ಅಥ ವಿಂಶೋSಧ್ಯಾಯಃ
ಶುಕಮುನಿಗಳ ಆಗಮನ
ಪರೀಕ್ಷಿತ ನೆರೆದ
ಋಷಿಗಳಲ್ಲಿ ತನ್ನ ಉದ್ಧಾರದ ಮಾರ್ಗದ ಉಪದೇಶ ಬೇಡಿ
ನಿಂತಿರುವ ಸಂದರ್ಭದಲ್ಲಿ, ಅಲ್ಲಿ ಒಂದು ವಿಚಿತ್ರವಾದ ಘಟನೆ ನಡೆಯುತ್ತದೆ. ಎಂದೂ ಯಾರಿಗೂ
ಕಾಣಸಿಗದ ವಿರಕ್ತಮೂರ್ತಿ ಶುಕಾಚಾರ್ಯರು ಅಲ್ಲಿಗೆ ಆಗಮಿಸುತ್ತಾರೆ.
ತತ್ರಾಭವದ್
ಭಗವಾನ್ ವ್ಯಾಸಪುತ್ರೋ ಯದೃಚ್ಛಯಾ ಗಾಮಟಮಾನೋSನಪೇಕ್ಷಃ ।
ಅಲಕ್ಷ್ಯಲಿಂಗೋ
ನಿಜಲಾಭತುಷ್ಟೋ ವೃತಶ್ಚ ಬಾಲೈರವಧೂತವೇಷಃ ॥೧॥
ಶುಕಾಚಾರ್ಯರು ಎಂದೂ
ಎಲ್ಲೂ ಕಾಣಸಿಗುವವರಲ್ಲ. ಅಂತಹ ಶುಕಾಚಾರ್ಯರು ಇಂದು ರಾಜಧಾನಿಗೆ ಆಗಮಿಸಿದ್ದಾರೆ. ಇಲ್ಲಿ
ಶುಕಾಚಾರ್ಯರನ್ನು ‘ಭಗವಾನ್’ ಎಂದು ಸಂಬೋಧಿಸಿದ್ದಾರೆ. ಋಷಿಗಳನ್ನು ‘ಭಗವಂತನನ್ನು ಬಲ್ಲವರು’
ಎನ್ನುವ ಅರ್ಥದಲ್ಲಿ ‘ಭಗವಾನ್’ ಎನ್ನುವ ವಿಶೇಷಣ ಬಳಸಿ ಸಂಬೋಧಿಸುತ್ತಾರೆ. “ಉತ್ಪತ್ತಿಂ ಆಯತಿಂಚೈವ ಭೂತಾನಾಂ ಆಗತಿಂ ಗತಿಮ್ | ವೇತ್ತಿ ವಿದ್ಯಾಂ ಅವಿದ್ಯಾಂಚ ಸ ವಾಚ್ಯೋ ಭಗವಾನ್ ಇತಿ |” ಸಮಸ್ತ
ಜೀವಜಾತ ಎಲ್ಲಿಂದ ಬರುತ್ತದೆ, ಎಲ್ಲಿಗೆ ಹೋಗುತ್ತದೆ, ಯಾವುದು ಯಥಾರ್ಥ, ಯಾವುದು ಅಯಥಾರ್ಥ,
ಯಾವುದು ವಿದ್ಯೆ, ಯಾವುದು ಅವಿದ್ಯೆ, ಇವೆಲ್ಲವನ್ನೂ ಚನ್ನಾಗಿ ತಿಳಿದವರನ್ನು ‘ಭಗವಾನ್’ ಎಂದು
ಕರೆಯುತ್ತಾರೆ.
