ನಮಸ್ತಸ್ಮೈ
ಭಗವತೇ ವಾಸುದೇವಾಯ ಧೀಮಹಿ ।
ಯನ್ಮಾಯಯಾ
ದುರ್ಜಯಯಾ ಮಾಂ ವದಂತಿ ಜಗದ್ಗುರುಮ್ ॥೧೨॥
‘ಓಂ ನಮೋ
ಭಗವತೇ ವಾಸುದೇವಾಯ’ ಎನ್ನುವ
ದ್ವಾದಶಾಕ್ಷರ ಮಂತ್ರ ಮತ್ತು ‘ನಾರಾಯಣಾಯ
ವಿದ್ಮಹೇ ವಾಸುದೇವಾಯ ಧೀಮಹಿ । ತನ್ನೋ ವಿಷ್ಣುಃ ಪ್ರಚೋದಯಾತ್ ।’ ಎನ್ನುವ ಚತುರ್ವಿಂಶಾSಕ್ಷರದ ವಿಷ್ಣು
ಗಾಯತ್ತ್ರಿ ಮಂತ್ರದ ಸಮ್ಮಿಲನ ಇಲ್ಲಿದೆ. ತನ್ನ ಉಪದೇಶಕ್ಕೂ ಮೊದಲು ಚತುರ್ಮುಖ ಈ ರೀತಿ
ಪ್ರಾರ್ಥನೆ ಮಾಡುತ್ತಿದ್ದಾನೆ ಎಂದರೆ ಇದು ಆತನ ನಿತ್ಯ ಉಪಾಸನೆಯ ಭಾಗ ಎನ್ನಬಹುದು. “ಯಾರಿಂದ
ನಾನು ಜಗತ್ತಿನ ಆದಿಜೀವನಾಗಿ ಸೃಷ್ಟಿಯಾದೆನೋ, ಯಾರ ಮುಂದೆ ನನ್ನ ಸಾಮರ್ಥ್ಯ ಅತ್ಯಲ್ಪವೋ, ಅಂಥಹ ವಾಸುದೇವನಿಗೆ
ನಮಸ್ಕಾರ” ಎಂದಿದ್ದಾನೆ ಚತುರ್ಮುಖ. ಇಲ್ಲಿ
“ವಾಸುದೇವ” ಎನ್ನುವ ವಿಶೇಷ ನಾಮದಿಂದ ಭಗವಂತನನ್ನು ಸಂಬೋಧಿಸಲಾಗಿದೆ. ಲೋಕದಲ್ಲಿ ವಾಸುದೇವ
ಎನ್ನುವ ಭಗವಂತನ ನಾಮವನ್ನು ‘ವಸುದೇವನ ಮಗ ಶ್ರೀಕೃಷ್ಣ’ ಎನ್ನುವ ಅರ್ಥದಲ್ಲಿ ಕಾಣುತ್ತಾರೆ. ಆದರೆ
ಈ ನಾಮ ಭಗವಂತನ ಶ್ರೀಕೃಷ್ಣ ಅವತಾರಕ್ಕೂ ಮೊದಲು ಇದ್ದ ಅಪ್ರಾಕೃತ ನಾಮ. ಇದು ಪ್ರಪಂಚದಲ್ಲಿ ಒಂದು
ಕಾಲಘಟ್ಟದಲ್ಲಿ ನಡೆದ ಘಟನೆಯಿಂದ ಬಂದ ಹೆಸರಲ್ಲ. ಈ ಹಿಂದೆ ಹೇಳಿದಂತೆ ವಾಸುದೇವ ಎನ್ನುವ ನಾಮದ
ಅರ್ಥವನ್ನು ನಾವು ಮುಂದೆ ಭಾಗವತದಲ್ಲೇ ಕಾಣುತ್ತೇವೆ. ಸತ್ತ್ವಂ
ವಿಶುದ್ಧಂ ವಸುದೇವಶಬ್ದಿತಂ(೪-೩೦-೨೩). ಶುದ್ಧ ಮನಸ್ಸಿಗೆ ಗೋಚರನಾಗುವ ಸರ್ವವ್ಯಾಪ್ಯ ಭಗವಂತ ವಾಸುದೇವ. ನಮ್ಮ ಹೃದಯ ಕಮಲದಲ್ಲಿ ಸದಾ
ವಾಸವಾಗಿರುವ ಆದರೆ ತನ್ನನ್ನು ಸದಾ
ಮುಚ್ಚಿಕೊಂಡಿರುವ ಮತ್ತು ಪರಿಶುದ್ಧ ಮನಸ್ಸಿಗೆ ಧ್ಯಾನದಲ್ಲಿ ಬೆಳಕಾಗಿ ಗೋಚರನಾಗುವ ಭಗವಂತ
ವಾಸುದೇವ. ಸೃಷ್ಟಿಯ ಪೂರ್ವದಲ್ಲಿ, ಚತುರ್ಮುಖ ಹುಟ್ಟುವ ಮೊದಲು ಆವಿರ್ಭಾವಗೊಂಡ ಭಗವಂತನ
ಮೊಕ್ಷಪ್ರದ ರೂಪ ವಾಸುದೇವ ರೂಪ.
