ಯದ್ರೂಪಂ
ಯದಧಿಷ್ಠಾನಂ ಯತಃ ಸೃಷ್ಟಮಿದಂ ಪ್ರಭೋ ।
ಯತ್ಸಂಸ್ಥಂ
ಯತ್ಪರಂ ಯಚ್ಚ ತತ್ ತತ್ತ್ವಂ ವದ ತತ್ತ್ವತಃ ॥೦೨॥
ತಾನು ತಿಳಿಯಬೇಕಾದ ಸಂಗತಿ ಯಾವುದು ಎನ್ನುವುದನ್ನು ವಿವರಿಸುತ್ತಾ ನಾರದರು ಹೇಳುತ್ತಾರೆ: “ಈ
ಜಗತ್ತಿಗೂ ಮತ್ತು ಭಗವಂತನಿಗೂ ಇರುವ ಸಂಬಂಧ ಏನು ಎನ್ನುವುದನ್ನು ತಾವು ತಿಳಿಸಿ ಹೇಳಬೇಕು” ಎಂದು.
ಈ ಜಗತ್ತು ಯಾವ ಭಗವಂತನ ರೂಪವೋ ಅಂಥಹ ಭಗವಂತನ ಬಗೆಗೆ ಹೇಳಿ ಎಂದು ನಾರದರು ಚತುರ್ಮುಖನಲ್ಲಿ ಕೇಳಿಕೊಳ್ಳುತ್ತಾರೆ.
ನಾರದರ ಈ ಪ್ರಶ್ನೆಯನ್ನು ಕೇಳಿದಾಗ ನಮಗೆ ಸ್ವಲ್ಪ ಗೊಂದಲವಾಗುತ್ತದೆ. ಈ ಜಗತ್ತು ಭಗವಂತನ
ರೂಪವಾಗುವುದು ಹೇಗೆ ಎನ್ನುವ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಈ ಗೊಂದಲ ಪರಿಹಾರವಾಗಬೇಕಾದರೆ
ನಾವು ಇಲ್ಲಿ ಬಳಕೆಯಾಗಿರುವ ‘ರೂಪ’ ಎನ್ನುವ ಪದದ ಮೂಲಾರ್ಥವನ್ನು ತಿಳಿಯಬೇಕು. ‘ರೂಪ-ರೂಪಕ್ರಿಯಾಂ’
ಎನ್ನುವುದು ಧಾತು. ಆದ್ದರಿಂದ ಇಲ್ಲಿ ನಾರದರು “ಈ
ಜಗತ್ತಿಗೆ ರೂಪ ಕೊಡುವವನ ಕುರಿತು ಹೇಳು” ಎಂದು ಚತುರ್ಮುಖನಲ್ಲಿ ಕೇಳಿದ್ದೇ ವಿನಃ, “ಭಗವಂತನೇ
ಜಗತ್ತಿನ ರೂಪದಲ್ಲಿ ಪರಿಣಾಮಗೊಂಡ ಬಗೆಯನ್ನು ಹೇಳು” ಎಂದು ಕೇಳಿರುವುದಲ್ಲ. ಬಹುಚಿತ್ರಜಗದ್
ಬಹುಧಾಕರಣಾತ್ ಪರಶಕ್ತಿರನನ್ತಗುಣಃ ಪರಮಃ । ಈ ಅನಂತವಾದ ವಿಶ್ವದಲ್ಲಿ ಒಂದು
ಇನ್ನೊಂದರಂತಿಲ್ಲ. ಇಲ್ಲಿ ಅನಂತ ವೈವಿದ್ಯಗಳಿವೆ. ಒಂದೇ ಮರದಲ್ಲಿ ಒಂದು ಎಲೆ ಇನ್ನೊಂದು ಎಲೆಗಿಂತ
ಭಿನ್ನ! ಇಂಥಹ ಜಗತ್ತಿಗೆ ರೂಪ ಕೊಟ್ಟವನ ಬಗೆಗೆ ಹೇಳಿ ಎಂದು ನಾರದರು ಪ್ರಾರ್ಥಿಸಿದ್ದಾರೆ.
