Saturday, August 3, 2013

Shrimad BhAgavata in Kannada -Skandha-01-Ch-17(2)

ರಾಜೋವಾಚ--
ಧರ್ಮಂ ಬ್ರವೀಷಿ ಧರ್ಮಜ್ಞ ಧರ್ಮೋSಸಿ ವೃಷರೂಪಧೃಕ್
ಯದಧರ್ಮಕೃತಃ ಸ್ಥಾನಂ ಸೂಚಕಸ್ಯಾಪಿ ತದ್ ಭವೇತ್ ೨೧

ಅಥವಾ ದೇವಮಾಯಾಯಾ ನೂನಂ ಗತಿರಗೋಚರಾ
ಚೇತಸೋ ವಚಸಶ್ಚಾಪಿ ಭೂತಾನಾಮಿತಿ ನಿಶ್ಚಯಃ ೨೨

ಧ್ಯಾನದ ಮೂಲಕ ವಿಷಯ ಗ್ರಹಣ ಮಾಡಿದ ಪರೀಕ್ಷಿತ ಹೇಳುತ್ತಾನೆ: “ತಿಳಿಯಿತು! ನೀನು ಗೂಳಿಯ ರೂಪದಲ್ಲಿರುವ ಧರ್ಮದೇವತೆ. ನೀನು ಧರ್ಮವನ್ನೇ ಮಾತನಾಡಿದೆ. ನಿನ್ನ ಬಾಯಿಂದ ಅಧರ್ಮದ ಮಾತು ಬರಲಾರದು” ಎಂದು. ಏಕೆ ಧರ್ಮ ದೇವತೆ ಈ ರೀತಿ ಒಗಟಿನಂತೆ ಮಾತನಾಡಿದ ಎನ್ನುವುದನ್ನು ಇಲ್ಲಿ ಪರೀಕ್ಷಿತ ವಿಶ್ಲೇಷಿಸಿದ್ದಾನೆ.  “ಯದಧರ್ಮಕೃತಃ ಸ್ಥಾನಂ ಸೂಚಕಸ್ಯಾಪಿ ತದ್ ಭವೇತ್” ಅಂದರೆ “ಮಾಡಿದವರ ಪಾಪ ಆಡಿದವರ  ಬಾಯಲ್ಲಿ” ಎಂದಂತೆ. “ಅನ್ಯರು ಮಾಡಿದ ಪಾಪಕಾರ್ಯವನ್ನು ಎತ್ತಿ ಹೇಳಬಾರದು ಎನ್ನುವ ಉದ್ದೇಶದಿಂದ ನೀನು ಈ ರೀತಿ ಮಾತನಾಡಿದೆ. ಅಥವಾ: ದೇವರ ಲೀಲೆ ಅಪಾರ, ಯಾರಿಗೆ ಯಾವ ಸಮಯದಲ್ಲಿ ಏನಾಗುತ್ತದೆ, ದೇವರ ಚಿತ್ತ ಏನು ಎನ್ನುವುದು ಅಗೋಚರ. ಅದಕ್ಕಾಗಿ ನೀನು ಹೀಗೆ ಈ ರೀತಿ ಮಾತನಾಡಿದೆ. ನನಗೀಗ ಸತ್ಯ ತಿಳಿಯಿತು” ಎನ್ನುತ್ತಾನೆ ಪರೀಕ್ಷಿತ.

