Friday, August 16, 2013

Shrimad BhAgavata in Kannada -Skandha-01-Ch-18(2)

ಋಷಯ ಊಚುಃ--
ತುಲಯಾಮ ಲವೇನಾಪಿ ನ ಸ್ವರ್ಗಂ ನಾಪುನರ್ಭವಮ್
ಭಗವತ್ಸಂಗಿಸಂಗಸ್ಯ ಮರ್ತ್ಯಾನಾಂ ಕಿಮುತಾಶಿಷಃ ೧೩

ಸೂತರು ಕಥೆಯನ್ನು ಕೊನೆಗೊಳಿಸಿದಾಗ ಶೌನಕಾದಿಗಳು ಹೇಳುತ್ತಾರೆ: “ನೀವು ಚುಟುಕಾಗಿ ಈ ಪುಣ್ಯ ಕಥೆಯನ್ನು ಹೇಳಿ ನಮ್ಮ ಕುತೂಹಲ ಕೆರಳಿಸಿದಿರಿ. ಸಾಕು ಅನಿಸುವಂತೆ ಹೇಳದೇ, ಇನ್ನೂ ಬೇಕು ಎನಿಸುವಂತೆ ಹೇಳಿದಿರಿ. ಭಗವದ್ಭಕ್ತರ ಒಡನಾಟ ಸ್ವರ್ಗ ಸುಖಕ್ಕಿಂತ ಮೇಲು. ಅಷ್ಟೇ ಅಲ್ಲ, ಮೋಕ್ಷ ತಡವಾದರೂ ತೊಂದರೆ ಇಲ್ಲ, ಭಗವದ್ಭಕ್ತರ ಒಡನಾಟದಲ್ಲೇ ಸ್ವಲ್ಪ ಕಾಲ ಇರಬೇಕು ಎನ್ನುವ ಸಂಕಲ್ಪ ನಮ್ಮದು. ಸ್ವರ್ಗ-ಮೊಕ್ಷಗಳೇ ಜ್ಞಾನಿಗಳ ಒಡನಾಟಕ್ಕೆ ಸಾಟಿಯಲ್ಲದಿರುವಾಗ ಇನ್ನು ಐಹಿಕ ಕ್ಷುದ್ರ ಕಾಮನೆಗಳು ಯಾವ ಲೆಕ್ಕ?”  ಎಂದು.  
ಮೇಲ್ನೋಟಕ್ಕೆ ಈ ಶ್ಲೋಕ ಜ್ಞಾನದ ಮಹತ್ವ ಮತ್ತು  ಜ್ಞಾನಿಗಳ ಒಡನಾಟವನ್ನು  ಪ್ರಶಂಸೆ ಮಾಡುವ ಆಲಂಕಾರಿಕ ಶ್ಲೋಕ ಎನಿಸುತ್ತದೆ. ಏಕೆಂದರೆ ಎಲ್ಲಾ ಜ್ಞಾನಗಳಿರುವುದೂ ಮೋಕ್ಷ ಸಾಧನೆಗಾಗಿ. ಹೀಗಿರುವಾಗ ಜ್ಞಾನದ ಮುಂದೆ ಮೋಕ್ಷವೇ ಬೇಡ ಎಂದರೆ ಏನರ್ಥ?   ಆದರೆ ಇದು ಕೇವಲ ಆಲಂಕಾರಿಕ ಮಾತಲ್ಲ. ಏಕೆಂದರೆ ಇದು ಶಾಸ್ತ್ರ, ಕಾವ್ಯವಲ್ಲ. ಶಾಸ್ತ್ರದಲ್ಲಿ ಅಲಂಕಾರಕ್ಕೋಸ್ಕರ ಏನನ್ನೂ ಹೇಳುವುದಿಲ್ಲ. ಅಲ್ಲಿ ಪ್ರತಿಯೊಂದು ಮಾತಿನ ಹಿಂದೆ ಒಂದು ಪ್ರಮೇಯವಿರುತ್ತದೆ. ಇದನ್ನು ತಾತ್ಪರ್ಯ ನಿರ್ಣಯದಲ್ಲಿ ವಿವರಿಸುತ್ತಾ ಆಚಾರ್ಯ ಮಧ್ವರು ಹೇಳುತ್ತಾರೆ:

ಸಮ್ಯಕ್ ಸ್ವರೂಪಸ್ಯಾವ್ಯಕ್ತಿರಭಾವೋ ಜನನಸ್ಯ ಚ
ಅಲ್ಪಯತ್ನಾತ್ ತತೋ ವೃದ್ಧಿ ಹೇತೋ ಸತ್ಸಂಗತಿರ್ವರಾ ಇತಿ ವಾಯುಪ್ರೋಕ್ತೇ

ಮೊಕ್ಷಕ್ಕಿಂತ ಸಜ್ಜನರ ಒಡನಾಟ ಕೆಲವು ದೃಷ್ಟಿಯಿಂದ ಶ್ರೇಷ್ಠ ಎನ್ನುವುದು ಯಥಾರ್ಥ ಸಂಗತಿ. ಏಕೆಂದರೆ ಜ್ಞಾನಿಗಳ ಸಹವಾಸದಿಂದ  ಇನ್ನಷ್ಟು ಹೆಚ್ಚು ಜ್ಞಾನವನ್ನು ಗಳಿಸಿ, ಇನ್ನಷ್ಟು ಹೆಚ್ಚು ಪುಣ್ಯವನ್ನು ಗಳಿಸಿ,  ಆಮೇಲೆ ಮೋಕ್ಷಕ್ಕೆ ಹೋದರೆ ಆನಂದವೃದ್ಧಿ. ಅವಸರದಲ್ಲಿ ಹೋದರೆ ಆ ಹೆಚ್ಚಿನ ಆನಂದವನ್ನು ನಾವು ಕಳೆದುಕೊಳ್ಳಬೇಕಾಗಬಹುದು.  ನಮ್ಮ ಸ್ವರೂಪದಲ್ಲಿ ಎಷ್ಟು ಆನಂದ ತುಂಬಿಕೊಂಡಿದೆಯೋ, ಅದರ ಪೂರ್ಣ ಅಭಿವ್ಯಕ್ತಿ ಆಗಬೇಕಿದ್ದರೆ,  ಜ್ಞಾನಿಗಳಿಂದ ಪೂರ್ತಿ ಜ್ಞಾನವನ್ನು ಪಡೆಯಬೇಕು. ಈ ರೀತಿ ಹೆಚ್ಚಿನ ಜ್ಞಾನವನ್ನು ಪಡೆಯದೆಯೂ ಕೂಡಾ, ಹುಟ್ಟು-ಸಾವಿಲ್ಲದ ಮೋಕ್ಷ ಪಡೆಯಬಹುದು. ಆದರೆ ಮೋಕ್ಷದಲ್ಲಿ ಆನಂದದ ಪರಿಮಾಣವನ್ನು ಹೆಚ್ಚಿಸಿಕೊಳ್ಳಬೇಕಾದರೆ, ಜ್ಞಾನಿಗಳ ಒಡನಾಟದಿಂದ  ನಮ್ಮ ಜ್ಞಾನದ ಪರಿಮಾಣವನ್ನು ಹೆಚ್ಚಿಸಿಕೊಳ್ಳಬೇಕು. ಹೀಗೆ ‘ಜ್ಞಾನವೃದ್ಧಿಯಿಂದ ಮೋಕ್ಷದಲ್ಲಿ ಆನಂದವೃದ್ಧಿ ಇರುವುದರಿಂದ, ಮೊಕ್ಷಕ್ಕಿಂತ ಹೆಚ್ಚಾಗಿ ಜ್ಞಾನಿಗಳ ಒಡನಾಟ ಬೇಕು’ ಎನ್ನುವುದು ಮೇಲಿನ ಶ್ಲೋಕದ ತಾತ್ಪರ್ಯ. ಇದನ್ನು ಹೂವಿನ ದೃಷ್ಟಾಂತದೊಂದಿಗೆ ಹೇಳಬೇಕೆಂದರೆ: ಹೂ ಅರೆ  ಮೊಗ್ಗಿನಂತೆ ಅರಳುವ ಸ್ಥಿತಿ ಮತ್ತು ಪೂರ್ಣ ಅರಳುವ ಸ್ಥಿತಿ. ಅರೆ ಮೊಗ್ಗಿನ ಸ್ಥಿತಿ ಕೂಡಾ ವಿಕಸನ ಹೌದು. ಆದರೆ ಹೂ ಪೂರ್ಣವಾಗಿ ಅರಳಬೇಕು. ಹೀಗೆ ನಾವು  ಜ್ಞಾನಿಗಳ ಒಡನಾಟದಿಂದ ಜ್ಞಾನ ಸಾಧನೆಯ ಪೂರ್ಣತೆಯನ್ನು ಪಡೆಯಬೇಕು. ಅದು ಎಲ್ಲವುದಕ್ಕಿಂತ ಶ್ರೇಷ್ಠ.  ಜ್ಞಾನ ಎಲ್ಲಕ್ಕಿಂತ ಮಿಗಿಲು. ಅದಕ್ಕಿಂತ ಮಿಗಿಲಾದ ಸಂಪತ್ತು ಜೀವನದಲ್ಲಿಲ್ಲ. ಭಗವಂತನನ್ನು ಬಲ್ಲವರರಿಂದ ನಾವು ಕೇಳಿ ತಿಳಿಯಬೇಕು. ಹಾಗಾಗಿ “ಚುಟುಕಾಗಿ ಹೇಳದೇ ವಿಸ್ತಾರವಾಗಿ ಹೇಳಿ” ಎಂದು ಶೌನಕಾದಿಗಳು ಸೂತರನ್ನು ಪ್ರಾರ್ಥಿಸಿಕೊಳ್ಳುತ್ತಾರೆ.  

