ಅಹಂ ಹಿ ಪೃಷ್ಟೋSಸ್ಯ ಗುಣಾನ್ ಭವದ್ಭಿರಾಚಕ್ಷ ಆತ್ಮಾವಗಮೋSತ್ರ ಯಾವಾನ್ ।
ನಭಃ ಪತಂತ್ಯಾತ್ಮಸಮಂ
ಪತತ್ತ್ರಿಣಸ್ತಥಾ ಸಮಂ ವಿಷ್ಣುಗತಿಂ ವಿಪಶ್ಚಿತಃ ॥೨೩॥
“ಭಗವಂತನ ಕಥೆಯನ್ನು
ಕೇಳುವುದು ಎಷ್ಟು ಆನಂದವೋ, ಹೇಳುವುದೂ ಅಷ್ಟೇ ಆನಂದ. ನೀವು ಪರೀಕ್ಷಿತ ರಾಜನ ಕಥೆಯನ್ನು ಕೇಳಬೇಕು
ಎನ್ನುವ ಅಭಿಲಾಷೆಯನ್ನು ಮುಂದಿಟ್ಟಿದ್ದೀರಿ. ನಾನು ನನಗೆ ತಿಳಿದಷ್ಟನ್ನು ನಿಮಗೆ ಹೇಳುತ್ತೇನೆ”
ಎನ್ನುತ್ತಾರೆ ಉಗ್ರಶ್ರವಸ್ಸು. ಈ ಮಾತಿನಲ್ಲಿ ಉಗ್ರಶ್ರವಸ್ಸಿನ ಸೌಜನ್ಯವನ್ನು ನಾವು ಗಮನಿಸಬೇಕು.
ವೇದವ್ಯಾಸರ ಮತ್ತು ರೋಮಹರ್ಷಣರ ಒಡನಾಟದಲ್ಲಿದ್ದು, ಅನೇಕ ಪುರಾಣ ಪ್ರವಚನ ಮಾಡಿದ್ದ ಮಹಾಜ್ಞಾನಿ
ಉಗ್ರಶ್ರವಸ್ಸು ಇಲ್ಲಿ ಹೇಳುತ್ತಾರೆ: “ಅನಂತ ಆಕಾಶದಲ್ಲಿ ಹೇಗೆ ಪ್ರತಿಯೊಂದು ಪಕ್ಷಿಗಳು ತಮ್ಮ
ಸಾಮರ್ಥ್ಯಕ್ಕೆ ತಕ್ಕಂತೆ ಹಾರುತ್ತವೋ- ಹಾಗೆ, ಭಗವಂತನ ಮತ್ತು ಭಗವದ್ ಭಕ್ತರ ಅನಂತ ಮಹಿಮೆಯನ್ನು ಯಥಾಶಕ್ತಿ
ನಿಮಗೆ ಹೇಳುತ್ತೇನೆ” ಎಂದು. ಈ ಮಾತು ಪರೀಕ್ಷಿತ
ರಾಜನ ಎತ್ತರವನ್ನೂ ಸೂಚಿಸುತ್ತದೆ.
ಈ ಹಿಂದೆ ಹೇಳಿದಂತೆ
ಪರೀಕ್ಷಿತ ರಾಜ ತನ್ನ ಅರವತ್ತೈದನೆ ವಯಸ್ಸಿನ ತನಕ ಧರ್ಮದಿಂದ ರಾಜ್ಯಭಾರ ಮಾಡುತ್ತಾನೆ. ಹೀಗೆ
ರಾಜ್ಯಭಾರ ನಡೆಸುತ್ತಿರುವಾಗ ಒಂದು ವಿಚಿತ್ರ ಘಟನೆ ನಡೆಯುತ್ತದೆ. ಯಾರು ಕಲಿಯನ್ನು ನಿಗ್ರಹ
ಮಾಡಿದನೋ, ಅಂತಹ ಪರೀಕ್ಷಿತ ರಾಜನೊಳಗೆ ಕಲಿಪ್ರವೇಶವಾಗಿ, ಅವನ ಸಾವಿಗೆ ಕಾರಣವಾಗುವ ಘಟನೆ
ನಡೆಯುತ್ತದೆ!
