ಇಲ್ಲಿ ಸರ್ವೇಸಾಮಾನ್ಯವಾಗಿ
ನಮಗೊಂದು ಪ್ರಶ್ನೆ ಬರುತ್ತದೆ. ಅದೇನೆಂದರೆ: ಕಲಿಯನ್ನು ನಿಗ್ರಹ ಮಾಡಿದ್ದ ಪರೀಕ್ಷಿತನೊಳಗೆ ಕಲಿ
ಹೇಗೆ ಪ್ರವೇಶಿಸಿದ ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ಉತ್ತರಿಸಬೇಕಾದರೆ ನಾವು ಭಾಗವತವನ್ನು ಸ್ವಲ್ಪ ವಿಶ್ಲೇಷಣೆ
ಮಾಡಿ ನೋಡಬೇಕು. ಈ ಹಿಂದೆ ಹೇಳಿದಂತೆ ಪರೀಕ್ಷಿತ ಕಲಿ ಮತ್ತು ಆತನ ಪರಿವಾರದ ವಾಸಕ್ಕೆ ಐದು ಸ್ಥಾನಗಳನ್ನು
ಕೊಟ್ಟಿದ್ದ. ಅವುಗಳೆಂದರೆ ದ್ಯೂತ, ಮದ್ಯ, ಸ್ತ್ರೀ, ಮಾಂಸ ಮತ್ತು ಚಿನ್ನ. ಶಾಸ್ತ್ರದಲ್ಲಿ ಹೇಳುವಂತೆ
ಈ ಐದು ಸ್ಥಾನಗಳು ಕಲಿಯ ಆಕ್ರಮಣ ಸ್ಥಾನವಾಗಿರುವುದರಿಂದ, ಜೀವನದಲ್ಲಿ ಎತ್ತರಕ್ಕೇರ ಬಯಸುವವರು ಇವುಗಳ
ಬೆನ್ನು ಹತ್ತಬಾರದು. ವಿಶೇಷವಾಗಿ ರಾಜರುಗಳಿಗೆ ಈ ಸ್ಥಾನಗಳ ಸೆಳೆತ ಹೆಚ್ಚು. ಅವರು ಅನೇಕ ಮಂದಿ ಸ್ತ್ರೀಯರ
ನಡುವೆ ಮಾಂಸ-ಮದ್ಯ ಸೇವನೆ ಮಾಡಿಕೊಂಡು ಇರುವವರು. ಅವರಿಗೆ ಅದು ನಿಷಿದ್ಧವೂ ಅಲ್ಲ. ಆದ್ದರಿಂದ ಧರ್ಮಶೀಲ
ರಾಜನಾದವನಿಗೆ ಇವುಗಳ ಅಪಾಯ ಹೆಚ್ಚು ಮತ್ತು ಆತ ಆ
ಕುರಿತು ಅತಿ ಹೆಚ್ಚು ಎಚ್ಚರ ವಹಿಸಬೇಕು. ಇಷ್ಟೇ ಅಲ್ಲದೆ, ಗೀತೆಯಲ್ಲಿ ಕೃಷ್ಣ ಹೇಳುವಂತೆ: ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ
ಜನಃ । ಸ ಯತ್ ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ ॥೩-೨೧॥ ಲೋಕಪಾಲಕ ರಾಜ ಏನನ್ನು ಪಾಲನೆ ಮಾಡುತ್ತಾನೋ ಅದನ್ನೇ ಆತನ ಪ್ರಜೆಗಳು
ಪಾಲಿಸುತ್ತಾರೆ. ಅವನು ಯಾವುದನ್ನು ಆಧಾರವಾಗಿ ಬಳಸುತ್ತಾನೋ
ಜನತೆ ಅದನ್ನೇ ಬೆನ್ನು ಹತ್ತುತ್ತದೆ. ಅಥೈತಾನಿ ನ ಸೇವೇತ
ಬುಭೂಷುಃ ಪುರುಷಃ ಕ್ವಚಿತ್ । ವಿಶೇಷತೋ ಧರ್ಮಶೀಲೋ
ರಾಜಾ ಲೋಕಪತಿರ್ಗುರುಃ ॥ಭಾಗವತ-೦೧-೧೭-೪೦॥ ರಾಜನಾದವನು ಪ್ರಜಾಪಾಲಕ. ಆತ ಪ್ರಜೆಗಳ ಮಾರ್ಗದರ್ಶಕ ಮತ್ತು ಗುರು.
