ಪಾದೋSಸ್ಯ
ಸರ್ವಭೂತಾನಿ ಪುಂಸಃ ಸ್ಥಿತಿವಿದೋ ವಿದುಃ ।
ಅಮೃತಂ
ಕ್ಷೇಮಮಭಯಂ ತ್ರಿಮೂರ್ಧ್ನೋSಧಾಯಿ ಮೂರ್ಧಸು ॥೧೮॥
ಪುರುಷಸೂಕ್ತದ ಮುಂದಿನ ಸಾಲಿನ ವಿವರಣೆಯೇ ಮೇಲಿನ ಶ್ಲೋಕ. ಪುರುಷ ಸೂಕ್ತ ಹೀಗೆ
ಹೇಳುತ್ತದೆ: ಪಾದೋsಸ್ಯ ವಿಶ್ವಾ
ಭೂತಾನಿತ್ರಿಪಾದಸ್ಯಾಮೃತಂ ದಿವಿ ।।೩।। ತ್ರಿಪಾದೂರ್ಧ್ವ ಉದೈತ್ಪುರುಷಃಪಾದೋsಸ್ಯೇಹಾಭವಾತ್ಪುನಃ
। ಇದೇ ಮಾತನ್ನು ಇಲ್ಲಿ ಚತುರ್ಮುಖ ನಾರದರಿಗೆ ವಿವರಿಸಿ ಹೇಳುತ್ತಿದ್ದಾನೆ. “ಪ್ರಪಂಚದ ಸಮಸ್ತ
ಜೀವಜಾತಗಳ ಒಳಗೆ ತುಂಬಿರುವುದು ಭಗವಂತನ ಒಂದು ಪಾದ” ಎಂದು. ಸಾಮಾನ್ಯವಾಗಿ ಪಾದ ಎಂದರೆ ನಾಲ್ಕನೇ
ಒಂದು ಅಂಶ. ಆದರೆ ಮೇಲಿನ ಶ್ಲೋಕದಲ್ಲಿ ಆ ಅರ್ಥದಲ್ಲಿ ಈ ಶಬ್ದ ಬಳಕೆಯಾಗಿಲ್ಲ. ಇಲ್ಲಿ ಪಾದ ಎಂದರೆ
ಒಂದು ಚಿಕ್ಕ ಅಂಶವಷ್ಟೇ. ಈ ಅಂಶವನ್ನು ನಾವು ಶಬ್ದದಿಂದ ವರ್ಣಿಸುವುದು ಸಾಧ್ಯವಿಲ್ಲ. ಅದು
ಸಮುದ್ರದಲ್ಲಿನ ಒಂದು ಬಿಂದುವಿನಂತೆ, ಮಹಾ ಜ್ವಾಲೆಯ ಒಂದು ಕಿಡಿಯಂತೆ.
ನಮಗೆ ಪ್ರಪಂಚದ ಸಂಪೂರ್ಣ ವಸ್ತುಸ್ಥಿತಿ ತಿಳಿದಿಲ್ಲ. ಪ್ರಪಂಚದ ಸಮಸ್ತ ವಸ್ತುಸ್ಥಿತಿಯನ್ನು
ತಿಳಿದವನು ಆ ಭಗವಂತನೊಬ್ಬನೇ. ನಾವು ತಿಳಿದಿರುವುದು ಕೇವಲ ಮಲ್ನೋಟವನ್ನಷ್ಟೇ. ಇಂದು ನಮ್ಮೆಲ್ಲಾ ಸಮಸ್ಯೆಗಳಿಗೆ ಕಾರಣ ನಾವು ಸಮಸ್ತ ವಸ್ತುಸ್ಥಿಯನ್ನು
ತಿಳಿದಿಲ್ಲಾ ಎನ್ನುವ ವಿಷಯವನ್ನೂ ನಾವು ತಿಳಿಯದೇ ಇರುವುದು! ಏನೂ ತಿಳಿಯದೇ ಇರುವ ಮೂಢನಾಗಿದ್ದರೂ
ತೊಂದರೆಯಿಲ್ಲಾ, ತನಗೆ ಎಲ್ಲವೂ ತಿಳಿದಿಲ್ಲಾ ಎನ್ನುವ ಸತ್ಯವನ್ನರಿತ ಜ್ಞಾನಿಯಾಗಿದ್ದರೂ