ವಿಷ್ಣು ಗಾಯತ್ತ್ರಿಯಲ್ಲಿ ‘ನಾರಾಯಣಾಯ’ ಎಂದರೆ ನಾರಾಯಣನಿಗೋಸ್ಕರ ಎಂದರ್ಥವಲ್ಲ.
ನಾರಾಯಣನನ್ನು ನಾವು ಬಲ್ಲೆವು; ನಮ್ಮಿಂದ ಕ್ರಿಯೆ ಮಾಡಿಸುವ ಪರಶಕ್ತಿ ಆತ ಎನ್ನುವುದು ನಮಗೆ
ತಿಳಿದಿದೆ; ನಮ್ಮ ಎಲ್ಲಾ ಅರಿವು ಇರುವುದು ಅಂಥಹ ನಾರಾಯಣನನ್ನು ತಿಳಿಯುವುದಕ್ಕೋಸ್ಕರ ಮತ್ತು ಆತನ
ಅನುಗ್ರಹ ಪ್ರೀತಿ ಪಡೆಯುವುದಕ್ಕೋಸ್ಕರ ಎನ್ನುತ್ತದೆ ವಿಷ್ಣು ಗಾಯತ್ತ್ರಿ. ಇಲ್ಲಿ ವಿದ್ಮಹೇ
ಎನ್ನುವ ಪದದ ಹಿಂದೆ ನಮಸ್ಕಾರದ ಧ್ವನಿ ಇದೆ. ನಾರಾಯಣಾಯ ವಿದ್ಮಹೇ ಎಂದರೆ ನಾರಾಯಣಾಯ ನಮಃ. “ಯಾರು
ತನ್ನ ಅರಿವನ್ನು ನನಗೆ ಕೊಟ್ಟನೋ ಅಂಥಹ ಭಗವಂತನಿಗೆ ನನ್ನ ನಮಸ್ಕಾರ” ಎನ್ನುತ್ತದೆ ಈ ಮಂತ್ರ.
ವಿಷ್ಣು ಗಾಯತ್ತ್ರಿಯಲ್ಲಿ ನಾರಾಯಣ, ವಾಸುದೇವ ಮತ್ತು ವಿಷ್ಣು ಎನ್ನುವ ಭಗವಂತನ ಮೂರು
ನಾಮಗಳನ್ನು ಕಾಣುತ್ತೇವೆ. ನಾರಾಯಣ ಎನ್ನುವುದು ಭಗವಂತನ ಮೂಲರೂಪದ ಹೆಸರು. ಮೂಲರೂಪದಿಂದಾದ ಮೊದಲ
ಆವಿಷ್ಕಾರವೇ ವಾಸುದೇವ ರೂಪ. ಹೀಗಾಗಿ ಮೊದಲು ನಾರಾಯಣನಿದ್ದ, ಇದ್ದವನು ತನ್ನಿಂದ ತಾನೇ ಇನ್ನೊಂದು ರೂಪವಾಗಿ(ವಾಸುದೇವನಾಗಿ) ಆವಿರ್ಭಾವಗೊಂಡ.
ನಂತರ ಸಂಕರ್ಷಣ, ಅನಿರುದ್ಧ ಮತ್ತು ಪ್ರದ್ಯುಮ್ನ ರೂಪಗಳಾದವು. ಈ ರೀತಿ ಚತುರ್ಮೂರ್ತಿಯಾಗಿ
ಆವಿರ್ಭಾವಗೊಂಡ ಭಗವಂತನಿಂದ ಚತುರ್ಮುಖ ಬ್ರಹ್ಮನ ಸೃಷ್ಟಿಯಾಯಿತು. [...ನಾರಾಯಣಾತ್
ಬ್ರಹ್ಮ ಜಾಯತೇ,... ನಾರಾಯಣ
ಉಪನಿಷತ್ತು] ಆನಂತರ ಚತುರ್ಮುಖನ ಮುಖೇನ ಸೃಷ್ಟಿಯಾದ ಪ್ರಪಂಚದ ಪಾಲನೆಗಾಗಿ ಭಗವಂತ ವಿಷ್ಣು
ರೂಪದಲ್ಲಿ ಆವಿರ್ಭಾವಗೊಂಡ.[ಈ ಕುರಿತು ಭಾಗವತದಲ್ಲೇ ಮುಂದೆ ವಿವರಗಳನ್ನು ಕಾಣಬಹುದು].