ಹಾಗಾಗಿ ಸಾಮಾನ್ಯರಿಗಿಂತ ಮುಂದಾಳುವಾದವನ ಹೊಣೆಗಾರಿಕೆ ದೊಡ್ಡದು.
ಈ ಹಿಂದೆ ವಿಶ್ಲೇಶಿಸಿದಂತೆ:
ಇಲ್ಲಿ ಕಲಿಸ್ಥಾನಗಳನ್ನು ಬಳಸಬಾರದು ಎಂದರೆ ಅವಿಹಿತವಾದುದನ್ನು ಬಳಸಬಾರದು ಎಂದರ್ಥ. (“ವಿಹಿತಾತಿರೇಕೇಣ
ನ ಸೇವೇತೇತಿ”). ಆದ್ದರಿಂದ ಯಾವುದು ಯಾರಿಗೆ ವಿಹಿತ ಎನ್ನುವುದನ್ನು
ತಿಳಿಯುವುದು ಬಹಳ ಮುಖ್ಯ. ಉದಾಹರಣೆಗೆ ಮದ್ಯಪಾನ, ಮಾಂಸಭಕ್ಷಣೆ ಮತ್ತು ಸ್ತ್ರೀಸಂಗ. ಇದು ಯಾರಿಗೆ
ವಿಹಿತ ಮತ್ತು ಎಷ್ಟು ವಿಹಿತ? ಇವೆಲ್ಲವನ್ನೂ ಪೂರ್ಣವಾಗಿ ಬಿಡಬೇಕು ಎಂದು ಶಾಸ್ತ್ರ
ಹೇಳುವುದಿಲ್ಲ. ಎಲ್ಲವದಕ್ಕೂ ಒಂದು ವ್ಯವಸ್ಥೆಯನ್ನು ಶಾಸ್ತ್ರ ಹೇಳುತ್ತದೆ. ಈ ಎಲ್ಲಾ ಸ್ಥಾನಗಳು ಭಗವಂತನ
ಪೂಜಾರೂಪವಾದಾಗ ವಿಹಿತವಾಗುತ್ತದೆ ಮತ್ತು ಚಟವಾದಾಗ ದೋಷವಾಗುತ್ತದೆ. ಈ ಕುರಿತು ಆಚಾರ್ಯ ಮಧ್ವರು ಭಾಗವತ
ತಾತ್ಪರ್ಯ ನಿರ್ಣಯದಲ್ಲಿ(ಹನ್ನೊಂದನೇ ಸ್ಕಂಧ- ಅಧ್ಯಾಯ ಐದು, ಶ್ಲೋಕ-ಹನ್ನೊಂದು) ಪ್ರಮಾಣಶ್ಲೋಕದೊಂದಿಗೆ ಸುಂದರ ವಿವರಣೆಯೊಂದನ್ನು ನೀಡಿದ್ದಾರೆ:
ವ್ಯವಾಯಾಮಿಷಮದ್ಯಾನಿ ಹರೇಃ ಪೂಜಾರ್ಥಮೇವ
ತು । ಸ್ತ್ರೀ-ಪುರುಷ ಸಮಾಗಮ,
ಮದ್ಯಪಾನ ಮತ್ತು ಮಾಂಸಭಕ್ಷಣೆಯನ್ನು ಭಗವಂತನ ಪೂಜಾರೂಪವಾಗಿ ಬಳಸುವಂತಹ ಒಂದು ವಿಧಿ ಇದೆ. ಅಂತಹ ಸಂದರ್ಭದಲ್ಲಿ
ಇವು ದೋಷವಾಗುವುದಿಲ್ಲ. ವಾಮದೇವ್ಯೋ ನಾಮ ಯಜ್ಞೋ ವ್ಯವಾಯೋ ಹರಿಪೂಜನಮ್ । ಉಪನಿಷತ್ತಿನಲ್ಲಿ ವಾಮದೇವ ಎನ್ನುವ ಯಜ್ಞದ ಕುರಿತು ಹೇಳುತ್ತಾರೆ. ಇದು ಸ್ತ್ರೀ-ಪುರುಷ ಸಮಾಗಮವನ್ನು
