ಧರ್ಮಪಾಲೋ ನರಪತಿಃ
ಸ ತು ಸಮ್ರಾಡ್ ಬೃಹಚ್ಛ್ರವಾಃ ।
ಸಾಕ್ಷಾನ್ಮಹಾಭಾಗವತೋ
ರಾಜರ್ಷಿರ್ಹಯಮೇಧಯಾಟ್ ।
ಕ್ಷುತ್ತೃಟ್
ಚ್ರಮಾನ್ವಿತೋ ದೀನೋ ನೈವಾಸ್ಮಚ್ಛಾಪಮರ್ಹತಿ ॥೪೬॥
ಪರೀಕ್ಷಿತ ಎಂತಹ ರಾಜನಾಗಿದ್ದ
ಎನ್ನುವುದನ್ನು ಇಲ್ಲಿ ಶಮೀಕರು ವಿವರಿಸಿದ್ದಾರೆ. “ಭಗವಂತನ ಕೃಪಾಕಟಾಕ್ಷದಿಂದ ಮರುಹುಟ್ಟು ಪಡೆದ ಪರೀಕ್ಷಿತ
ಪರಮ ವಿಷ್ಣುಭಕ್ತ. ಆತ ಒಬ್ಬ ಮಹಾಜ್ಞಾನಿ.
ಅಶ್ವಮೇಧಯಾಗವನ್ನು ಮಾಡಿದ ರಾಜರ್ಷಿ. ಆತ ಸಹಜ ಸ್ಥಿತಿಯಲ್ಲಿ
ಈ ರೀತಿ ಮಾಡಿಲ್ಲ, ಹಸಿವು-ಬಾಯಾರಿಕೆ ತಾಳಲಾಗದೇ ಒಂದು ಕ್ಷಣ ಪರವಶತೆಯಲ್ಲಿ ಇಂತಹ ಘಟನೆ ನಡೆಯಿತು
. ಘಟನೆ ನಡೆದ ಉತ್ತರ ಕ್ಷಣದಲ್ಲಿ ಆತ ಪಶ್ಚಾತ್ತಾಪ ಪಟ್ಟಿದ್ದಾನೆ. ಹೀಗಿರುವಾಗ ನಮ್ಮಂತವರು ಶಾಪ ಕೊಡುವ
ವ್ಯಕ್ತಿ ಅವನಲ್ಲ. ಅವನಿಗೆ ಶಾಪ ಕೊಡಬಾರದಿತ್ತು” ಎಂದು ಮರುಗುತ್ತಾರೆ ಶಮೀಕ ಮುನಿ. ಬಹಳ ಸುಂದರವಾದ
ಮಾತುಗಳಿವು. ಏಕೆಂದರೆ ಯಾವುದೇ ಒಂದು ಸಂಗತಿಯನ್ನು ಎಷ್ಟು ಭಿನ್ನ ಆಯಾಮಗಳಿಂದ ನೋಡಬಹುದು ಎನ್ನುವುದನ್ನು
ನಾವಿಲ್ಲಿ ಕಾಣಬಹುದು. ಸಮಾಧಿಸ್ಥಿತಿಯಲ್ಲಿ ಧ್ಯಾನಮಗ್ನನಾಗಿದ್ದ ಋಷಿಯ ಹೆಗಲ ಮೇಲೆ ಸತ್ತ ಹಾವನ್ನು
ಹಾಕಿರುವುದು ನಮಗೆ ತಪ್ಪಾಗಿ ಕಾಣುತ್ತದೆ. ಆದರೆ ಶಮೀಕರು ಹೇಳುತ್ತಾರೆ: “ಪರೀಕ್ಷಿತ ಏನೂ ತಪ್ಪು ಮಾಡಿಲ್ಲ”
ಎಂದು. ಅವರ ದೃಷ್ಟಿಯಲ್ಲಿ ಅದು ಸತ್ತ ಹಾವು. ಅದರಿಂದ ಯಾವ ಅಪಾಯವೂ ಆಗಿಲ್ಲ, ದೈನ್ಯಾವಸ್ಥೆಯಲ್ಲಿ
ಪರೀಕ್ಷಿತ ಆ ರೀತಿ ನಡೆದುಕೊಂಡ ಅಷ್ಟೇ.