ಏಕದಾ ಧನುರುದ್ಯಮ್ಯ
ವಿಚರನ್ ಮೃಗಯಾಂ ವನೇ ।
ಮೃಗಾನನುಗತಃ ಶ್ರಾಂತಃ
ಕ್ಷುಧಿತಸ್ತೃಷಿತೋ ಭೃಶಮ್ ॥೨೪॥
ಒಮ್ಮೆ ಮೃಗ ಬೇಟೆಗಾಗಿ ಪರೀಕ್ಷಿತ ಕಾಡಿಗೆ ಹೋಗುತ್ತಾನೆ. [ಬೇಟೆಯಲ್ಲಿ ಎರಡು ವಿಧ. ಒಂದು ಮೋಜಿಗಾಗಿ ಬೇಟೆ, ಇನ್ನೊಂದು ಪ್ರಜಾರಕ್ಷಣೆಗಾಗಿ ಬೇಟೆ. ಸಾಮಾನ್ಯವಾಗಿ ಕ್ಷತ್ರಿಯರು ಮೋಜಿಗಾಗಿ ಬೇಟೆಯಾಡುತ್ತಿರಲಿಲ್ಲ. ಬದಲಿಗೆ ಕಾಡು ಪ್ರಾಣಿಗಳಿಂದ ಜನರನ್ನು ರಕ್ಷಿಸುವುದಕ್ಕೋಸ್ಕರ ಬೇಟೆಯಾಡುತ್ತಿದ್ದರು]. ಹೀಗೆ ಬೇಟೆಗೆ ಹೋಗಿದ್ದ ಪರೀಕ್ಷಿತನಿಗೆ ತುಂಬಾ ಹಸಿವು ಮತ್ತು ಬಾಯಾರಿಕೆಯಾಗುತ್ತದೆ.
ಜಲಾಶಯಮಚಕ್ಷಾಣಃ
ಪ್ರವಿವೇಶ ಸ ಆಶ್ರಮಮ್ ।
ದದೃಶೇ ಮುನಿಮಾಸೀನಂ
ಶಾಂತಂ ಮೀಲಿತಲೋಚನಮ್ ॥೨೫॥
ಹಸಿವು
ಬಾಯಾರಿಕೆಯಿಂದ ತತ್ತರಿಸಿದ ರಾಜನಿಗೆ ಎಲ್ಲಿಯೂ ಜಲಾಶಯ ಕಾಣ ಸಿಗುವುದಿಲ್ಲ. ಹಾಗಾಗಿ ಆತ ನೀರನ್ನು
ಅರಸುತ್ತಾ ಸಾಗುತ್ತಿರುತ್ತಾನೆ. ಹೀಗೆ ಸಾಗುತ್ತಿರುವಾಗ ಆತನಿಗೊಂದು ಋಷಿ ಆಶ್ರಮ ಕಾಣಸಿಗುತ್ತದೆ.
ತಕ್ಷಣ ರಾಜ ಆ ಆಶ್ರಮದ ಬಳಿಗೆ ಬರುತ್ತಾನೆ. ಅಲ್ಲಿ ಆತನಿಗೆ ಯಾರೂ ಕಾಣಿಸುವುದಿಲ್ಲ. ಆದರೆ ಒಬ್ಬ
ಋಷಿ ಮಾತ್ರ ಆಶ್ರಮದಿಂದ ಹೊರಗೆ ಧ್ಯಾನದಲ್ಲಿ ಆತ್ಮಾನಂದವನ್ನು ಪಡೆಯುತ್ತಿರುವುದು ಕಾಣಿಸುತ್ತದೆ.