ಭಗವಂತನ ಯಜ್ಞರೂಪದಲ್ಲಿ ಅನುಸಂಧಾನ ಮಾಡುವ ವಿಧಾನ. ದಂಪತಿಗಳು “ಲಕ್ಷ್ಮೀನಾರಾಯಣರು ನಮ್ಮೊಳಗಿದ್ದು,
ನಮ್ಮನ್ನು ಪ್ರತೀಕವಾಗಿ ಬಳಸಿ, ಪ್ರಜಾವೃದ್ಧಿಗಾಗಿ ನಮ್ಮಿಂದ ಈ ಪವಿತ್ರ ಕಾರ್ಯ ಮಾಡಿಸುತ್ತಿದ್ದಾರೆ”
ಎನ್ನುವ ಅನುಸಂಧಾನದಿಂದ ಒಂದಾದಾಗ ಅದು ಭಗವಂತನ ಪೂಜೆಯಾಗುತ್ತದೆ.
ಈ ರೀತಿ ಭೋಗದ ಹಿಂದೆ ಭವ್ಯವಾದ ಅನುಸಂಧಾನವಿದ್ದಾಗ ಅದು ಹರಿಪೂಜೆಯಾಗುತ್ತದೆ. ಪಿತೃ ಯಜ್ಞೋ ದೇವ ಯಜ್ಞೋ ಮಾಂಸೇನ ಪರಿಪೂಜನಮ್
। ಪಿತೃಯಜ್ಞ ಮತ್ತು ದೇವಯಜ್ಞದಲ್ಲಿ
ಪ್ರಾಣಿಗಳನ್ನು ಬಲಿ ಕೊಡುವ ವಿಧಾನವಿದೆ. ಈ ರೀತಿಯ ಯಜ್ಞವನ್ನು ಕ್ಷತ್ರಿಯರು ಮಾಡುತ್ತಿದ್ದರು.
ಇಲ್ಲಿ ಅವರು ತಾವು ತಿನ್ನುವ ಆಹಾರವನ್ನು ಭಗವಂತನಿಗೆ ಅರ್ಪಿಸಿ, ಅದನ್ನು ಭಗವಂತನ ಪ್ರಸಾದ ರೂಪವಾಗಿ
ಸೇವಿಸುತ್ತಾರೆ. ಈ ರೀತಿಯ ಪ್ರಾಣಿಹಿಂಸೆ ಅಥವಾ ಮಾಂಸಾಹಾರ
ಅವಿಹಿತವಲ್ಲ. ಆದರೆ ಇಲ್ಲಿ ಒಂದು ಎಚ್ಚರ ಅಗತ್ಯ. ಯಾರಿಗೆ ಮಾಂಸ ಭಕ್ಷಣೆ ಅವಿಹಿತವೋ(ಉದಾಹರಣೆಗೆ ವಿಪ್ರರು)
ಅವರು ಈ ರೀತಿ ದೇವರಿಗೆ ಅರ್ಪಿಸಿ ಸೇವಿಸುವಂತಿಲ್ಲ. ಕೇವಲ ಮಾಂಸಭಕ್ಷಣೆ ಮಾಡುವವರು ಮಾತ್ರ ಅದನ್ನು
ದೇವರಿಗೆ ಅರ್ಪಿಸಿ ಸೇವಿಸಬಹುದು ಅಷ್ಟೇ. ವ್ಯವಾಯಯಜ್ಞೇ
ಮದ್ಯಂ ತು ಸೋಮಾತ್ಮಕತಯೇಷ್ಯತೇ । ಕ್ಷತ್ರಿಯರಿಗೆ ಮದ್ಯಪಾನ ನಿಷಿದ್ಧವಲ್ಲ.
