Thursday, April 17, 2014

Shrimad BhAgavata in Kannada -Skandha-02-Ch-05(03)

ಬ್ರಹ್ಮೋವಾಚ--
ಸಮ್ಯಕ್ ಕಾರುಣಿಕಸ್ಯೇದಂ ವತ್ಸ ತೇ ವಿಚಿಕಿತ್ಸಿತಮ್
ಯದಹಂ ಚೋದಿತಃ ಸೌಮ್ಯ ಭಗವದ್ವೀರ್ಯದರ್ಶನೇ ೦೯

ನಾರದರ ಪ್ರಶ್ನೆಯನ್ನು ಆಲಿಸಿದ ಚತುರ್ಮುಖ ಹೇಳುತ್ತಾನೆ: “ನಿನ್ನ ಕರುಣೆ ಬಹಳ ದೊಡ್ಡದು ಮಗನೇ” ಎಂದು. ಈ ಹಿಂದೆ ಹೇಳಿದಂತೆ ನಮ್ಮ ಮೇಲಿನ ಕಾರುಣ್ಯದಿಂದ, ನಮ್ಮ-ನಿಮ್ಮೆಲ್ಲರ ಪರವಾಗಿ ನಾರದರು ಪ್ರಶ್ನೆ ಹಾಕಿರುವುದು. ಹೀಗೆ ಲೋಕದ ಪರವಾಗಿ, ಲೋಕದ ಸಂಶಯವನ್ನು ನೇರ ಚತುರ್ಮುಖನ ಉತ್ತರದಿಂದ ಪರಿಹರಿಸುವ ಉದ್ದೇಶದಿಂದ ನಾರದರು ಈ ರೀತಿ ಪ್ರಶ್ನೆ ಮಾಡಿರುವುದರಿಂದ ಚತುರ್ಮುಖ ಅವರನ್ನು ಪ್ರಶಂಸಿಸುತ್ತಿದ್ದಾನೆ. ಇಲ್ಲಿ ಚತುರ್ಮುಖ ನಾರದರನ್ನು “ಸೌಮ್ಯ” ಎಂದು ಸಂಬೋಧಿಸುವುದನ್ನು ಕಾಣುತ್ತೇವೆ. ತಮ್ಮ ಒಡನಾಟ ಮಾಡಿದವರಿಗೆ ಚಂದ್ರನ ಬೆಳಕಂತೆ ಅಹ್ಲಾದ ನೀಡುವ ಸ್ವಭಾವ ಉಳ್ಳವರ ಸೌಮ್ಯರು;  ಭಗವಂತನ ವಿಷಯೀಕವಾದ ಉತ್ಕೃಷ್ಟ ಜ್ಞಾನ(ಉಮ) ಉಳ್ಳವರ (ಸೋಮರ) ಗುಣ-ಸ್ವಭಾವ ಸೌಮ್ಯ. “ನೀನು ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡವನು, ನಿನಗೆ ಭಗವಂತನೇ ಎಲ್ಲವನ್ನೂ ಸೃಷ್ಟಿ ಮಾಡಿರುವುದು ಎಂಬುದು ತಿಳಿದಿದೆ. ಆದರೂ ಲೋಕದ ಜನರ ಮೇಲಿನ ಕಾರುಣ್ಯದಿಂದ, ಅವರ ಸಂಶಯ ನಿವಾರಣೆಗಾಗಿ ಈ ರೀತಿ ಪ್ರಶ್ನೆ ಮಾಡಿದೆ” ಎನ್ನುವುದು ಇಲ್ಲಿ ಬಳಸಿರುವ  ‘ಸೌಮ್ಯ’ ಎನ್ನುವ ವಿಶೇಷಣದ ಹಿಂದಿನ  ತಾತ್ಪರ್ಯ.  ಮುಂದುವರಿದು ಚತುರ್ಮುಖ ಹೇಳುತ್ತಾನೆ: “ನನಗೆ ನಿನ್ನ ಪ್ರಶ್ನೆಯಿಂದ ಬಹಳ ಸಂತೋಷವಾಗಿದೆ. ನಿನ್ನ ಪ್ರಶ್ನೆಯ ನೆಪದಲ್ಲಾದರೂ, ನಾನು ಸದಾ ಮನದಲ್ಲಿ ಚಿಂತಿಸುವ ಭಗವಂತನ ಬಗೆಗೆ ಮಾತನಾಡುವ ಅವಕಾಶ ನನಗೆ ದೊರಕಿತಲ್ಲಾ” ಎಂದು.   