ಅಪಾಪೇಷು ಸ್ವಭೃತ್ಯೇಷು
ಬಾಲೇನಾಪಕ್ವಬುದ್ಧಿನಾ ।
ಪಾಪಂ ಕೃತಂ ತದ್ಭಗವಾನ್
ಸರ್ವಾತ್ಮಾ ಕ್ಷಂತುಮರ್ಹತಿ ॥೪೭॥
ಶಮೀಕರು ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳುತ್ತಾರೆ: “ಯಾವ
ತಪ್ಪೂ ಮಾಡದ, ಪರಮಭಕ್ತನಾದ ಪರೀಕ್ಷಿತನಿಗೆ ತಿಳಿಗೇಡಿ ಹುಡುಗನೊಬ್ಬ ಶಾಪ ಕೊಟ್ಟುಬಿಟ್ಟ. ಪರಿಹಾರವಿಲ್ಲದ
ತಪ್ಪು ನಡೆದುಹೋಯಿತು. ಎಲ್ಲರ ಅಂತರ್ಯಾಮಿಯಾಗಿ ನಿಂತು ಎಲ್ಲವನ್ನೂ ನಡೆಸುವ ನೀನು ಆತನನ್ನು ಕ್ಷಮಿಸಿ
ಉದ್ಧರಿಸು” ಎಂದು.
ಸಾಧವಃ
ಪ್ರಾಯಶೋ ಲೋಕೇ ಪರೈರ್ದ್ವಂದ್ವೇಷು ಯೋಜಿತಾಃ ।
ನ ವ್ಯಥಂತಿ ನ ಹೃಷ್ಯಂತಿ
ಯತ ಆತ್ಮಾಗುಣಾಶ್ರಯಃ ॥೫೦॥
ಇಲ್ಲಿ ಉಗ್ರಶ್ರವಸ್ಸು
ಶಮೀಕರ ನಡೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಸಜ್ಜನರ ಸ್ವಭಾವವನ್ನು ವಿವರಿಸಿದ್ದಾರೆ.
ಸಜ್ಜನರಿಂದಲೂ ಒಮ್ಮೊಮ್ಮೆ ಅಪಚಾರವಾಗುತ್ತದೆ, ಇಲ್ಲವೆಂದಿಲ್ಲ. ಆದರೆ ಸುಮಾರಾಗಿ ಸಜ್ಜನರ ಸ್ವಭಾವೇನೆಂದರೆ-
ಸಜ್ಜನರು ತಮಗೆ ದುಃಖ ಕೊಟ್ಟವರ ಮೇಲೆ ಕೋಪಿಸಿಕೊಳ್ಳುವುದಾಗಲಿ, ಉಪಕಾರವಾದಾಗ ಕುಣಿದು ಕುಪ್ಪಳಿಸುವುದಾಗಲಿ
ಮಾಡುವುದಿಲ್ಲ. ಏಕೆಂದರೆ ನಾವು ಮಾಡಿದ ಪಾಪ-ಪುಣ್ಯಗಳಿಗೆ ನಾವೇ ಹೊಣೆಗಾರರು ಹೊರತು
ಇನ್ನೋಬ್ಬರಲ್ಲ ಎನ್ನುವ ಸತ್ಯ ಅವರಿಗೆ ತಿಳಿದಿರುತ್ತದೆ. ಒಳ್ಳೆಯದನ್ನು ಮಾಡಿದರೆ ಒಳ್ಳೆಯದನ್ನು ಪಡೆಯುತ್ತೇವೆ,
ಕೆಟ್ಟದ್ದನ್ನು ಮಾಡಿದರೆ ಕೆಟ್ಟದ್ದನ್ನು ಪಡೆಯುತ್ತೇವೆ. ನಾವು ಮಾಡದೇ ಇದ್ದದ್ದನ್ನು ಇನ್ನೊಬ್ಬರು
