Saturday, August 31, 2013

Shrimad BhAgavata in Kannada -Skandha-01-Ch-18(5)

ಇದೇ ಸಮಯದಲ್ಲಿ ಇತ್ತ ಶಮೀಕ ಮುನಿಯ ಆಶ್ರಮದಲ್ಲಿ ಸತ್ತ ಹಾವನ್ನು ಪರೀಕ್ಷಿತ ತಂದೆಯ ಹೆಗಲ ಮೇಲೆ ಹಾಕಿರುವ ವಿಷಯ ಶಮೀಕನ ಮಗ ಶೃಂಗಿಗೆ ತಿಳಿಯುತ್ತದೆ. ದೂರದಲ್ಲಿ ಋಷಿ ಕುಮಾರರೊಂದಿಗೆ ಆಟವಾಡುತ್ತಿದ್ದ ಆತನಿಗೆ ಈ ಸುದ್ದಿ ಕೇಳಿದ ತಕ್ಷಣ ಕೋಪ ಬರುತ್ತದೆ. ಕೋಪದಲ್ಲಿ ಆತ ಹೇಳುತ್ತಾನೆ: “ರಾಜರುಗಳಿಗೆ ತಪಸ್ಸು ಮಾಡಿ ಶಕ್ತಿ ಕೊಡುವವರು ನಾವು; ನಮ್ಮ ಮನೆ ಕಾಯುವ ನಾಯಿಗಳು ಮನೆಯೊಳಗೆ ಬಂದು ನಮ್ಮ ಮೇಲೇ ಸವಾರಿ ಮಾಡುತ್ತವೆ” ಎಂದು.

ಕೃಷ್ಣೇ ಗತೇ ಭಗವತಿ ಶಾಸ್ತರ್ಯುತ್ಪಥಗಾಮಿನಾಮ್
ತಾನ್ ಭಿನ್ನಸೇತೂನದ್ಯಾಹಂ ಶಾಸ್ಮಿ ಪಶ್ಯತ ಮೇ ಬಲಮ್ ೩೫

 “ಶ್ರೀಕೃಷ್ಣನಿದ್ದಾಗ ಈ ಎಲ್ಲಾ ಕ್ಷತ್ರಿಯರು ಹೆದರಿ ಓಡುತ್ತಿದ್ದರು. ಆಗ ಯಾರೂ ಅನ್ಯಾಯ ಮಾಡುತ್ತಿರಲಿಲ್ಲ. ಏಕೆಂದರೆ ದಾರಿ ತಪ್ಪಿದವರಿಗೆ ಶ್ರೀಕೃಷ್ಣ ತಕ್ಕ ಶಾಸ್ತಿ ಮಾಡುತ್ತಿದ್ದ. ಆದರೆ ಶ್ರೀಕೃಷ್ಣ ಹೊರಟುಹೋದ ಮೇಲೆ, ಇವರಿಗೆಲ್ಲಾ ಬಾರೀ ಧೈರ್ಯ ಬಂದಿದೆ. ಈ ದಾರಿ ತಪ್ಪಿದ ಮಂದಿಗೆ ಶ್ರೀಕೃಷ್ಣ ಇರುತ್ತಿದ್ದರೆ ಏನು ಮಾಡುತ್ತಿದ್ದನೋ, ಅದನ್ನು ನಾನು ಮಾಡುತ್ತೇನೆ” ಎಂದು ಅಹಂಕಾರದಿಂದ ನುಡಿಯುತ್ತಾನೆ ಮುನಿಕುಮಾರ. “ಮುನಿಕುಮಾರನ ಸಿಟ್ಟೆಂದರೆ ಏನೆಂಬುದನ್ನು ನೀವೂ ನೋಡಿ” ಎಂದು ತನ್ನ ಸ್ನೇಹಿತರ ಮುಂದೆ ಬಡಾಯಿ ಕೊಚ್ಚಿಕೊಳ್ಳುತ್ತಾನೆ ಆತ.