ಅವರು ಸ್ತ್ರೀ-ಪುರುಷ ಸಮಾಗಮದ ಪೂರ್ವಭಾವಿಯಾಗಿ ಮದ್ಯಪಾನ ಮಾಡಬಹುದು. ಅವರಿಗೆ ಸೃಷ್ಟಿಯಜ್ಞವಾದ ಸ್ತ್ರೀ-ಪುರುಷ
ಸಮಾಗಮದಲ್ಲಿ ಮದ್ಯ ಹವಿಸ್ಸಿನಂತೆ. ಆದರೆ ಇಂತಹ ಸೇವನೆ
ಅಧ್ಯಯನ, ಅಧ್ಯಾಪನ ಮುಂತಾದ ಭೌದ್ಧಿಕ ಕಾರ್ಯ ಮಾಡುವವರಿಗೆ ನಿಷಿದ್ಧ. ಕ್ಷತ್ರಿಯಾದೇರ್ನ
ವಿಪ್ರಾಣಾಂ ವಿಪ್ರೋ ದೋಷೇಣ ಲಿಪ್ಯತೇ । ಒಂದು ವೇಳೆ ಕ್ಷತ್ರಿಯರು ಪ್ರಾಣಿಯನ್ನು ಯಜ್ಞದಲ್ಲಿ ಬಳಸಿದರೆ,
ಅವರು ಅದನ್ನು ಸೇವಿಸಬಹುದು. ಆದರೆ ಅಲ್ಲಿ ಪೌರೋಹಿತ್ಯ ಮಾಡಿದ ಋತ್ವಿಜರು ಅದನ್ನು ಸೇವಿಸುವಂತಿಲ್ಲ.
ಆರಾಗತಃ ಪ್ರವೃತ್ತಿಃ ಸ್ಯಾದ್ರಾಗೋ ದೋಷಸ್ಯ ಕಾರಣಮ್ । ಪ್ರಾಣಭಕ್ಷೋSಥವಾ
ಯಜ್ಞೇ ದೈವೇ ಸರ್ವಸ್ಯ ಚೇಷ್ಯತಿ । ಪೈಷ್ಟಮದ್ಯಸ್ಯ ಮಾಧ್ವ್ಯದಿ
ಕ್ಷತ್ರಿಯಸ್ಯ ನ ದುಷ್ಯತಿ । ವೇದದಲ್ಲಿ ಸೌತ್ರಾಮಣಿ ಯಜ್ಞದ ಪ್ರಸ್ತಾಪವಿದೆ. ಅದು ಮದ್ಯವನ್ನು ಬಳಸಿ ಮಾಡುವ ಯಜ್ಞ. ಆ ರೀತಿ
ಯಜ್ಞ ಮಾಡಿದಾಗ ಅದನ್ನು ಮಾಡುವ ಋತ್ವಿಜರು ಯಜ್ಞ ಶೇಷವಾಗಿ ಮದ್ಯ ಸೇವನೆ ಮಾಡುವಂತಿಲ್ಲ. ಒಂದು ವೇಳೆ
ಅಲ್ಲಿ ಬಳಸಿದ ಮದ್ಯ ಕಡಿಮೆ ಮದ್ಯಸಾರದಿಂದ(alcohol) ಕೂಡಿದ್ದರೆ, ಅದನ್ನು ಪುರೋಹಿತರು ಕೇವಲ ಆಘಾಣಿಸಬಹುದು ಅಷ್ಟೇ. ಇಲ್ಲದಿದ್ದರೆ ಅದನ್ನು ಮೂಸುವುದೂ ನಿಷಿದ್ಧ.