ಅಡ್ಡಿಯಿಲ್ಲಾ. ಆದರೆ ಇವೆರಡರ ಮಧ್ಯದಲ್ಲಿದ್ದು ಅಹಂಕಾರಿಯಾಗಿದ್ದರೆ ಕಷ್ಟ. ಭಾಗವತದ ಮೂರನೇ ಸ್ಕಂಧದಲ್ಲಿ
ಬರುವ ಒಂದು ಶ್ಲೋಕ ಈ ರೀತಿ ಹೇಳುತ್ತದೆ: ಯಶ್ಚ ಮೂಢತಮೋ
ಲೋಕೇ ಯಶ್ಚ ಬುದ್ಧೇಃ ಪರಂ ಗತಃ । ತಾವುಭೌ
ಸುಖಮೇಧೇತೇ ಕ್ಲಿಶ್ಯತ್ಯಂತರಿತೋ ಜನಃ ||೩-೭-೧೭|| “ಮೂಢ ಮತ್ತು ಜ್ಞಾನಿ ಇವರಿಬ್ಬರು ಲೋಕದಲ್ಲಿ ಸುಖದಿಂದ ಬದುಕಬಲ್ಲರು. ಆದರೆ ಇವರಿಬ್ಬರ ಮಧ್ಯದಲ್ಲಿರುವವರು-ಜೀವನದ ಅರ್ಥ
ತಿಳಿಯದೆ ಮೋಹಕ್ಕೆ ಬಲಿಯಾಗಿ ದುಃಖ ಅನುಭವಿಸುತ್ತಾರೆ” ಎಂದು! ಮೇಲಿನ ಶ್ಲೋಕದಲ್ಲಿ: “ಈ
ಪ್ರಪಂಚದೊಳಗೆ ಭಗವಂತ ತುಂಬಿದ್ದಾನೆ ಎಂದು ‘ಬಲ್ಲವರು’ ಹೇಳುತ್ತಾರೆ” ಎಂದಿದ್ದಾನೆ ಚತುರ್ಮುಖ. ಭಗವಂತನಿಂದ
ನೇರ ಉಪದೇಶ ಪಡೆದ, ಸಮಸ್ತ ಜ್ಞಾನಿಗಳಿಗೂ ಹಿರಿಯನಾದ ಚತುರ್ಮುಖ ಇಲ್ಲಿ ‘ಬಲ್ಲವರು’ ಎಂದು ಭಗವಂತನನ್ನು
ಕುರಿತೇ ಹೇಳಿದ್ದಾನೆ.
ಅಮೃತ, ಕ್ಷೇಮ ಮತ್ತು ಅಭಯ ಎನ್ನುವ ಮೂರು ಲೋಕಗಳನ್ನು ಭಗವಂತ ತನ್ನ ತಲೆಯ ಮೇಲೆ
ಹೊತ್ತಿದ್ದಾನೆ ಎಂದು ಚತುರ್ಮುಖ ಇಲ್ಲಿ ವಿವರಿಸುತ್ತಾನೆ.
ಅಮೃತ, ಕ್ಷೇಮ ಮತ್ತು ಅಭಯ ಎನ್ನುವುದು ಮುಕ್ತರು ಮಾತ್ರ ಹೋಗಬಹುದಾದ ಎತ್ತರದ ಸ್ಥಾನ. ಈ ಮೂರು ಸ್ಥಾನಗಳನ್ನು ಶಾಸ್ತ್ರಕಾರರು
ಶ್ವೇತದ್ವೀಪ, ಅನಂತಾಸನ, ವೈಕುಂಠ ಎಂದೂ
ಕರೆಯುತ್ತಾರೆ. ಶ್ವೇತದ್ವೀಪ ಎನ್ನುವುದು ಭೂಮಿಯಲ್ಲೇ ಇರುವ ಮುಕ್ತಸ್ಥಾನವಾದರೂ ಕೂಡಾ ಇದು ನಮ್ಮ
ಕಣ್ಣಿಗೆ ಕಾಣದು. ಭೂಮಿಯಲ್ಲೇ ಇರುವ ಸೂಕ್ಷ್ಮ ಸ್ಥಾನಗಳ ಕುರಿತು ವಿಷ್ಣುಪುರಾಣ ವಿವರಿಸುತ್ತದೆ.