ಇಲ್ಲಿ ‘ಯದೃಚ್ಛಯಾ’
ಎನ್ನುವ ಪದ ಬಳಕೆಯಾಗಿದೆ. ಯದೃಚ್ಛಯಾ ಅಂದರೆ ‘ಆಕಸ್ಮಿಕ’. ಶುಕಾಚಾರ್ಯರು ಆಕಸ್ಮಿಕವಾಗಿ
ಹಸ್ತಿನಾಪುರ ಪ್ರವೇಶಿಸಿದರು ಎನ್ನುವುದು ಈ ಶ್ಲೋಕದ ಮೇಲ್ನೋಟದ ಅರ್ಥ. ಆದರೆ ಭಗವಂತನ ವ್ಯವಸ್ಥೆಯಲ್ಲಿ ಯಾವುದೂ
ಆಕಸ್ಮಿಕವಿಲ್ಲ. ಪ್ರತಿಯೊಂದು ಘಟನೆ ಹಿಂದೆ ಒಂದು ವ್ಯವಸ್ಥಿತವಾದ ಯೋಜನೆಯಿರುತ್ತದೆ. ಆದರೆ ಆ
ಯೋಜನೆ ನಮಗೆ ತಿಳಿಯದೇ ಇರುವುದರಿಂದ ಅದು ನಮಗೆ ಆಕಸ್ಮಿಕ. ಇಲ್ಲಿ ಪರೀಕ್ಷಿತ ಏಳು ದಿನ
ಭಾಗವತ ಶ್ರವಣ ಮಾಡಿ ಉದ್ಧಾರವಾಗಬೇಕು ಎನ್ನುವುದು
ದೈವಸಂಕಲ್ಪವಾಗಿತ್ತು. ಅದಕ್ಕೆಂದೇ ಶುಕಾಚಾರ್ಯರ ಆಗಮನವಾಗುತ್ತದೆ.
ತಂ ದ್ವ್ಯಷ್ಟವರ್ಷಂ
ಸುಕುಮಾರಪಾದ ಕರೋರುಬಾಹ್ವಂಸಕಪೋಲಗಾತ್ರಮ್ ।
ಚಾರ್ವಾರುಣಾಕ್ಷೋನ್ನಸತುಲ್ಯಕರ್ಣಂ
ಸುಭ್ರ್ವಾನನಂ ಕಂಬುಸುಜಾತಕಂಠಮ್ ॥೨॥
ನಿಗೂಢಜತ್ರುಂ ಪೃಥುತುಂಗವಕ್ಷಸಮಾವರ್ತನಾಭಿಂ
ವಲಿವಲ್ಗೂದರಂ ಚ ।
ದಿಗಂಬರಂ ವಕ್ತ್ರವಿಕೀರ್ಣಕೇಶಂ
ಪ್ರಲಂಬಬಾಹುಂ ಸ್ವಮರೋತ್ತಮಾಭಮ್ ॥೩॥
ಶುಕಾಚಾರ್ಯರು ನಗರ
ಪ್ರವೇಶಿಸಿದಾಗ ಅವರನ್ನು ನಗರದ ಜನರು ಗುರುತಿಸುವುದಿಲ್ಲ. ನಗರದಲ್ಲಿ ಬಾಲಕರು ಕೀಟಲೆ ಮಾಡಿಕೊಂಡು
ಅವರ ಬೆನ್ನು ಹತ್ತುತ್ತಾರೆ. ಆದರೆ ದಿಗಂಬರನಾಗಿ(ನಿರ್ವಸ್ತ್ರನಾಗಿ) ಯಾವುದರ ಪರಿವೆಯೂ ಇಲ್ಲದೆ,
ಸ್ವರೂಪಸುಖವನ್ನು ಅನುಭವಿಸುತ್ತಾ, ಹಸನ್ಮುಖಿ ಶುಖಾಚಾರ್ಯರು ಮುಂದೆ ಸಾಗುತ್ತಿದ್ದರು.
ಶುಕಾಚಾರ್ಯರು
ನೋಡಲು ಹದಿನಾರು ವರುಷದ ಯುವಕನಂತೆ ಕಾಣುತ್ತಿದ್ದರು. ಅವರದು ಮುದ್ದಾದ ಮುಖ, ಧೀರ್ಘಬಾಹು.