ಇಲ್ಲಿ ನಾವು ತಿಳಿಯಬೇಕಾಗಿರುವುದು
ಪರೀಕ್ಷಿತ ರಾಜ ಮಾಡಿರುವ ಅವಿಹಿತ ಕಾರ್ಯ. ಆತ ಬೇಟೆಯ ಪೂರ್ವದಲ್ಲಿ ಮದ್ಯವನ್ನು ಭಗವಂತನ ಪ್ರಸಾದ ರೂಪದಲ್ಲಿ
ಸೇವಿಸುವ ಬದಲು, ಅತಿಸೇವನೆ ಮಾಡಿರಬೇಕು. ಹಾಗಾಗಿ ಅಲ್ಲಿ ಕಲಿಗೆ ಅವಕಾಶ ಸಿಕ್ಕಿರುವುದು.
ಅಭೂತಪೂರ್ವಃ ಸಹಸಾ ಕ್ಷುತ್ತೃಡ್ಭ್ಯಾಮರ್ದಿತಾತ್ಮನಃ ।
ಬ್ರಾಹ್ಮಣಂ ಪ್ರತ್ಯಭೂದ್
ಬ್ರಹ್ಮನ್ ಮತ್ಸರೋ ಮನ್ಯುರೇವ ಚ ॥೧೮-೨೯॥
ಈತನಕ ಪರೀಕ್ಷಿತ ಎಂದೂ
ಇಂತಹ ಪ್ರಮಾದ ಮಾಡಿರಲಿಲ್ಲ. ಆದರೆ ಅತಿಯಾದ ಹಸಿವು-ಬಾಯಾರಿಕೆ ನಡುವೆ ಅವನಿಂದ ಇಂತಹ ಒಂದು ಪ್ರಮಾದ
ನಡೆಯುವಂತೆ ಕಲಿ ಪ್ರೇರೇಪಿಸುತ್ತಾನೆ. ಕಲಿಯ ಪ್ರಭಾವದಿಂದಾಗಿ ಆತನಿಗೆ ಶಮೀಕ ಮುನಿಯ ಮೇಲೆ ಮತ್ಸರ
ಮತ್ತು ಕೋಪ ಬರುತ್ತದೆ. ಇಲ್ಲಿ ಮತ್ಸರ ಎಂದರೆ
ಹೊಟ್ಟೆಕಿಚ್ಚು ಎಂದರ್ಥವಲ್ಲ. [ಅಸೂಯೆ
ಎಂದರೆ ಹೊಟ್ಟೆಕಿಚ್ಚು]. ಇಲ್ಲಿ ಮತ್ಸರ ಎಂದರೆ ನಮ್ಮ ಅಧೀನವಿರುವ ಒಬ್ಬ
ವ್ಯಕ್ತಿ ನಮ್ಮ ಅಪೇಕ್ಷೆಯಂತೆ ನಡೆದುಕೊಳ್ಳದೇ ಇದ್ದಾಗ ನಮಗಾಗುವ ಅಸಮಾಧಾನ. ತನ್ನ ರಾಜ್ಯದ ಒಬ್ಬ ಪ್ರಜೆ
ನನಗೆ ಸತ್ಕಾರ ಮಾಡಲಿಲ್ಲ ಎನ್ನುವ ಅಸಮಾಧಾನ ಪರೀಕ್ಷಿತನನ್ನು ಕಾಡುತ್ತದೆ ಮತ್ತು ಕಲಿಯ ಪ್ರಭಾವದಿಂದ
ಆತನಿಗೆ ಕೊಪ ಬಂದು ಪ್ರಮಾದವೆಸಗುತ್ತಾನೆ.
No comments:
Post a Comment