Download in PDF Format :

ಸುಮಾರು ಐದು ಸಾವಿರ ವರ್ಷಗಳ ಹಿಂದೆ, ದ್ವಾಪರದ ಕೊನೆಯಲ್ಲಿ, ವೇದಗಳನ್ನು ವಿಂಗಡಿಸಿ ಬಳಕೆಗೆ ತಂದ ಮಹರ್ಷಿ ವೇದವ್ಯಾಸರೇ ಅವುಗಳ ಅರ್ಥವನ್ನು ತಿಳಿಯಾಗಿ ವಿವರಿಸಲು ಹದಿನೆಂಟು ಪುರಾಣಗಳನ್ನು ರಚಿಸಿದರು. ಈ ಪುರಾಣಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ಹಾಗೂ ಪುರಾಣಗಳ ರಾಜ ಎನ್ನಬಹುದಾದ ಮಹಾಪುರಾಣ ಭಾಗವತ.
ಸಾವು ಎನ್ನುವ ಹಾವು ಬಾಯಿ ತೆರೆದು ನಿಂತಿದೆ. ಜಗತ್ತಿನ ಎಲ್ಲಾ ಜೀವಜಾತಗಳು ಅಸಾಯಕವಾಗಿ ಅದರ ಬಾಯಿಯೊಳಗೆ ಸಾಗುತ್ತಿವೆ. ಈ ಹಾವಿನಿಂದ ಪಾರಾಗುವ ಉಪಾಯ ಉಂಟೇ? ಉಂಟು, ಶುಕಮುನಿ ನುಡಿದ ಶ್ರೀಮದ್ಭಾಗವತವೇ ಅಂಥಹ ದಿವ್ಯೌಷಧ. ಜ್ಞಾನ-ಭಕ್ತಿ ವಿರಳವಾಗಿರುವ ಕಲಿಯುಗದಲ್ಲಂತೂ ಇದು ತೀರಾ ಅವಶ್ಯವಾದ ದಾರಿದೀಪ.
ಇಲ್ಲಿ ಅನೇಕ ಕಥೆಗಳಿವೆ. ಆದರೆ ನಮಗೆ ಕಥೆಗಳಿಗಿಂತ ಅದರ ಹಿಂದಿರುವ ಸಂದೇಶ ಮುಖ್ಯ. ಒಂದು ತತ್ತ್ವದ ಸಂದೇಶಕ್ಕಾಗಿ ಒಂದು ಕಥೆ ಹೊರತು, ಅದನ್ನು ವಾಸ್ತವವಾಗಿ ನಡೆದ ಘಟನೆ ಎಂದು ತಿಳಿಯಬೇಕಾಗಿಲ್ಲ.
ಮನಸ್ಸು ಶುದ್ಧವಾಗಿದ್ದರೆ ಎಲ್ಲವೂ ಶುದ್ಧ. ಮನಸ್ಸು ಮಲೀನವಾದರೆ ಮೈತೊಳೆದು ಏನು ಉಪಯೋಗ? ನಮ್ಮ ಮನಸ್ಸನ್ನು ತೊಳೆದು ಶುದ್ಧ ಮಾಡುವ ಸಾಧನ ಈ ಭಾಗವತ. ಶ್ರದ್ಧೆಯಿಂದ ಭಾಗವತ ಓದಿದರೆ ಮನಸ್ಸು ಪರಿಶುದ್ಧವಾಗಿ ಭಗವಂತನ ಚಿಂತನೆಗೆ ತೊಡಗುತ್ತದೆ. ಬಿಡುಗಡೆಯ ದಾರಿಯನ್ನು ತೆರೆದು ತೋರಿಸುತ್ತದೆ.
ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಭಾಗವತ ಪ್ರವಚನದಲ್ಲಿ ಒಬ್ಬ ಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸಿದ ಭಾಗವತದ ಅರ್ಥಸಾರವನ್ನು ಇ-ಪುಸ್ತಕ ರೂಪದಲ್ಲಿ ಸೆರೆ ಹಿಡಿದು ಆಸಕ್ತ ಭಕ್ತರಿಗೆ ತಲುಪಿಸುವ ಒಂದು ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ. ಚಿತ್ರಕೃಪೆ: ಅಂತರ್ಜಾಲ.
Download in PDF Format :
Skandha-01:All 20 Chapters e-Book
Skandha-02 All 10 chapters e-Book

Note: due to unavoidable reason we are unable to publish regular posts. But we will come back soon.......