ಪ್ರತಿರುದ್ಧೇಂದ್ರಿಯಪ್ರಾಣಮನೋಬುದ್ಧಿಮುಪಾರತಮ್ ।
ಸ್ಥಾನತ್ರಯಾತ್
ಪರಂ ಪ್ರಾಪ್ತಂ ಬ್ರಹ್ಮಭೂತಮವಿಕ್ರಿಯಮ್ ॥೨೬॥
ಧ್ಯಾನ ಮಗ್ನನಾಗಿರುವ
ಶಮೀಕ ಮುನಿಯ ಧ್ಯಾನ ಸ್ಥಿತಿ ಹೇಗಿತ್ತು ಎನ್ನುವುದನ್ನು
ಈ ಶ್ಲೋಕದಲ್ಲಿ ವಿವರಿಸಲಾಗಿದೆ. ಮನಸ್ಸು-ಬುದ್ಧಿ-ಇಂದ್ರಿಯಗಳನ್ನು ಸ್ಥಗನಗೊಳಿಸಿ, ತಮ್ಮ ಆತ್ಮಸ್ವರೂಪದಿಂದ
ಜ್ಞಾನಾನಂದಮಯನಾದ ಭಗವಂತನನ್ನು ಅವರು ಅನುಭವಿಸುತ್ತಿದ್ದರು. ಅವರಿಗೆ ಬಾಹ್ಯ ಪ್ರಪಂಚದ ಯಾವ ಎಚ್ಚರವೂ
ಇರಲಿಲ್ಲ. ಇದು ಎಚ್ಚರ-ಕನಸು-ನಿದ್ದೆಯಿಂದ ಆಚೆಗಿನ ಸ್ವರೂಪಭೂತ ಸ್ಥಿತಿ. ಇದನ್ನು ಉನ್ಮನೀಭಾವ ಎನ್ನುತ್ತಾರೆ.
ಇದು ಸ್ವರೂಪಭೂತ ಆತ್ಮದಿಂದ ಸ್ವರೂಪಭೂತನಾದ ಭಗವಂತನ ವಾಸುದೇವ ರೂಪವನ್ನು ಕಾಣುವ ಅಪೂರ್ವ ಸಮಾಧಿ-ಸ್ಥಿತಿ.
ಶಮೀಕ ಅನಾಯಾಸವಾಗಿ,
ನಿರ್ವೀಕಾರ-ನಿಶ್ಚಲನಾಗಿ ಭಗವಂತನಲ್ಲಿ ನೆಲೆ ನಿಂತಿರುವುದು, ಹಸಿವು-ಬಾಯಾರಿಕೆಯಿಂದ ತತ್ತರಿಸಿದ ಪರೀಕ್ಷಿತನಿಗೆ
ತಿಳಿಯದಾಗುತ್ತದೆ. ‘ವಿನಾಶ ಕಾಲೇ ವಿಪರೀತ ಬುದ್ಧಿ’ ಎನ್ನುವಂತೆ- ಆತನಿಗೆ “ಈ ಮುನಿ ಮನೆಗೆ ಬಂದ ಅತಿಥಿಯನ್ನು
ಸತ್ಕರಿಸದೇ ಧ್ಯಾನದ ನಾಟಕವಾಡುತ್ತಾ ಕುಳಿತಿದ್ದಾನೆ” ಎನ್ನುವ ತಪ್ಪು ಕಲ್ಪನೆ ಬರುತ್ತದೆ.
ಸ ತಸ್ಯ ಬ್ರಹ್ಮಋಷೇರಂಸೇ
ಗತಾಸುಮುರಗಂ ರುಷಾ ।
ವಿನಿರ್ಗಚ್ಛನ್
ಧನುಷ್ಕೋಟ್ಯಾ ನಿಧಾಯ ಪುರಮಾಗತಃ ॥೩೦॥
ಎಲ್ಲವೂ ವಿಧಿಯ ವ್ಯವಸ್ಥೆ
ಎನ್ನುವಂತೆ- ತಪ್ಪು ತಿಳುವಳಿಕೆಯಿಂದ ಕೋಪಗೊಂಡ ಪರೀಕ್ಷಿತನಿಗೆ ಅಲ್ಲೇ ಸಮೀಪದಲ್ಲಿ ಒಂದು ಸತ್ತ ಹಾವು
ಕಾಣಿಸುತ್ತದೆ. ಸಿಟ್ಟಿನಲ್ಲಿ ವಿವೇಕ ಕಳೆದುಕೊಂಡ ಆತ “ಧ್ಯಾನದ ನಾಟಕವಾಡುತ್ತಿರುವ ಈ ಋಷಿಗೆ ತಕ್ಕ ಪಾಠ
ಕಲಿಸಬೇಕು” ಎಂದುಕೊಂಡು, ಆ ಸತ್ತ ಹಾವನ್ನು ಎತ್ತಿ ಋಷಿಯ ಕೊರಳಿಗೆ ಹಾಕಿ ಊರಿಗೆ ಹಿಂದಿರುಗುತ್ತಾನೆ.
No comments:
Post a Comment