ಭಗವಂತನ ‘ನಾರಾಯಣ’ ಎನ್ನುವ ನಾಮಕ್ಕೆ ವಿಶೇಷ ಅರ್ಥವಿದೆ. ನಾಸದಾಸೀನ್ನೋ
ಸದಾಸೀತ್ ತದಾನೀಮಿತಿ | ಯಾರು ಯಾವುದೂ ಇಲ್ಲದಾಗ ಇದ್ದನೋ-ಆತನೇ
ನಾರಾಯಣ. ಯಾವುದೂ ಇಲ್ಲದೇ ಇದ್ದಾಗ ನಾರಾಯಣ ಎಲ್ಲಿದ್ದ ಎಂದರೆ ಆತ ಪ್ರಳಯ ಸಮುದ್ರದಲ್ಲಿ ಮಲಗಿದ್ದ
ಎನ್ನುತ್ತದೆ ಶಾಸ್ತ್ರ. ಇಲ್ಲಿ ಒಂದು ಪ್ರಶ್ನೆ ಬರುತ್ತದೆ. ಯಾವುದೂ ಇಲ್ಲದೇ ಇದ್ದಾಗ ಸಮುದ್ರ
ಎಲ್ಲಿಂದ ಬಂತು ಎಂದು. ಇದನ್ನು ವ್ಯಾಸರು ಮಹಾಭಾರತದಲ್ಲಿ ವಿವರಿಸಿರುವುದನ್ನು ಕಾಣುತ್ತೇವೆ. “ಆಪೋ ನಾರಾಃ
ಇತಿ ಪ್ರೋಕ್ತಃ ಆಪೋ ವೈ ನಾರ-ಸೂನವಃ | ಅಯನಂ ತಸ್ಯ ತಃ ಪೂರ್ವಂ ತೇನ ನಾರಾಯಣ ಇತಿ ಸ್ಮೃತಃ”. ಭಗವಂತ ಪ್ರಳಯೋದಕದಲ್ಲಿ ಮಲಗಿದ್ದ. ನಮಗೆ ತಿಳಿದಂತೆ ಪ್ರಳಯಕಾಲದಲ್ಲಿ ಯಾವ ವಸ್ತುವೂ
ಇಲ್ಲವಾಗುವುದಿಲ್ಲ, ಬದಲಿಗೆ ಅದು ತನ್ನ ರೂಪವನ್ನು ಕಳೆದುಕೊಂಡು ಸೂಕ್ಷರೂಪದ ಪರಮಾಣು
ಸಮುದ್ರವಾಗಿ ಮಾರ್ಪಾಟಾಗುತ್ತದೆ. ಇಂಥಹ ಪರಮಾಣು ಸಮುದ್ರದಲ್ಲಿ ಆ ನಾರಾಯಣ ಪವಡಿಸಿದ್ದ. ಪ್ರಳಯ
ಕಾಲದಲ್ಲಿ ಏನೂ ಇರಲಿಲ್ಲಾ ಎಂದರೆ ಯಾವುದೇ ಆಕಾರವಿರಲಿಲ್ಲ, ಎಲ್ಲವೂ ಪರಮಾಣು ರೂಪದಲ್ಲಿತ್ತು
ಎಂದರ್ಥ. ಇಂಥಹ ಪರಮಾಣುಗಳಿಂದ ಕಾಣುವ ವಿವಿಧ ರೂಪದ ನಿರ್ಮಾಣವೇ ‘ಸೃಷ್ಟಿ’. ಒಟ್ಟಿನಲ್ಲಿ
ಹೇಳಬೇಕೆಂದರೆ ಸೃಷ್ಟಿ ಪೂರ್ವದಲ್ಲಿ ಜಗತ್ತಿನ ಮೂಲದ್ರವ್ಯವಾದ ಸೂಕ್ಷ್ಮ ಪ್ರಕೃತಿಯೆಂಬ ಪ್ರಳಯ
ಸಮುದ್ರದಲ್ಲಿ ಪವಡಿಸಿರುವ ಭಗವಂತನೇ ನಾರಾಯಣ. “ಅಂಥಹ ನಿರ್ದೋಷ, ಸಕಲಗುಣಪೂರ್ಣ, ಆನಂದಮಯ ನಾರಾಯಣನನ್ನು ನಾನು ಬಲ್ಲೆ” ಎನ್ನುತ್ತಾನೆ ಚತುರ್ಮುಖ.
