Friday, April 4, 2014

Shrimad BhAgavata in Kannada -Skandha-02-Ch-05(01)

ಪಂಚಮೋSಧ್ಯಾಯಃ

ಸೃಷ್ಟಿಯ ಸಂಕ್ಷಿಪ್ತ ಚಿತ್ರಣ-ನಾರದ ಚತುರ್ಮುಖ ಸಂವಾದ

ಈ ಅಧ್ಯಾಯದಲ್ಲಿ ಸೃಷ್ಟಿ-ಸ್ಥಿತಿ-ಸಂಹಾರದ ಕುರಿತು ಪ್ರಶ್ನಿಸಿದ ಪರೀಕ್ಷಿತನಿಗೆ ಶುಕಾಚಾರ್ಯರು  ಸೃಷ್ಟಿಯ ಒಂದು ಚಿತ್ರಣವನ್ನು ಸಂಕ್ಷಿಪ್ತವಾಗಿ ನಾರದ-ಚತುರ್ಮುಖ ಸಂವಾದ ರೂಪದಲ್ಲಿ ನೀಡಿದ್ದಾರೆ. ಮುಂದೆ ಸೃಷ್ಟಿಯ ವರ್ಣನೆ ಮೂರನೇ ಸ್ಕಂಧದಲ್ಲಿ ವಿಸ್ತಾರವಾಗಿ ಬರುತ್ತದೆ. ಆದರೆ ಇಲ್ಲಿ ಅದರ ಸಂಕ್ಷಿಪ್ತ ಚಿತ್ರಣವಿದೆ. ಬನ್ನಿ, ನಮ್ಮ-ನಿಮ್ಮೆಲ್ಲರ ಪರವಾಗಿ ನಾರದರು ಚತುರ್ಮುಖನಲ್ಲಿ ಹಾಕಿದ ಪ್ರಶ್ನೆ ಮತ್ತು ಅದಕ್ಕೆ ಚತುರ್ಮುಖನ ಉತ್ತರವನ್ನು ಅವರ ಬಾಯಿಂದಲೇ ಕೇಳೋಣ.

ನಾರದ ಉವಾಚ--
ದೇವದೇವ ನಮಸ್ತೇSಸ್ತು ಭೂತಭಾವನ ಪೂರ್ವಜ
ತದ್ ವಿಜಾನೀಹಿ ಯಜ್ಜ್ಞಾನಮಾತ್ಮತತ್ತ್ವನಿದರ್ಶನಮ್ ೦೧

ಚತುರ್ಮುಖ ನಾರದನ ತಂದೆ. ಸೃಷ್ಟಿಯ ಆದಿಯಲ್ಲಿ ನವ ಪ್ರಜಾಪತಿಗಳು ಮತ್ತು ಯಾವ ಪ್ರಜಾಪತಿಯೂ ಅಲ್ಲದ ನಿತ್ಯ ಬ್ರಹ್ಮಚಾರಿ ನಾರದರೂ ಸೇರಿ ಹತ್ತು ಮಂದಿ ಮಹಾಜ್ಞಾನಿಗಳನ್ನು ಚತುರ್ಮುಖ ಸೃಷ್ಟಿಸಿದ. ಈ ಹತ್ತು ಮಂದಿಗಳಲ್ಲಿ  ದಕ್ಷನನ್ನು ಬಿಟ್ಟರೆ ನಾರದರೇ  ಅತ್ಯಂತ ಎತ್ತರದ ಜ್ಞಾನವುಳ್ಳವರು. ಅಂಥಹ ನಾರದರು ಚತುರ್ಮುಖನಲ್ಲಿ ಹೇಳುತ್ತಾರೆ: “ನೀನು ದೇವತೆಗಳಿಗೂ ದೇವತೆ” ಎಂದು. ದೇವತೆ ಎನ್ನುವ ಪದಕ್ಕೆ ಅನೇಕ ಅರ್ಥಗಳಿವೆ. ಮುಖ್ಯಾರ್ಥದಲ್ಲಿ ದೇವಾ ಎಂದರೆ ಸಾಕ್ಷಾತ್ ಭಗವಂತನೇ. [ಉದಾಹರಣೆಗೆ ಗಾಯತ್ತ್ರಿಯ ‘ಭರ್ಗೋ ದೇವಸ್ಯ ಧೀಮಹಿ’  ಎನ್ನುವಲ್ಲಿ ದೇವಾ ಎಂದರೆ ಸಾಕ್ಷಾತ್ ಭಗವಂತ].  ಭಗವಂತನ ನಂತರ ದೇವತೆಗಳು ಅನೇಕ ಹಾಗೂ ಅವರಲ್ಲಿ ವಿವಿಧ ಹಂತ/ಮಟ್ಟ/ತಾರತಮ್ಯವಿದೆ.  ಈ ಎಲ್ಲಾ ದೇವತೆಗಳಲ್ಲಿ ಎಲ್ಲರಿಗಿಂತ ಎತ್ತರದಲ್ಲಿರುವ ದೇವತೆ ಚತುರ್ಮುಖ ಬ್ರಹ್ಮ. ಹೀಗಾಗಿ ಚತುರ್ಮುಖ ದೇವದೇವ. ದಿವು-ವ್ಯವಹಾರೇ ಧಾತು. ದೇವತೆಗಳು ಎಂದರೆ ಪ್ರಪಂಚದ ವ್ಯವಹಾರ ನಡೆಸುವವರು ಎನ್ನುವ ಅರ್ಥವೂ ಇದೆ. ಏಕೆಂದರೆ: ತತ್ತ್ವಾಭಿಮಾನಿಗಳಾಗಿ ಪ್ರತಿಯೊಂದು ಕ್ರಿಯೆಯನ್ನು ನಡೆಸುವವರು ದೇವತೆಗಳಾಗಿರುವುದರಿಂದ ಅವರನ್ನು ದೇವ/ದೇವತೆ ಎಂದು ಕರೆಯುತ್ತಾರೆ. ಹಾಗಾಗಿ ಜಗತ್ತಿನ ಎಲ್ಲಾ ವ್ಯವಹಾರಗಳನ್ನು ನಡೆಸುವ ತತ್ತ್ವಾಭಿಮಾನಿಗಳಲ್ಲೇ ಸರ್ವಶ್ರೇಷ್ಠನಾದ ಚತುರ್ಮುಖ ದೇವದೇವ.