ತಪಃ ಶೌಚಂ ದಯಾ ಸತ್ಯಮಿತಿ ಪಾದಾಃ ಕೃತೇ ಕೃತಾಃ
ಅಧರ್ಮಾಂಗೈಸ್ತ್ರಯೋ ಭಗ್ನಾಃ ಸ್ಮಯಸಂಗಮದೈಸ್ತವ ೨೩

ಇದಾನೀಂ ಧರ್ಮ ಪಾದಸ್ತೇ ಸತ್ಯಂ ನಿರ್ವರ್ತತೇ ಯತಃ
ತಂ ಜಿಘೃಕ್ಷತ್ಯಧರ್ಮೋSಯಮನೃತೇನೈಧಿತಃ ಕಲಿಃ ೨೪

ನೀನು ಧರ್ಮಪುರುಷ; ನಿನಗೆ ತಪಸ್ಸು-ಶೌಚ-ದಯಾ-ಸತ್ಯ ಎನ್ನುವ ನಾಲ್ಕು ಪಾದಗಳು. ಕೃತಯುಗದಲ್ಲಿ ನಿನಗೆ ಈ ನಾಲ್ಕೂ ಪಾದಗಳಿದ್ದವು. ಕೃತಯುಗದ ಕೊನೆಯಲ್ಲಿ ತಪಸ್ಸು ಹೋಗಿ, ಕೇವಲ ಮೂರು ಪಾದಗಳು ಉಳಿದವು. ದ್ವಾಪರದ ಕೊನೆಯಲ್ಲಿ ತಪಸ್ಸು-ಶೌಚ-ದಯೆ ಈ ಮೂರೂ ಪಾದಗಳು ಹೊರಟು ಹೋದವು. ತಪಸ್ಸಿನ ಜಾಗದಲ್ಲಿ ಅಹಂಕಾರ ಬೆಳೆಯಿತು, ಶೌಚ ಹೊರಟುಹೋಗಿ ಸಂಗ ಬೆಳೆಯಿತು, ದಯೆ ಹೋಗಿ ಮದ ಬಂತು. ಹೀಗೆ ಧರ್ಮದ ಮೂರು ಕಾಲುಗಳು ಹೊರಟುಹೋಗಿ, ಅಧರ್ಮದ ಮೂರು ಪಾದಗಳು(ಅಹಂಕಾರ-ಸಂಗ-ಮದ) ಬೆಳೆದವು. ಇಂದು ನೀನು ಕೇವಲ ಒಂದು ಪಾದದಲ್ಲಿ ನಿಂತಿದ್ದೀಯ. ಅದೇ ಪ್ರಾಮಾಣಿಕತೆ(ಸತ್ಯ). ತಪಸ್ಸಿಲ್ಲ, ಶೌಚವಿಲ್ಲ, ದಯೆಯಿಲ್ಲ. ಆದರೂ ಎಲ್ಲೋ ಒಂದು ಮೂಲೆಯಲ್ಲಿ ನಾವು ಪ್ರಾಮಾಣಿಕರಾಗಿರಬೇಕು ಎನ್ನುವ ಆಸೆ ಇಂದೂ ಮನುಷ್ಯನಲ್ಲಿದೆ. ಇಲ್ಲಿ ನಿಂತಿರುವವನು ಕಲಿಪುರುಷ. ಅವನು ನಿನ್ನ ನಾಲ್ಕನೇ ಪಾದವನ್ನೂ ಮುರಿಯುವುದಕ್ಕಾಗಿ ನಿಂತಿದ್ದಾನೆ. ಸತ್ಯದ ಕಾಲನ್ನು ಮುರಿದು, ಸುಳ್ಳಿನ ಕಾಲನ್ನು ಜೋಡಿಸುವ ಸಂಕಲ್ಪ ಆತನದು. ಆದರೆ ನಾನು ಹಾಗಾಗಲು ಬಿಡುವುದಿಲ್ಲ. ಪರೀಕ್ಷಿತನ ಆಡಳಿತದಲ್ಲಿ ಇಲ್ಲಿ ಮತ್ತೆ ಕೃತಯುಗ ಮರಳಬೇಕು ಎಂದು ಹೇಳಿದ ಪರೀಕ್ಷಿತ, “ನಿನ್ನ ತಲೆಯನ್ನು ಕತ್ತರಿಸುತ್ತೇನೆ” ಎಂದು ಖಡ್ಗ ಹಿಡಿದು ಕಲಿಯತ್ತ ಮುನ್ನುಗ್ಗುತ್ತಾನೆ.
ಪರೀಕ್ಷಿತ ಖಡ್ಗ ಹಿಡಿದು ಮುನ್ನುಗ್ಗುತ್ತಿರುವುದನ್ನು ಕಂಡ ಕಲಿ ಆತನಿಗೆ ಶರಣಾಗುತ್ತಾನೆ. “ ಕ್ಷಮಿಸು ರಾಜ, ಇದು ನನ್ನ ಯುಗ, ಅದಕ್ಕಾಗಿ ನಾನು ಬಂದೆ. ಇಲ್ಲಿ ನನ್ನದೇನೂ ತಪ್ಪಿಲ್ಲ. ನನ್ನ ಯುಗದಲ್ಲಿ ನಾನೇನೂ ಮಾಡಬಾರದು ಎಂದರೆ ನನಗೆ ಅಸ್ತಿತ್ವವೆಲ್ಲಿ?  ದೀನವತ್ಸಲನಾದ ನೀನು ನನ್ನನ್ನು ಕ್ಷಮಿಸಿ ನನಗೊಂದು ನೆಲೆ ಕೊಡು” ಎಂದು ಕೇಳುತ್ತಾನೆ ಕಲಿ.