ಭಗವಂತ ಈ ಸೃಷ್ಟಿ ನಿರ್ಮಾಣ ಮಾಡಿರುವುದು ತನ್ನ ಯಾವುದೋ ಒಂದು ಕೊರತೆ
ನೀಗಿಸಿಕೊಳ್ಳುವುದಕ್ಕಾಗಿ ಅಲ್ಲ. ಏಕೆಂದರೆ ಸೃಷ್ಟಿಯ ಮೊದಲು ಆತನಿಗೆ ಯಾವುದೇ ಕೊರತೆ ಇರಲಿಲ್ಲ.
ಆತ ಸದಾ ಆನಂದಮಯ. ಸೃಷ್ಟಿ ನಿರ್ಮಾಣವಾದ ನಂತರ ಭಗವಂತ ತಾನು ಸೃಷ್ಟಿಸಿದ ಪ್ರಪಂಚಕ್ಕೆ
ಆಶ್ರಯ/ಆಧಾರನಾಗಿ ನಿಂತ. ಹೀಗೆ ನರರ ಸಮುದಾಯದಿಂದ ಗಮ್ಯನಾಗಿ, ಜ್ಞೇಯನಾಗಿ, ಅರಿವಿಗೆ ಗೋಚರನಾಗಿ,
ಕೊನೆಗೆ ಮೋಕ್ಷದಲ್ಲಿ ಆಶ್ರಯನಾಗಿ ನಿಲ್ಲುವವ ನಾರಾಯಣ. “ಅಂಥಹ ವಾಸುದೇವನಿಗೆ ನಮಸ್ಕಾರ”
ಎನ್ನುತ್ತಾನೆ ಚತುರ್ಮುಖ.
ಈ ಹಿಂದೆ ಹೇಳಿದಂತೆ ಭಗವಂತನ ವಾಸುದೇವ ರೂಪದಿಂದ ಚತುರ್ಮುಖನ ಸೃಷ್ಟಿಯಾಯಿತು. ಚತುರ್ಮುಖನ
ಮುಖೇನ ಈ ಪ್ರಪಂಚ ನಿರ್ಮಾಣವಾಯಿತು. ಹೀಗೆ ಸೃಷ್ಟಿಯಾದ ಪ್ರಪಂಚ ಅಳಿವಿನ ದಾರಿಯನ್ನು ಕಾಣದೇ
ಉಳಿವಿನತ್ತ ಸಾಗಲು ಒಂದು ಶಕ್ತಿ ಬೇಕಾಗಿತ್ತು. ಅದಕ್ಕೋಸ್ಕರ ಚತುರ್ಮುಖನ ಪ್ರಾರ್ಥನೆಯಂತೆ ಭಗವಂತ ಜಗತ್ಪಾಲನಾ ಶಕ್ತಿ ವಿಷ್ಣುವಾಗಿ ಆವಿರ್ಭಾವ ಹೊಂದಿದ. “ಅಂಥಹ ವಿಷ್ಣು ನಮ್ಮನ್ನು ಒಳ್ಳೆಯ
ಮಾರ್ಗದಲ್ಲಿ ನಡೆಸಲಿ, ನಮ್ಮಿಂದ ಒಳ್ಳೆಯ ಮಾತನ್ನು ನುಡಿಸಲಿ” ಎಂದು ಚತುರ್ಮುಖ ಇಲ್ಲಿ ಪ್ರಾರ್ಥಿಸಿದ್ದಾನೆ.
