Sunday, September 1, 2013

Shrimad BhAgavata in Kannada -Skandha-01-Ch-19

ಅಥೈಕೋನವಿಂಶೋSಧ್ಯಾಯಃ

ಸರ್ವಸ್ವವನ್ನೂ ತ್ಯಾಗ ಮಾಡಿದ ಪರೀಕ್ಷಿತ

ಇತ್ತ ಪರೀಕ್ಷಿತನ ರಾಜಧಾನಿಯಾದ  ಹಸ್ತಿನಾಪುರದಲ್ಲಿ ರಾಜಾ ಪರೀಕ್ಷಿತ ತನ್ನಿಂದಾದ ತಪ್ಪಿಗೆ ಪಶ್ಚಾತ್ತಾಪಗೊಂಡು, ವಿರಕ್ತಿಯಿಂದ, ಪರಲೋಕ ಯಾತ್ರೆಗೆ ಬೇಕಾದ ಉಪಾಸನೆ-ಸಾಧನೆಗೆ ಮನಸ್ಸನ್ನು ಸಿದ್ಧಗೊಳಿಸಿಕೊಂಡ. ಆತ ಅಲ್ಲೇ ಸಮೀಪದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹರಿಯುತ್ತಿರುವ ಗಂಗಾನದಿಯ ಸ್ವಲ್ಪ ದಕ್ಷಿಣ ಭಾಗದ ನೀರಿನಲ್ಲಿ ಸ್ಥಂಭವೊಂದರ ಮೇಲೆ ಎಲೆಮನೆಯನ್ನು ಕಟ್ಟಿ,  ಅಲ್ಲಿದ್ದು, ತನ್ನ ಅಂತ್ಯಕಾಲದಲ್ಲಿ ಭಗವಂತನ ಧ್ಯಾನದಲ್ಲಿ ದಿನಕಳೆಯಬೇಕೆಂದು ನಿರ್ಧರಿಸಿದ. ಶಮೀಕ ಮುನಿ ಕಳುಹಿಸಿದ ಶಾಪ ಸಂದೇಶ ಆತನನ್ನು ಸ್ವಲ್ಪವೂ ವಿಚಲಿತಗೊಳಿಸಲಿಲ್ಲ. ತಾನಿನ್ನು ಅರಮನೆಯಲ್ಲಿ ವಾಸಿಸುವುದಿಲ್ಲ, ನಿರಾಹಾರನಾಗಿ, ಸಮಯ ವ್ಯರ್ಥ ಮಾಡದೇ, ಉಳಿದ ಏಳು ದಿನ ಭಗವದ್ ಚಿಂತನೆಯಲ್ಲಿ ಕಳೆಯಬೇಕೆಂದು ಸಂಕಲ್ಪಿಸಿದ ಪರೀಕ್ಷಿತ.
ಭಾಗವತದಲ್ಲೇ ಹೇಳುವಂತೆ- ಗಂಗೆ ಹರಿಪಾದ ನಖದಿಂದ ಬಂದವಳು. ಭಗವಂತನ ತ್ರಿವಿಕ್ರಮರೂಪದ ಪಾದದಿಂದ ಬಂದಿರುವ ಪಾದೋದಕ ಗಂಗೆ. ಅಂತಹ ಪರಮ ಪವಿತ್ರವಾದ ವಿಷ್ಣುಪದಿಯಲ್ಲಿ ನಿರ್ಮಿತವಾದ ಕುಟೀರದಲ್ಲಿ  ವಾಸ ಮಾಡಲು ನಿರ್ಧರಿಸಿದ ಪರೀಕ್ಷಿತ.

ಇತಿ ಸ್ಮ ರಾಜಾ ವ್ಯವಸಾಯಯುಕ್ತಃ ಪ್ರಾಚೀನಕಾಗ್ರೇಷು ಕುಶೇಷು ಧೀರಃ
ಉದಙ್ಮುಖೋ ದಕ್ಷಿಣಕೂಲ ಆಸ್ತೇ ಸಮುದ್ರಪತ್ನ್ಯಾಃ ಸ್ವಸುತನ್ಯಸ್ತಭಾರಃ ೧೭

ಈ ಹಿಂದೆ ಹೇಳಿದಂತೆ- ತನ್ನ ಮಗ ಜನಮೇಜಯನಿಗೆ ಪಟ್ಟಕಟ್ಟಿದ ಪರೀಕ್ಷಿತ, ಸಮಸ್ತ ರಾಜ್ಯದ ಹೊಣೆಗಾರಿಕೆಯನ್ನು ಮಗನಿಗೆ ವಹಿಸಿದ. ನದಿಯಲ್ಲಿ ನಿರ್ಮಿಸಿದ ಕುಟೀರದಲ್ಲಿ ದರ್ಭೆಯನ್ನು ಪೂರ್ವಾಭಿಮುಖವಾಗಿ ಹಾಸಿ, ಆ ಪೂರ್ವಾಭಿಮುಖವಾದ ದರ್ಭೆಯ ಚಾಪೆಯ ಮೇಲೆ ಉತ್ತರಾಭಿಮುಖವಾಗಿ ಕುಳಿತ ಪರೀಕ್ಷಿತ. ನಮಗೆ ತಿಳಿದಂತೆ- ಉತ್ತರದ ಮಾರ್ಗ ಎತ್ತರದ ಮಾರ್ಗ. ಅಂದರೆ ಅದು ಮೋಕ್ಷಕ್ಕೆ ಹೋಗುವ ಮಾರ್ಗ. ದಕ್ಷಿಣದ ಮಾರ್ಗ ಸಂಸಾರದ ಚಕ್ರಭ್ರಮಣ. ಹೀಗಾಗಿ, ತಾನು ಮತ್ತೆ ಮರಳಿ ಸಂಸಾರಕ್ಕೆ ಬರುವ ಮಾರ್ಗದಿಂದ ಪಾರಾಗಲು ಪರೀಕ್ಷಿತ ದಕ್ಷಿಣಕ್ಕೆ ಬೆನ್ನು ಹಾಕಿ ಕುಳಿತ.

ಇದೇ ಸಮಯದಲ್ಲಿ ಅಲ್ಲಿಗೆ ವಸಿಷ್ಠರು, ಅಂಗೀರಸರು, ಭೃಗು, ಪರಾಶರರು, ವ್ಯಾಸರು ಮತ್ತು ದೇವರ್ಷಿ ನಾರದರು ಆಗಮಿಸುತ್ತಾರೆ. ಎಂದೂ ಹೀಗೆ ಕಾಣಸಿಗದ ಋಷಿ ಸಮೂಹವನ್ನು ಕಂಡು ಪರೀಕ್ಷಿತನಿಗೆ ಸಂತೋಷವಾಗುತ್ತದೆ ಮತ್ತು ಆತ “ತನ್ನನ್ನು ಹರಸಬೇಕೆಂದು” ಅವರಲ್ಲಿ ಕೇಳಿಕೊಳ್ಳುತ್ತಾನೆ. ಆಗ ನೆರೆದ ಋಷಿಗಳು ಏಳು ದಿನವೂ ಅಲ್ಲೇ ಇದ್ದು, ರಾಜನನ್ನು ಆಶೀರ್ವದಿಸಲು ನಿರ್ಧರಿಸುತ್ತಾರೆ.


ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ಏಕೋನವಿಂಶೋSಧ್ಯಾಯಃ
ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಹತ್ತೊಂಬತ್ತನೆಯ ಅಧ್ಯಾಯ ಮುಗಿಯಿತು.
*********

No comments:

Post a Comment