ರಾಜೋವಾಚ--
ನ ವರ್ತಿತವ್ಯಂ ತದಧರ್ಮಬಂಧೋ ಧರ್ಮೇಣ ಸತ್ಯೇನ ಚ ವರ್ತಿತವ್ಯೇ
ಬ್ರಹ್ಮಾವರ್ತೇ ಯತ್ರ ಯಜಂತಿ ಯಜ್ಞೈಃ ಯಜ್ಞೇಶ್ವರಂ ಬ್ರಹ್ಮವಿತಾನಯಜ್ಞಾಃ ೩೨

ಕಲಿಯ ಮಾತನ್ನು ಆಲಿಸಿದ ಪರೀಕ್ಷಿತ ಹೇಳುತ್ತಾನೆ: “ಅಧರ್ಮದ ಸ್ನೇಹಿತ ನೀನು; ಹಾಗಾಗಿ ನನ್ನ ದೇಶದಲ್ಲಿ ನಿನಗೆ ಆಶ್ರಯವಿಲ್ಲ. ಈ ದೇಶದ ಹೆಸರೇ ಬ್ರಹ್ಮಾವರ್ತ. ಇದು ಬ್ರಹ್ಮರ್ಷಿಗಳು ಅವತರಿಸಿದ ನೆಲ. ಇಲ್ಲಿ ಧರ್ಮ ಮತ್ತು ಸತ್ಯದ ನಿರಂತರ ಪ್ರವೃತ್ತಿ ಆಗಬೇಕು ಎನ್ನುವುದು ಭಗವಂತನ ಸಂಕಲ್ಪ. ಯಜ್ಞೇಶ್ವರನಾದ ಭಗವಂತನನ್ನು ಯಜ್ಞದಿಂದ ಆರಾಧಿಸುವ ಪದ್ಧತಿ ಬ್ರಹ್ಮಾವರ್ತ ಭಾರತದಲ್ಲಲ್ಲದೇ ಇನ್ಯಾವ ರಾಷ್ಟ್ರದಲ್ಲೂ ಇಲ್ಲ” ಎಂದು.

ಇಲ್ಲಿ ಯಜ್ಞದ ಕುರಿತು ಹೇಳುವಾಗ ‘ಬ್ರಹ್ಮಯಜ್ಞ ಮತ್ತು ವಿತಾನಯಜ್ಞ’ ಎನ್ನುವ ಪದಗಳನ್ನು ಪ್ರಯೋಗಿಸಿದ್ದಾರೆ. ಇದು ಎರಡು ವಿಧದ ಯಜ್ಞವನ್ನು ಸೂಚಿಸುತ್ತದೆ. ಬ್ರಹ್ಮಯಜ್ಞ ಎಂದರೆ ಧ್ಯಾನದ ಮುಖೇನ ಭಗವಂತನನ್ನು ಆರಾಧಿಸುವ ಮಾನಸಯಜ್ಞ;  ವಿತಾನಯಜ್ಞ ಎಂದರೆ ನಾನಾ ವಿಧದ ಕರ್ಮಾನುಷ್ಠಾನದ ಮುಖೇನ, ಅಗ್ನಿಮುಖದಲ್ಲಿ ಆಹುತಿ ಕೊಟ್ಟು ಭಗವಂತನನ್ನು ಆರಾಧಿಸುವ ಕರ್ಮಯಜ್ಞ. “ನಾನಾ ಬಗೆಯ ಯಜ್ಞಗಳಿಂದ ಆರಾಧನೆ ನಡೆಯುವ ಬ್ರಹ್ಮಾವರ್ತವಿದು. ಅದನ್ನು ನಾನು ನಿಲ್ಲಗೊಡುವುದಿಲ್ಲ. ನೀನು ಅದಕ್ಕೆ ಅಡ್ಡಿ ಮಾಡಕೂಡದು” ಎನ್ನುತ್ತಾನೆ ಪರೀಕ್ಷಿತ.   