ಪಾಲನೆ ಮಾಡಲು ಭಗವಂತ ತಳೆದ ರೂಪ ವಿಷ್ಣುರೂಪ. ಇಲ್ಲಿ ಪಾಲನೆ ಎಂದರೆ ಬದುಕಗೊಡುವುದು. ಅಂದರೆ
ಉಸಿರೊಳಗೆ ಸೇರಿ, ಉಸಿರಿನ ಉಸಿರಾಗಿ ನಿಂತು ಪಾಲನೆ ಮಾಡುವ ಭಗವಂತ ವಿಷ್ಣುಃ(ವಿಷತೀತಿ
ವಿಷ್ಣುಃ). ಉಪನಿಷತ್ತಿನಲ್ಲಿ ಹೇಳುವಂತೆ: “ತತ್
ಸೃಸ್ಟ್ವಾ ತದೇವಾನು ಪ್ರಾವಿಷತ್”. ಪ್ರತಿಯೊಂದು ಜೀವದ ಒಳಗೆ ಪಾಲಕನಾಗಿ ಭಗವಂತ
ನೆಲೆಸಿರುತ್ತಾನೆ. ಒಳಗೆ ಪ್ರೇರಕನಾಗಿ, ಹೊರಗೆ ಧಾರಕನಾಗಿ ಭಗವಂತ ವಿಷ್ಣುರೂಪದಲ್ಲಿ ಜೀವಜಾತದ
ಪಾಲನೆ ಮಾಡುತ್ತಾನೆ. ಭಗವಂತನ ವಿಷ್ಣುಃ ನಾಮಕ್ಕೆ
ವೇದದಲ್ಲಿ ಒಂದು ಸುಂದರ ವಿವರಣೆಯನ್ನು ಕಾಣಬಹುದು. ಐತರೇಯದಲ್ಲಿ ಹೇಳುವಂತೆ: ಣ-ಕಾರೋ ಬಲಂ ಷ-ಕಾರಃ
ಪ್ರಾಣೋ ಆತ್ಮಾ. ಆದ್ದರಿಂದ ವಿಷ್ಣುಃ ಎನ್ನುವಲ್ಲಿ ‘ಣ’-ಕಾರ ಬಲವನ್ನು ಹೇಳಿದರೆ ‘ಉ-ಕಾರ’ ಸ್ವರೂಪವೆನ್ನುವ ಅರ್ಥವನ್ನು ನೀಡುತ್ತದೆ. ಆದ್ದರಿಂದ
‘ಣುಃ’ ಎಂದರೆ ಅದು ಇಡೀ ಜಗತ್ತನ್ನು ಧಾರಣೆ
ಮಾಡುವ ಬಲ. ಅದೇ ಆತ್ಮಬಲ, ದೇಹಬಲ, ಮನೋಬಲ, ಇತ್ಯಾದಿ ಎಲ್ಲಾ ಬಲಗಳ ಸಮಷ್ಟಿ. ಎಲ್ಲವನ್ನೂ ಮಣಿಸುವ
ಶಕ್ತಿಸ್ವರೂಪ(ಣವಯತೀತಿ-ಣಃ) ಭಗವಂತ ‘ಣುಃ’. ಇನ್ನು
ವಿಷ್ಣುಃ ಎನ್ನುವ ಭಗವಂತನ ನಾಮದಲ್ಲಿ ಷ-ಕಾರ ಪ್ರೇರಣೆ ಎನ್ನುವ ಅರ್ಥವನ್ನು ಕೊಡುತ್ತದೆ.
ಅಂತರ್ಯಾಮಿಯಾಗಿ ಒಳಗೆ ನಿಂತು ನಮ್ಮ ಸಮಸ್ತ ವ್ಯಾಪಾರವನ್ನು ನಿಯಂತ್ರಿಸುವ ಭಗವಂತ ‘ಷ’. ಇಂಥಹ
ವಿಶಿಷ್ಟ(ವಿ)ವಾದ ಶಕ್ತಿಯಾದ ಭಗವಂತ ವಿಷ್ಣುಃ. ಒಟ್ಟಿನಲ್ಲಿ ಹೇಳಬೇಕೆಂದರೆ ಸರ್ವ ಜಗತ್ ಧಾರಣೆ
ಮತ್ತು ಪ್ರೇರಣೆ ಯಾರಿಗೆ ಸಹಜ ಕ್ರಿಯೆಯೋ ಅವನು ವಿ-ಷ-ಣು. ಹೀಗೆ ವಿಷ್ಣು/ವಿಷಣು ಎನ್ನುವ ನಾಮ
ಪಾಲನೆಗಾಗಿ ಭಗವಂತ ಧರಿಸಿದ ಅವತಾರದ ಕ್ರಿಯೆ ಏನೋ
ಅದಕ್ಕೆ ಸಂಬಂಧಿಸಿದ ಎಲ್ಲಾ ಅರ್ಥವನ್ನೂ ಹೇಳುತ್ತದೆ. “ಇಂಥಹ ಭಗವಂತ ನನ್ನೊಳಗೆ ನಿಂತು ನನ್ನ ನಾಲಿಗೆಯಿಂದ ನುಡಿಸಲಿ”
ಎಂದು ಚತುರ್ಮುಖ ಪ್ರಾರ್ಥಿಸುತ್ತಾನೆ.