ಮುಂದುವರಿದು ನಾರದರು ಹೇಳುತ್ತಾರೆ: “ಈ ಜಗತ್ತಿನ ಅಧಿಷ್ಠಾನ ಯಾರೋ ಅವನ ಕುರಿತು ಹೇಳಿ”
ಎಂದು. ಅಧಿಷ್ಠಾನ ಅಂದರೆ ‘ಅಧಿಕಮ್ ಸ್ಥಾನಮ್’.
ಉದಾಹರಣೆಗೆ ನಾವು ಕುರ್ಚಿಯಲ್ಲಿ ಕುಳಿತಿದ್ದರೆ ಕುರ್ಚಿ ನಮಗೆ ಅಧಿಷ್ಠಾನವಲ್ಲ. ಏಕೆಂದರೆ
ಕುರ್ಚಿಯನ್ನು ಹೊತ್ತಿರುವುದು ಭೂಮಿ; ಭೂಮಿಯನ್ನು ಹೊತ್ತಿರುವುದು ಸಂಕರ್ಷಣ[ಆಕರ್ಷಣ ಅಥವಾ
ಗುರುತ್ವಾಕರ್ಷಣ ಶಕ್ತಿ]; ಸಂಕರ್ಷಣನನ್ನು ಹೊತ್ತಿರುವುದು ವಾಯು [ವಾತಾವರಣ/ಪ್ರಾಣಶಕ್ತಿ];
ಪ್ರಾಣನನ್ನು ಹೊತ್ತಿರುವುದು ಆ ನಾರಾಯಣ. ಆದ್ದರಿಂದ ಎಲ್ಲಕ್ಕೂ ಅಧಿಷ್ಠಾನ ಆ ಭಗವಂತ. ಅಂಥಹ
ಭಗವಂತನ ಕುರಿತು ಹೇಳಿ ಎಂದು ನಾರದರು ಚತುರ್ಮುಖನಲ್ಲಿ ಕೇಳಿಕೊಳ್ಳುತ್ತಾರೆ. ಯಾರು ಎಲ್ಲವನ್ನೂ
ಸೃಷ್ಟಿಸಿದನೋ, ಯಾರು ಎಲ್ಲವುದಕ್ಕೂ ರೂಪಕೊಟ್ಟನೋ, ಯಾರು ಎಲ್ಲವುದಕ್ಕೂ ಆಧಾರವಾಗಿ ನಿಂತಿದ್ದಾನೋ,
ಅಂಥಹ ಭಗವಂತನ ಕುರಿತು ಕೇಳಬೇಕು ಎನ್ನುವ ಅಭಿಲಾಷೆಯನ್ನು ಇಲ್ಲಿ ನಾರದರು ವ್ಯಕ್ತಪಡಿಸಿದ್ದಾರೆ. ಈ ಶ್ಲೋಕದಲ್ಲಿ ನಾರದರು ಚತುರ್ಮುಖನನ್ನು ‘ಪ್ರಭೋ’ ಎಂದು ಸಂಬೋಧಿಸಿರುವುದನ್ನು
ಕಾಣುತ್ತೇವೆ. ಪ್ರಕೃಷ್ಟನಾದ, ಎಲ್ಲಕ್ಕಿಂತ ಹಿರಿದಾದ ಭಗವಂತನಿಂದ ಸೃಷ್ಟನಾದ ಹಾಗೂ ಅಂಥಹ
ಭಗವಂತನನ್ನು ಬಲ್ಲ ನೀನು ನನಗೆ ಇವೆಲ್ಲವನ್ನೂ
ತಿಳಿಸಿ ಹೇಳು ಎನ್ನುವುದು ಈ ವಿಶೇಷಣದ ಹಿಂದಿನ ತಾತ್ಪರ್ಯ.