ತನ್ನಃ ಪರಂ ಪುಣ್ಯಮಸಂವೃತಾರ್ಥಮಾಖ್ಯಾನಮತ್ಯದ್ಭುತಯೋಗನಿಷ್ಠಮ್
ಆಖ್ಯಾಹ್ಯನಂತಾಚರಿತೋಪಪನ್ನಂ ಪಾರೀಕ್ಷಿತಂ ಭಾಗವತಾಭಿರಾಮಮ್ ೧೭

ಭಗವಂತನ ಭಕ್ತರ ಕಥೆಯನ್ನು ಕೇಳುವುದು ಎಂದರೆ ಭಗವಂತನ ಮಹಿಮೆಯನ್ನು ಕೇಳಿದಂತೆ. ಏಕೆಂದರೆ ಭಗವಂತನ ಭಕ್ತರ ಕಥೆಯ ಹಿಂದಿರುವುದು ಅನಂತನಾದ ಭಗವಂತನೇ. ಭಗವಂತನ ಭಕ್ತರ ಮಹಿಮೆ ಎಂದರೆ ಅದು ಅವರಿಗೆ ಭಗವಂತನ ಅನುಗ್ರಹದಿಂದಲೇ  ಬಂದಿರುವುದು. “ಹೀಗಾಗಿ ನಮಗೆ ಪರೀಕ್ಷಿತನ ಕಥೆ ಎಂದರೆ ಅದು ಭಗವಂತನ ಕಥೆಯೇ ಆಗಿದೆ” ಎನ್ನುತ್ತಾರೆ ಶೌನಕಾದಿಗಳು.
ಭಾಗವತರಿಗೆ(ಭಗವದ್ಭಕ್ತರಿಗೆ) ಮಹಾ ಸಂತೋಷದ ವಿಷಯ ಎಂದರೆ- ಭಗವಂತನ ಭಕ್ತಿಯಿಂದ ಎತ್ತರಕ್ಕೇರಿದ ಜ್ಞಾನಿಗಳ ಕಥೆ ಕೇಳುವುದು. “ ಈ ನೆಲೆಯಿಂದ ನಮಗೆ ಪರೀಕ್ಷಿತ ರಾಜ ಕೊನೆಯ ಕಾಲದಲ್ಲಿ ಎಲ್ಲ ಸಂಗವನ್ನು ತೊರೆದು, ದೇಹತ್ಯಾಗ ಮಾಡಿದ ಘಟನೆಯನ್ನು ವಿವರವಾಗಿ ಹೇಳಿ” ಎಂದು ಉಗ್ರಶ್ರವಸ್ಸರನ್ನು ಶೌನಕಾದಿಗಳು ಪ್ರಾರ್ಥಿಸಿಕೊಳ್ಳುತ್ತಾರೆ.

ಸೂತ ಉವಾಚ--
ಅಹೋ ವಯಂ ಜನ್ಮಭೃತೋ ಮಹಾತ್ಮನ್ ವೃದ್ಧಾನುವೃತ್ತ್ಯಾSಪಿ ವಿಲೋಮಜಾತಾಃ
ದೌಷ್ಕುಲ್ಯಮಾಧಿಂ ವಿಧುನೋತಿ ಶೀಘ್ರಂ ಮಹತ್ತಮಾನಾಮಭಿಧಾನಯೋಗಃ ೧೮