ಅತ್ಯಂತ ಸುಂದರ ವ್ಯಕ್ತಿತ್ವ. ಆದರೆ ಮೈಮೇಲೆ ಬಟ್ಟೆ ಇಲ್ಲ, ಆದರೆ ಯಾವುದೋ ದೇವಲೋಕದ ದೇವತೆ
ಭೂಮಿಗಿಳಿದು ಬಂದಂತೆ ಕಾಣುವ ರೂಪ ಅವರದ್ದಾಗಿತ್ತು.
ಶ್ಯಾಮಂ ಸದಾSSವೀಚ್ಯವಯೋSಙ್ಗಲಕ್ಷ್ಮ್ಯಾ ಸ್ತ್ರೀಣಾಂ ಮನೋಜ್ಞಂ ರುಚಿರಸ್ಮಿತೇನ ।
ಅಭ್ಯುತ್ಥಿತಾ ಮುನಯಶ್ಚಾಸನೇಭ್ಯಸ್ತಲ್ಲಕ್ಷಣಜ್ಞಾ ಅಪಿ ಗೂಢವರ್ಚಸಮ್ ॥೪॥
ಶ್ಯಾಮವರ್ಣದ(ಕಪ್ಪು
ಮಿಶ್ರಿತ ಬಿಳಿ ಬಣ್ಣದ) ಶುಕಾಚಾರ್ಯರು ಈಗಷ್ಟೇ ಹದಿನಾರಕ್ಕೆ ಕಾಲಿಡುತ್ತಿರುವವರಂತೆ
ಕಾಣುತ್ತಿದ್ದರು. ದಿಗಂಬರನಾದರೂ ಕೂಡಾ, ಅವರು ಅಸಹ್ಯವಾಗಿ ಕಾಣುತ್ತಿರಲಿಲ್ಲ. ನೋಡಿದರೆ ಮೈಮರೆತುಬಿಡುವ ವ್ಯಕ್ತಿತ್ವ ಅವರದಾಗಿತ್ತು. ಅವರ
ಮಗುವಿನತಹ ನಗು ಸ್ತ್ರೀಯರನ್ನು ಹುಚ್ಚುಕಟ್ಟಿಸುವಂತಿತ್ತು. ಶುಕಾಚಾರ್ಯರು ತಮ್ಮ
ಬ್ರಹ್ಮವರ್ಚಸ್ಸನ್ನು ತೋರ್ಪಡಿಸುತ್ತಿರಲಿಲ್ಲ. ಆದರೆ ಅವರು ಆಗಮಿಸಿದಾಗ ಅಲ್ಲಿ ನೆರೆದ
ಜ್ಞಾನಿಗಳು ಅವರನ್ನು ಗುರುತಿಸಿ, ಎದ್ದು ನಿಂತು ಸ್ವಾಗತಿಸುತ್ತಾರೆ.
ಪರೀಕ್ಷಿತ
ಶುಕಾಚಾರ್ಯರನ್ನು ಕಂಡು ಬಹಳ ಸಂತೋಷಪಡುತ್ತಾನೆ. “ಕರೆದರೂ ಬಾರದ, ಹುಡುಕಿದರೂ ಸಿಗದ ನೀವು, ಇಂತಹ
ಕ್ಷಣದಲ್ಲಿ ಆಗಮಿಸಿರುವುದು ನನ್ನ ಪುಣ್ಯ. ಕೃಷ್ಣನ, ಪಾಂಡವರ ವಂಶದಲ್ಲಿ ಹುಟ್ಟಿ ನನಗೆ ನನ್ನ ಹಿರಿಯರ
ಆಶೀರ್ವಾದ ಪೂರ್ಣಪ್ರಮಾಣದಲ್ಲಿರುವುದರಿಂದ ಇದು ಸಾಧ್ಯವಾಯಿತು; ನಾನು ಭಾಗ್ಯಶಾಲಿ” ಎಂದು
ಶುಕಾಚಾರ್ಯರನ್ನು ಸ್ವಾಗತಿಸುತ್ತಾನೆ ಪರೀಕ್ಷಿತ.