ಇತ್ಯುಕ್ತ್ವಾ ರೋಷತಾಮ್ರಾಕ್ಷೋ ವಯಸ್ಯಾನೃಷಿಬಾಲಕಾನ್
ಕೌಶಿಕ್ಯಾಪ ಉಪಸ್ಪೃಶ್ಯ ವಾಗ್ವಜ್ರಂ ವಿಸಸರ್ಜ ಹ ೩೬

ಶೃಂಗಿ ಇನ್ನೂ ಚಿಕ್ಕ ಹುಡುಗ. ಆದರೆ ಬಾಲ್ಯದಿಂದಲೂ ಸಾಧನೆ ಮಾಡಿ ಆತನಲ್ಲಿ ತಪಃಶಕ್ತಿ ಬೆಳೆದಿದೆ. ಇಲ್ಲಿ ಕೋಪಗೊಂಡ ಆತನ ಕಣ್ಣುಗಳು ಕೆಂಪಾಗಿವೆ. ಆತ ಕೋಪದಿಂದ ದುಡುಕಿ ಶಾಪವೆನ್ನುವ ವಜ್ರಾಯುಧವನ್ನು ಪರೀಕ್ಷಿತನತ್ತ ಎಸೆಯುತ್ತಾನೆ.
ಅನೇಕ ಭಾಷ್ಯಾಕಾರರು ಈ ಶ್ಲೋಕದಲ್ಲಿ ಬಂದಿರುವ  “ಕೌಶಿಕ್ಯಾಪ ಉಪಸ್ಪೃಶ್ಯ” ಎನ್ನುವ ಮಾತನ್ನು “ಕೌಶಿಕ ನದಿಯ ನೀರಿನಿಂದ ಆಚಮನ ಮಾಡಿ” ಎಂದು ಅರ್ಥೈಸಿದ್ದಾರೆ. ಆದರೆ ನಮಗೆ ತಿಳಿದಂತೆ ಪರೀಕ್ಷಿತ ರಾಜ ಎಲ್ಲೂ ನೀರನ್ನು ಕಾಣದೇ ಮುನಿಯ ಆಶ್ರಮ ಪ್ರವೇಶಿಸಿದ್ದ. ಇದರಿಂದ ನಮಗೆ ಅಲ್ಲಿ ಹತ್ತಿರದಲ್ಲಿ ಎಲ್ಲೂ ನದಿ ಇರಲಿಲ್ಲ ಎನ್ನುವುದು ತಿಳಿಯುತ್ತದೆ. ಹಾಗಾಗಿ ಆಚಾರ್ಯ ಮಧ್ವರು  “ಕೌಶಿಕ್ಯಾಪ ಉಪಸ್ಪೃಶ್ಯ” ಎಂದರೆ “ಕೌಶಿಕೀ ಕುಶಪಾಣಿಃ ” ಎಂದು ವಿವರಿಸಿದ್ದಾರೆ.  ಅಂದರೆ “ಕುಶದಿಂದ(ದರ್ಭೆಯಿಂದ) ನಿರ್ಮಿತವಾದ (ಕೌಶಿಕೀ) ‘ಪವಿತ್ರ’ವನ್ನು ಕೈಯಲ್ಲಿ ಧರಿಸಿ” ಎಂದರ್ಥ.  ಶೃಂಗಿ ‘ಪವಿತ್ರ’ವನ್ನು ಕೈಯಲ್ಲಿ ಧರಿಸಿ, ಮಂತ್ರಸ್ನಾನ(ಆಚಮನ) ಮಾಡಿ, ಪರೀಕ್ಷಿತನಿಗೆ ಶಾಪವನ್ನಿತ್ತ.
[ಧರ್ಭೆಯ ‘ಪವಿತ್ರ’ವನ್ನು ಕೈಯಲ್ಲಿ ಧರಿಸುವುದರಿಂದ ಅಲ್ಲಿ ದುಷ್ಟ ಶಕ್ತಿಗಳ ಪ್ರವೇಶವಾಗುವುದಿಲ್ಲ. ಇನ್ನು ಆಚಮನ ಎಂದರೆ- ಭಗವಂತನ ನಾಮ ಮತ್ತು ವೇದ ಮಂತ್ರಗಳಿಂದ ಅಂಗಾಂಗಗಳಲ್ಲಿ ಭಗವಂತನ ಚಿಂತನೆ ಮಾಡಿ, ಭಗವಂತ ತನ್ನನ್ನು ಶುದ್ಧಗೊಳಿಸಲಿ ಎಂದು ಅಂತರಂಗದಲ್ಲಿ ಸ್ಮರಣೆ ಮಾಡುವುದು].  