ಯಸ್ಮಿನ್ ಹರಿರ್ಭಗವಾನಿಜ್ಯಮಾನ ಇಷ್ಟಾತ್ಮಮೂರ್ತಿರ್ಯಜತಾಂ ಶಂ ತನೋತಿ
ಕಾಮಾನಮೋಘಾನ್ ಸ್ಥಿರಜಂಗಮಾನಾಮಂತರ್ಬಹಿರ್ವಾಯುರಿವೇಶ ಆತ್ಮಾ ೩೩

ನಾವು ಭಗವಂತನನ್ನು ಏಕೆ ಯಜ್ಞಗಳಿಂದ ಆರಾಧಿಸಬೇಕು? ನಾವು ಕೊಡುವ ಆಹುತಿಯಿಂದ ಅವನ ಹೊಟ್ಟೆ ತುಂಬಬೇಕೇನು?  ಇತ್ಯಾದಿಯಾಗಿ ಪ್ರಶ್ನೆ ಹಾಕುವವರಿದ್ದಾರೆ. ಈ ಪ್ರಶ್ನೆಗಳಿಗೆ ವ್ಯಾಸರು ಇಲ್ಲಿ ಉತ್ತರಿಸಿದ್ದಾರೆ.
ಯಜ್ಞಗಳಿಂದ ಆರಾಧಿಸಲ್ಪಡುವ ಭಗವಂತನಿಗೆ ‘ಹರಿ’ ಎಂದು ಹೆಸರು. ಭಕ್ತರು ಕೊಡುವ ಆಹುತಿಯನ್ನು ಸ್ವೀಕರಿಸಿ, ಅದರ ಮುಖೇನ ಭಕ್ತರ ಸಂಕಷ್ಟವನ್ನು ಪರಿಹರಿಸಿ, ಅವರ  ಅಭೀಷ್ಟವನ್ನು ಪೂರೈಸುತ್ತಾನೆ ಆ ಭಗವಂತ. ಆತನದು ಸ್ವರೂಪಭೂತ ರೂಪ. ಆತ ತನ್ನ ಇಚ್ಛೆಗೆ ತಕ್ಕಂತೆ, ಭಕ್ತ ಜನರ ಅಭಿಲಾಷೆಯಂತೆ, ನಾನಾ ರೂಪಗಳನ್ನು ತೊಟ್ಟು ಅವತರಿಸಿ ಬರುತ್ತಾನೆ. ತನ್ನನ್ನು ಆರಾಧಿಸುವ ಭಕ್ತರನ್ನು ಸಲಹುವುದಷ್ಟೇ ಅಲ್ಲ, ಚಲಿಸುವ, ಚಲಿಸದ ತೃಣಾಂತ ಜೀವರನ್ನೂ ಆತ ಪೋಷಿಸುತ್ತಾನೆ. “ಹೀಗೆ ವಾಯುವಿನಂತೆ ಹೊರಗೂ-ಒಳಗೂ (ಅಂತರ್ಯಾಮಿ) ತುಂಬಿ, ಎಲ್ಲರನ್ನೂ ರಕ್ಷಿಸುವ ಸರ್ವಸಮರ್ಥ ಭಗವಂತ  ಅವತರಿಸಿ ಬಂದ ಈ ನಾಡಲ್ಲಿ ನಿನ್ನ ಆಟ ನಡೆಯದು” ಎಂದು ಗರ್ಜಿಸುತ್ತಾನೆ ಪರೀಕ್ಷಿತ.     

ತನ್ಮೇ ಧರ್ಮಭೃತಾಂ ಶ್ರೇಷ್ಠ ಸ್ಥಾನಂ ನಿರ್ದೇಷ್ಟುಮರ್ಹಸಿ
ಯತ್ರೈವ ನಿಯತೋ ವತ್ಸ್ಯ ಆತಿಷ್ಠಂಸ್ತೇSನುಶಾಸನಮ್ ೩೬

ಪರೀಕ್ಷಿತನಿಗೆ ಶರಣಾದ ಕಲಿ ಹೇಳುತ್ತಾನೆ: “ ಮಹಾರಾಜಾ, ನಿನ್ನ ಮಾತನ್ನು ಒಪ್ಪಿದೆ. ಆದರೆ ನಾನು ಎಲ್ಲಿಗೆ ಹೋಗಲಿ? ನನಗೆ ನಿಲ್ಲಲು ಒಂದು ಜಾಗ ಕೊಡು” ಎಂದು.