“ನನ್ನಲ್ಲಿರುವುದು ಕೇವಲ ಏಳು ದಿನಗಳು. ಈ ಏಳು ದಿನಗಳಲ್ಲಿ ಒಬ್ಬ ಮನುಷ್ಯ ಖಚಿತವಾಗಿ
ಏನನ್ನು ಕೇಳಬೇಕೋ, ಅದನ್ನು ನಾನು ಕೇಳಿ ಸಾಯಬೇಕು. ಹೇಳಲು ನೀವು ಸಿಕ್ಕಿರುವುದು ನನ್ನ ಪುಣ್ಯ”
ಎನ್ನುತ್ತಾನೆ ಪರೀಕ್ಷಿತ.
ಯಚ್ಛ್ರೋತವ್ಯಮಥೋ
ಜಪ್ಯಂ ಯತ್ ಕರ್ತವ್ಯಂ ನೃಭಿಃ ಸದಾ ।
ಸ್ಮರ್ತವ್ಯಂ ಭಜನೀಯಂ
ವಾ ಬ್ರೂಹಿ ಯದ್ವಾ ವಿಪರ್ಯಯಮ್ ॥೧೪॥
ಪರೀಕ್ಷಿತ ಹೇಳುತ್ತಾನೆ:
ನಾವು ಜೀವಮಾನದಲ್ಲಿ ಏನು ಮಾಡಿದ್ದೀವಿ ಎನ್ನುವುದಕ್ಕಿಂತ ಮುಖ್ಯವಾದುದು, ಅಂತ್ಯಕಾಲದಲ್ಲಿ ಏನು ಮಾಡುತ್ತೇವೆ
ಎನ್ನುವುದು” ಎಂದು. ಇದೇ ಮಾತನ್ನು ಶ್ರೀಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ: ಯಂ ಯಂ ವಾSಪಿ ಸ್ಮರನ್
ಭಾವಂ ತ್ಯಜತ್ಯಂತೇ ಕಳೇಬರಮ್ । ತನ್ತಮೇವೈತಿ ಕೌಂತೇಯ ಸದಾ ತದ್ ಭಾವಭಾವಿತಃ ॥೮-೬॥ ಅಂದರೆ ನಾವು ಕೊನೆಯಲ್ಲಿ ಯಾವಯಾವ ವಿಷಯವನ್ನು
ನೆನೆಯುತ್ತಾ ದೇಹವನ್ನು ತೊರೆಯುತ್ತೇವೋ, ಅದರಲ್ಲೇ ಅನುಗಾಲ ಬೇರೂರಿದ ಸಂಸ್ಕಾರದಿಂದ ಅದನ್ನೇ
ಪಡೆಯುತ್ತೇವೆ. ಇದೇ ಮಾತನ್ನು ಮಧ್ವಾಚಾರ್ಯರು ದ್ವಾದಶಸ್ತೋತ್ರದಲ್ಲಿ ಹೀಗೆ ಹೇಳಿದ್ದಾರೆ: “ಸಂತತಂ
ಚಿಂತಯೇSನಂತಂ ಅಂತಕಾಲೇ
ವಿಶೇಷತಃ”. ಇದರರ್ಥ ಜೀವಮಾನವಿಡೀ ಯಾವ ಸಾಧನೆ ಮಾಡುವ ಅಗತ್ಯವಿಲ್ಲ,
ಕೇವಲ ಅಂತ್ಯಕಾಲದಲ್ಲಿ ಭಗವಂತನ ಸ್ಮರಣೆ ಮಾಡಿದರೆ ಸಾಕು ಎಂದಲ್ಲ. ಜೀವಮಾನದ ಸಾಧನೆ ಇಲ್ಲದೇ ಸಾಯುವ
ಕ್ಷಣದಲ್ಲಿ ಭಗವಂತನ ನೆನಪು ಬರಲಾರದು.