ಇತಿ ಲಂಘಿತಮರ್ಯಾದಂ ತಕ್ಷಕಃ ಸಪ್ತಮೇSಹನಿ
ದಂಕ್ಷ್ಯತಿ ಸ್ಮ ಕುಲಾಂಗಾರಂ ಚೋದಿತೋ ಮೇ ಪಿತೃದ್ರುಹಮ್ ೩೭

 “ಒಬ್ಬ ರಾಜನಾಗಿ ಮಹರ್ಷಿಗಳಿಗೆ ಹೇಗೆ ಗೌರವ ಸಲ್ಲಿಸಬೇಕು ಅನ್ನುವುದನ್ನು ಅರಿಯದೇ, ಸಂಪ್ರದಾಯವನ್ನು ಮುರಿದು, ನನ್ನ ತಂದೆಗೆ ದ್ರೋಹ ಬಗೆದ ಪರೀಕ್ಷಿತನನ್ನು, ಇಂದಿನಿಂದ ಏಳನೇ ದಿನಕ್ಕೆ, ನನ್ನ ಪ್ರೇರಣೆಯಂತೆ, ನಾಗರ ಕಚ್ಚಿ ನಾಶಮಾಡಲಿ” ಎಂದು ಮುನಿಕುಮಾರ ಶಾಪವನ್ನೀಯುತ್ತಾನೆ. ಇಂತಹ ಘೋರ ಶಾಪವನ್ನಿತ್ತ ಬಳಿಕ ಶೃಂಗಿ ತಂದೆಯ ಬಳಿ ಬಂದು ಅಳುತ್ತಾ ಕೂರುತ್ತಾನೆ.
ಸಮಾಧಿ ಸ್ಥಿತಿಯಿಂದ ಈಚೆ ಬಂದ ಶಮೀಕ ಮುನಿಗೆ ತನ್ನ ಹೆಗಲ ಮೇಲೆ ಸತ್ತ ಹಾವಿರುವುದು ತಿಳಿಯುತ್ತದೆ. ಆತ ತಕ್ಷಣ ಆ ಹಾವನ್ನು ದೂರ ಎಸೆಯುತ್ತಾನೆ. ಅದೇ ಸಮಯದಲ್ಲಿ ಆತ ತನ್ನೆದುರು ಅಳುತ್ತಾ ಕುಳಿತಿರುವ ತನ್ನ ಮಗನನ್ನು ಕಂಡು “ಏಕೆ ಅಳುತ್ತಿರುವೆ? ಏನಾಯ್ತು?” ಎಂದು ಕೇಳುತ್ತಾನೆ. ಆಗ ಮುನಿಕುಮಾರ ಹೇಳುತ್ತಾನೆ: “ಒಂದು ಅನ್ಯಾಯ ನಡೆದು ಹೋಯಿತು. ನಮ್ಮ ಕಾಲಿಗೆ ಬೀಳಬೇಕಾದ ಪರೀಕ್ಷಿತ ನಿಮ್ಮ ಹೆಗಲ ಮೇಲೆ ಸತ್ತ ಹಾವನ್ನು ಹಾಕಿ ನಮಗೆ ಅವಮಾನ ಮಾಡಿದ. ಈ ರೀತಿ ನಮ್ಮನ್ನು ಅವಮಾನಗೊಳಿಸಿದ ಆತನಿಗೆ ನಾನು ಶಾಪ ಕೊಟ್ಟೆ” ಎಂದು.
ತನ್ನ ಪುತ್ರ ಶೃಂಗಿಯ ಮಾತನ್ನು ಕೇಳಿಸಿಕೊಂಡ ಶಮೀಕ ಮುನಿ ಹೇಳುತ್ತಾನೆ: “ಎಂತಹಾ ತಪ್ಪು ಮಾಡಿಬಿಟ್ಟೆ? ಪರೀಕ್ಷಿತ ನಮಗೆ ಏನು ಅನ್ಯಾಯ ಮಾಡಿದ? ಆತ ಹಾಕಿರುವುದು ಸತ್ತ ಹಾವನ್ನು. ಆ ಸತ್ತ ಹಾವಿನಿಂದ ನಮ್ಮ ಬದುಕಿನಲ್ಲಿ ಯಾವ ವ್ಯತ್ಯಯವಾಯಿತು? ಏನೂ ಅನ್ಯಾಯ ಮಾಡದ ಅವನಿಗೆ ಇಂತಹ ಘೋರ ಶಾಪವನ್ನಿತ್ತ ನೀನು ಮೂರ್ಖ” ಎಂದು.