ನಮಸ್ಕರಿಸುತ್ತಾ ನಾರದರು ಚತುರ್ಮುಖನನ್ನು ಇಲ್ಲಿ ‘ಭೂತಭಾವನ ಪೂರ್ವಜ’ ಎಂದು ಸಂಬೋಧಿಸುವುದನ್ನು ಕಾಣುತ್ತೇವೆ.  ಈ ಹಿಂದೆ ಹೇಳಿದಂತೆ ಚತುರ್ಮುಖ ಬ್ರಹ್ಮ  ನಮ್ಮೆಲ್ಲಾ ವ್ಯವಹಾರಗಳ ಕೇಂದ್ರಸ್ಥಾನವಾದ  ಚಿತ್ತ ಅಥವಾ ವಿಜ್ಞಾನಮಯಕೋಶದ  ನಿಯಾಮಕ ದೇವತೆ. ಇಂತಹ ಅತ್ಯಂತ ಮಹತ್ತಾದ ಇಂದ್ರಿಯದ ನಿಯಾಮಕ ಶಕ್ತಿಯಾದ ಚತುರ್ಮುಖ ‘ಭೂತಭಾವನಃ’. ಇನ್ನು ‘ಭೂತ’ ಅಂದರೆ ಜೀವಜಾತ; ಭಾವನ ಅಂದರೆ ನಿರ್ಮಾಣ(Creation).  ಹೀಗಾಗಿ ಭೂತಭಾವನಃ ಅಂದರೆ ಎಲ್ಲಾ ಜೀವಗಳನ್ನು ಸೃಷ್ಟಿ ಮಾಡಿದ ತಂದೆ ಎಂದರ್ಥ. ಇತರ ದೇವತೆಗಳಿಗೂ ಸೃಷ್ಟತ್ವವಿದೆ. ಆದರೆ ಚತುರ್ಮುಖ ಬ್ರಹ್ಮ  ಎಲ್ಲರಿಗೂ ತಂದೆ. ಎಲ್ಲಾ ಜೀವರ ಸೃಷ್ಟಾರ ಎನ್ನುವ ವಿಶೇಷಣ ಯಾರಿಗಾದರೂ ಅನ್ವಯವಾಗುವುದಿದ್ದರೆ ಅದು ಬ್ರಹ್ಮ-ವಾಯುವಿಗಳಿಗೆ ಮಾತ್ರ. ಹೀಗಾಗಿ  ನಾರದರು ಚತುರ್ಮುಖನನ್ನು “ಸಮಸ್ತ ಜೀವಜಾತದ ತಂದೆಯೇ” ಎಂದು ಸಂಬೋಧಿಸಿದ್ದಾರೆ. ಇನ್ನು ‘ಪೂರ್ವಜಃ’.  ಅಂದರೆ ಎಲ್ಲಾ ಜೀವರು ಹುಟ್ಟುವ ಮೊದಲು ಭಗವಂತನ ನಾಭಿಕಮಲದಿಂದ ಹುಟ್ಟಿದ ಆದಿಜೀವ ಎಂದರ್ಥ. ಇದಲ್ಲದೇ ಈ ಎರಡು ವಿಶೇಷಣಗಳನ್ನು ಒಂದೇ ಪದವಾಗಿ ನೋಡಿದರೆ-‘ಭೂತಭಾವನಪೂರ್ವಜಃ’ ಎಂದಾಗುತ್ತದೆ. ನಮಗೆ ತಿಳಿದಂತೆ ‘ಭೂತಭಾವನಃ’ ಆ ನಾರಾಯಣ(ವಿಷ್ಣುಸಹಸ್ರನಾಮದಲ್ಲಿ ಈ ನಾಮ ಬಂದಿದೆ). ಆತ ಜಗತ್ತಿನ ಸಮಸ್ತ ಜೀವಜಾತದ(ಚತುರ್ಮುಖನನ್ನೂ ಸೇರಿಸಿ) ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣಕರ್ತ. ಇಂಥಹ ಭಗವಂತನ ಮೊದಲ ಮಗ(ಪೂರ್ವಜ)ನಾಗಿ ಹುಟ್ಟಿದ ಚತುರ್ಮುಖ ‘ಭೂತಭಾವನಪೂರ್ವಜಃ’. ಬ್ರಹ್ಮಣಃ ಪಿತರಂವೊಂದೇ, ಶಂಕರಸ್ಯ ಪಿತಾಮಹಂ, ಶ್ರೀಯಂ ಪತಿಂ, ಅಜಮ್ ನಿತ್ಯಂ,  ಇಂದ್ರಾದಿ ಪ್ರಪಿತಾಮಹಂ.  ಹುಟ್ಟು-ಸಾವಿಲ್ಲದ, ರಮಾರಮಣ ಭಗವಂತ ಬ್ರಹ್ಮ-ವಾಯುಗಳಿಗೆ ಅಪ್ಪ, ಗರುಡ-ಶೇಷ-ರುದ್ರರಿಗೆ ಅಜ್ಜ, ಇಂದ್ರಾದಿ-ದೇವತೆಗಳಿಗೆ ಮುತ್ತಜ್ಜ. ಇಂಥಹ ಭಗವಂತನಿಂದ ಮೊದಲು ಹುಟ್ಟಿದ ಚತುರ್ಮುಖ  ‘ಭೂತಭಾವನಪೂರ್ವಜಃ’.
ಚತುರ್ಮುಖನನ್ನು ಆತನ ಅಸಾಧಾರಣ ಗುಣಗಳಿಂದ ಸಂಬೋಧನೆ ಮಾಡಿದ ನಾರದರು ಹೇಳುತ್ತಾರೆ: “ಅರಿವನ್ನು ಕೊಡತಕ್ಕ ಮಾತಿನಿಂದ ನನಗೆ ತಿಳುವಳಿಕೆಯನ್ನು ತಿಳಿಸಿ ಕೊಡು” ಎಂದು. ಈ ಶ್ಲೋಕದಲ್ಲಿ ‘ವಿಜಾನೀಹಿ’ ಎನ್ನುವ ಪದ ಬಳಕೆಯಾಗಿದೆ. ಸಂಸ್ಕೃತದಲ್ಲಿ ‘ವಿಜಾನೀಹಿ’ ಅಂದರೆ ‘ತಿಳಿಸು’ ಎಂದರ್ಥವಲ್ಲ, ಬದಲಿಗೆ ‘ತಿಳಿದುಕೋ’ ಎಂದರ್ಥ. ಆದರೆ ಆ ಅರ್ಥದಲ್ಲಿ ಈ ಪದ ಇಲ್ಲಿ ಬಳಕೆಯಾಗಲು ಸಾಧ್ಯವಿಲ್ಲ. ಆದರೂ ಏಕೆ ಬಳಸಿದ್ದಾರೆ? ಈ ಪ್ರಶ್ನೆಗೆ ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಉತ್ತರಿಸುತ್ತಾ ಹೇಳುತ್ತಾರೆ: “ವಿಜಾನೀಹಿ ವಿಜ್ಞಾಪಯ  ‘ವ್ಯತ್ಯಯೋ ಭೇದಸ್ವಾತಂತ್ರ್ಯ ಕರಣೇಷು’ ಇತಿ ವಚನಾತ್ ಇನ್ನೊಬ್ಬರ ಹತ್ತಿರ ‘ತಿಳಿಸು’ ಅನ್ನುವ ಬದಲು ‘ತಿಳಿ’ ಎಂದು ಹೇಳುವುದು ಸ್ವತಂತ್ರ್ಯವನ್ನು ತೋರಿಸುವುದಕ್ಕೆ. ಉದಾಹರಣೆಗೆ ನಾವು ಕಷ್ಟಪಟ್ಟು ಮನೆಯೊಂದನ್ನು ಕಟ್ಟಿಸಿರುತ್ತೇವೆ. ಆದರೆ ಮಾತನಾಡುವಾಗ “ಕಷ್ಟಪಟ್ಟು ಕಟ್ಟಿದ ಮನೆ” ಎನ್ನುತ್ತೇವೆ.  