ಸೂತ ಉವಾಚ--
ಅಭ್ಯರ್ಥಿತಸ್ತದಾ ತಸ್ಮೈ ಸ್ಥಾನಾನಿ ಕಲಯೇSಕರೋತ್
ದ್ಯೂತಂ ಪಾನಂ ಸ್ತ್ರಿಯಃ ಸೂನಾ ಯತ್ರಾಧರ್ಮಶ್ಚತುರ್ವಿಧಃ ೩೭

ತನಗೆ ಶರಣಾದ ಕಲಿಗೆ ರಾಜ ಪರೀಕ್ಷಿತ ನಾಲ್ಕು ಸ್ಥಾನಗಳನ್ನು ಕೊಟ್ಟು ಅಲ್ಲಿ ವಾಸ ಮಾಡುವಂತೆ ಅಪ್ಪಣೆ ನೀಡುತ್ತಾನೆ. ಅವುಗಳೆಂದರೆ: ದ್ಯೂತ, ಪಾನ, ಸ್ತ್ರೀ ಮತ್ತು ಸೂನಾ(ಹಿಂಸೆ). ಮೇಲ್ನೋಟಕ್ಕೆ ಈ ನಾಲ್ಕು ಸ್ಥಾನಗಳನ್ನು ನೋಡಿದರೆ ನಮಗೆ ಗೊಂದಲವಾಗುತ್ತದೆ. ದ್ಯೂತವನ್ನು  ಕ್ಷತ್ರಿಯರು ಆಗಾಗ ಆಡುತ್ತಿದ್ದರು, ಮದ್ಯಪಾನ ಕ್ಷತ್ರಿಯರಿಗೆ ನಿಷಿದ್ಧವಲ್ಲ, ಎಲ್ಲಾ ಸ್ತ್ರೀಯರಲ್ಲಿ ಕಲಿ ವಾಸವಾಗಿರಲು ಸಾಧ್ಯವಿಲ್ಲ, ಪ್ರಾಣಿ ಬಲಿಯನ್ನು ಕ್ಷತ್ರಿಯರು ಯಜ್ಞದಲ್ಲೂ ನೀಡುತ್ತಿದ್ದರು. ಹೀಗಾಗಿ ಇಲ್ಲಿ ಹೇಳಿದ ಈ ನಾಲ್ಕು ಕಲಿ ಸ್ಥಾನವನ್ನು ಎಚ್ಚರಿಕೆಯಿಂದ ಅರ್ಥ ಮಾಡಿಕೊಳ್ಳಬೇಕು. ಇದನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ವರ್ಣಿಸುತ್ತಾ ಹೇಳುತ್ತಾರೆ: “ವಿಹಿತಾತಿರೇಕೇಣ ನ ಸೇವೇತೇತಿ” ಎಂದು. ಅಂದರೆ ಶಾಸ್ತ್ರ ವಿಹಿತವಾದುದನ್ನು ಹೊರತುಪಡಿಸಿ, ಈ ಮೇಲಿನ ನಾಲ್ಕು ಸ್ಥಾನಗಳಲ್ಲಿ ಕಲಿ ವಾಸಿಸುತ್ತಾನೆ ಎಂದರ್ಥ. ದ್ಯೂತದ ಚಟ, ಕುಡಿತದ ಚಟ, ಅತಿಕಾಮ/ಪರಸ್ತ್ರೀ ಸಂಗ, ಅತಿಮಾಂಸ ತಿನ್ನುವ ಚಟ ಇವು ಕಲಿಯ ವಾಸಸ್ಥಾನ. ಯಾವುದು ನಮಗೆ ವ್ಯಸನ(Addiction)ವಾಗಿ ಕಾಡುತ್ತದೋ ಅದು ಕಲಿಯ ತಾಣವಾಗಿರುತ್ತದೆ. ಅದರ ಹಿಂದೆ  ಸುಳ್ಳು, ಅಹಂಕಾರ, ಅತಿಕಾಮುಕತೆ, ರಾಗ-ದ್ವೇಷಗಳು ಮನೆ ಮಾಡಿರುತ್ತವೆ.

ನಾಲ್ಕು ಸ್ಥಾನಗಳನ್ನು ಪಡೆದ ಕಲಿ ಹೇಳುತ್ತಾನೆ:  “ತತೋSನೃತಂ ಮದಃ  ಕಾಮೋ ರಜೋ ವೈರಂ ಚ ಪಂಚಮಮ್”ಎಂದು.   “ಸುಳ್ಳು, ಅಹಂಕಾರ, ಅತಿಕಾಮುಕತೆ, ರಾಗ-ದ್ವೇಷ ಎನ್ನುವ ಐದು ಪರಿವಾರ ನನ್ನದು. ಈ ಐದು ಪರಿವಾರದೊಂದಿಗೆ ವಾಸ ಮಾಡಲು ನನಗೆ ಕನಿಷ್ಠ ಐದು ಸ್ಥಾನಗಳನ್ನು ಕರುಣಿಸು” ಎಂದು ಕೇಳುತ್ತಾನೆ ಕಲಿ. ಕಲಿಯ ಪ್ರಾರ್ಥನೆಯನ್ನು ಮನ್ನಿಸಿದ ಪರೀಕ್ಷಿತ ಆತನಿಗೆ ಐದನೇ ಸ್ಥಾನವಾಗಿ “ಚಿನ್ನ”ದಲ್ಲಿರಲು ಸೂಚಿಸುತ್ತಾನೆ. ಹೀಗಾಗಿ ಚಿನ್ನದ ಅಥವಾ ಸಂಪತ್ತಿನ ಅತಿಮೋಹ ಕಲಿಯ ವಾಸಸ್ಥಾನವಾಗುತ್ತದೆ.

ಇತ್ಥಂಭೂತಾನುಭಾವೋSಯಮಭಿಮನ್ಯುಸುತೋ ನೃಪಃ
ಯಸ್ಯ ಪಾಲಯತಃ ಕ್ಷೋಣೀಂ ಯೂಯಂ ಸತ್ರಾಯ ದೀಕ್ಷಿತಾಃ ೪೪

“ಯಾವ ಪರೀಕ್ಷಿತರಾಜ ಕಲಿಯನ್ನು ನಿಗ್ರಹಿಸಿ ಕೃತಯುಗ ಧರ್ಮವನ್ನು ಸ್ಥಾಪನೆ ಮಾಡಿದನೋ, ಅಂತಹ ಮಹಾಮಹಿಮ ಇತ್ತೀಚಿನ ತನಕ ನಮ್ಮನ್ನು ಆಳುತ್ತಿದ್ದ” ಎಂದು ಪರೀಕ್ಷಿತನನ್ನು ನೆನಪಿಸಿಕೊಳ್ಳುತ್ತಾರೆ  ಸೂತರು. ಸೂತರು ಶೌನಕಾದಿಗಳನ್ನು ಉದ್ದೇಶಿಸಿ ಹೇಳುತ್ತಾರೆ: ಕಲಿಯನ್ನು ನಿಗ್ರಹಮಾಡಿ, ಕಲಿಯುಗದಲ್ಲಿ ಕೃತಯುಗದ ಧರ್ಮವನ್ನು ಸ್ಥಾಪನೆ ಮಾಡಿದ ಮಹಾಮಹಿಮ; ಹಿರಿಯರ ಹೆಸರನ್ನು ಉಳಿಸಿದ ಪುಣ್ಯಾತ್ಮ; ಅಭಿಮನ್ಯ ಪುತ್ರ ಪರೀಕ್ಷಿತ. ಅವನ  ರಾಜ್ಯಭಾರ ಕಾಲದಲ್ಲೇ ಇಲ್ಲಿ ಸತ್ರಯಾಗ ಪ್ರಾರಂಭವಾಗಿತ್ತು” ಎಂದು.

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ಸಪ್ತದಶೋSಧ್ಯಾಯಃ
ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಹದಿನೇಳನೇ ಅಧ್ಯಾಯ ಮುಗಿಯಿತು.
          *********

No comments:

Post a Comment