ಶೌನಕಾದಿಗಳ ಮಾತನ್ನು ಕೇಳಿ ಸೂತರು ಹೇಳುತ್ತಾರೆ: “ನಿಜ, ತುಂಬಾ ಎತ್ತರಕ್ಕೇರಿದವರ ಬದುಕಿನ ಬಿತ್ತರವನ್ನು ಕೇಳುವುದರಿಂದ ನಮ್ಮಲ್ಲಿರುವ ಮನೋರೋಗ ಪರಿಹಾರವಾಗುತ್ತದೆ” ಎಂದು. ನಮಗೆ ತಿಳಿದಂತೆ ಎಲ್ಲಾ ಸಮಸ್ಯೆಗೂ ಮೂಲ ಕಾರಣ ಮನೋರೋಗ. ಹಾಗಾಗಿ ಎಲ್ಲಾ ಸಮಸ್ಯೆಗಳಿಗೂ ಏಕಮಾತ್ರ ಔಷಧ ಎಂದರೆ ಬದುಕಿನಲ್ಲಿ ಎತ್ತರಕ್ಕೇರಿದವರ ಜೀವನ ಕಥನವನ್ನು ಕೇಳಿ ಕಲಿಯುವುದು. ಅದರಿಂದ ನಮ್ಮ ಬದುಕು ಸುಭದ್ರವಾಗುತ್ತದೆ.  ಅದರಲ್ಲೂ ಮುಖ್ಯವಾಗಿ ಹೀನ ಕುಲದಲ್ಲಿ ಹುಟ್ಟಿದವರು ಈ ಕಥೆಯನ್ನು ಮೊದಲು ಕೇಳಬೇಕು. ಏಕೆಂದರೆ ಹೀನ ಕುಲ ಎಂದರೆ ಭಗವಂತನ ಅರಿವು ಇಲ್ಲದಿರುವುದು. ಆ ಅರಿವು ಬಂದಾಗ ಅವರು ಎತ್ತರಕ್ಕೇರುತ್ತಾರೆ.

ಕುತಃ ಪುನರ್ಗೃಣತೋ ನಾಮ ತಸ್ಯ ಮಹತ್ತಮೈಕಾಂತಪರಾಯಣಸ್ಯ
ಯೋSನಂತಶಕ್ತಿರ್ಭಗವಾನನಂತೋ ಮಹದ್ಗುಣತ್ವಾದ್ ಯಮನಂತಮಾಹುಃ ೧೯

ಭಗವಂತನನ್ನು ಅರಿತವರ ಬಗೆಗೆ ಕೇಳಿದಾಗಲೇ ನಾವು ಮಾನಸಿಕ ರೋಗದಿಂದ ಸ್ವಸ್ತರಾಗುತ್ತೇವೆ. ಹೀಗಿರುವಾಗ ಭಗವಂತನ ನಾಮಸ್ಮರಣೆಯನ್ನು ಭಕ್ತಿಯಿಂದ ಮಾಡಿದರೆ ಯಾವ ಮನೋರೋಗ ಬರಲು ಸಾಧ್ಯ? ಮಹಾತ್ಮರಿಗೂ ಏಕಮಾತ್ರ ಆಶ್ರಯನಾದ ಭಗವಂತನನ್ನು ನೆನೆಯುವವರಿಗೆ ಯಾವ ಚಿಂತೆ ಇರಲು ಸಾಧ್ಯ? ಭಗವಂತ ದೇಶ-ಕಾಲಗಳಿಂದ ಅನಂತ; ಆತ ಅನಂತ ಗುಣಪೂರ್ಣ. ಇಂತಹ ಅನಂತಶಕ್ತಿಯನ್ನು ಚಿಂತಿಸಿದವರಿಗೆ ಬದುಕಿನಲ್ಲಿ ಯಾವ ಭಯ ಕಾಡುವುದು ಸಾಧ್ಯ?  “ಹಾಗಾಗಿ ಭಗವಂತನ ಮಹಿಮೆಯನ್ನೊಳಗೊಂಡ ಪರೀಕ್ಷಿತ ರಾಜನ ಮಹಿಮೆಯನ್ನು ನಾನು ನಿಮಗೆ ಹೇಳುತ್ತೇನೆ”. ಎನ್ನುತ್ತಾರೆ ಸೂತರು.

