ಉಡುಗೊರೆಯಾಗಿ ಪಡೆದ ನಾವು ಅದನ್ನು ಉಪಯೋಗಿಸಿಕೊಂಡು ಮೇಲೇರುವುದನ್ನು ಕಲಿಯಬೇಕು.
ಶ್ವವಿಡ್ವರಾಹೋಷ್ಟ್ರಖರೈಃ ಸ ತುಲ್ಯಃ
ಪುರುಷಃ ಪಶುಃ ।
ನ ಯತ್ಕರ್ಣಪಥೋಪೇತೋ ಜಾತು ನಾಮ ಗದಾಗ್ರಜಃ ॥೧೯॥
ಯಾರು ಚಿಂತನೆಗೆ ತನ್ನನ್ನು
ಒಡ್ಡಿಕೊಳ್ಳುವುದಿಲ್ಲ, ಚಿಂತನೆಯಿಂದ ಭಗವಂತನೆಂಬ ಅಪೂರ್ವ ಸತ್ಯವನ್ನು ತಿಳಿಯುವ ಪ್ರಯತ್ನ ಮಾಡುವುದಿಲ್ಲ,
ಅವರು ಬೀದಿಯಲ್ಲಿ ತಿರುಗುವ ಹಂದಿ-ನಾಯಿ-ಕತ್ತೆಗಳಿಗಿಂತ ಬೇರೆಯಾದ ಜೀವ ಎನಿಸುವುದಿಲ್ಲ. “ಮನುಷ್ಯರಾಗಿ
ಹುಟ್ಟಿದ ನಾವು ಮನುಷ್ಯ ಎನ್ನುವುದಕ್ಕೆ ಸಾರ್ಥಕವಾಗುವ ರೀತಿಯಲ್ಲಿ ಬದುಕನ್ನು ಬದುಕಬೇಕು. ಹೀಗಾಗಿ ಶುಕಾಚಾರ್ಯರು ಪರೀಕ್ಷಿತನಿಗೆ ಮುಂದೆ ಏನು ಹೇಳಿದರು
ಎನ್ನುವುದನ್ನು ನಮಗೆ ತಿಳಿಸಿ ಹೇಳಿ” ಎಂದು ಶೌನಕರು ಉಗ್ರಶ್ರವಸ್ಸಿನಲ್ಲಿ ಕೇಳಿಕೊಳ್ಳುತ್ತಾರೆ. “ಬಾಲ್ಯದಲ್ಲೇ
ಆಟವಾಡಲು ಕೃಷ್ಣನ ವಿಗ್ರಹವನ್ನು ಕೇಳುತ್ತಿದ್ದವ ಪರೀಕ್ಷಿತ. ಎಲ್ಲವನ್ನೂ ಬಿಟ್ಟು ಭಗವಂತನ ಬೆನ್ನು
ಹತ್ತಿದ ಮಹಾಜ್ಞಾನಿ ಶುಕಾಚಾರ್ಯರು. ಇಂಥಹ ಇಬ್ಬರು ಸೇರಿದಾಗ ನಡೆದ ಸಂಭಾಷಣೆಯನ್ನು ನಿರಂತರ ಕೇಳಿ
ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎನ್ನುವುದು ನಮ್ಮ ಅಭಿಲಾಷೆ. ಹಾಗಾಗಿ ಶುಕಾಚಾರ್ಯರ ಉಪದೇಶದ ಮುಂದಿನ ಭಾಗವನ್ನು ನಮಗೆ ವಿವರಿಸಿ ಹೇಳಿ” ಎಂದು ಕೇಳುತ್ತಾರೆ
ಶೌನಕರು.
॥ ಇತಿ
ಶ್ರೀಮದ್ಭಾಗವತೇ ಮಹಾಪುರಾಣೇ ದ್ವಿತೀಯಸ್ಕಂಧೇ ತೃತಿಯೋSಧ್ಯಾಯಃ ॥
ಭಾಗವತ ಮಹಾಪುರಾಣದ
ಎರಡನೇ ಸ್ಕಂಧದ ಮೂರನೇ ಅಧ್ಯಾಯ ಮುಗಿಯಿತು
*********
ಆಯುರ್ಹರತಿ ವೈ ಪುಂಸಾಂ ಉದ್ಯನ್ನಸ್ತಂ ಚ ಯನ್ನಸೌ ।
ReplyDeleteತಸ್ಯರ್ತೇ ಯಃ ಕ್ಷಣೋ ನೀತ ಉತ್ತಮಶ್ಲೋಕವಾರ್ತಯಾ ಈ ಪದ್ಯವನ್ನು ಯಾರಾದರೂ ವ್ಯಾಕರಣಬದ್ಧವಾಗಿ ವಿವರಿಸಬಲ್ಲರೇ? ಯನ್ನಸೌ= ಹೇಗೆ ಬಿಡಿಸುವುದು ತಸ್ಯರ್ತೇ ಎಂದರೇನು?
ಆಯುರ್ಹರತಿ ವೈ ಪುಂಸಾಂ ಉದ್ಯನ್ನಸ್ತಂ ಚ ಯನ್ನಸೌ ।
ReplyDeleteತಸ್ಯರ್ತೇ ಯಃ ಕ್ಷಣೋ ನೀತ ಉತ್ತಮಶ್ಲೋಕವಾರ್ತಯಾ ಈ ಪದ್ಯವನ್ನು ಯಾರಾದರೂ ವ್ಯಾಕರಣಬದ್ಧವಾಗಿ ವಿವರಿಸಬಲ್ಲರೇ? ಯನ್ನಸೌ= ಹೇಗೆ ಬಿಡಿಸುವುದು ತಸ್ಯರ್ತೇ ಎಂದರೇನು?