ಈ ಶ್ಲೋಕದಲ್ಲಿ ಮೊದಲು ಜಗತ್ತಿನ ಅಧಿಷ್ಠಾನವಾಗಿರುವ ಭಗವಂತನ ಕುರಿತು ಹೇಳು ಎಂದು ಕೇಳಿದ
ನಾರದರು, ಮತ್ತೆ ‘ಸಂಸ್ಥಾನ’ನಾದ ಭಗವಂತನ ಕುರಿತು ಹೇಳು ಎಂದಿದ್ದಾರೆ. ಸಂಸ್ಥಾನ ಎಂದರೆ ನೇರ
ಆಧಾರ. ಒಟ್ಟಿನಲ್ಲಿ ಹೇಳಬೇಕೆಂದರೆ: ಜಗತ್ತಿನ
ನೇರ ಆಧಾರನೂ ಮತ್ತು ಕೊನೇಯ ಆಧಾರನೂ ಆಗಿರುವ ಭಗವಂತನ ಕುರಿತು ತಿಳಿಸಿ ಹೇಳಬೇಕು ಎನ್ನುವುದು
ನಾರದರ ಪ್ರಾರ್ಥನೆ. ಇಲ್ಲಿ ಇನ್ನೊಂದು ವಿಶೇಷವಾದ ಮಾತನ್ನು ನಾರದರು ಹೇಳಿರುವುದನ್ನು
ಕಾಣುತ್ತೇವೆ. ನಾರದರು ಹೇಳುತ್ತಾರೆ: “ಯಾರು ಎಲ್ಲವೂ ಆಗಿದ್ದಾನೋ ಅಂಥಹ ಪರಮತತ್ತ್ವದ ಬಗ್ಗೆ ಯಥಾವತ್ತಾದ ಅರಿವನ್ನು ಕೊಡು” ಎಂದು. ಇಲ್ಲಿ
‘ಎಲ್ಲವೂ ಆಗಿರುವವನು’ ಎಂದರೆ ಎಲ್ಲವನ್ನೂ ಬಲ್ಲವನು,
ಎಲ್ಲವನ್ನೂ ಮಾಡಬಲ್ಲ ಸರ್ವಸಮರ್ಥ ಎಂದರ್ಥ.
ಸರ್ವಂ
ಹ್ಯೇತದ್ ಭವಾನ್ ವೇದ ಭೂತಭವ್ಯಭವತ್ಪ್ರಭುಃ ।
ಕರಾಮಲಕವದ್
ವಿಶ್ವಂ ವಿಜ್ಞಾನಾವಸಿತಂ ತವ ॥೦೩॥
ತಾನು ಈ ಪ್ರಶ್ನೆಯನ್ನು ಚತುರ್ಮುಖನಲ್ಲೇ ಏಕೆ ಕೇಳುತ್ತಿದ್ದೇನೆ ಎನ್ನುವುದನ್ನು ಈ
ಶ್ಲೋಕದಲ್ಲಿ ನಾರದರು ಸ್ಪಷ್ಟಪಡಿಸಿದ್ದಾರೆ.