ನಾನೃತಂ ಬತ ತಚ್ಚಾಪಿ ಯಥಾ ಮಾಂ ಪ್ರಬ್ರವೀಷಿ ಭೋಃ
ಅವಿಜ್ಞಾಯ ಪರಂ ಮತ್ತ ಏತಾವತ್ತ್ವಂ ಯತೋ ಹಿ ಮೇ ೧೦

“ನಾನೇ ಸೃಷ್ಟಿ ಮಾಡುವವನು, ನನ್ನಿಂದ ಮೇಲೆ ಇನ್ನ್ಯಾವ ಶಕ್ತಿಯೂ ಇಲ್ಲಾ ಎಂದಿಯಲ್ಲಾ, ಸುಳ್ಳಲ್ಲವೇ ಇದು? ನನ್ನನ್ನು ಆದಿಜೀವನಾಗಿ ಸೃಷ್ಟಿಸಿದ ಆ  ಭಗವಂತನನ್ನು ಮರೆತು  ಮಾತನಾಡುವುದು ಎಲ್ಲಾದರೂ ಉಂಟೇ? ಅಂಥಹ ಮಾತನ್ನು ಪರಿಹಾಸ್ಯಕ್ಕಾಗಿ ಆಡಿದರೂ ಕೂಡಾ ಆ ಮಾತಿನಲ್ಲಿ ಭಗವಂತನ ವಿಸ್ಮೃತಿ ಬಂತಲ್ಲವೇ? ನನ್ನನ್ನು ಜೀವಜಾತದಲ್ಲೇ ಹಿರಿಯ ಜೀವವನ್ನಾಗಿ ಸೃಷ್ಟಿಸಿದ ಆ ಭಗವಂತನನ್ನೇ ಮರೆತರೆ ಹೇಗೆ?” ಎಂದು ಕೇಳುತ್ತಾನೆ ಚತುರ್ಮುಖ. ಇಲ್ಲಿ  “ಏತಾವತ್ತ್ವಂ ಯತೋ ಹಿ ಮೇ” ಎನ್ನುವ ಮಾತಿನ ಹಿಂದಿನ ಧ್ವನಿಯನ್ನು ನಾವು ಗಮನಿಸಬೇಕು.  “ಭಗವಂತ ನನಗೆಷ್ಟು ಸಾಮರ್ಥ್ಯ ಕೊಟ್ಟಿದ್ದಾನೋ ಆ ಪರಿಮಿತಿಯಲ್ಲಿ ನಾನು ಕಾರ್ಯ ನಿರ್ವಹಿಸುತ್ತೇನೆ. ಅದಕ್ಕಿಂತ ಹೆಚ್ಚು ಇನ್ನೇನೂ ಇಲ್ಲಾ. ಹೀಗಿರುವಾಗ ಇಂಥಹ ಪ್ರಶ್ನೆಯೇ ನಿನಗೆ ಬರಬಾರದಿತ್ತು” ಎನ್ನುತ್ತಾನೆ ಚತುರ್ಮುಖ.
“ನಿನ್ನ ಪ್ರಶ್ನೆಗೆ ಉತ್ತರಿಸುತ್ತೇನೆ, ಆದರೆ ಭಗವಂತನ ವಿಸ್ಮೃತಿಯಿಂದ ಕೂಡಿದ ಪ್ರಶ್ನೆ ಮಾಡಿದ ದೋಷ ಪರಿಹಾರಕ್ಕಾಗಿ ಮತ್ತು ಭಗವಂತ ‘ನನ್ನಲ್ಲಿ ನಿಂತು ನುಡಿಸಲಿ’ ಎನ್ನುವ ಪ್ರಾರ್ಥನೆಯೊಂದಿಗೆ ಮೊದಲು ಆತನ ಧ್ಯಾನ ಮಾಡೋಣ” ಎನ್ನುತ್ತಾನೆ ಬ್ರಹ್ಮ. 

2 comments:

  1. ನಿಮ್ಮ ಈ ಬ್ರಹ್ಮೋವಾಚ ತುಂಬಾ ಒಳ್ಳೆಯ ತಾಣವಾಗಿದ್ದು ಇದು ಎಲ್ಲರಿಗೂ ಉಪಯುಕ್ತವಾಗಿದೆ.
    www.spn3187.blogspot.in

    ReplyDelete
    Replies
    1. ನಿಮ್ಮ ಆಸಕ್ತಿ ಮತ್ತು ಪ್ರತಿಕ್ರಿಯೆಗೆ ವಂದನೆಗಳು

      Delete