ಅಲ್ಲಿ ಹೇಳುವಂತೆ: ಭೂಮಿಯಲ್ಲಿ ಎರಡು ವಿಧವಾದ
ಅಸ್ತಿತ್ವವಿದೆ. ಸ್ಥೂಲವಾಗಿ ನಮ್ಮ ಕಣ್ಣಿಗೆ ಕಾಣುವ ಭೂಮಿಯ ಭಾಗ ಒಂದಾದರೆ, ನಮ್ಮ ಕಣ್ಣಿಗೆ ಕಾಣದ
ಸೂಕ್ಷ್ಮ ಲೋಕ ಕೂಡಾ ಭೂಮಿಯಲ್ಲಿದೆ. ಇಂಥಹ ಒಂದು ಸೂಕ್ಷ್ಮಲೋಕ ಶ್ವೇತದ್ವೀಪ. ಶ್ವೇತದ್ವೀಪಕ್ಕೆ
ಇನ್ನೊಂದು ಹೆಸರು ನಾರಾಯಣಪುರ. ಶಾಸ್ತ್ರಕಾರರು ಹೇಳುವಂತೆ
ಮುಕ್ತಿಗೆ ಹೋಗುವಾಗ ಮೊತ್ತಮೊದಲು ಶ್ವೇತದ್ವೀಪದಲ್ಲೇ ಭಗವಂತನ ಮೊದಲ ದರ್ಶನ.
ಶ್ವೇತದ್ವೀಪಕ್ಕೆ ಹೋಗದೇ ಮುಕ್ತಿ ಇಲ್ಲಾ. ಇದು ಭೂಮಿಗೆ ಸಂಬಂಧಿಸಿದ ಮುಕ್ತಸ್ಥಾನವಾದರೆ, ಇದೇ ರೀತಿ ಅಂತರಿಕ್ಷಕ್ಕೆ ಸಂಬಂಧಿಸಿದ ಮೋಕ್ಷ ಸ್ಥಾನ
ಅನಂತಾಸನ. ಶ್ವೇತದ್ವೀಪದಲ್ಲಿನ ಭಗವಂತನ ರೂಪವನ್ನು ನಾರಾಯಣ ಹಾಗೂ ಪದ್ಮನಾಭ ಎಂದೂ ಕರೆಯುತ್ತಾರೆ. ಅನಂತಾಸನದಲ್ಲಿ ಭಗವಂತ ವಾಸುದೇವ
ರೂಪದಿಂದಿದ್ದಾನೆ. ವೈಕುಂಠದಲ್ಲಿರುವ ಭಗವಂತನ ರೂಪಕ್ಕೆ ವೈಕುಂಠ ಎಂದೇ ಹೆಸರು. ಈ ಮೂರು ದಿವ್ಯ ರೂಪಗಳದ್ದೇ
ನಾಮಾಂತರ: ಅಮೃತ, ಕ್ಷೇಮ ಮತ್ತು ಅಭಯ. ಈ
ಅಪೂರ್ವವಾದ ಹೆಸರನ್ನು ಕೇವಲ ಭಾಗವತವಷ್ಟೇ ವಿವರಿಸಿ ಹೇಳುತ್ತದೆ.
ಲೋಕಾಸ್ತ್ರಯೋ
ಬಹಿಶ್ಚಾಸನ್ನಪ್ರಜಾನಾಂ ಯ ಆಶ್ರಮಾಃ ।
ಅಂತಸ್ತ್ರಿಲೋಕ್ಯಾಸ್ತ್ವಪರೋ
ಗೃಹಮೇಧೈರ್ಬೃಹದ್ ಹುತಃ ॥೧೯॥
ಮೇಲೆ ವಿವರಿಸಿದ ಮೂರು ಲೋಕಗಳು ವಿಶೇಷವಾಗಿ ಪ್ರಜೆಗಳಿಲ್ಲದವರು ಹೋಗಿ ಸೇರುವ ಸ್ಥಾನ. ಇಲ್ಲಿ
ಪ್ರಜೆಗಳಿಲ್ಲದವರು ಎಂದರೆ ದೇವತೆಗಳು. ದೇವತೆಗಳಿಗೆ ಮಕ್ಕಳಿದ್ದರೂ ಕೂಡಾ ಮಕ್ಕಳಿಗೆ ತಂದೆ-ತಾಯಿಯ
ದಾಯೆ(ಪಾಲುಪಟ್ಟಿ) ಇಲ್ಲದ ಕಾರಣ ಅವರನ್ನು ಪ್ರಜೆಗಳಿಲ್ಲದವರು ಎನ್ನುತ್ತಾರೆ. ಉದಾಹರಣೆಗೆ
ಶಿವನ ಮಗ ಗಣಪತಿ. ಆದರೆ ಗಣಪತಿಗೆ ಎಂದೂ ಶಿವ ಪದವಿ ಸಿಗುವುದಿಲ್ಲಾ. ಶಿವ ಪದವಿ ಶಿವನಿಗೇ
ಹೊರತು ಗಣಪತಿಗಲ್ಲ. ದೇವತೆಗಳಲ್ಲದೆ ಗ್ರಹಸ್ಥರಾದವರು ಹೋಗಿ ಸೇರುವ ಮುಕ್ತ ಸ್ಥಾನಗಳೂ ಇವೆ.
