ಆದ್ಯೋSವತಾರಃ
ಪುರುಷಃ ಪರಸ್ಯ ಕಾಲಃ ಸ್ವಭಾವಃ ಸದಸನ್ಮನಶ್ಚ ।
ದ್ರವ್ಯಂ
ವಿಕಾರೋ ಗುಣ ಇಂದ್ರಿಯಾಣಿ ವಿರಾಟ್ ಸ್ವರಾಟ್ ಸ್ಥಾಸ್ನು ಚರಿಷ್ಣು ಭೂಮ್ನಃ ॥೪೧॥
ಅಹಂ ಭವೋ ಯಜ್ಞ
ಇಮೇ ಪ್ರಜೇಶಾ ದಕ್ಷಾದಯೋ ಯೇ ಭವದಾದಯಶ್ಚ ।
ಸ್ವರ್ಲೋಕಪಾಲಾಃ
ಖಗಲೋಕಪಾಲಾ ನೃಲೋಕಪಾಲಾಸ್ತಳಲೋಕಪಾಲಾಃ ॥೪೨॥
ಗಂಧರ್ವವಿದ್ಯಾಧರಚಾರಣೇಶಾ
ಯೇ ಯಕ್ಷರಕ್ಷೋರಗನಾಗನಾಥಾಃ ।
ಯೇ ವಾ ಋಷೀಣಾಂ
ಋಷಭಾಃ ಪಿತೃಣಾಂ ದೈತ್ಯೇಂದ್ರಸಿದ್ಧೇಶ್ವರದಾನವೇಂದ್ರಾಃ
॥೪೩॥
ಅನ್ಯೇ ಚ ಯೇ
ಪ್ರೇತಪಿಶಾಚಭೂತ ಕೂಷ್ಮಾಂಡಯಾದೋಮೃಗಪಶ್ವಧೀಶಾಃ ।
ಯತ್ ಕಿಂ ಚ
ಲೋಕೇ ಭಗವನ್ಮಹಸ್ವದೋಜಃಸಹಸ್ವದ್ ಬಲವತ್ ಕ್ಷಮಾವತ್ ।
ಹ್ರೀಶ್ರೀವಿಭೂತ್ಯಾತ್ಮವದದ್ಭುತಾರ್ಣಂ
ತತ್ ತತ್ಪರಂ ರೂಪವದಸ್ವರೂಪಮ್ ॥೪೪॥
ಪ್ರಾಧಾನ್ಯತೋ
ಯಾನೃಷಯ ಆಮನಂತಿ ಲೀಲಾವತಾರಾನ್ ಪುರುಷಸ್ಯ ಭೂಮ್ನಃ ।
ಆಪೀಯತಾಂ
ಕರ್ಮಕಷಾಯಶೋಷಾನನುಕ್ರಮಿಷ್ಯೇ ತ ಇಮಾನ್ ಸುಪೇಶಲಾನ್
॥೪೫॥
ಭಗವಂತನಿಗೆ ಮುಖ್ಯವಾಗಿ ಮೂರು ರೂಪಗಳು. ೧. ಸ್ವರೂಪ (ರಾಮ, ಕೃಷ್ಣ, ನರಸಿಂಹ..ಇತ್ಯಾದಿ),
೨. ವಿಭೂತಿ (ಉದಾ: ಅರ್ಜುನನನಲ್ಲಿ ಭಗವಂತ ವಿಶೇಷ ವಿಭೂತಿಯಾಗಿ ನಿಂತಿದ್ದ) ಮತ್ತು ೩.
ಅಂತರ್ಯಾಮಿ ರೂಪ. ಭಗವಂತನ ಪುರುಷರೂಪ ಆತನ
ಮೊಟ್ಟಮೊದಲ ಸ್ವರೂಪ ಅವತಾರ.
ಭಗವಂತ ‘ಕಾಲ’ದಲ್ಲಿ ತುಂಬಿದ್ದಾನೆ. ಕಾಲ ಎನ್ನುವುದು ತುಂಬಾ ವಿಚಿತ್ರವಾದುದು.
ಯಾವುದ್ಯಾವುದೋ ಕಾಲದಲ್ಲಿ ಏನೇನೋ ನಡೆಯುತ್ತದೆ. ಯಾವ ಕಾಲದಲ್ಲಿ ಏನೇನು ನಡೆಯಬೇಕೋ ಅದು ಆ
ಕಾಲದಲ್ಲಿ ನಡೆದೇ ನಡೆಯುತ್ತದೆ. ಹೀಗೆ ಕಾಲ ಎನ್ನುವುದು ಜಗತ್ತಿನ ಮೂಲಶಕ್ತಿಯಾಗಿ
ನಿಂತುಬಿಟ್ಟಿದೆ. ಭಗವಂತ ಕಾಲನಿಯಾಮಕನಾಗಿ ಕಾಲದೊಳಗೆ ನಿಂತಿದ್ದಾನೆ. ಇನ್ನು ಸ್ವಭಾವ.
ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ಸ್ವಭಾವವಿದೆ. ಆ ಸ್ವಭಾವವನ್ನು ಬದಲಿಸಲು ಯಾರಿಂದಲೂ
ಸಾಧ್ಯವಿಲ್ಲ. “ಅಂತಹ ಸ್ವಭಾವದೊಳಗೆ ಸ್ವಭಾವ
ನಿಯಾಮಕನಾಗಿ ಭಗವಂತನ ವಿಭೂತಿ ತುಂಬಿದೆ” ಎನ್ನುತ್ತಾನೆ ಚತುರ್ಮುಖ.
“ಸತ್, ಅಸತ್ ಮತ್ತು ಮನಸ್ಸಿನಲ್ಲಿ ಭಗವಂತನ
ವಿಭೂತಿ ತುಂಬಿದೆ” ಎಂದಿದ್ದಾನೆ ಚತುರ್ಮುಖ. ಉಪನಿಷತ್ತಿನಲ್ಲಿ ಹೇಳುವಂತೆ ‘ಸತ್’ ಎಂದರೆ
ಪ್ರಾಣಶಕ್ತಿ ( “ಸದಿತಿ ಪ್ರಾಣಃ”). ಭಗವಂತ ಪ್ರಾಣತತ್ತ್ವದಲ್ಲಿ ತುಂಬಿ ಇಡೀ ಜಗತ್ತನ್ನು
ಉಸಿರಾಡಿಸುವ ಮಹಾಶಕ್ತಿಯಾಗಿ ನಿಂತಿದ್ದಾನೆ.
ಅಸತ್ ಎಂದರೆ ಮೂಲಪ್ರಕೃತಿ. ಪ್ರಳಯಕಾಲದಲ್ಲಿ
ಜಡಪ್ರಕೃತಿ ಕಣ್ಣಿಗೆ ಕಾಣದ ಪರಮಾಣು ಸಮುದ್ರ ರೂಪದಲ್ಲಿತ್ತು. ಮೂಲಪ್ರಕೃತಿಯಲ್ಲಿ ವಿಭೂತಿಯಾಗಿ
ನಿಂತ ಭಗವಂತನಿಂದಾಗಿ ಅದು
ಸತ್ತ್ವ-ರಜಸ್ಸು-ತಮೋಗುಣಗಳ ಜೊತೆಗೆ ಕಂಪನಗೊಂಡು ಬ್ರಹ್ಮಾಂಡ ರೂಪದಲ್ಲಿ ಬೆಳೆದು ನಿಂತಿತು.
ಮನಸ್ಸೆನ್ನುವುದು ಒಂದು ಅತ್ಯಂತ ವಿಸ್ಮಯವಾದ ವಸ್ತು. ಅನೇಕಾನೇಕ ವಿಷಯಗಳನ್ನು ಗ್ರಹಿಸಿ
ಅದನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಮನಸ್ಸಿಗಿದೆ. ಮಾನವನ ಮೆದುಳಿನಲ್ಲಿ ಸುಮಾರು ಹನ್ನೆರಡು
ಬಿಲಿಯನ್ ಜೀವಕೊಶಗಳಿವೆ. ಇವು ಅಷ್ಟೇ ಸಂಖ್ಯೆಯ ವಿಷಯಗಳನ್ನು ಹಿಡಿದಿಟ್ಟುಕೊಳ್ಳಬಲ್ಲವು. ಎಲ್ಲಿಯತನಕ
ಎಂದರೆ: ಮುಂದೆ ಏನಾಗುತ್ತದೆ ಎನ್ನುವ ವಿಷಯವನ್ನೂ ಕೂಡಾ ಮನಸ್ಸು ಗ್ರಹಿಸಬಲ್ಲುದು. “ಈ ಶಕ್ತಿ
ಮನಸ್ಸಿನಲ್ಲಿ ಭಗವಂತನ ವಿಭೂತಿಯಿಂದಾಗಿ ಅಭಿವ್ಯಕ್ತವಾಗಿದೆ” ಎಂದಿದ್ದಾನೆ ಚತುರ್ಮುಖ.
“ಪಂಚಭೂತಗಳಲ್ಲಿ, ಗುಣತ್ರಯಗಳಲ್ಲಿ, ಇಂದ್ರಿಯಗಳಲ್ಲಿ ಭಗವಂತನ ವಿಭೂತಿ ತುಂಬಿದೆ”
ಎನ್ನುತ್ತಾನೆ ಚತುರ್ಮುಖ. ಈ ಪ್ರಪಂಚದಲ್ಲಿ ಎಲ್ಲಿ ನೋಡಿದರೂ ಕಾಣುವುದು ಪಂಚಭೂತಗಳ ಅನಂತ ವೈಭವ.
