Monday, March 31, 2014

Shrimad BhAgavata in Kannada -Skandha-02-Ch-04(03)

ಭೂಯೋ ನಮಃ ಸದ್ವೃಜಿನಚ್ಛಿದೇSಸತಾಮಸಂಭವಾಯಾಖಿಲಸತ್ತ್ವಮೂರ್ತಯೇ
ಪುಂಸಾಂ ಪುನಃ ಪಾರಮಹಂಸ್ಯ ಆಶ್ರಮೇ ವ್ಯವಸ್ಥಿತಾನಾಮನುಮೃಗ್ಯ ದಾಶುಷೇ ೧೩

“ಮತ್ತೆ ಮತ್ತೆ ನಮಸ್ಕಾರ” ಎನ್ನುತ್ತಾರೆ ಶುಕಾಚಾರ್ಯರು. ಯಾರು ಸಾತ್ತ್ವಿಕರೋ  ಅವರ ಪಾಪವನ್ನು ತೊಳೆದು, ಅವರ ದುಃಖವನ್ನು(ವೃಜಿನ/ಬೃಜಿನ/ಪಾಪದಿಂದ ಬರುವ ದುಃಖವನ್ನು)ಪರಿಹಾರ ಮಾಡುವವನು; ದುಷ್ಟರಿಗೆ/ತಾಮಸರಿಗೆ ಎಂದೂ ಉನ್ನತಿಯ ಮಾರ್ಗವನ್ನು ತೋರದವನು(ಅಸಂಭವ); ಸರ್ವಗುಣಪೂರ್ಣನು; ಸತ್ತ್ವಸ್ವರೂಪನು; ಗುಣತ್ರಯಗಳ ಸ್ಪರ್ಶವೇ ಇಲ್ಲದ ಜ್ಞಾನಾನಂದಗಳ ಅಖಂಡ ಮೂರ್ತಿ; ತಮ್ಮ ಜೀವನವನ್ನು ಭಗವಂತನ ಉಪಾಸನೆಗೆ ಮೀಸಲಿಡುವ, ತಮ್ಮೊಳಗೆ ಪೂರ್ಣವಾಗಿ ಭಗವಂತನನ್ನು ತುಂಬಿಕೊಂಡವರ(ಪಾರಮಹಂಸ್ಯ) ಚಿಂತನೆಗೆ ನಿಲುಕುವ ಮತ್ತು ಅವರಿಗೆ ಬಯಸಿದ್ದನ್ನು ಕರುಣಿಸುವ  ನಾರಾಯಣನಿಗೆ ನಮಸ್ಕಾರ ಎಂದು ಶುಕಾಚಾರ್ಯರು ಭಗವಂತನನ್ನು ಸ್ತುತಿಸುತ್ತಾರೆ.

ಸ ಏಷ ಆತ್ಮಾSSತ್ಮವತಾಮಧೀಶ್ವರಸ್ತ್ರಯೀಮಯೋ ಧರ್ಮಮಯಸ್ತಪೋಮಯಃ
ಗತವ್ಯಲೀಕೈರಜಶಂಕರಾದಿಭಿರ್ವಿತರ್ಕ್ಯಲಿಂಗೋ ಭಗವಾನ್ ಪ್ರಸೀದತಾಮ್ ೧೯

ಎಲ್ಲರ ಅಂತರ್ಯಾಮಿ, ಎಲ್ಲರ ಸ್ವಾಮಿ ಭಗವಂತ ಮನನಶೀಲ ಜ್ಞಾನಿಗಳಿಗೆ(ಆತ್ಮವಂತರಿಗೆ) ಅಧೀಶ್ವರ. [ಭಗವಂತ ಎಲ್ಲರಿಗೂ ಸ್ವಾಮಿ. ಆದರೆ ಎಲ್ಲರಿಗೂ ಆ ಜ್ಞಾನ ಇರುವುದಿಲ್ಲ ಅಷ್ಟೇ]. ಇಂಥಹ ಭಗವಂತನನ್ನು ಶುಕಾಚಾರ್ಯರು ತ್ತ್ರೀಯೀಮಯಃ, ಧರ್ಮಮಯಃ, ತಪೋಮಯಃ ಎಂದು ಸ್ತುತಿಸಿದ್ದಾರೆ. ತ್ತ್ರೀಯೀಮಯಃ ಎಂದರೆ: ವೇದವೇ ಅವನ ಅರಿವಿಗೆ ಮತ್ತು ಅನುಗ್ರಹಕ್ಕೆ ಪ್ರಧಾನ  ಕಾರಣವಾಗಿರುವವನು; ಧರ್ಮಮಯಃ ಎಂದರೆ: ಧಾರ್ಮಿಕ ಜೀವನವೇ ಅವನ ಅನುಗ್ರಹಕ್ಕೆ ಪ್ರಧಾನ ಕಾರಣವಾಗಿರುವವನು. ತಪೋಮಯಃ ಎಂದರೆ: ತಪಸ್ಸೇ  ಅವನ ಅನುಗ್ರಹಕ್ಕೆ ಪ್ರಧಾನ ಕಾರಣವಾಗಿರುವವನು.
ಕೇವಲ ನಿರ್ವ್ಯಾಜ್ಯ ಭಕ್ತಿಯಿಂದ ಭಗವಂತನನ್ನು ತಿಳಿಯುವುದು ಸಾಧ್ಯ. ಕಪಟ ಭಕ್ತಿ, ಕಪಟ ಪಾಂಡಿತ್ಯದಿಂದ ಜನರನ್ನು ಮೋಸಗೊಳಿಸಬಹುದೇ ಹೊರತು ಭಗವಂತನನ್ನಲ್ಲ. ತಮ್ಮ ನಿರ್ವ್ಯಾಜ್ಯ ಭಕ್ತಿಯಿಂದ ಬ್ರಹ್ಮ-ರುದ್ರಾದಿಗಳು “ಭಗವಂತನ ಇರವು ಹೀಗಿರಬಹುದು” ಎಂದು ಊಹಿಸುತ್ತಾರೆ. ಅಂದರೆ ಅವರಿಗೂ ನಿಶ್ಚಿತರೂಪವಾಗಿ ಭಗವಂತ ಹೀಗೆಯೇ ಎಂದು ಹೇಳುವುದು ಸಾಧ್ಯವಿಲ್ಲ. “ಇಂಥಹ ಭಗವಂತ ನಮಗೆ ಅನುಗ್ರಹ ಮಾಡಲಿ; ನನಗೆ ಇದನ್ನು ಉಪದೇಶ ಮಾಡಿದಂತಹ ವೇದವ್ಯಾಸರೂಪಿ ಭಗವಂತನ ಅನುಗ್ರಹ ನಮ್ಮ ಮೇಲಿರಲಿ; ಆತ  ನನ್ನ ನಾಲಿಗೆಯಲ್ಲಿ ಕುಳಿತು ನನ್ನಿಂದ ನುಡಿಸಲಿ” ಎಂದು ಪ್ರಾರ್ಥಿಸುತ್ತಾರೆ ಶುಕಾಚಾರ್ಯರು.