ಅರಕ್ಷಮಾಣೇ ನರದೇವನಾಮ್ನಿ ರಥಾಂಗಪಾಣಾವಯಮಂಗ ಲೋಕಃ
ತದಾ ಹಿ ಚೋರಪ್ರಚುರೋ ವಿನಂಕ್ಷ್ಯತ್ಯರಕ್ಷ್ಯಮಾಣೋ ವಿವರೂಥವತ್ ಕ್ಷಣಾತ್ ೪೩

 “ರಾಜಾ ಪ್ರತ್ಯಕ್ಷ ದೇವತಾ” ಎನ್ನುವ ಮಾತೊಂದಿದೆ. ಪರೀಕ್ಷಿತ ರಾಜ ಎಂದರೆ ಅಂತಿಂತಹ ಮನುಷ್ಯನಲ್ಲ. “ಅವನು ನರದೇವ” ಎನ್ನುತ್ತಾನೆ ಶಮೀಕ. ಅಂದರೆ: ಮನುಷ್ಯ ರೂಪದಲ್ಲಿ ರಕ್ಷಣೆ ಮಾಡಲು ಬಂದಿರುವ ದೇವಾಂಶ ಸಂಭೂತ. ಚಕ್ರಪಾಣಿಯಾದ ಭಗವಂತ ಪ್ರತಿಯೊಬ್ಬ ಕ್ಷತ್ರಿಯನಲ್ಲೂ ಕೂಡಾ ‘ರಾಜರಾಜೇಶ್ವರ’ ನಾಮಕನಾಗಿ ಸನ್ನಿಹಿತನಾಗಿದ್ದಾನೆ. “ಹೀಗಿರುವಾಗ ಭಗವದ್ ಸನ್ನಿಧಾನಕ್ಕೆ ಪಾತ್ರನಾಗಿರುವ ಪರೀಕ್ಷಿತನಿಗೆ ನೀನು ಶಾಪ ಕೊಟ್ಟೆಯಲ್ಲಾ” ಎಂದು ಮರುಗುತ್ತಾನೆ ಮುನಿ.  “ನಿನ್ನ ಶಾಪದಿಂದ ಮಹಾತ್ಮನಾದ ಪರೀಕ್ಷಿತ ಏಳು ದಿನಗಳಲ್ಲಿ ಸಾಯುತ್ತಾನೆ. ಆಗ ಈ ದೇಶದಲ್ಲಿ ಅರಾಜಕತೆ ಉಂಟಾಗುತ್ತದೆ. ಇದರಿಂದಾಗಿ ದೇಶದಾದ್ಯಂತ ಕಳ್ಳ-ಕಾಕರು ತುಂಬಿ ದೇಶವನ್ನು ದೋಚುತ್ತಾರೆ. ಯಾರೂ ಮರ್ಯಾದೆಯಿಂದ ಬದುಕಲು ಸಾಧ್ಯವಿಲ್ಲದಾಗುತ್ತದೆ. ಇಂತಹ ಸ್ಥಿತಿಗೆ ಈ ದೇಶವನ್ನು ತಳ್ಳಿದೆ ನೀನು” ಎನ್ನುತ್ತಾನೆ ಶಮೀಕ.