ಪಂಚಭೂತಗಳು ಹೀಗೆ ಅನಂತ ವೈವಿದ್ಯಗಳಿಂದ ರೂಪುಗೊಳುವಂತೆ ಅದರಲ್ಲಿ ಶಕ್ತಿಯಾಗಿ ಭಗವಂತನ ವಿಭೂತಿ ಅಡಗಿದೆ. ಈ ಪಂಚಭೂತಗಳು ವಿಕಾರಗೊಂಡು
ಬ್ರಹ್ಮಾಂಡ ರಚನೆಯಾಗುವಂತೆ ಮಾಡಿರುವುದು ಆ
ವಿಶಿಷ್ಟವಾದ ವಿಭೂತಿ. ಇದೇ ರೀತಿ ಪ್ರತೀ ಇಂದ್ರಿಯಗಳ
ಒಳಗೆ ಇಂದ್ರಿಯ ಶಕ್ತಿಯಾಗಿ ಭಗವಂತನ ವಿಭೂತಿ ಅಡಗಿದೆ.
ಸಮಸ್ತ ವೇದಗಳ ನಿಯಾಮಕಶಕ್ತಿಯಾಗಿ ವಿಭೂತಿ ರೂಪದಲ್ಲಿ ಭಗವಂತ ಗರುಡನಲ್ಲಿ ತುಂಬಿದ್ದಾನೆ.
ಇಂದ್ರನಲ್ಲಿ ವಿಶಿಷ್ಠ ಶಕ್ತಿಯಾಗಿ ತುಂಬಿರುವ ಭಗವಂತ ಆತನಿಗೆ ದೇವಲೋಕದ ಒಡೆತನವನ್ನು ನೀಡಿದ್ದಾನೆ.
ಸ್ಥಿರ ಜಗತ್ತು(ಉದಾ: ಅಶ್ವತ್ಥ, ನೆಲ್ಲಿ, ದರ್ಭೆ ಇತ್ಯಾದಿ ಮರಗಳು) ಚಲಿಸುವ ಜಗತ್ತು(ಉದಾ:
ನದಿಗಳು, ಪ್ರಾಣಿ-ಪಕ್ಷಿಗಳು) ಎಲ್ಲದರಲ್ಲೂ ಭಗವಂತ ವಿಭೂತಿಯಾಗಿ ತುಂಬಿದ್ದಾನೆ. “ಇಷ್ಟೇ ಅಲ್ಲ, ನನ್ನಲ್ಲಿ,
ಶಿವನಲ್ಲಿ, ಯಜ್ಞಾಭಿಮಾನಿ ಜಯಂತನಲ್ಲಿ, ಲೋಕಪಾಲಕರಲ್ಲಿ, ಪ್ರಜಾಪತಿಗಳಲ್ಲಿ, ಅಪರೋಕ್ಷಜ್ಞಾನಿಗಳಲ್ಲಿ,
ಮೂರು ಲೋಕಗಳಲ್ಲಿ, ಹೀಗೆ ಎಲ್ಲೆಡೆ ಭಗವಂತ ವಿಶೇಷ ವಿಭೂತಿಯಾಗಿ ತುಂಬಿದ್ದಾನೆ” ಎಂದಿದ್ದಾನೆ ಚತುರ್ಮುಖ.