Sunday, August 4, 2013

Shrimad BhAgavata in Kannada -Skandha-01-Ch-18(1)

ಅಷ್ಟಾದಶೋSಧ್ಯಾಯಃ

ಶೌನಕಾದಿಗಳಿಗೆ ಕಥೆಯನ್ನು ಹೇಳುತ್ತಿರುವ ಸೂತರು ಮುಂದೆ ಕಥೆಯನ್ನು ತುಂಬಾ ಚುಟುಕು ಮಾಡುತ್ತಾರೆ.  ಚುಟುಕು ಮಾಡಿ, ಕುತೂಹಲ ಕೆರಳಿಸಿ ಮತ್ತೆ ಆ ಕಥೆಯನ್ನು ವಿಸ್ತಾರ ಮಾಡುತ್ತಾರೆ. ಇದೊಂದು ಪ್ರಾಚೀನ ಗ್ರಂಥಗಳಲ್ಲಿನ  ತಂತ್ರ. ಚುಟುಕು ಮಾಡಿ ಹೇಳಿದಾಗ ಶಿಷ್ಯರು “ವಿವರವಾಗಿ ಹೇಳಿ” ಎಂದು ಕೇಳಿದರೆ ಮಾತ್ರ ವಿಸ್ತಾರವಾದ ವಿವರಣೆ, ಇಲ್ಲದಿದ್ದರೆ ಇಲ್ಲ.
ಪರೀಕ್ಷಿತನಿಗೆ ಮೂವತ್ತಾರನೇ ವಯಸ್ಸಿನಲ್ಲಿ ಪಟ್ಟಾಭಿಷೇಕವಾಗಿತ್ತು. ಅಲ್ಲಿಂದ ಮುಂದೆ ಸುಮಾರು ಮೂವತ್ತು ವರ್ಷಗಳ ಕಾಲ ಧರ್ಮಮಯವಾದ ಆಡಳಿತ ನಡೆಸಿದ ಪರೀಕ್ಷಿತ. ನಂತರ ಸುಮಾರು ಅರವತ್ತೈದನೇ ವಯಸ್ಸಿನಲ್ಲಿ ಏನು ನಡೆಯಿತು ಎನ್ನುವುದನ್ನು ಬಹಳ ಚುಟುಕಾಗಿ ಇಲ್ಲಿ ವಿವರಿಸಲಾಗಿದೆ. ಭಗವಂತನ ಅನುಗ್ರಹದಿಂದಾಗಿ ಅಶ್ವತ್ಥಾಮನ ಬ್ರಹ್ಮಾಸ್ತ್ರದಿಂದಲೂ ಪೀಡಿತನಾಗದೆ, ಭಗವಂತನ ರಕ್ಷೆಯಿಂದ ಹುಟ್ಟಿ ಬಂದವ ಆತ. ಇಂತಹ ಪರೀಕ್ಷಿತ- ಋಷಿ ಶಾಪದಿಂದ ಸಾಯಬೇಕಾದ ಪ್ರಸಂಗ ಬರುತ್ತದೆ. ಆದರೆ ಆತ ಈ ಸಂದರ್ಭದಲ್ಲೂ ಕೂಡಾ  ಯಾವುದಕ್ಕೂ ಹೆದರದೇ, ಭಗವನ್ಮಯನಾಗಿ ತನ್ನ ಕೊನೆಯ ಕ್ಷಣವನ್ನು ಕಳೆದ ಎನ್ನುತ್ತಾರೆ ಸೂತರು.  ಆ ಕೊನೆಯ ಕ್ಷಣದಲ್ಲಿ ಆತನ ಮನಃಸ್ಥಿತಿ ಹೇಗಿತ್ತು ಎನ್ನುವುದನ್ನು ಸೂತರು ಇಲ್ಲಿ ಒಂದೇ ಶ್ಲೋಕದಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.

ಸೂತ ಉವಾಚ--
ಉತ್ಸೃಜ್ಯ ಸರ್ವತಃ ಸಂಗಂ ವಿಜ್ಞಾನಾರ್ಜಿತಸಂಸ್ಥಿತಿಃ
ವೈಯಾಸಕೇರ್ಜಹೌ ಶಿಷ್ಯೋ ಗಂಗಾಯಾಂ ಸ್ವಕಲೇವರಮ್