ನಮಗೆ ಕೊಡುವುದು ಸಾಧ್ಯವಿಲ್ಲ. ಇನ್ನೊಬ್ಬರು ನಮಗೆ ತೊಂದರೆ ಕೊಟ್ಟರೆ ಅದಕ್ಕೆ ಮೂಲಭೂತ ಕಾರಣ ನಾವು
ಹಿಂದೆ ಮಾಡಿದ ಪಾಪವೇ ಹೊರತು ಇನ್ನೊಬ್ಬರಲ್ಲ. ನಾವು ಮಾಡಿದ ಪಾಪ ಪಕ್ವವಾಗಿ ನಾವದನ್ನು ಅನುಭವಿಸುವ
ಕಾಲ ಬಂದಾಗ, ಅದಕ್ಕೆ ಯಾರೋ ಒಬ್ಬರು ನೆಪವಾಗುತ್ತಾರೆ ಅಷ್ಟೇ. ನಾವು ದುಃಖಕ್ಕೊಳಗಾಗುವ ಪ್ರರಾಬ್ಧಕರ್ಮ
ನಮ್ಮಲಿಲ್ಲದಿದ್ದರೆ ಯಾರೂ ನಮಗೆ ದುಃಖ ಕೊಡಲು ಸಾಧ್ಯವಿಲ್ಲ. ಹೀಗಾಗಿ ಇನ್ನೊಬ್ಬರು ಅನ್ಯಾಯ ಮಾಡಿದಾಗ
ನಾವು ನಮ್ಮೊಳಗೊಮ್ಮೆ ನೋಡಿಕೊಳ್ಳಬೇಕು. ಇಂತಹ ದುಃಖವನ್ನು ಅನುಭವಿಸಬೇಕಾದ ಪಾಪ ನನ್ನಿಂದ ನಡೆದಿತ್ತು,
ಅದಕ್ಕೆ ಭಗವಂತ ಈ ಶಿಕ್ಷೆ ಕೊಟ್ಟ ಅನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಇದನ್ನು ಶಮೀಕರು ತಿಳಿದಿದ್ದರು.
ಆದ್ದರಿಂದ ಅವರಿಗೆ ಕೋಪ ಬರಲಿಲ್ಲ.
ಶಮೀಕರು ನಡೆದ ಅಚಾತುರ್ಯವನ್ನು
ಪರೀಕ್ಷಿತನಿಗೆ ತಲುಪಿಸುತ್ತಾರೆ. “ತನ್ನ ಮಗ ಅಚಾತುರ್ಯದಿಂದ ಶಾಪವನ್ನಿತ್ತಿದ್ದಾನೆ, ಆ ಶಾಪವನ್ನು
ಹಿಂದೆ ತೆಗೆದುಕೊಳ್ಳುವ ಶಕ್ತಿ ನನ್ನಲ್ಲಿಲ್ಲ. ನಿನ್ನಲ್ಲೀಗ
ಉಳಿದಿರುವುದು ಕೇವಲ ಏಳೇ ದಿನಗಳು. ಅದಕ್ಕಾಗಿ ದಯವಿಟ್ಟು ಬೇಕಾದ ವ್ಯವಸ್ಥೆ ಮಾಡಿಕೋ” ಎಂದು ರಾಜನಿಗೆ
ಹೇಳಿ ಕಳುಹಿಸುತ್ತಾರೆ.
॥ ಇತಿ ಶ್ರೀಮದ್ಭಾಗವತೇ
ಮಹಾಪುರಾಣೇ ಪ್ರಥಮಸ್ಕಂಧೇ ಅಷ್ಟಾದಶೋSಧ್ಯಾಯಃ ॥
ಭಾಗವತ ಮಹಾಪುರಾಣದ
ಮೊದಲ ಸ್ಕಂಧದ ಹದಿನೆಂಟನೇ ಅಧ್ಯಾಯ ಮುಗಿಯಿತು.
*********
No comments:
Post a Comment