ಅನೇಕ ಬಾರಿ ಜೀವನದಲ್ಲಿ
ಕೇಳಬೇಕಾದುದನ್ನು ಕೇಳದೆಯೇ ಬದುಕು ಮುಗಿದು ಹೋಗುತ್ತದೆ. ಇದಕ್ಕೆ ಕಾರಣ- ಯಾವುದನ್ನು ಕೇಳಬೇಕು ಎನ್ನುವುದು
ಗೊತ್ತಿಲ್ಲದೇ ಇರುವುದು ಮತ್ತು ಸರಿಯಾದುದನ್ನು ಹೇಳುವವರು ಸಿಗದೇ ಇರುವುದು. ಒಂದು ವೇಳೆ ತಿಳಿದವರೊಬ್ಬರು
ಹೇಳಲು ಸಿಕ್ಕರೆ, ಆಗ ನಿರಾಯಾಸವಾಗಿ ಅದನ್ನು ಕೇಳಿ ತಿಳಿದುಕೊಳ್ಳಬಹುದು. ಒಬ್ಬ ವ್ಯಕ್ತಿ ಒಂದು ವಿಷಯವನ್ನು
ತನ್ನ ಜೀವಮಾನವೆಲ್ಲಾ ಅಧ್ಯಯನ ಮಾಡಿ ಜೀರ್ಣಿಸಿಕೊಂಡಿರಬಹುದು. ಈ ರೀತಿ ಜೀರ್ಣಿಸಿಕೊಂಡ ವಿಷಯವನ್ನು
ಆತನಿಂದ ಇನ್ನೊಬ್ಬರು ಕ್ಷಣಾರ್ಧದಲ್ಲಿ ಪಡೆಯಬಹುದು. ಹೀಗಾಗಿ ತಿಳಿದವರು ನಮ್ಮ ಜೀವನದಲ್ಲಿ ಮಾರ್ಗದರ್ಶಕರಾಗಿ
ಸಿಗುವುದು ನಮ್ಮ ಭಾಗ್ಯ. ಇಲ್ಲಿ ಪರೀಕ್ಷಿತನಿಗೆ ಮಾರ್ಗದರ್ಶಕರಾಗಿ ಶುಕಾಚಾರ್ಯರು ಸಿಕ್ಕಿದ್ದಾರೆ.
ಆದ್ದರಿಂದ ಆತ ಅವರಲ್ಲಿ ತನ್ನ ಕೊನೇ ದಿನಗಳ ಅಪೇಕ್ಷೆಯನ್ನು ಮುಂದಿಡುತ್ತಾನೆ.
“ನಾವು ಜೀವಮಾನದಲ್ಲಿ ಕೇಳಲೇಬೇಕಾದ ಸಂಗತಿ ಯಾವುದು?
ಕೇವಲ ಕೇಳುವುದಷ್ಟೇ ಅಲ್ಲ, ಕೇಳಿ ನಿರಂತರ ಮನನ ಮಾಡಬೇಕಾದ ಸಂಗತಿ ಯಾವುದು? ಅದಕ್ಕೋಸ್ಕರ ಬದುಕಿನಲ್ಲಿ ನಾವು ಮಾಡಬೇಕಾದ ಕೆಲಸ ಯಾವುದು?
ಯಾವುದನ್ನು ಕೇಳಬೇಕು? ಯಾವುದನ್ನು ಕೇಳಬಾರದು? ಯಾವುದನ್ನು ಮಾಡಬೇಕು? ಯಾವುದನ್ನು ಮಾಡಬಾರದು? ಈ
ಎರಡು ಮುಖದಲ್ಲಿ ನನಗೆ ಮಾರ್ಗದರ್ಶನ ಮಾಡಿ. ಈ ಏಳು ದಿನಗಳ ಪ್ರತಿಕ್ಷಣವನ್ನೂ ವ್ಯರ್ಥಮಾಡದೇ
ಸಾರ್ಥಕಗೊಳಿಸಿಕೊಳ್ಳಲು ಅನ್ನ ನೀರು ತೊರೆದು ಕುಳಿತಿದ್ದೇನೆ. ತಿಳಿದ ನೀವು ಇವೆಲ್ಲವನ್ನೂ ನನಗೆ ಹೇಳಬೇಕು”
ಎಂದು ಪ್ರಾರ್ಥಿಸುತ್ತಾನೆ ಪರೀಕ್ಷಿತ.