ಇಲ್ಲಿ ‘ಕಟ್ಟಿಸಿದ’ ಎನ್ನುವ ಪದದ ಬದಲು ‘ಕಟ್ಟಿದ’ ಎನ್ನುವ ಪದ ಬಳಕೆ ಸ್ವಾತಂತ್ರ್ಯವನ್ನು ತೋರಿಸುತ್ತದೆ. ಕಟ್ಟಿದ ವ್ಯಕ್ತಿಗಳು ಬೇರೆಯವರಾದರೂ ಕೂಡಾ ಅಲ್ಲಿ ಸ್ವಾತಂತ್ರ್ಯಅವರಲ್ಲಿಲ್ಲದೇ ನಮ್ಮಲ್ಲಿರುವುದರಿಂದ ಹೀಗೆ ಪದ ಪ್ರಯೋಗ ಮಾಡುತ್ತೇವೆ. ಇದೇ ರೀತಿ ಇಲ್ಲಿ ನಾರದರು ‘ವಿಜಾನೀಹಿ’ ಎಂದು ಪದ ಬಳಸಿರುವುದು ‘ತಿಳಿದುಕೋ’ ಎಂದು ಆಜ್ಞೆ ಮಾಡುವುದಕ್ಕಲ್ಲ,  ಬದಲಿಗೆ ಜೀವಜಾತದಲ್ಲೇ ಅತಿದೊಡ್ಡ ಶಕ್ತಿಯಾದ ಚತುರ್ಮುಖನ ಸ್ವಾತಂತ್ರ ನಿರ್ಧಾರ ಮಾಡುವ ಶಕ್ತಿಯ ಗುರುತಿನಿಂದಾಗಿ.
ನಾರದರು ಹೇಳುತ್ತಾರೆ: “ಯಾವ ವಿದ್ಯೆ  ಆತ್ಮಸ್ವರೂಪದ ಸರಿಯಾದ ವಿವರಣೆಯನ್ನು ಕೊಡುತ್ತದೋ ಆ ವಿದ್ಯೆಯನ್ನು ನನಗೆ ತಿಳಿಹೇಳು” ಎಂದು. ಈ ಹಿಂದೆ ಹೇಳಿದಂತೆ ‘ಆತ್ಮ’ ಎಂದರೆ ಪರಮಾತ್ಮ. ಭಗವಂತನನ್ನು ಸದಾ ಕಾಣುವ, ಆತನ ಜೊತೆಗೆ ಮಾತನಾಡುವ, ಭಗವಂತನ ಅಪರೋಕ್ಷ ಜ್ಞಾನವುಳ್ಳ ನಾರದರು ತನಗಿಂತ ಹೆಚ್ಚು ಭಗವಂತನನ್ನು ಅರಿತ ಚತುರ್ಮುಖನಲ್ಲಿ “ಭಗವಂತನ ಕುರಿತು ಹೇಳು” ಎಂದು ಕೇಳುವುದು ಅವರಲ್ಲಿ ಭಗವಂತನ ಬಗೆಗಿರುವ ಕಳಕಳಿಯನ್ನು ತೋರಿಸುತ್ತದೆ. ಜ್ಞಾನಕ್ಕೆ ಮಿತಿ ಎನ್ನುವುದಿಲ್ಲ. ಅದನ್ನು ಎಷ್ಟು ತಿಳಿದರೂ ತಿಳಿಯದೇ ಇರುವುದು  ಅನಂತವಾಗಿಯೇ  ಉಳಿಯುತ್ತದೆ. ಹೀಗಾಗಿ ನಾರದರು “ಭಗವಂತನ ಅರಿವನ್ನು ಕೊಡತಕ್ಕಂತಹ ವಿಷಯವನ್ನು ನನಗೆ ಹೇಳು” ಎಂದು ಚತುರ್ಮುಖನಲ್ಲಿ ಪ್ರಾರ್ಥಿಸಿಕೊಳ್ಳುತ್ತಾರೆ.

No comments:

Post a Comment