ಯತ್ರಾನುರಕ್ತಾಃ ಸಹಸೈವ ಧೀರಾ ವ್ಯಪೋಹ್ಯ ದೇಹಾದಿಷು ಸಂಗಮೂಢಂ
ವ್ರಜಂತಿ ತತ್ಪಾರಮಹಂಸ್ಯಸತ್ಯಂ ಯಸ್ಮಿನ್ನಹಿಂಸೋಪರಮಶ್ಚ ಧರ್ಮಃ ೨೨

ನಮಗೆ ಭಗವಂತನ ಪರಿಚಯ ಇಲ್ಲದಿರುವುದರಿಂದ ನಮ್ಮ ಮನಸ್ಸು ಆತನೆಡೆಗೆ ವಾಲುವುದಿಲ್ಲ. ಆದರೆ ಒಮ್ಮೆ ಅನುರಕ್ತಿ ಬಂದು ರುಚಿ ಗೊತ್ತಾದರೆ, ಆಗ ಇತರ ಲೌಕಿಕ ವಿಚಾರಗಳು ಭಗವಂತನ ಮುಂದೆ ನಶ್ವರ ಎನ್ನುವುದು ತಿಳಿಯುತ್ತದೆ. ಸಾಮಾನ್ಯವಾಗಿ ನಮ್ಮ ಮನಸ್ಸು ನಮ್ಮ ದೇಹದ ಮೂಲಕ ನಾವು ಪಡೆಯುವ ಸುಖ-ಭೋಗವೇ ಸರ್ವಸ್ವ ಎಂದು ತಿಳಿದು ಅದರಲ್ಲೇ ಗಟ್ಟಿಯಾಗಿ ಕುಳಿತುಬಿಟ್ಟಿರುತ್ತದೆ. ‘ಧೀರ’ನಾದವನು ಆ ಸ್ಥಿತಿಯಿಂದ ಈಚೆ ಬಂದು ಭಗವಂತನನ್ನು ಅರಿಯುತ್ತಾನೆ.
ಈ ಶ್ಲೋಕದಲ್ಲಿ ಬಳಸಿರುವ  ‘ಧೀರ’ ಎನ್ನುವ ಪದಕ್ಕೆ ಎರಡು ಅರ್ಥಗಳಿವೆ. ಜ್ಞಾನದಲ್ಲಿ ರತಿ ಉಳ್ಳವನು, ‘ತಿಳಿದುಕೊಳ್ಳಬೇಕು’ ಎನ್ನುವ ಛಲ ಉಳ್ಳವನು ಧೀರ. ಈ ರೀತಿ ಛಲದಿಂದ ಆಸಕ್ತಿ ಬೆಳೆಸಿಕೊಂಡ ತಕ್ಷಣ ಎಲ್ಲವೂ ತಿಳಿಯುವುದಿಲ್ಲ. ಅಲ್ಲಿ ಅನೇಕ ಸಮಸ್ಯೆಗಳು ಬರುತ್ತವೆ. ಪ್ರತಿರೋಧ ಬರಬಹುದು. ಜನ ಪರಿಹಾಸ್ಯ ಮಾಡಬಹುದು. ಆಗ ದುರ್ಬಲನಾಗದೆ ಮುನ್ನೆಡೆಯುವ ಧೈರ್ಯ ಉಳ್ಳವನು ಧೀರ.
ಇಲ್ಲಿ ಭಗವಂತನನ್ನು “ಪಾರಮಹಂಸ್ಯಸತ್ಯಂ” ಎನ್ನುವ ವಿಶೇಷಣ ಬಳಸಿ ಸಂಬೋಧಿಸಿದ್ದಾರೆ. ಪರಮಹಂಸರು ಎಂದರೆ ಸಂಸಾರದಲ್ಲಿ ಸರ್ವಸ್ವವನ್ನೂ ತ್ಯಾಗ ಮಾಡಿದವರು. ಭಗವಂತ ಇಂತಹ ‘ಪರಮಹಂಸರಿಗೆ ಸುಲಭವಾಗಿ ಗೋಚರನಾಗುತ್ತಾನೆ. ನಮ್ಮಲ್ಲಿ ಕೂಡಾ ಆ ಪರಮಹಂಸರ ಕಿಂಚಿತ್ ನಡೆ ಇರಬೇಕು. ಆಗ ಆ ಸದ್ಗುಣಪೂರ್ಣ(ಸತ್ಯಃ) ಭಗವಂತನ ಅನುಗ್ರಹವಾಗುತ್ತದೆ. ನಾವು ತಪ್ಪಿನ ಕಡೆ ನಮ್ಮ ಮನಸ್ಸು ಹರಿಯದಂತೆ ತಡೆದು, ಅದನ್ನು ಭಗವಂತನೆಡೆಗೆ ಹರಿಸಬೇಕು.
ಪರಮಹಂಸರು ಅಂದರೆ ಎಂತವರು ಎನ್ನುವುದನ್ನು ವಿವರಿಸುತ್ತಾ ಸೂತರು ಹೇಳುತ್ತಾರೆ: “ಯಸ್ಮಿನ್ನಹಿಂಸೋಪರಮಶ್ಚ ಧರ್ಮಃ” ಎಂದು. ಪರಮಹಂಸರಲ್ಲಿ ಮುಖ್ಯವಾಗಿ ಎರಡು ವಿಶೇಷ ಗುಣಗಳಿರುತ್ತವೆ. ಅವುಗಳೆಂದರೆ ಅಹಿಂಸೆ ಮತ್ತು ಉಪರಮ.