ಏತದೇವಾತ್ಮಭೂ ರಾಜನ್ ನಾರದಾಯೇತಿ ಪೃಚ್ಛತೇ
ವೇದಗರ್ಭೋSಭ್ಯಧಾತ್ ಸರ್ವಂ ಯದಾಹ ಹರಿರಾತ್ಮನಃ ೨೫

ಶುಕಾಚಾರ್ಯರು ಹೇಳುತ್ತಾರೆ: “ಸೃಷ್ಟಿಯ ಆದಿಯಲ್ಲಿ ಭಗವಂತ ಚತುರ್ಮುಖನಿಗೆ ಏನನ್ನು ಉಪದೇಶ ಮಾಡಿದನೋ; ಚತುರ್ಮುಖ ತನ್ನ ಮಾನಸಪುತ್ರ ನಾರದರಿಗೆ ಏನನ್ನು ಉಪದೇಶ ಮಾಡಿದನೋ; ನನ್ನ ತಂದೆ ವೇದವ್ಯಾಸರು ನನಗೆ ಏನು ಉಪದೇಶ ಮಾಡಿದರೋ;  ಅದನ್ನೇ ಯಥಾವತ್ತಾಗಿ ನಾನು ಇನ್ನು ಮುಂದೆ ನಿನಗೆ ಹೇಳಲಿದ್ದೇನೆ” ಎಂದು.  ಭಗವಂತ ಸೃಷ್ಟಿ-ಸ್ಥಿತಿ-ಸಂಹಾರವನ್ನು ಯಾವ ಕಾರಣಕ್ಕಾಗಿ ಮಾಡುತ್ತಾನೆ ಎನ್ನುವ ಪ್ರಶ್ನೆಯನ್ನು ಹಿಂದೆ ನಾರದರು ತಮ್ಮ ತಂದೆ ಚತುರ್ಮುಖನಲ್ಲಿ ಕೇಳಿದ್ದರು. ಅದೇ ಪ್ರಶ್ನೆಯನ್ನು ಇಲ್ಲಿ ಪರೀಕ್ಷಿತ ಶುಕಾಚಾರ್ಯರಲ್ಲಿ ಕೇಳಿದ್ದಾನೆ. ಚತುರ್ಮುಖ ವೇದಗರ್ಭ. ಅಂದರೆ ಸಮಸ್ತ ವೇದಗಳೂ ಆತನ ಗರ್ಭದಲ್ಲಿ ಸದಾ ನೆಲೆಸಿರುತ್ತವೆ. ತನ್ನ ನಾಲ್ಕು ಮುಖಗಳಿಂದ ನಾಲ್ಕು ವೇದಗಳನ್ನು ಅಭಿವ್ಯಕ್ತಗೊಳಿಸಿದವನು ಚತುರ್ಮುಖ. ಇಂಥ ಚತುರ್ಮುಖ ಸ್ವಯಂ ನಾರಾಯಣನಿಂದ ಪಡೆದ ಜ್ಞಾನವನ್ನು ತನ್ನ ಮಗ ನಾರದನಿಗೆ ಉಪದೇಶಿಸಿದ. ಅದೇ ರೀತಿ  ನನ್ನ ತಂದೆ ವೇದವ್ಯಾಸರು ನನಗೆ ಉಪದೇಶಿಸಿದ ಈ ಭಾಗವತವನ್ನು ಯಥಾವತ್ತಾಗಿ ನಾನು ನಿನಗೆ ಹೇಳುತ್ತೇನೆ ಎಂದು ಮಂಗಳಾಚರಣೆ ಮಾಡುತ್ತಾರೆ ಶುಕಾಚಾರ್ಯರು.    

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ದ್ವಿತೀಯಸ್ಕಂಧೇ ಚತುರ್ಥೋSಧ್ಯಾಯಃ
ಭಾಗವತ ಮಹಾಪುರಾಣದ ಎರಡನೇ  ಸ್ಕಂಧದ ನಾಲ್ಕನೇ ಅಧ್ಯಾಯ ಮುಗಿಯಿತು

*********

No comments:

Post a Comment