ಸ್ವಧಿಷ್ಣ್ಯಂ
ಪ್ರತಪನ್ ಪ್ರಾಣೋ ಬಹಿಶ್ಚ ಪ್ರತಪತ್ಯಸೌ ।
ಏವಂ ವಿರಾಜಂ
ಪ್ರತಪಂಸ್ತಪತ್ಯಂತರ್ಬಹಿಃ ಪುಮಾನ್ ॥೧೬॥
ನಮ್ಮ ದೇಹ ಭಗವಂತನ ವಾಸಸ್ಥಾನ. ಈ ಶರೀರವೇ ಆತನ ಮನೆ! “ಆತ ತನ್ನ ಮನೆಯನ್ನು ತಾನೇ ತುಂಬಿ
ಬೆಳಗಿದ” ಎನ್ನುತ್ತಾನೆ ಚತುರ್ಮುಖ. ಬೆಳಕು ಹಾಯಿಸಿ
ಆತ ಎಲ್ಲವನ್ನೂ ಕಂಡನಂತೆ. ಇದಕ್ಕಾಗಿ ಆತನನ್ನು ಕ್ಷೇತ್ರಜ್ಞ ಎನ್ನುತ್ತಾರೆ. ನಾವು ಕೇವಲ ಕ್ಷೇತ್ರಸ್ಥರು. ನಮ್ಮ ದೇಹದೊಳಗೇನಿದೆ,
ಅದು ಹೇಗೆ ಕೆಲಸ ಮಾಡುತ್ತದೆ ಎನ್ನುವ ವಿಷಯವೇ ನಮಗೆ ತಿಳಿದಿಲ್ಲ. ಭಗವಂತ ಪ್ರಾಣಶಕ್ತಿಯಾಗಿ ನಮ್ಮ
ದೇಹದೊಳಗೆ ತುಂಬಿ ನಮಗೆ ಚೈತನ್ಯ ಕೊಟ್ಟ, ಚಲನವಲನವನ್ನು ಕೊಟ್ಟ. ಹೀಗೆ ಪಿಂಡಾಂಡ ಬ್ರಹ್ಮಾಂಡದ ಒಳಗೂ ಹೊರಗೂ ತುಂಬಿ,
ಒಳಗೂ ಹೊರಗೂ ಬೆಳಕು ತುಂಬಿಸಿ, ಎಲ್ಲವನ್ನೂ ಕಾಣುತ್ತಾ, ಸಾಕ್ಷಿಯಾಗಿ ನಿಂತುಬಿಟ್ಟ ಭಗವಂತ.
ಸೋSಮೃತಸ್ಯಾಭಯಸ್ಯೇಶೋ
ಮರ್ತ್ಯಮನ್ನಂ ಯದತ್ಯಗಾತ್ ।
ಮಹಿಮೈಷ ತತೋ
ಬ್ರಹ್ಮನ್ ಪುರುಷಸ್ಯ ದುರತ್ಯಯಃ ॥೧೭॥
ಪುರುಷಸೂಕ್ತ ಹೀಗೆ ಹೇಳುತ್ತದೆ: ಉತಾಮೃತತ್ವಸ್ಯೇಶಾನೋ ಯದನ್ನೇನಾತಿರೋಹತಿ
।।೨।। ಏತಾವಾನಸ್ಯ ಮಹಿಮಾSತೋ ಜ್ಯಾಯಾಂಶ್ಚ ಪೂರುಷಃ । ಇದೇ ಮಾತನ್ನು
ಇಲ್ಲಿ ಚತುರ್ಮುಖ ವಿವರಿಸುವುದನ್ನು ಕಾಣುತ್ತೇವೆ. ಸಾವಿಲ್ಲದ ಅಭಯ ಸ್ಥಿತಿ ಎಂದರೆ ಮೋಕ್ಷ. ಇಂಥಹ ಮೋಕ್ಷ
ಸ್ಥಿತಿಯಲ್ಲೂ ನಮ್ಮನ್ನು ನಿಯಂತ್ರಿಸುವವನು ಆ ಭಗವಂತ. ಇದನ್ನೇ ವಿಷ್ಣುಸಹಸ್ರನಾಮದಲ್ಲಿ “ಮುಕ್ತಾನಾಂ
ಪರಮಾಗತಿಃ” ಎಂದು ಹೇಳಲಾಗಿದೆ. ಬ್ರಹ್ಮಸೂತ್ರ
ಕೂಡಾ “ಮುಕ್ತೋಪಸೃಪ್ಯವ್ಯಪದೇಶಾತ್” (ಮುಕ್ತರು ಹೋಗಿ ಸೇರಬೇಕಾದ ‘ಆಶ್ರಯ’) ಎಂದು ಇದೇ ಮಾತನ್ನು ಹೇಳುತ್ತದೆ. ಒಟ್ಟಿನಲ್ಲಿ
ಹೇಳಬೇಕಾದರೆ ಮುಕ್ತಾಮುಕ್ತ ನಿಯಾಮಕ ಆ ಭಗವಂತ.