ಈ ಶ್ಲೋಕದಲ್ಲಿ ‘ವಿವರೂಥ’ ಎನ್ನುವ ಪದ ಬಳಕೆಯಾಗಿದೆ. ಇದೊಂದು ಅಪೂರ್ವವಾದ ಶಬ್ದ. ಸಂಸ್ಕೃತದಲ್ಲಿ ‘ವರೂಥಿನಿ’ ಎಂದರೆ ಸೇನೆ. ‘ವರೂಥ’ ಎಂದರೆ ಸಾಮಾನ್ಯವಾಗಿ ರಕ್ಷಣೆ ಎಂದರ್ಥ. ಸೇನೆಯ ಮೂಲಕ ರಕ್ಷಣೆ ಅಥವಾ ವ್ಯೂಹ ರಚಿಸಿ ಸೇನೆಗೆ ರಕ್ಷಣೆ ನೀಡುವುದನ್ನು ‘ವರೂಥ’ ಎನ್ನುತ್ತಾರೆ. ಅಭೇಧ್ಯ ಕೋಟೆ  ‘ವರೂಥ’ . ಒಟ್ಟಿನಲ್ಲಿ ವರೂಥ ಎಂದರೆ ಆವರಣ ಅಥವಾ ತಡೆ. ಕಳ್ಳ-ಕಾಕರನ್ನು ತಡೆಯುವ ವ್ಯವಸ್ಥೆ ಇಲ್ಲದಿರುವುದು ‘ವಿವರೂಥ’.
ರಕ್ಷಕನಾದ ರಾಜ ಇಲ್ಲದಾದಾಗ ಆ ದೇಶ ನಾಶವಾಗುತ್ತದೆ. “ನಿನ್ನ ಶಾಪದಿಂದಾಗಿ ಇಡೀ ದೇಶಕ್ಕೆ ಅನ್ಯಾಯವಾಯಿತು. ಪರೀಕ್ಷಿತ ರಾಜ  ಧರ್ಮದ ಪ್ರಕಾರ ದೇಶವನ್ನು ರಕ್ಷಣೆ ಮಾಡುತ್ತಿರುವವನು. ಆತನಿಂದಾಗಿ ನಾವಿಲ್ಲಿ ನಿರಾತಂಕವಾಗಿ ತಪಸ್ಸು ಮಾಡುತ್ತಿದ್ದೇವೆ. ಅಂತಹ ಸಜ್ಜನ ಸಾಯುವಂತೆ ಮಾಡಿ ಬಹಳ ದೊಡ್ಡ ಅನ್ಯಾಯ ಮಾಡಿದೆ ನೀನು” ಎನ್ನುತ್ತಾನೆ ಶಮೀಕ.