ನಾರದರು ಚತುರ್ಮುಖನಲ್ಲಿ ಹೇಳುತ್ತಾರೆ: “ ಎಲ್ಲವನ್ನೂ ತಿಳಿದಿರುವ ನೀವು
ಭೂತಭವ್ಯಭವತ್ಪ್ರಭುಃ” ಎಂದು. ನಾರದರು ಬಳಸಿರುವ
‘ಭೂತಭವ್ಯಭವತ್ಪ್ರಭುಃ’ ಎನ್ನುವ ನಾಮ ಭಗವಂತನ ನಾಮವಾಗಿ ವಿಷ್ಣುಸಹಸ್ರನಾಮದಲ್ಲಿ ಬಂದಿರುವುದನ್ನು
ಕಾಣುತ್ತೇವೆ. ಅದೇ ನಾಮವನ್ನು ಚತುರ್ಮುಖನ ಪರವಾಗಿ ನಾರದರು ಇಲ್ಲಿ ಬಳಸಿದ್ದಾರೆ. ಇದರ ಅರ್ಥ: “ಭಗವಂತನನ್ನು
ಬಿಟ್ಟರೆ, ಹಿಂದಿನ, ಇಂದಿನ ಮತ್ತು ಮುಂದಿನ ಎಲ್ಲವುದರ
ಒಡೆಯ ನೀನು” ಎಂದು. ಏಕೆಂದರೆ ಚತುರ್ಮುಖನಿಗೆ ಒಂದೊಂದು ಕಲ್ಪವೂ ಒಂದೊಂದು ದಿನದಂತೆ. ಆತ ಹಿಂದಿನ
ಅನೇಕ ಕಲ್ಪಗಳಲ್ಲಿ ಅನೇಕ ಸೃಷ್ಟಿ ಮಾಡಿರುವ ಹಾಗೂ ಭವಿಷ್ಯತ್ತಿನಲ್ಲಿ ಇನ್ನೂ ಅನೇಕ ಸೃಷ್ಟಿ
ಮಾಡಲಿರುವ ಮಹಾಶಕ್ತಿ. ಹೀಗಾಗಿ ಇಡೀ ಪ್ರಪಂಚ ಚತುರ್ಮುಖನಿಗೆ ನಿಚ್ಛಳ. ಭಗವಂತನ ಬಗೆಗಿನ ವಿಜ್ಞಾನ(ವಿಶಿಷ್ಠಜ್ಞಾನ/ ವಿವರವಾದ
ಜ್ಞಾನ) ಬ್ರಹ್ಮ-ವಾಯುವಿಗೆ ತಿಳಿದಷ್ಟು
ಇನ್ನ್ಯಾರಿಗೂ ತಿಳಿದಿರಲು ಸಾಧ್ಯವಿಲ್ಲ. ಹೀಗಾಗಿ ನಾರದರು ತಮ್ಮ ಪ್ರಶ್ನೆಯನ್ನು ನೇರವಾಗಿ
ಚತುರ್ಮುಖನ ಮುಂದಿಟ್ಟಿದ್ದಾರೆ.
ಯದ್ವಿಜ್ಞಾನೋ
ಯದಾಧಾರೋ ಯತ್ಪರಸ್ತ್ವಂ ಯದಾತ್ಮಕಃ ।
ಏಕಃ ಸೃಜಸಿ
ಭೂತಾನಿ ಭೂತೈರೇವಾತ್ಮಮಾಯಯಾ ॥೦೪॥
“ನಿಮ್ಮನ್ನು ಸೃಷ್ಟಿ ಮಾಡಿದ, ನಿಮ್ಮೊಳಗಿದ್ದು ನಿಮ್ಮನ್ನು ನಿಯಂತ್ರಿಸುವ, ನಿಮ್ಮ
ಅಂತರ್ಯಾಮಿ ಬಗ್ಗೆ ನಿಮಗೆ ತಿಳಿದಿರುವಷ್ಟು ಬೇರೆ
ಯಾರಿಗೆ ತಿಳಿದಿರಲು ಸಾಧ್ಯ?” ಎಂದು ಪ್ರಶ್ನಿಸಿದ