ಒಬ್ಬನಲ್ಲಿ ಇನ್ನೊಬ್ಬರಲ್ಲಿಲ್ಲದ ಅಸಾಧಾರಣ ಶಕ್ತಿ ತುಂಬಿದ್ದರೆ ಅದು ಭಗವಂತನ ವಿಶೇಷ ವಿಭೂತಿಯ
ಅಭಿವ್ಯಕ್ತಿ. ಉದಾಹರಣೆಗೆ ಭಾಗ್ಯಶಾಲಿ/ಒಳ್ಳೆಯವ್ಯಕ್ತಿ ಎನಿಸುವುದು, ಇನ್ನೊಬ್ಬರನ್ನು ಮಣಿಸುವ ಶಕ್ತಿ, ಇನ್ನೊಬ್ಬರಿಗೆ ಮಣಿಯದ
ಶಕ್ತಿ, ಶಾಂತ ಸ್ವಭಾವ (ಧರ್ಮರಾಯನಂತೆ), ತನ್ನ ತಪ್ಪಿನ ಅರಿವಾದಾಗ ಅದಕ್ಕಾಗಿ ನಾಚುವ ಸ್ವಭಾವ,
ಸೌಂದರ್ಯ, ಗಟ್ಟಿಮನಸ್ಸು, ಛಲ, ಜ್ಞಾನ, ಬಲ, ಸಂಪತ್ತು, ಎಲ್ಲವೂ ಭಗವಂತನ ವಿಭೂತಿಯ ಅಭಿವ್ಯಕ್ತಿ. ಭಗವಂತ ಎಲ್ಲಾ ಗುಣಗಳ ಹಾಗೂ ವಿಸ್ಮಯಗಳ ನೆಲೆ. ಆತನ ಒಂದೊಂದು ಗುಣಗಳ
ಕಿಡಿ ಒಂದೊಂದು ವಸ್ತುವಿನಲ್ಲಿ ಅಭಿವ್ಯಕ್ತವಾಗುತ್ತದೆ. ಒಟ್ಟಿನಲ್ಲಿ ಹೇಳಬೇಕೆಂದರೆ: ಎಲ್ಲಿ ಮೂಗಿನ
ಮೇಲೆ ಬೆರಳನ್ನಿಟ್ಟು ಕಣ್ಣರಳಿಸಿ ನೋಡುವ ವಿಸ್ಮಯವಿದೆಯೋ
ಅಲ್ಲಿ ಆ ಶಕ್ತಿಯಾಗಿ ಭಗವಂತ ತುಂಬಿದ್ದಾನೆ ಎಂದು ತಿಳಿಯಬೇಕು. ಆದರೆ ಇದು ಭಗವಂತನ ವಿಶೇಷ ಶಕ್ತಿಯ
ಪ್ರತೀಕ(ವಿಭೂತಿ) ಅಷ್ಟೇ. ಅದು ಭಗವಂತನ ಸ್ವರೂಪರೂಪವಲ್ಲ.
ಭಗವಂತನ ವಿಭೂತಿಯನ್ನು ಹೇಳಿ ಮುಗಿಸಲು ಸಾಧ್ಯವಿಲ್ಲ. ಅದು ಅನಂತ. ಆದರೆ ಜ್ಞಾನಿಗಳು ಭಗವಂತನ
ಸ್ವರೂಪಾವತಾರಗಳು ಎಂದು ಪರಿಗಣನೆ ಮಾಡಿರುವುವಂತಹ, ಈ ಕಲ್ಪದ ಮುಖ್ಯವಾದ ಸುಮಾರು ಮೂವತ್ತು ಸ್ವರೂಪಾವತಾರಗಳನ್ನು ಭಾಗವತ ಉಲ್ಲೇಖ ಮಾಡುತ್ತದೆ. ಆದರೆ
ಅವಷ್ಟೇ ಭಗವಂತನ ಸ್ವರೂಪಭೂತ ರೂಪಗಳಲ್ಲ. ಇವು ಆತನ ಸ್ವರೂಪರೂಪಗಳಲ್ಲಿ ಸದಾ ಉಪಾಸನೆ ಮಾಡಬೇಕಾದ ಪ್ರಧಾನ
ರೂಪಗಳು. ಯುಗ-ಯುಗಗಳಲ್ಲಿ ಒಂದು ವಿಶೇಷ ರೂಪದಲ್ಲಿ ಭೂಮಿಯಲ್ಲಿ ಮನುಷ್ಯರ ಕಣ್ಣಿಗೆ ಗೋಚರನಾಗಿ, ಮನುಷ್ಯರಂತೆ
ನಲಿದಾಡಿದ್ದಾನೆ ಭಗವಂತ. “ಕಿವಿ ಬೊಗಸೆಯಲ್ಲಿ ಭಗವಂತನ ಚರಿತೆಯನ್ನು ಪಾನಮಾಡುವವರಲ್ಲಿನ ಸಮಸ್ತಕೊಳೆಯನ್ನು
ತೊಳೆದುಬಿಡುವ ಆ ಭಗವಂತನ ಅವತಾರದ ಜ್ಞಾನಧಾರೆಯನ್ನು ನಾನೀಗ ನಿನಗೆ ಹೇಳುತ್ತೇನೆ” ಎಂದು ಚತುರ್ಮುಖ
ನಾರದರಿಗೆ ಹೇಳಿದ ಎನ್ನುವಲ್ಲಿಗೆ ಈ ಅಧ್ಯಾಯ ಕೊನೆಗೊಳ್ಳುತ್ತದೆ.
॥ ಇತಿ
ಶ್ರೀಮದ್ಭಾಗವತೇ ಮಹಾಪುರಾಣೇ ದ್ವಿತೀಯಸ್ಕಂಧೇ ಷಷ್ಠೋSಧ್ಯಾಯಃ ॥
ಭಾಗವತ ಮಹಾಪುರಾಣದ ಎರಡನೇ ಸ್ಕಂಧದ ಆರನೇ
ಅಧ್ಯಾಯ ಮುಗಿಯಿತು
*********