ಮೇಲಿನ ಶ್ಲೋಕದಲ್ಲಿ “ಭಗವಂತ ಅನ್ನವನ್ನು ಮತ್ತು ಮರ್ತ್ಯವನ್ನು ಮೀರಿ ನಿಂತಿದ್ದಾನೆ” ಎಂದು
ವರ್ಣಿಸಿದ್ದಾರೆ. ಇಲ್ಲಿ ಮರ್ತ್ಯ ಎಂದರೆ ಮರಣಶೀಲ ಮತ್ತು ಅನ್ನ (ಅದ್ಯತೇ) ಎಂದರೆ
ನಾಶಕ್ಕೊಳಗಾಗುವಂಥಹದ್ದು ಎಂದರ್ಥ. ಆದರೆ ಈ ರೀತಿ ಅರ್ಥ ಮಾಡಿದರೆ ಈ ಎರಡೂ ಪದಗಳು ಸುಮಾರಾಗಿ
ಒಂದೇ ಅರ್ಥವನ್ನು ನೀಡುತ್ತವೆ. ಹಾಗಾಗಿ ಇಲ್ಲಿ ಅನ್ನಂ ಎನ್ನುವ ಪದವನ್ನು ಒಂದು ವಿಶೇಷ ಅರ್ಥದಲ್ಲಿ
ಬಳಸಲಾಗಿದೆ ಎನ್ನುವುದು ತಿಳಿಯುತ್ತದೆ. ಐತಾರೇಯ ಬ್ರಾಹ್ಮಣ ದಲ್ಲಿ ಹೇಳುವಂತೆ “ಮೇ ಅನ್ನಂ
ದಕ್ಷಿಣಾ” “ನಾನು
ಹೆಚ್ಚು ಆಸ್ವಾದಿಸುವ ತತ್ತ್ವ ದಕ್ಷಿಣಾ” ಎನ್ನುತ್ತಾನೆ ಭಗವಂತ. ಇಲ್ಲಿ ದಕ್ಷಿಣಾ ಎಂದರೆ ಶ್ರೀಲಕ್ಷ್ಮಿ. ಹೀಗಾಗಿ ಭಗವಂತ ಅನ್ನವನ್ನು
ಮತ್ತು ಮರ್ತ್ಯವನ್ನು ಮೀರಿ ನಿಂತಿದ್ದಾನೆ ಎಂದರೆ ಹುಟ್ಟುಸಾವಿಗೆ ಒಳಗಾಗುವ ಬ್ರಹ್ಮಾದಿ ಸಮಸ್ತ
ಜೀವರು(ಮರ್ತ್ಯರು) ಮತ್ತು ಜಗತ್ತಿನ ತಾಯಿಯಾದ ಚಿತ್ ಪ್ರಕೃತಿ(ಅನ್ನಂ) ರಮಾದೇವಿಯನ್ನೂ ಕೂಡಾ
ಮೀರಿ ನಿಂತಿದ್ದಾನೆ ಎಂದರ್ಥ. ಚತುರ್ಮುಖನನ್ನು ಹಿಡಿದು ಸಮಸ್ತ ಜೀವರೂ ಕ್ಷರರು, ಚಿನ್ಮಯಿಯಾದ
ಶ್ರೀಲಕ್ಷ್ಮಿ ನಿತ್ಯಮುಕ್ತಳು. ಎಲ್ಲರನ್ನೂ ಮೀರಿ ನಿಂತಿರುವ ಆ ಭಗವಂತ(ಅಕ್ಷರ) ಮುಕ್ತ ನಿಯಾಮಕ.
“ಇಷ್ಟು ಹಿರಿದಾದ ತತ್ತ್ವವನ್ನು ಶಬ್ದಗಳಿಂದ ವರ್ಣಿಸುವುದಾಗಲಿ, ಆತನ ಮಹಿಮೆಯನ್ನು ಹೇಳಿ ಮುಗಿಸುವುದಾಗಲಿ ಯಾರಿಂದಲೂ
ಸಾಧ್ಯವಿಲ್ಲಾ” ಎನ್ನುತ್ತಾನೆ ಚತುರ್ಮುಖ.
No comments:
Post a Comment