ನೂನಂ ಭಗವತೋ ಬ್ರಹ್ಮನ್
ಗೃಹೇಷು ಗೃಹಮೇಧಿನಾಮ್ ।
ನ ಲಕ್ಷ್ಯತೇ ಹ್ಯವಸ್ಥಾನಮಪಿ
ಗೋದೋಹನಂ ಕ್ವಚಿತ್ ॥೧೫॥
ಇಲ್ಲಿ ಪರೀಕ್ಷಿತ
ವಿಶೇಷವಾಗಿ ಶುಕಾಚಾರ್ಯರಲ್ಲೇ ತನ್ನ ಪ್ರಶ್ನೆಯನ್ನು ಮುಂದಿಡಲು ಕಾರಣವೇನೆಂದರೆ- ಶುಕಾಚಾರ್ಯರ ದರ್ಶನ ಸಿಕ್ಕಿರುವುದೇ
ದೊಡ್ಡ ಸಂಗತಿ. ಬೇಕೂ ಅಂತ ಹುಡುಕಿಕೊಂಡು ಹೋದರು ಸಿಗುವವರಲ್ಲ ಅವರು. ಎಲ್ಲೋ ಒಮ್ಮೆ ಭಿಕ್ಷಾಟನೆಗಾಗಿ ಬಂದರೆ ಅವರು ಭಿಕ್ಷೆಗಾಗಿ
ಕಾಯುತ್ತಿದ್ದುದು ಒಂದು ಹಸುವನ್ನು ಕರೆಯುವಷ್ಟು ಕಾಲ ಮಾತ್ರ. ಇಂದು ಇಲ್ಲಿಗೆ ತಾವಾಗಿ ಅವರು ಆಗಮಿಸಿರುವುದು ಅತ್ಯಂತ ಆಶ್ಚರ್ಯದಾಯಕ.
ಹೀಗಾಗಿ ಪರೀಕ್ಷಿತ ನೇರವಾಗಿ ಅವರಲ್ಲೇ ತನ್ನ ಪ್ರಶ್ನೆಯನ್ನು ಮಂಡಿಸಿ ತನಗೆ ಉಪದೇಶ ಮಾಡಬೇಕೆಂದು ಕೇಳಿಕೊಳ್ಳುತ್ತಾನೆ.
॥ ಇತಿ ಶ್ರೀಮದ್ಭಾಗವತೇ
ಮಹಾಪುರಾಣೇ ಪ್ರಥಮಸ್ಕಂಧೇ ವಿಂಶೋSಧ್ಯಾಯಃ ॥
ಭಾಗವತ ಮಹಾಪುರಾಣದ
ಮೊದಲ ಸ್ಕಂಧದ ಇಪ್ಪತ್ತನೆಯ ಅಧ್ಯಾಯ ಮುಗಿಯಿತು.
॥ ಸಮಾಪ್ತಶ್ಚ
ಪ್ರಥಮಸ್ಕಂಧಃ ॥
ಇಲ್ಲಿಗೆ ಭಾಗವತದ ಪ್ರಥಮ
ಸ್ಕಂಧ ಮುಕ್ತಾಯವಾಯಿತು. ಈ ಹಿಂದೆ ಹೇಳಿದಂತೆ- ಈ ಸ್ಕಂಧ ಭಾಗವತದ ಪೀಠಿಕೆ ರೂಪದಲ್ಲಿದೆ. ಎರಡನೇ ಸ್ಕಂಧದಿಂದ ಭಾಗವತದ ಉಪದೇಶ ಭಾಗ ಆರಂಭವಾಗುತ್ತದೆ.
*********
No comments:
Post a Comment