“ಏನು ಮಾಯೆ ಆ ಭಗವಂತನದು ? ಆತನ ಮುಂದೆ ನಾನೆಲ್ಲಿಯ ಗುರು” ಎನ್ನುತ್ತಾನೆ ಚತುರ್ಮುಖ. ಇಲ್ಲಿ
ಮಾಯಾ ಎನ್ನುವ ಪದ ಬಳಕೆ ಮಾಡಿದ್ದಾನೆ ಚತುರ್ಮುಖ. ಸಂಸ್ಕೃತದಲ್ಲಿ ಮಾಯಾ ಶಬ್ದಕ್ಕೆ ಅನೇಕ ಅರ್ಥಗಳಿವೆ.
ಭಗವಂತನ ಇಚ್ಛೆ, ಜ್ಞಾನ ಮತ್ತು ಮಹಿಮೆ ಆತನ ಸ್ವರೂಪಭೂತವಾದ ಮಾಯೆ. ಇನ್ನು ಭಗವಂತನ ಅಧೀನವಾಗಿರುವ
ಪ್ರಕೃತಿ ಮಾಯೆ. ಜಡ ಪ್ರಕೃತಿ ಕೂಡಾ ಮಾಯೆ. ಇದಲ್ಲದೇ ನಮಗೆ ಬಂಧಕ ಶಕ್ತಿಯಾಗಿ ತುಂಬಿಕೊಂಡಿರುವ ಶೈವರೀ
ಮಾಯೆ ಕೂಡಾ ಒಂದು ವಿಧದ ಮಾಯೆ. ಆದರೆ ಶೈವರೀ ಮಾಯೆ ಮಯನೆಂಬ ಇಂದ್ರಜಾಲದ ಮೂಲಪುರುಷನಿಂದ ಸೃಷ್ಟಿಯಾಗಿರುವುದರಿಂದ
ಇದು ಭಗವಂತನಿಗೆ ಅನ್ವಯವಾಗುವುದಿಲ್ಲ.
“ಭಗವಂತನ ಇಚ್ಛೆಯಂತೆ, ಜಗನ್ಮಾತೆ ಶ್ರೀಲಕ್ಷ್ಮಿಯ ಮತ್ತು ಜಡಪ್ರಕೃತಿಯ ಮೋಹಕ್ಕೆ ಒಳಗಾಗಿ ಈ ಜಗತ್ತು ನನ್ನನ್ನೇ ಜಗದ್ಗುರು
ಎಂದು ಕರೆಯುತ್ತಿದೆ. ಆದರೆ ಆ ಭಗವಂತನ ಮುಂದೆ ನಾನೆಲ್ಲಿಯ ಜಗದ್ಗುರು?” ಎನ್ನುತ್ತಾನೆ ಚತುರ್ಮುಖ.
ಆಚಾರ್ಯ ಮಧ್ವರು ಉಪನಿಷತ್ ಭಾಷ್ಯದಲ್ಲಿ ಹೇಳುವಂತೆ: ಯಸ್ಮಾತ್ ಬ್ರಹ್ಮೇಂದ್ರ
ಸುದ್ರಾದಿ ದೇವತಾನಾಮ್ ಶ್ರೀಯೋಪಿ ಚ । ಜ್ಞಾನ ಸ್ಫೂರ್ತಿ
ಸದಾ ತಸ್ಮೈ ಹರಯೇ ಗುರವೇ ನಮಃ ॥ ಸಮಸ್ತ ದೇವತೆಗಳೊಂದಿಗೆ ಶ್ರಿಲಕ್ಷ್ಮಿಗೂ ಗುರುವಾಗಿರುವ ನಾರಾಯಣನೇ ಜಗದ್ಗುರು [ಕೃಷ್ಣಂ ವಂದೇ ಜಗದ್ಗುರುಮ್]. ಹೀಗಾಗಿ ಆ ನಾರಾಯಣನಿಂದ
ಮೇಲೆ ಇನ್ನೊಬ್ಬ ಜಗದ್ಗುರುವಿಲ್ಲಾ.