ಪರೀಕ್ಷಿತನಲ್ಲಿ ಇಡೀ ದೇಶದ ಆಡಳಿತವಿತ್ತು, ದೊಡ್ಡ ಪರಿವಾರವಿತ್ತು, ದಾಸ ದಾಸಿಯರಿಂದ ಕೂಡಿದ ವಿಲಾಸಿ ಜೀವನ ಅವನದಾಗಿತ್ತು. ಇಷ್ಟೆಲ್ಲಾ  ಇದ್ದರೂ ಕೂಡಾ, ಆತ ಯಾವ ಆವೇಶಕ್ಕೂ ಒಳಗಾಗದೇ ನಿರ್ಲಿಪ್ತನಾಗಿ ನಿಂತುಬಿಟ್ಟನಂತೆ. ಅರಮನೆಯ ಸುಖ-ಭೋಗ ಇದ್ದೂ ಕೂಡಾ, ಅವನಿಗೆ ಯಾವುದರ ಸಂಗವೂ ಇಲ್ಲದೇ ನಿರ್ಲಿಪ್ತನಾಗಲು ಸಾಧ್ಯವಾಯಿತು. ಏಕೆಂದರೆ- “ಅವನ ವ್ಯಕ್ತಿತ್ವ ಅಂತಹದ್ದು-ಆತ ವಿಜ್ಞಾನಿಯಾದ” ಎನ್ನುತ್ತಾರೆ ಸೂತರು. ‘ವಿಜ್ಞಾನ’ ಎನ್ನುವ ಪದಕ್ಕೆ ಸಂಸ್ಕೃತದಲ್ಲಿ ಅನೇಕ ಅರ್ಥಗಳಿವೆ. ಈ ಸಂದರ್ಭದಲ್ಲಿ ಒಂದು ವಿಶಿಷ್ಠ ಅರ್ಥವನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ವಿವರಿಸುತ್ತಾ ಹೇಳುತ್ತಾರೆ: “ವಿಜ್ಞಾನಮಾತ್ಮಯೋಗ್ಯಂ ಸ್ಯಾದ್ ಜ್ಞಾನಂ ಸಾಧಾರಣಂ ಸ್ಮೃತಂ”   ಎಂದು. ಅಂದರೆ ಪ್ರತಿಯೊಬ್ಬ ವ್ಯಕ್ತಿ ತನ್ನ ಸಾಧನೆಯಿಂದ ಪಡೆಯುವ ಭಗವಂತನ ಬಗೆಗಿನ ಅಸಾಧಾರಣ ಸಿದ್ಧಿ(Individual wisdom) ವಿಜ್ಞಾನ. ಪರೀಕ್ಷಿತ  ಭಗವಂತನ ವಿಷಯಿಕವಾದ ಅಸಾಧಾರಣ ಸಾಧನೆಯಿಂದ ಸಂಸ್ಥಿತಿಯನ್ನು ಗಳಿಸಿದ. ಭಗವಂತನ ಬಗೆಗಿನ ಅಸಾಧಾರಣ ಅರಿವಿನಿಂದಾಗಿ ಆತನಿಗೆ ತನ್ನ ಮನಸ್ಸನ್ನು ಭಗವಂತನಲ್ಲೇ ನೆಲೆಸುವಂತೆ ಮಾಡಲು(ಸಂಸ್ಥಿತಿ) ಸಾಧ್ಯವಾಯಿತು. ಈ ಸಂದರ್ಭದಲ್ಲಿ ಪ್ರಾಪಂಚಿಕ ವಿಷಯ ಅವನನ್ನು ಕಾಡಲಿಲ್ಲ. ಎಲ್ಲಾ ಲೇಪಗಳನ್ನು ಕಳಚಿಕೊಂಡು ಭಗವಂತನಲ್ಲೇ ಮನಸ್ಸನ್ನು ನೆಟ್ಟು ದೇಹತ್ಯಾಗ ಮಾಡಿದ ಪರೀಕ್ಷಿತ.
ಮನೋಭಿಮಾನಿ ದೇವತೆಯಾದ ರುದ್ರ ದೇವರ ಅವತಾರವಾದ ಶುಕಾಚಾರ್ಯರ ಶಿಷ್ಯನಾದ ಪರೀಕ್ಷಿತ ಆ ಎತ್ತರಕ್ಕೇರಿರುವುದು ಆಶ್ಚರ್ಯವಲ್ಲ. ಏಕೆಂದರೆ ಗುರುವಿನ ಅನುಗ್ರಹ, ಜೀವಯೋಗ್ಯತೆ, ಎರಡೂ ಆತನನ್ನು ಆ ಎತ್ತರಕ್ಕೇರಿಸಿತು. ಈ ಸ್ಥಿತಿಯಲ್ಲಿ  ಗಂಗಾ ನದಿಯ ಪ್ರಾಕಾರದಲ್ಲೇ ತನ್ನ ದೇಹತ್ಯಾಗ ಮಾಡಿದ ಪರೀಕ್ಷಿತ.

ಉಪವರ್ಣಿತಮೇತದ್ ವಃ  ಪುಣ್ಯಂ ಪಾರೀಕ್ಷಿತಂ ಮಯಾ
ವಾಸುದೇವಕಥೋಪೇತಮಾಖ್ಯಾನಂ ಯದಪೃಚ್ಛಥ


 “ಪುಣ್ಯಕರವಾದ ಪರೀಕ್ಷಿತ ರಾಜನ ಬದುಕಿನ ಬಿತ್ತರವನ್ನು ನಿಮಗೆ ವಿವರಿಸಿದೆ” ಎಂದು ಹೇಳಿದ ಸೂತರು, ಪರೀಕ್ಷಿತ ರಾಜನ ಪುಣ್ಯ ಕಥನವನ್ನು ಚುಟುಕಾಗಿ ಹೇಳಿ ಮುಗಿಸುತ್ತಾರೆ. ಹೀಗೆ ಸಂಕ್ಷಿಪ್ತವಾಗಿ ಕಥೆಯನ್ನು ಕೊನೆಗೊಳಿಸಿ ಶೌನಕಾದಿಗಳಲ್ಲಿ ಕುತೂಹಲ ಕೆರಳಿಸುತ್ತಾರೆ. 

No comments:

Post a Comment