ಅಗ್ನಿ ಮುಖದಿಂದ ಭಗವಂತನ ಆರಾಧನೆ ಮಾಡುವವರು ಇಂದ್ರ ಲೋಕದ ಸಮೀಪವಿರುವ ಭಗವಂತನ ಲೋಕವನ್ನು
ಸೇರುತ್ತಾರೆ. ಅದೇ ರೀತಿ ಯತಿಗಳಾದವರು ದ್ರುವಲೋಕದಲ್ಲಿ, ಬ್ರಹ್ಮಚಾರಿಗಳು ಸೂರ್ಯ ಮಂಡಲದಲ್ಲಿ,
ವಾನಪ್ರಸ್ಥರು ಮೇರುಶಿಖರದಲ್ಲಿನ ಭಗವಂತನ
ಸ್ಥಾನವನ್ನು ಹೋಗಿ ಸೇರುತ್ತಾರೆ. ಈ ರೀತಿ ಬೇರೆಬೇರೆ ಸಾಧನೆ ಮಾಡಿದವರಿಗೆ ಬೇರೆಬೇರೆ ಸ್ಥಾನಗಳಿದ್ದರೂ
ಸಹ, ಎಲ್ಲರೂ ಶ್ವೇತದ್ವೀಪದ ಮುಖೇನವೇ ಹೋಗಬೇಕು. ಇವೆಲ್ಲವೂ ಮುಕ್ತಿಗೆ ಸಂಬಂಧಿಸಿದ ಮತ್ತು ಮಾನುಷ
ಕಲ್ಪನೆಗೆ ಮೀರಿದ ವಿಚಾರ.
ಸೃತೀ
ವಿಚಕ್ರಮೇ ವಿಷ್ವಙ್ ಸಾಶನಾನಶನೇ ಅಭಿ ।
ಯದವಿದ್ಯಾ ಚ
ವಿದ್ಯಾ ಚ ಪುರುಷಸ್ತೂಭಯಾಶ್ರಯಃ ॥೨೦॥
“ತತೋ ವಿಷ್ವಙ್ ವ್ಯಕ್ರಾಮತ್ಸಾಶನಾನಶನೇ ಅಭಿ” ಎಂದು ಪುರುಷ ಸೂಕ್ತ ಹೇಳಿದ ಮಾತನ್ನೇ ಇಲ್ಲಿ ಚತುರ್ಮುಖ ವಿವರಿಸಿದ್ದಾನೆ. ಇಲ್ಲಿ ಸಾಶನ
ಎಂದರೆ ಕರ್ಮಫಲವನ್ನುನ್ನುಣ್ಣುವ ಅಜ್ಞಾನಿಗಳು ಹಾಗೂ ಅನಶನ ಎಂದರೆ ಕರ್ಮಬಂಧವನ್ನು ದಾಟಿದ
ಅಪರೋಕ್ಷಜ್ಞಾನಿಗಳು. ಸಾಶನರು ಎಂದರೆ ಸಂಸಾರಿಗಳು, ಅಸಶನರು ಎಂದರೆ ಮುಕ್ತರು ಎನ್ನುವುದೂ ಈ
ವಿವರಣೆಯ ಇನ್ನೊಂದು ಅರ್ಥ. ಇಲ್ಲಿ ಚತುರ್ಮುಖ ಹೇಳುತ್ತಾನೆ: “ಅವಿದ್ಯೆಗೆ ಒಳಗಾದವರು
ಮತ್ತು ವಿದ್ಯೆಯಿಂದ ಪಾರಾದವರು ಎಲ್ಲರಿಗೂ ಪುರುಷ ಶಬ್ದವಾಚ್ಯನಾದ ಭಗವಂತನೇ ಆಶ್ರಯ. ಭಗವಂತ ಸಾಶನಾನಶನರನ್ನೊಳಗೊಂಡ ಸಮಸ್ತ ಪ್ರಪಂಚವನ್ನು
ವ್ಯಾಪಿಸಿ ನಿಂತಿದ್ದಾನೆ” ಎಂದು.
ತಸ್ಮಾದಂಡಾದ್
ವಿರಾಡ್ ಜಜ್ಞೇ ಭೂತೇಂದ್ರಿಯಗುಣಾಶ್ರಯಃ ।
ತದ್
ದ್ರವ್ಯಮತ್ಯಗಾದ್ ವಿಶ್ವಂ ಗೋಭಿಃ ಸೂರ್ಯ ಇವಾಶ್ರಯಮ್ ॥೨೧॥