ನಾರದರು, ನಮ್ಮಂತಹ ಸಾಮಾನ್ಯ ಜನರ ಪರವಾಗಿ ಒಂದು ಪೂರ್ವಪಕ್ಷ ಮಾಡುವುದನ್ನು ಈ ಶ್ಲೋಕದಲ್ಲಿ
ಕಾಣುತ್ತೇವೆ. ಅಸಂಗತವಾದುದನ್ನು ಕೇಳಿ ಸಂಗತವನ್ನು ಪಡೆಯುವ ಸಲುವಾಗಿ ನಾರದರು ಹೇಳುತ್ತಾರೆ:
“ನನಗನಿಸಿದಂತೆ ಈ ಜಗತ್ತನ್ನು ಸೃಷ್ಟಿ ಮಾಡುವ
ಇನ್ನೊಂದು ಶಕ್ತಿ ಇಲ್ಲ; ಎಲ್ಲವೂ ನೀನೇ;
ನಿನ್ನಿಂದಾಚೆಗೇನಿದೆ?” ಎಂದು. ಒಬ್ಬ ಸಾಮಾನ್ಯನಿಗೆ ಈ ರೀತಿ ಯೋಚನೆ
ಬಂದರೆ ಅದಕ್ಕೆ ಚತುರ್ಮುಖನ ಉತ್ತರವೇನು ಎಂದು ಚತುರ್ಮುಖನ ಬಾಯಿಯಿಂದಲೇ ಕೇಳುವುದಕ್ಕಾಗಿ ನಾರದರು
ಇಲ್ಲಿ ಈ ರೀತಿ ಹೇಳಿದ್ದಾರೆ. “ಪಂಚಭೂತದ ಸೃಷ್ಟಿ, ಗಂಡು-ಹೆಣ್ಣಿನ ಸೃಷ್ಟಿ, ಜೀವದಿಂದ ಜೀವದ ಸೃಷ್ಟಿ, ಇವೆಲ್ಲವೂ ನಿನ್ನ ಸ್ವರೂಪಭೂತ
ಸಾಮರ್ಥ್ಯದಿಂದಲೇ ನಡೆಯುತ್ತಿರುವುದು” ಎನ್ನುತ್ತಾರೆ ನಾರದರು.
ಆತ್ಮನ್
ಭಾವಯಸೇ ತಾನಿ ನ ಪರಾಗ್ ಭಾವಯೇಃ ಸ್ವಯಮ್ ।
ಆತ್ಮಶಕ್ತಿಮವಷ್ಟಭ್ಯ
ಸೂತ್ರನಾಭಿರಿವಾಕ್ಲಮಃ ॥೦೫॥
“ಎಲ್ಲವನ್ನೂ ಸೃಷ್ಟಿ ಮಾಡುವವನೂ ನೀನೇ; ಕೊನೆಗೊಂದುದಿನ ಎಲ್ಲವನ್ನೂ ಸಂಹಾರ ಮಾಡುವವನೂ ನೀನೇ.
ನೀನು ಇನ್ನೊಂದು ಬಾಹ್ಯ ಶಕ್ತಿಯ ನೆರವಿನಿಂದ ಇದೆಲ್ಲವನ್ನೂ ಮಾಡುತ್ತಿಲ್ಲ, ಬದಲಿಗೆ ಸ್ವಸಾಮರ್ಥ್ಯದಿಂದ
ಮಾಡುತ್ತಿರುವೆ. ಹೇಗೆ ಜೇಡ ತನ್ನ ಹೊಟ್ಟೆಯಿಂದ ನೂಲನ್ನು ತೆಗೆದು ಬಲೆಯನ್ನು ನಿರ್ಮಿಸುತ್ತದೋ ಹಾಗೇ,
ನೀನು ಪ್ರಪಂಚವೆಂಬ ಬಲೆಯನ್ನು ನಿರ್ಮಿಸಿ ಅದರೊಳಗೆ ನಮ್ಮನ್ನಿಟ್ಟಿರುವೆ” ಎನ್ನುತ್ತಾರೆ ನಾರದರು.