ತದದ್ಯ ನಃ ಪಾಪಮುಪೈತ್ಯನನ್ವಯಂ ಯನ್ನಷ್ಟನಾಥಸ್ಯ ಪಶೋರ್ವಿಲುಂಪಕಾಃ
ಪರಸ್ಪರಂ ಘ್ನಂತಿ ಶಪಂತಿ ವೃಂಜತೇ ಪಶೂನ್ ಸ್ತ್ರೀಯೋSರ್ಥಾನ್ ಪುರುದಸ್ಯವೋ ಜನಾಃ ೪೪

“ನೀನು ಮಾಡಿದ ಈ ತಪ್ಪಿನಿಂದಾಗಿ ನಾನು ಪರಿಹಾರವಿಲ್ಲದ ಪಾಪಕ್ಕೆ ಬಲಿಯಾದೆ. ಈ ತಪ್ಪಿಗೆ ಪ್ರಾಯಶ್ಚಿತವಿಲ್ಲ. ನೇತಾರನಿಲ್ಲದ ರಾಷ್ಟ್ರವನ್ನು ದರೋಡೆಕೋರರು ದೋಚುತ್ತಾರೆ. ಪುಂಡ-ಪೋಕರಿಂದ ದೇಶದ ನಾಗರೀಕ ವ್ಯವಸ್ಥೆ ಅಸ್ತವ್ಯಸ್ತವಾಗುತ್ತದೆ. ಅವರು ಪಶುಗಳನ್ನೂ, ಸ್ತ್ರೀಯರನ್ನೂ ಮತ್ತು ಸಂಪತ್ತನ್ನೂ ದೋಚುತ್ತಾರೆ. ಜನ ಒಬ್ಬರಿಗೊಬ್ಬರು ಜಗಳಾಡಿಕೊಂಡು ಶಾಪ ಹಾಕಿಕೊಂಡು ಬದುಕುತ್ತಾರೆ.    ಇಂತಹ ಘೋರ ಅಪರಾಧ ಮಾಡಿದೆಯಲ್ಲಾ” ಎಂದು ಮಗನನ್ನು ಬಯ್ಯುತ್ತಾನೆ ಶಮೀಕ ಮುನಿ.

ಈ ಶ್ಲೋಕದಲ್ಲಿ ‘ಪಶೋರ್ವಿಲುಂಪಕಾಃ’ ಎನ್ನುವ ಪದ ಬಳಕೆಯನ್ನು ಮೇಲ್ನೋಟದಲ್ಲಿ ನೋಡಿದರೆ “ದರೋಡೆಕೋರರು ಪಶುಗಳನ್ನು ದೋಚುತ್ತಾರೆ” ಎಂದು ಹೇಳಿದಂತೆ ಕಾಣುತ್ತದೆ. ಆದರೆ ಇಲ್ಲಿ  ‘ಪಶು’ ಎನ್ನುವ ಪದಕ್ಕೆ ಒಂದು ವಿಶಿಷ್ಠವಾದ ಅರ್ಥ ವಿವರಣೆಯನ್ನು ಆಚಾರ್ಯ ಮಧ್ವರ ತಾತ್ಪರ್ಯ ನಿರ್ಣಯದಲ್ಲಿ ಕಾಣುತ್ತೇವೆ. ಅಲ್ಲಿ ಆಚಾರ್ಯರು ‘ಪಶು’ ಶಬ್ದಕ್ಕೆ ಕೊಶವನ್ನು  ನೀಡಿದ್ದಾರೆ. ವಿಡ್ ರಾಷ್ಟ್ರಂ ಪಶುರುತ್ಸೇಕೋ ಭ್ರಮರಶ್ಚೇತಿ ಕಥ್ಯತೇ ಅಂದರೆ ವಿಡ್, ರಾಷ್ಟ್ರ, ಪಶು, ಉತ್ಸೇಕ  ಮತ್ತು ಭ್ರಮರ  ಇವು ಸಮಾನಾರ್ಥಕ ಪದಗಳು ಎಂದರ್ಥ. ಆದ್ದರಿಂದ ‘ಪಶೋರ್ವಿಲುಂಪಕಾಃ’ ಎಂದರೆ ಪಶುಗಳನ್ನು ದೋಚುತ್ತಾರೆ ಎಂದರ್ಥವಲ್ಲ, ರಾಷ್ಟ್ರವನ್ನು ದೋಚುತ್ತಾರೆ ಎಂದರ್ಥ.

No comments:

Post a Comment