ಯಮನಿಯಮಗಳಲ್ಲಿ ಮೊದಲನೆಯದು ‘ಅಹಿಂಸೆ’. ಅಹಿಂಸೆ ಎನ್ನುವುದು ಭಗವಂತನನ್ನು ಆರಾಧಿಸುವ ಅಷ್ಟಪುಷ್ಪಗಳಲ್ಲಿ ಮೊದಲನೆಯದು. [ಅಷ್ಠ ಪುಷ್ಪಗಳು: ಅಹಿಂಸಾ, ದಮ, ದಯಾ, ಕ್ಷಮಾ, ಶಾಂತಿ, ತಪ, ಧ್ಯಾನ ಮತ್ತು ಸತ್ಯ]  ಇದಕ್ಕಾಗಿ ಸನ್ಯಾಸಿಗಳು “ಸಮಸ್ತ ಪ್ರಾಣಿಗಳಿಗೂ ನಾನು ಅಭಯದಾನ ಮಾಡಿದ್ದೇನೆ, ನಾನು ಯಾರಿಗೂ ಹಿಂಸೆ ಮಾಡುವುದಿಲ್ಲ” ಎಂದು ಪ್ರತಿಜ್ಞೆ ಮಾಡುತ್ತಾರೆ. ಇದು ಅವರ ಜೀವನದ ಪ್ರತಿಜ್ಞೆ. ನಾವೂ ಕೂಡಾ ನಮ್ಮ ಜೀವನದಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಹಿಂಸಾ ವ್ರತವನ್ನು ಪಾಲಿಸಬೇಕು. ಅಹಿಂಸೆಯ ಮಹತ್ವವನ್ನು ಪುರಾಣದಲ್ಲಿ ವರ್ಣಿಸುತ್ತಾ ಹೇಳುತ್ತಾರೆ: “ಹೇಗೆ ಆನೆಯ ಹೆಜ್ಜೆಯೊಳಗೆ ಎಲ್ಲಾ ಪ್ರಾಣಿಗಳ ಹೆಜ್ಜೆ ಅಂತರ್ಭೂತವಾಗುತ್ತದೋ ಹಾಗೆ, ಅಹಿಂಸೆಯ ಒಳಗೆ ಎಲ್ಲಾ ಧರ್ಮಗಳೂ ಅಂತರ್ಭೂತವಾಗುತ್ತವೆ” ಎಂದು.  ಹಾಗಾಗಿ ಅಹಿಂಸೆಯ ಧೀಕ್ಷೆ ಎಂದರೆ ಅದು ಎಲ್ಲಾ ಧರ್ಮಗಳ ಧೀಕ್ಷೆ. ಎರಡನೇ ಗುಣ- ‘ಉಪರಮ’. ಉಪರಮ ಅಂದರೆ ಉತ್ಕೃಷ್ಟನಾದ ಭಗವಂತನಲ್ಲೇ ಆನಂದವನ್ನು ಅನುಭವಿಸುವುದು. ನಿರಂತರ ಭಗವಂತನ ಚಿಂತನೆಯಲ್ಲಿ ಆಸಕ್ತಿ  ಬೆಳೆಸಿಕೊಳ್ಳುವುದು. ಹೀಗೆ ಅಹಿಂಸೆ ಮತ್ತು ಉಪರಮ ಎನ್ನುವ ಎರಡು ಮುಖ್ಯಗುಣಗಳು ಪರಮಹಂಸರಲ್ಲಿರುವುದರಿಂದ  ಭಗವಂತ ಅವರಿಗೆ ಬಹಳ ಬೇಗ ಒಲಿಯುತ್ತಾನೆ.

No comments:

Post a Comment