ನಾಹಂ ವೇದ ಪರಂ
ತ್ವಸ್ಮಾನ್ನಾವರಂ ನ ಸಮಂ ವಿಭೋ ।
ನಾಮರೂಪಗುಣೈರ್ಭಾವ್ಯಂ
ಸದಸತ್ ಕಿಂಚಿದನ್ಯತಃ ॥೦೬॥
“ನೀನು ನಿರ್ಮಿಸಿರುವ ಈ ಪ್ರಪಂಚವನ್ನು ನೋಡಿದರೆ ನಿನ್ನಿನ್ದಾಚೆಗೆ ನಿನಗೆ ಸಮನಾಗಿರುವ ಅಥವಾ
ನಿನಗಿಂತ ಉನ್ನತವಾಗಿರುವ ಶಕ್ತಿ ಇನ್ನೊಂದಿಲ್ಲ ಎಂದು ನನಗನಿಸುತ್ತದೆ. ನಾಮ-ರೂಪ-ಕ್ರಿಯಾತ್ಮಕವಾಗಿರುವ
ಈ ಪ್ರಪಂಚದಲ್ಲಿ ಮೂಲತಃ ಇರುವುದು ಎರಡೇ ಬಗೆ. ಒಂದು ಕಣ್ಣಿಗೆ ಕಾಣುವಂಥಹದ್ದು(ಸತ್) ಮತ್ತು ಇನ್ನೊಂದು ಕಣ್ಣಿಗೆ ಕಾಣದೇ ಇರುವಂತಹದ್ದು(ಅಸತ್).
ಇಂಥಹ ಕಾರ್ಯಕಾರಣಾತ್ಮಕ ಪ್ರಪಂಚ ಕೇವಲ ನಿನ್ನಿಂದ ನಿರ್ಮಾಣವಾಗಿದೆ ಎಂದು ನಾನು ತಿಳಿದುಕೊಂಡಿದ್ದೇನೆ”
ಎಂದು ತಮ್ಮ ಪೂರ್ವಪಕ್ಷ ಹೇಳಿಕೆಯನ್ನು ಮುಂದಿಟ್ಟ ನಾರದರು, ಈ ತಿಳುವಳಿಕೆ ಹಿಂದಿನ ಒಂದು ಸಮಸ್ಯೆಯನ್ನು
ಚತುರ್ಮುಖನ ಮುಂದಿಡುತ್ತಾರೆ.
ಸ ಭವಾನಚರದ್
ಘೋರಂ ಯತ್ ತಪಃ ಸುಸಮಾಹಿತಃ ।
ತೇನ ಖೇದಯಸೇ
ನಸ್ತ್ವಂ ಪರಾಂ ಶಂಕಾಂ ಚ ಯಚ್ಛಸಿ ॥೦೭॥
“ಎಲ್ಲವೂ ನೀನೇ ಎಂದು ನನಗನಿಸಿದರೂ ಕೂಡಾ, ಅಂತಹ ನೀನು ಸೃಷ್ಟಿಯ ಆರಂಭದಲ್ಲಿ ಸಾವಿರಾರು ವರ್ಷಗಳ
ತನಕ, ನಿರ್ವಿಕಾರನಾಗಿ, ಏಕಾಗ್ರತೆಯಿಂದ ತಪಸ್ಸು ಮಾಡಿರುವುದು ಯಾರನ್ನು ಕುರಿತು? ಈ ಸಮಸ್ಯೆಗೆ ಉತ್ತರ ಕಾಣದೇ ಗೊಂದಲಕ್ಕೊಳಗಾಗಿದ್ದೇನೆ”
ಎಂದು ತಮ್ಮ ಸಮಸ್ಯೆಯನ್ನು ಚತುರ್ಮುಖನ ಮುಂದೆ ತೋಡಿಕೊಳ್ಳುತ್ತಾರೆ ನಾರದರು.
ಏತನ್ಮೇ
ಪೃಚ್ಛತಃ ಸರ್ವಂ ಸರ್ವಜ್ಞ ಸಕಲೇಶ್ವರ ।
ವಿಜಾನೀಹಿ
ಯಥೈವೇದಮಹಂ ಬುಧ್ಯೇSನುಶಾಸಿತಃ ॥೦೮॥
No comments:
Post a Comment